Site icon Vistara News

Turnip Benefits: ಟರ್ನಿಪ್‌ ಗಡ್ಡೆಯ ಬಗ್ಗೆ ಗೊತ್ತೆ? ಅದರ ಗುಣ ವಿಶೇಷಗಳನ್ನು ತಿಳಿಯಿರಿ

Turnip Benefits

ಹಲವು ರೀತಿಯ ಗಡ್ಡೆಗಳನ್ನು ನಾವು ಆಹಾರದಲ್ಲಿ ಬಳಸುತ್ತೇವೆ. ಈರುಳ್ಳಿಯಿಂದ ತೊಡಗಿ, ಗಜ್ಜರಿ, ಗೆಣಸು, ಬೀಟ್‌ರೂಟ್‌, ನವಿಲುಕೋಸು, ಮೂಲಂಗಿ ಮುಂತಾದ ಎಷ್ಟೋ ನಮ್ಮ ನಿತ್ಯದ ಆಹಾರಗಳ ಪಟ್ಟಿಯಲ್ಲಿವೆ. ಆದರೆ ಜನಪ್ರಿಯವಾಗಿ ಬಳಕೆಯಲ್ಲಿ ಇಲ್ಲದಿದ್ದರೂ, ಪೌಷ್ಟಿಕ ಸತ್ವಗಳ ಖನಿ ಎಂದೇ ಹೆಸರಾಗಿದ್ದು ಟರ್ನಿಪ್‌ ಗಡ್ಡೆ (Turnip Benefits). ಹಲವಾರು ದೇಶಗಳಲ್ಲಿ ಟರ್ನಿಪ್‌ ಗಡ್ಡೆ ಅತ್ಯಂತ ಜನಪ್ರಿಯ ತರಕಾರಿ. ಆದರೆ ಭಾರತದಲ್ಲಿ ಉಳಿದೆಲ್ಲಾ ಗಡ್ಡೆಗಳಷ್ಟು ಟರ್ನಿಪ್‌ ಬಳಕೆಯಲ್ಲಿಲ್ಲ. ಯಾವುದೋ ದೇಶದ ಒಂದೂರಿನಲ್ಲಿ, ಕೀಳಲಾರದಷ್ಟು ಬಲು ದೊಡ್ಡ ಟರ್ನಿಪ್‌ ಗಡ್ಡೆಯೊಂದು ರೈತನ ತೋಟದಲ್ಲಿ ಬೆಳೆದು, ಊರಿನ ಜನರೆಲ್ಲಾ ಒಬ್ಬರನ್ನೊಬ್ಬರು ಹಿಡಿದು ಎಳೆದು ಆ ಗಡ್ಡೆಯನ್ನು ಕಿತ್ತ ಕಥೆಯನ್ನು ಮಕ್ಕಳಿದ್ದಾಗ ಬಹಳಷ್ಟು ಜನ ಕೇಳಿರಬಹುದು. ವಿದೇಶಿ ಅಡುಗೆಗಳಿಗೆ ಮಾತ್ರವಲ್ಲ, ಎಲ್ಲ ಭಾರತೀಯ ಅಡುಗೆಗಳಿಗೂ ಹೊಂದಿಕೊಳ್ಳಬಹುದಾದಂಥ ತರಕಾರಿಯಿದು. ಸಾಂಬಾರು, ಪಲ್ಯ, ಗೊಜ್ಜು, ಕೋಸಂಬರಿ, ಸಲಾಡ್‌, ಸೂಪ್-‌ ಹೀಗೆ ಯಾವುದೇ ಅಡುಗೆಗಳಲ್ಲೂ ಇದನ್ನು ಬಳಸಬಹುದು. ಹಸಿಯಾಗಿ ತಿನ್ನುವುದಕ್ಕೂ ಇದು ರುಚಿಯೆ. ಒಳಗಿನ ಭಾಗವೆಲ್ಲಾ ಬೀಟ್‌ರೂಟ್‌ನ ಹೋಲಿಕೆಯಲ್ಲೇ ಇರುತ್ತದೆ. ರುಚಿಯೂ ತೀರಾ ಭಿನ್ನವಲ್ಲದೆ, ಸಣ್ಣ ಘಾಟೊಂದು ಮಿಳಿತವಾದಂತೆ ಭಾಸವಾಗುತ್ತದೆ. ಏನಿದರ ಸತ್ವಗಳು ಎಂಬುದನ್ನು ನೋಡೋಣ.

ಸತ್ವ ಹೆಚ್ಚು, ಕ್ಯಾಲರಿ ಕಡಿಮೆ

ಹೌದು! ದೇಹಕ್ಕೆ ಹೆಚ್ಚಿನ ಕ್ಯಾಲರಿಗಳನ್ನು ತುರುಕದೆಯೇ, ಹೆಚ್ಚಿನ ಸತ್ವಗಳನ್ನು ನೀಡುವಂಥ ಗಡ್ಡೆಯಿದು. ಇದು ನಾರುಭರಿತ ಗಡ್ಡೆಯಾದ್ದರಿಂದ ಹಸಿವಾಗುವುದನ್ನು ಹೆಚ್ಚು ಕಾಲದವರೆಗೆ ಮುಂದೂಡುತ್ತದೆ. ಬಹಳ ಹೊತ್ತಿನವರೆಗೆ ಹೊಟ್ಟೆ ತುಂಬಿರುವ ಅನುಭವವನ್ನೇ ನೀಡುತ್ತದೆ. ಇದರಿಂದ ತೂಕ ಇಳಿಸುವವರಿಗೆ ಅನುಕೂಲ.

