Site icon Vistara News

Dengue Fever In Kids: ಮಕ್ಕಳನ್ನು ಡೆಂಗಿ ಜ್ವರದಿಂದ ಪಾರು ಮಾಡಲು ಹೀಗೆ ಮಾಡಿ…

Dengue Fever In Kids

ಮಕ್ಕಳಲ್ಲಿ ಜ್ವರ ಅಪರೂಪವಲ್ಲ. ರೋಗನಿರೋಧಕ ಶಕ್ತಿ ಇನ್ನೂ ಬೆಳೆಯುತ್ತಿರುವ ಎಳೆಯರಲ್ಲಿ ಸಣ್ಣ ಸಣ್ಣ ಸೋಂಕುಗಳಿಗೂ ಮೈ ಬೆಚ್ಚಗಾಗುತ್ತದೆ. ಹಾಗೆಂದು ಅವುಗಳನ್ನು ಉಪೇಕ್ಷೆ ಮಾಡುವುದು ಹೆತ್ತವರಿಗೆ ಸಾಧ್ಯವಿಲ್ಲ. ಅದರಲ್ಲೂ, ಮಳೆಗಾಲದ ಮಲೇರಿಯ, ಡೆಂಗಿ, ಚಿಕುನ್‌ಗುನ್ಯಾ ಮುಂತಾದ ಸಾಂಕ್ರಾಮಿಕಗಳ ದಿನಗಳಿವು. ಸಹಜವಾಗಿ ಸೋಂಕು ಜ್ವರದ ಲಕ್ಷಣಗಳು ಕಾಣುತ್ತಿದ್ದಂತೆ ಹೆತ್ತವರ ತಲೆಯೂ ಬಿಸಿಯಾಗುತ್ತದೆ. ಹಾಗಾದರೆ ಮಕ್ಕಳಲ್ಲಿ ಡೆಂಗಿ ಜ್ವರದ (dengue fever in kids) ಲಕ್ಷಣಗಳೇನು ಎಂಬುದನ್ನು ನೋಡುವುದಾದರೆ-

ಪುಟ್ಟ ಮಕ್ಕಳಲ್ಲಿ ಡೆಂಗಿ ಜ್ವರದ (dengue fever in kids) ಲಕ್ಷಣಗಳು ಸಿಕ್ಕಾಪಟ್ಟೆ ತೀವ್ರವಾಗಿ ಇರದೆಯೂ ಇರಬಹುದು. ಅದರಲ್ಲೂ ಮೊದಲ ಬಾರಿಗೆ ಈ ಸೋಂಕು ತಾಗಿದ್ದಾದರೆ ತೀವ್ರತೆ ಕಡಿಮೆ ಎಂದೇ ಹೇಳಬಹುದು. ದೊಡ್ಡವರಾಗುತ್ತಿದ್ದಂತೆ ಅಥವಾ ಸೋಂಕು ಮರುಕಳಿಸುತ್ತಿದ್ದಂತೆ ತೀವ್ರತೆ ಹೆಚ್ಚುತ್ತಾ ಹೋಗುತ್ತದೆ. ಏಡಿಸ್‌ ವೈರಸ್‌ಗಳು ಸೊಳ್ಳೆಗಳ ಮೂಲಕ ಹರಡುವ ಈ ಜ್ವರ, ಸೋಂಕು ತಾಗಿದ 4-10 ದಿನಗಳಲ್ಲಿ ಲಕ್ಷಣಗಳನ್ನು ತೋರಿಸುತ್ತದೆ.

