ಒಣದ್ರಾಕ್ಷಿಯನ್ನು ನೀರಿನಲ್ಲಿ ನೆನೆ ಹಾಕಿ (soaking raisins benefits) ಬೆಳಗ್ಗೆ ತಿನ್ನುವ, ಅದರ ನೀರನ್ನು ಕುಡಿಯುವ ಅಭ್ಯಾಸ ನಿಮಗಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಖಂಡಿತವಾಗಿಯೂ ಒಳ್ಳೆಯದನ್ನೇ ಮಾಡುತ್ತದೆ. ಅದು ಕಪ್ಪು ದ್ರಾಕ್ಷಿಯಿರಲಿ, ಹಳದಿಯದ್ದಾಗಿರಲಿ ಇದರ ಲಾಭಗಳು ಹಲವು. ಪೋಷಕಾಂಶಗಳ ವಿಚಾರಕ್ಕೆ ಬಂದರೆ, ಕಪ್ಪು ಒಣ ದ್ರಾಕ್ಷಿಯಲ್ಲಿ ಹಳದಿ ಬಣ್ಣದ್ದಕ್ಕಿಂತ ಹೆಚ್ಚು ಪೋಷಕಾಂಶಗಳಿದ್ದು, ಹೀಗಾಗಿ ಸಹಜವಾಗಿಯೇ ಲಾಭಗಳೂ ಹೆಚ್ಚು. ನಾರಿನಂಶ, ಆಂಟಿ ಆಕ್ಸಿಡೆಂಟ್‌ಗಳೂ ಕಪ್ಪು ದ್ರಾಕ್ಷಿಯಲ್ಲಿ ಸ್ವಲ್ಪ ಹೆಚ್ಚೇ ಇರುತ್ತದೆ. ಬನ್ನಿ, ಒಣದ್ರಾಕ್ಷಿಯನ್ನು ನಿತ್ಯವೂ ನೆನೆಸಿ ತಿನ್ನುವ ಮೂಲಕ ಯಾವೆಲ್ಲ ಉಪಯೋಗಗಳನ್ನು ಪಡೆಯಬಹುದು ಎಂಬುದನ್ನು ನೋಡೋಣ.
ನೀವು ಮಲಬದ್ಧತೆಯಿಂದ ನರಳುತ್ತಿದ್ದೀರಾ?
ಬೆಳಗ್ಗೆ ಎದ್ದ ಕೂಡಲೇ ಮಲವಿಸರ್ಜನೆ ನಿಮಗೆ ಸುಲಭ ಪ್ರಕ್ರಿಯೆ ಅಲ್ಲವೇ? ಹಾಗಿದ್ದರೆ ನಿಮಗೆ ಒಣದ್ರಾಕ್ಷಿ ಹೇಳಿ ಮಾಡಿಸಿದ ಮದ್ದು. ನೀರಿನಲ್ಲಿ ನೆನೆಸಿಟ್ಟ ಒಣದ್ರಾಕ್ಷಿಗಳನ್ನು ಸೇವಿಸುವುದರಿಂದ ನೀವು ಆರಾಮದಾಯಕವಾಗಿ ಮಲವಿಸರ್ಜನೆ ಮಾಡಬಹುದು. ಒಣದ್ರಾಕ್ಷಿಯಲ್ಲಿರುವ ನಾರಿನಂಶ ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು ಹಾಗೂ ಇದು ಜೀರ್ಣಕ್ರಿಯೆಯ ನಂತರ ಮಲವನ್ನು ಸುಲಭವಾಗಿ ಹೊರಹೋಗುವಂತೆ ಮಾಡುತ್ತದೆ. ನೆನೆಸಿದ ಒಣದ್ರಾಕ್ಷಿ ಹಾಗೂ ಅದರ ನೀರಿನ ಜೊತೆಗೆ ಹಾಗೆಯೇ ಸೇವಿಸುವ ಅಭ್ಯಾಸ ಇಟ್ಟುಕೊಂಡರೆ ಈ ಸಮಸ್ಯೆಯಿಂದ ಹೊರಬರಬಹುದು.
ರೋಗಗಳನ್ನು ತಡೆಯುತ್ತದೆ
ಫ್ಲೇವನಾಯ್ಡ್, ಫಿನಾಲಿಕ್ ಆಸಿಡ್, ಆಂಥೋಸಯನಿನ್‌ಗಳಂತಹ ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿದ್ದು, ಇವುಗಳು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡುವುದಷ್ಟೇ ಅಲ್ಲ, ಹಲವು ಮಾರಣಾಂತಿಕ ರೋಗಗಳು ಬರದಂತೆ ತಡೆಯುತ್ತದೆ.