ಪೌಷ್ಟಿಕಾಂಶಗಳು ಅಧಿಕ

ದೇಹಕ್ಕೆ ಅಗತ್ಯವಾಗಿ ಬೇಕಾದ ಪೋಷಕಾಂಶಗಳು ಇದರಲ್ಲಿ ಹೇರಳವಾಗಿವೆ. ಇದರ ವಿಟಮಿನ್‌ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ, ಕಬ್ಬಿಣದಂಶ ಹೀರಿಕೊಳ್ಳುವ ಸಾಧ್ಯತೆ ಹೆಚ್ಚಿಸುತ್ತದೆ. ಕೆ ಜೀವಸತ್ವದಿಂದ ಮೂಳೆಗಳು ಬಲಗೊಂಡು, ರಕ್ತ ಸೋರಿದಾಗ ಹೆಪ್ಪುಗಟ್ಟುವ ಸಾಮರ್ಥ್ಯ ಹೆಚ್ಚುತ್ತದೆ.

ನಾರು

ಜೀರ್ಣಾಂಗಗಳ ಸಾಮರ್ಥ್ಯ ಹೆಚ್ಚಿಸುವ ನಾರು ಇದರಲ್ಲಿ ಅಧಿಕವಾಗಿದೆ. ಮಲಬದ್ಧತೆಯನ್ನು ನಿವಾರಿಸಿ, ಕರುಳನ್ನು ಶುಚಿಯಾಗಿಡುತ್ತದೆ. ಜೀರ್ಣಾಂಗಗಳ ಕ್ಷಮತೆ ಹೆಚ್ಚಿಸುವಂಥ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆ ನಾರು ಸೇವನೆಯಿಂದ ಹೆಚ್ಚುತ್ತದೆ

ಉತ್ಕರ್ಷಣ ನಿರೋಧಕ

ವಿಟಮಿನ್‌ ಸಿ ಮತ್ತ ಹಲವು ರೀತಿಯ ಫೈಟೊನ್ಯೂಟ್ರಿಯೆಂಟ್‌ಗಳು ಟರ್ನಿಪ್‌ ಗಡ್ಡೆಯಲ್ಲಿವೆ. ಮಾರಕ ರೋಗಗಳನ್ನು ದೂರ ಇರಿಸಿ, ದೇಹದ ಒಟ್ಟಾರೆ ಸ್ವಾಸ್ಥ್ಯ ವೃದ್ಧಿಸಿ, ಉರಿಯೂತವನ್ನು ಶಮನ ಮಾಡುವಂಥ ಸಾಮರ್ಥ್ಯ ಇವುಗಳಿಗಿದೆ.

ಕ್ಯಾನ್ಸರ್‌ ದೂರ

ಟರ್ನಿಪ್‌ ಗಡ್ಡೆಯಲ್ಲಿರುವ ಗ್ಲೂಕೊಸಿನೊಲೇಟ್ಸ್‌ ಎಂಬ ಫೈಟೊನ್ಯೂಟ್ರಿಯೆಂಟ್‌ಗಳು ಹಲವು ರೀತಿಯ ಕ್ಯಾನ್ಸರ್‌ಗಳ ಜೊತೆ ಹೋರಾಡುವ ಗುಣವನ್ನು ಹೊಂದಿವೆ. ಶ್ವಾಸಕೋಶ ಮತ್ತು ಗುದನಾಳದ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಇದು ಹೆಚ್ಚು ಪರಿಣಾಮಕಾರಿ

ಹೃದಯ ಕಾಪಾಡುತ್ತದೆ

ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ನಿಯಂತ್ರಣಕ್ಕೆ ನೆರವಾಗುತ್ತದೆ. ಇದರಿಂದ ಹೃದ್ರೋಗಗಳು, ಪಾರ್ಶ್ವವಾಯುವಿನಂಥ ಗಂಭೀರ ಆರೋಗ್ಯ ಸಮಸ್ಯೆಗಳು ಬಾರದಂತೆ ದೂರ ಇರಿಸಲು ಅನುಕೂಲ

ಇದನ್ನೂ ಓದಿ: Health Tips: ಈ ನಿಮ್ಮ ಕೆಟ್ಟ ಅಭ್ಯಾಸಗಳಿಂದಾಗಿಯೇ ಶಕ್ತಿಗುಂದಿ ಉದಾಸೀನತೆ ಆವರಿಸುತ್ತದೆ ಗೊತ್ತೇ?

Exit mobile version