ಲಕ್ಷಣಗಳು

ಸಾಮಾನ್ಯ ಲಕ್ಷಣಗಳ ಬಗ್ಗೆ ಹೇಳುವುದಾದರೆ- ತೀವ್ರ ಜ್ವರ (104 ಫ್ಯಾ. ಸಮೀಪ), ಕಣ್ಣುಗಳ ಹಿಂದೆ ನೋವು, ಸ್ನಾಯು, ಕೀಲು ಮತ್ತು ಮೂಳೆಗಳಲ್ಲಿ ವಿಪರೀತ ನೋವು, ಅತೀವ ತಲೆನೋವು, ಮೈಮೇಲೆ ದದ್ದುಗಳು, ಮೂಗು ಅಥವಾ ದಂತದಲ್ಲಿ ಸ್ವಲ್ಪ ರಕ್ತಸ್ರಾವ, ವಾಂತಿ ಇತ್ಯಾದಿಗಳು ಕಾಣಿಸಿಕೊಳ್ಳಬಹುದು. ಮೊದಲಿಗೆ ಫ್ಲೂ ಮಾದರಿಯಲ್ಲಿ ಕಾಣಿಸಿಕೊಳ್ಳುವ ಈ ಜ್ವರಕ್ಕೆ ಮಕ್ಕಳು ಸುಸ್ತಾಗಿ ಹೈರಾಣಾಗುವುದು, ಹಠ ಮಾಡುವುದು, ಕಿರಿಕಿರಿ, ಮೈಯೆಲ್ಲಾ ತುರಿಕೆ ಮುಂತಾದವುಗಳು ಮೊದಲ ಎಚ್ಚರಿಕೆ ಗಂಟೆ. ಚರ್ಮದಡಿಯಲ್ಲಿ ರಸ್ತಸ್ರಾವ ಆಗುತ್ತಿದ್ದರೆ (ತರಚಿದಂತೆ ಕಾಣಬಹುದು), ಉಸಿರಾಟಕ್ಕೆ ಕಷ್ಟವಾದರೆ, ಅತೀವ ಹೊಟ್ಟೆ ನೋವು ಮತ್ತು ವಾಂತಿ, ಮಲಮೂತ್ರಗಳಲ್ಲಿ ರಕ್ತ ಮುಂತಾದ ಲಕ್ಷಣಗಳು ಕಂಡುಬಂದರೆ ಡೆಂಗಿ ಲಕ್ಷಣಗಳು ತೀವ್ರವಾಗಿದ್ದು, ಆಸ್ಪತ್ರೆಗೆ ದಾಖಲಿಸಬೇಕಾಗಬಹುದು. ಈ ಹೊತ್ತಿನಲ್ಲಿ ಕಾಳಜಿ ತಪ್ಪಿದರೆ ಜೀವಕ್ಕೆ ಆಪತ್ತು. ಹಾಗೆಂದು ಸೌಮ್ಯ ಲಕ್ಷಣಗಳಿದ್ದರೆ ವೈದ್ಯರು ಮನೆಯಲ್ಲೇ ಚಿಕಿತ್ಸೆ ನೀಡುತ್ತಾರೆ.

ಒಮ್ಮೆ ಜ್ವರ ಆರಂಭವಾದ ಮೇಲೆ 2ರಿಂದ 7 ದಿನಗಳವರೆಗೆ ಇರಬಹುದು. ಜ್ವರ ಬಿಟ್ಟ ನಂತರವೇ ಹೆಚ್ಚಿನವರಲ್ಲಿ ಸಮಸ್ಯೆಗಳು ದ್ವಿಗುಣಗೊಳ್ಳುತ್ತವೆ. ಹಾಗಾಗಿ ಜ್ವರ ಬಿಟ್ಟಕೂಡಲೇ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ. ಅವರಿಗೆ ಇನ್ನಷ್ಟು ಆರೈಕೆಯ ಅಗತ್ಯವಿರುತ್ತದೆ. ಹೊಟ್ಟೆನೋವು, ವಾಂತಿ, ಉಸಿರಾಟ ಸಮಸ್ಯೆಗಳು, ತೀವ್ರ ತೆರನಾದ ಸ್ನಾಯು ಅಥವಾ ಮೂಳೆ ನೋವು (ಮೂಳೆ ಮುರಿದಂತೆ ನೋವು), ನಿರ್ಜಲೀಕರಣ, ರಕ್ತದೊತ್ತಡ ಇಳಿಯುವುದು ಮುಂತಾದ ಹಲವರು ರೀತಿಯ ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ಈ ದಿನಗಳಲ್ಲಿ ಮಕ್ಕಳಿಗೆ ಔಷಧಿಯ ಜೊತೆಗೆ ಸರಿಯಾದ ನಿದ್ದೆ, ಪೌಷ್ಟಿಕ ಆಹಾರ, ಧಾರಾಳವಾಗಿ ದ್ರವಾಹಾರ ಮುಂತಾದ ಆರೈಕೆಗಳು ಕಡ್ಡಾಯವಾಗಿ ಬೇಕು.

ಮಗುವಿಗೆ ಡೆಂಗೆ ಇರಬಹುದೆಂಬ ಸಣ್ಣ ಅನುಮಾನವಿದ್ದರೂ ವೈದ್ಯರಲ್ಲಿ ಕರೆಯೊಯ್ಯಿರಿ. ಇತ್ತೀಚಿನ ದಿನಗಳಲ್ಲಿ ಎಲ್ಲಿಗೆ ಪ್ರಯಾಣಿಸಿದ್ದರಿ, ಅಲ್ಲಿ ಡೆಂಗಿ ಹರಡಿರುವ ಪ್ರಮಾಣವೆಷ್ಟು ಮುಂತಾದವೆಲ್ಲ ವೈದ್ಯರಿಗೆ ಹೇಳಲೇಬೇಕು. ದೈಹಿಕ ಲಕ್ಷಣಗಳ ಪರಿಶೀಲನೆ ಮತ್ತು ರಕ್ತ ತಪಾಸಣೆಯಿಂದ ಡೆಂಗಿ ಜ್ವರವನ್ನು ವೈದ್ಯರು ಪತ್ತೆ ಮಾಡುತ್ತಾರೆ. ರಕ್ತದಲ್ಲಿ ಪ್ಲೇಟ್‌ಲೆಟ್‌ ಸಂಖ್ಯೆ ಕುಸಿಯುವುದು ಡೆಂಗಿ ಜ್ವರದ ಮುಖ್ಯ ಲಕ್ಷಣ. ಇದಕ್ಕಾಗಿ ಪರಿಣಾಮಕಾರಿಯಾದ ಔಷಧಿಗಳು ಲಭ್ಯವಿವೆ. ಮಗುವಿಗೆ ಯಾವುದಾದರೂ ಔಷಧದ ಅಲರ್ಜಿಯಿದ್ದರೆ ಕಡ್ಡಾಯವಾಗಿ ವೈದ್ಯರಿಗೆ ತಿಳಿಸಿ.

