ಕಾಯಿ, ಬೀಜಗಳನ್ನು ಆಹಾರದ ಭಾಗವಾಗಿಸಿಕೊಳ್ಳಿ ಎಂಬ ಸಲಹೆ ಎಲ್ಲೆಡೆ ಕೇಳಿ ಬರುತ್ತಿದೆ. ಬಾದಾಮಿ, ಗೋಡಂಬಿ, ಪಿಸ್ತಾ, ವಾಲ್‌ನಟ್, ಬ್ರೆಜಿಲ್ ನಟ್, ಮೆಕಡೇಮಿಯ ಮುಂತಾದ ಕಾಯಿಗಳು, ಅಗಸೆ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ, ಚಿಯಾ, ಹೆಂಪ್ ಮುಂತಾದ ಬೀಜಗಳು ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳನ್ನು ಒದಗಿಸಬಲ್ಲವು. ಇದೇ ಸಾಲಿಗೆ ಸೇರುವಂಥವು ಚಿರೋಂಜಿ ಬೀಜಗಳು. ನೋಡುವುದಕ್ಕೆ ಬಾದಾಮಿಯ ಗಾತ್ರ ಮತ್ತು ಪರಿಮಳವನ್ನೇ ಹೋಲುವ, ಹೌದೋ ಅಲ್ಲವೋ ಎನ್ನುವಂತೆ ಸಿಹಿ ಎನಿಸುವ ಇವು ಭಾರತದ ವಾಯವ್ಯ ಭಾಗದಲ್ಲಿ ಹೆಚ್ಚಾಗಿ ಬೆಳೆಯುತ್ತವೆ. ವಾಲ್‌ನಟ್‌ನಂತೆ ಗಟ್ಟಿಯಾದ ಚಿಪ್ಪನ್ನು ಒಡೆದಾಗ ಒಳಗಿನ ಬೀಜ ನಮ್ಮ ಉಪಯೋಗಕ್ಕೆ ಸೂಕ್ತ. ಇವು ತರಹೇವಾರಿ ಅಡುಗೆಗಳಲ್ಲೂ ಬಳಕೆಯಾಗುತ್ತವೆ. ಏನೀ ಬೀಜಗಳ ಕರಾಮತ್ತು (Benefits Of Chironji) Seedsತಿಳಿಯೋಣ ಬನ್ನಿ.
ಪೋಷಕಾಂಶಗಳು
ಸತ್ವಗಳ ಬಗ್ಗೆ ಹೇಳುವುದಾದರೆ, ಇವುಗಳಲ್ಲಿ ಶೇ. 12ರಷ್ಟು ಭಾಗ ಪಿಷ್ಟ, 20% ಪ್ರೊಟೀನ್, 60% ಕೊಬ್ಬು, ಶೇ. 3.8ರಷ್ಟು ನಾರಿನಂಶವಿದೆ. ಜೊತೆಗೆ, ಕ್ಯಾಲ್ಶಿಯಂ, ಫಾಸ್ಫರಸ್, ಕಬ್ಬಿಣ, ಸಿ ಮತ್ತು ಬಿ ವಿಟಮಿನ್‌ಗಳಿಂದ ಭರಿತವಾಗಿದೆ.
ಹೃದಯದ ಆರೋಗ್ಯಕ್ಕೆ
ನಮ್ಮ ಹೃದಯಗಳ ಆರೋಗ್ಯಕ್ಕೆ ಪೂರಕವಾದಂಥ ಫ್ಯಾಟಿ ಆಮ್ಲಗಳು ಇದರಲ್ಲಿ ಯಥೇಚ್ಛವಾಗಿವೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗಿ, ರಕ್ತದ ಪರಿಚಲನೆ ಉತ್ತಮಗೊಳ್ಳುತ್ತದೆ. ಇವೆಲ್ಲವುಗಳಿಂದ ಒಟ್ಟಾರೆಯಾಗಿ ಹೃದಯದ ಆಯಸ್ಸು ಮತ್ತು ಸಾಮರ್ಥ್ಯ ಹೆಚ್ಚಾಗುತ್ತದೆ.
ಪಚನಕಾರಿ
ಈ ಬೀಜಗಳಲ್ಲಿ ನಾರಿನಂಶವೂ ಸಾಕಷ್ಟಿದೆ. ಹಾಗಾಗಿ ಜೀರ್ಣಾಂಗಗಳ ಕ್ಷಮತೆ ವೃದ್ಧಿಸುತ್ತದೆ. ಪರಿಣಾಮವಾಗಿ ಆಹಾರ ಸುಲಭವಾಗಿ ಪಚನವಾಗುತ್ತದೆ ಮತ್ತು ಮಲಬದ್ಧತೆ ನಿವಾರಣೆಯಾಗುತ್ತದೆ. ಇದೊಂದು ನೈಸರ್ಗಿಕ ವಿರೇಚಕವಾಗಿದ್ದು, ಈ ಬೀಜಗಳ ಸೇವನೆಯಿಂದ ಹೊಟ್ಟೆಯುಬ್ಬರ ಮತ್ತು ಅಜೀರ್ಣವೂ ಪರಿಹಾರವಾಗುತ್ತದೆ.