ತಡೆಯಬಹುದೇ?

ಖಂಡಿತ. ಈ ಸೋಂಕು ಬರದಂತೆ ತಡೆಯಬೇಕೆಂದರೆ ಮನೆಯ ಸುತ್ತಮುತ್ತಲು ಎಲ್ಲೂ ನೀರು ನಿಲ್ಲದಂತೆ ಎಚ್ಚರ ವಹಿಸಿ. ಮನೆಯೊಳಗೂ ನೀರು ತುಂಬಿದ ಪಾತ್ರೆಗಳಿಗೆ ಮುಚ್ಚಳ ಹಾಕಿ. ಬೆಳಗ್ಗೆ ಮತ್ತು ಸಂಜೆ ಸೊಳ್ಳೆಗಳು ಹೆಚ್ಚು ಸಕ್ರಿಯವಾಗಿರುವ ಸಮಯಗಳಲ್ಲಿ ಹೊರಗೆ ಹೋಗಬೇಡಿ; ಮಕ್ಕಳನ್ನೂ ಹೊರಗೆ ಬಿಡಬೇಡಿ. ಅನಗತ್ಯ ಪ್ರಯಾಣಗಳನ್ನು ತಪ್ಪಿಸಿ. ಸೊಳ್ಳೆ ರಿಪೆಲ್ಲೆಂಟ್‌ಗಳು, ಲಿಕ್ವಿಡೇಟರ್‌ಗಳು ಮುಂತಾದವು ಸೊಳ್ಳೆಗಳನ್ನು ದೂರ ಇರಿಸಲು ಸಹಾಯ ಮಾಡುತ್ತವೆ. ಮಕ್ಕಳಿಗೆ ಮೈ, ಕೈ, ಕಾಲಿನ ತುಂಬಾ ಬಟ್ಟೆ ಹಾಕಿ. ಮಲಗುವಾಗ ಕಡ್ಡಾಯವಾಗಿ ಸೊಳ್ಳೆಪರದೆ ಬಳಸಿ. ಸೋಂಕಿತರಿಗೆ ಕಚ್ಚಿದ ಸೊಳ್ಳೆ ಇನ್ನೊಬ್ಬರಿಗೆ ಕಚ್ಚಿದಾಗಲೇ ರೋಗ ಹರಡುವುದು, ನೆನಪಿರಲಿ. ಹಾಗಾಗಿ ಸೊಳ್ಳೆಯನ್ನು ಎಷ್ಟು ಪರಿಣಾಮಕಾರಿಯಾಗಿ ದೂರ ಇರಿಸುತ್ತೀರೊ ಅಷ್ಟು ನಿಶ್ಚಿತವಾಗಿ ಸೋಂಕಿನಿಂದಲೂ ತಪ್ಪಿಸಿಕೊಳ್ಳುತ್ತೀರಿ.

FAQ

ಸೋಂಕು ತಾಗಿದ ಎಷ್ಟು ದಿನಕ್ಕೆ ಜ್ವರ ಆರಂಭವಾಗುತ್ತದೆ?

ಸೊಳ್ಳೆ ಕಚ್ಚಿದ 4-10 ದಿನಗಳಲ್ಲಿ ಸೋಂಕಿನ ಲಕ್ಷಣಗಳು ಆರಂಭವಾಗುತ್ತವೆ. ಮೊದಲಿಗೆ ತೀವ್ರ ಜ್ವರ ಕಾಣುತ್ತದೆ.

ಡೆಂಗಿ ಗಾಳಿಯಲ್ಲಿ ಹರಡುತ್ತದೆಯೇ? ಮಾಸ್ಕ್‌ ಹಾಕಬೇಕೆ?

ಇಲ್ಲ. ಇದು ಸೊಳ್ಳೆಯಿಂದ ಮಾತ್ರವೇ ಹರಡುವ ರೋಗ. ಹಾಗಾಗಿ ಸೊಳ್ಳೆಗಳನ್ನು ನಿರ್ಮೂಲನೆ ಮಾಡಬೇಕು.

Exit mobile version