ಕೂದಲು ಮತ್ತು ತ್ವಚೆಗೆ ಪೂರಕ
ಇದರಲ್ಲಿರುವ ಹಲವಾರು ಸೂಕ್ಷ್ಮ ಪೋಷಕಾಂಶಗಳು ಚರ್ಮ ಮತ್ತು ಕೂದಲಿನ ಸೌಂದರ್ಯ ವೃದ್ಧಿಗೆ ಸಹಕರಿಸುತ್ತವೆ. ಇದರ ವಿಟಮಿನ್ ಇ ಅಂಶದಿಂದ ತ್ವಚೆಯನ್ನು ನಯವಾಗಿಸಿ, ಸುಕ್ಕಾಗುವುದನ್ನು ತಡೆಯುತ್ತದೆ. ಇದರ ಜಿಂಕ್ ಸತ್ವವು ಕೂದಲು ಮತ್ತು ಚರ್ಮಗಳೆರಡರ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ.
ಮೂಳೆಗಳ ಬಲವೃದ್ಧಿ
ಈ ಸಣ್ಣ ಬೀಜಗಳಲ್ಲಿ ಕ್ಯಾಲ್ಶಿಯಂ ಪ್ರಮಾಣ ದೊಡ್ಡ ಮಟ್ಟದಲ್ಲಿದೆ. ಮೆಗ್ನೀಶಿಯಂ ಸಹ ಇದರಲ್ಲಿ ಇರುವುದರಿಂದ, ಕ್ಯಾಲ್ಶಿಯಂ ಹೀರಿಕೊಳ್ಳುವುದಕ್ಕೆ ಇದು ನೆರವಾಗುತ್ತದೆ. ಇದರಿಂದ ಮೂಳೆಗಳು ಮತ್ತು ಹಲ್ಲುಗಳನ್ನು ಸದೃಢವಾಗಿಸಲು ಸುಲಭವಾಗುತ್ತದೆ. ನಿಯಮಿತವಾಗಿ ಈ ಬೀಜಗಳನ್ನು ಸೇವಿಸುವುದರಿಂದ ಮೂಳೆ ಸವೆತದಂಥ ಸಮಸ್ಯೆಯನ್ನು ದೂರ ಇಡಬಹುದು.
ತೂಕ ಇಳಿಕೆಗೆ
ಇಷ್ಟೊಂದು ಪೌಷ್ಟಿಕಾಂಶ ಹೊಂದಿರುವ ಈ ಬೀಜಗಳ ಕ್ಯಾಲರಿ ಕಡಿಮೆ ಮತ್ತು ಕೊಬ್ಬಿನ ಅಂಶವೂ ಹೆಚ್ಚಿಲ್ಲ. ಬದಲಿಗೆ, ನಾರಿನಂಶ ಸಮೃದ್ಧವಾಗಿದೆ. ಇದರಿಂದ ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ, ಅಗತ್ಯಕ್ಕಿಂತ ಹೆಚ್ಚಿನ ಆಹಾರ ಸೇವಿಸದಂತೆ ತಡೆ ಹಿಡಿಯುತ್ತದೆ. ಇದನ್ನು ಆಹಾರದ ಭಾಗವಾಗಿಸಿಕೊಳ್ಳುವುದರಿಂದ ತೂಕ ಇಳಿಸಲು ಉಪಯುಕ್ತ ಆಗುವ ಜೊತೆಗೆ, ದೇಹದ ಒಟ್ಟಾರೆ ಆರೋಗ್ಯವನ್ನೂ ಸ್ವಸ್ಥವಾಗಿಸಿಕೊಳ್ಳಬಹುದು.
ರೋಗ ನಿರೋಧಕತೆ ಹೆಚ್ಚಳ
ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳ ದಾಸ್ತಾನು ದೊಡ್ಡ ಪ್ರಮಾಣದಲ್ಲಿದೆ. ಹಾಗಾಗಿ ದೇಹದ ಪ್ರತಿರೋಧಕ ಶಕ್ತಿ ಹೆಚ್ಚಾಗಿ, ರೋಗಬಾಧೆ ಕಡಿಮೆಯಾಗುತ್ತದೆ. ಮಾತ್ರವಲ್ಲ, ಆಂಟಿ ಆಕ್ಸಿಡೆಂಟ್‌ಗಳ ಪ್ರಮಾಣ ದೇಹದಲ್ಲಿ ಹೆಚ್ಚುತ್ತಿದ್ದಂತೆ, ಕ್ಯಾನ್ಸರ್, ಅಲ್‌ಜೈಮರ್ಸ್‌ನಂಥ ಮಾರಕ ರೋಗಗಳ ಭೀತಿ ತಗ್ಗುತ್ತದೆ.
ಇದನ್ನೂ ಓದಿ: Pill Label: ಮಾತ್ರೆಗಳ ಮೇಲಿನ ಲೇಬಲ್ ಗಮನಿಸಿದ್ದೀರಾ? ಏನೇನಿವೆ ಅದರಲ್ಲಿ?