ಅತ್ಯಂತ ಹೆಚ್ಚು ಕಬ್ಬಿಣಾಂಶ
ಒಣದ್ರಾಕ್ಷಿಯಲ್ಲಿ ಅತ್ಯಂತ ಹೆಚ್ಚು ಕಬ್ಬಿಣಾಂಶವಿದ್ದು, ಇದರ ಸೇವನೆಯಿಂದ ದೇಹ ಕಬ್ಬಿಣಾಂಶವನ್ನು ಸಮರ್ಪಕವಾಗಿ ಹೀರಿಕೊಂಡು ಬಳಸುತ್ತದೆ. ಅನೀಮಿಯಾ, ರಕ್ತ ಹೀನತೆಯಂತಹ ಸಮಸ್ಯೆಗಳಿರುವ ಮಂದಿಗೆ ಕಬ್ಬಿಣಾಂಶಯುಕ್ತ ಆಹಾರ ಸೇವನೆಗೆ ಇದು ಬಹಳ ಒಳ್ಳೆಯದು.
ನೈಸರ್ಗಿಕ ಸಕ್ಕರೆ ಅಂಶ
ಒಣದ್ರಾಕ್ಷಿ ಫಟಾಫಟ್ ಶಕ್ತಿ ಪಡೆದುಕೊಳ್ಳಲು ಸಹಾಯ ಮಾಡುತ್ತದೆ. ಶಕ್ತಿ ಸಾಮರ್ಥ್ಯ ಕುಂದಿದಾಗ ಇದರ ಸೇವನೆಯಿಂದ ಇದ್ದಕ್ಕಿದ್ದಂತೆ ಶಕ್ತಿ ದೊರೆಯುತ್ತದೆ. ಕೆಲಸ ಮಾಡುವ ಚೈತನ್ಯ ದೊರೆಯುತ್ತದೆ. ಇದು ನೈಸರ್ಗಿಕವಾಗಿ ಸಕ್ಕರೆಯ ಅಂಶಗಳಾದ ಗ್ಲುಕೋಸ್ ಹಾಗೂ ಫ್ರಕ್ಟೋಸ್ ಹೊಂದಿರುವುದರಿಂದ ಹೀಗೆ ಎನರ್ಜಿ ಬೂಸ್ಟರ್ ಆಗಿ ಕೆಲಸ ಮಾಡುವ ಸಾಮರ್ಥ್ಯ ಪಡೆದಿದೆ.
ರಕ್ತ ಪರಿಚಲನೆ ಚುರುಕು
ಒಣದ್ರಾಕ್ಷಿಯಲ್ಲಿರುವ ನಾರಿನಂಶ ಹಾಗೂ ಆಂಟಿ ಆಕ್ಸಿಡೆಂಟ್‌ಗಳು ರಕ್ತ ಪರಿಚಲನೆಯನ್ನು ಚುರುಕುಗೊಳಿಸುವ ಜೊತೆಗೆ ಕೊಲೆಸ್ಟೆರಾಲ್ ಮಟ್ಟವನ್ನೂ ಇಳಿಯುವಂತೆ ಮಾಡುತ್ತದೆ. ಇದರಿಂದ ಸಹಜವಾಗಿಯೇ ಹೃದಯದ ಆರೋಗ್ಯವೂ ವೃದ್ಧಿಸುತ್ತದೆ. ಇದರ ಜೊತೆಗೆ ಸಮತೋಲಿತ ಆಹಾರ ಸೇವನೆಯಿಂದ ಹೃದಯವನ್ನು ಸದೃಢವಾಗಿ, ಆರೋಗ್ಯವಾಗಿ ಇಟ್ಟುಕೊಳ್ಳಬಹುದು.
ಚರ್ಮದ ಆರೋಗ್ಯಕ್ಕೆ ಒಳ್ಳೆಯದು
ಒಣದ್ರಾಕ್ಷಿಯಲ್ಲಿರುವ ಆಂಟಿ ಆಕ್ಸಿಡೆಂಟ್‌ಗಳು ಚರ್ಮದ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇವುಗಳು ಫ್ರೀ ರ್ಯಾಡಿಕಲ್ಸ್ ವಿರುದ್ಧ ಹೋರಾಡಿ, ಷರ್ಮ ಸುಕ್ಕಾಗದಂತೆ, ವಯಸ್ಸಾಗುವಿಕೆಯ ಲಕ್ಷಣಗಳನ್ನು ನಿಧಾನಗೊಳಿಸುತ್ತದೆ. ಚರ್ಮವು ಕಾಂತಿ ತುಂಬಿಕೊಡು ಕಳೆಕಳೆಯಾಗಿ ಕಾಣುತ್ತದೆ. ಆರೋಗ್ಯಪೂರ್ಣ ಚರ್ಮ ನಿಮ್ಮದಾಗುತ್ತದೆ.
ಹೆಚ್ಚು ಪೋಷಕಾಂಶಗಳಿವೆ
ಒಣದ್ರಾಕ್ಷಿಯಲ್ಲಿ ಕಡಿಮೆ ಕ್ಯಾಲರಿ, ಹೆಚ್ಚು ಪೋಷಕಾಂಶಗಳಿವೆ. ಹೀಗಾಗಿ, ಉದರ ಸೇವನೆಯಿಂದ ನಿಮ್ಮ ತೂಕ ಇಳಿಸುವ ಪ್ರಕ್ರಿಯೆಗೂ ಸಹಾಯವಾಗುತ್ತದೆ. ಮಾರುಕಟ್ಟೆಯಲ್ಲಿ ದೊರೆಯುವ ಪ್ಯಾಕೇಜ್ಡ್ ಪಾನೀಯಗಳನ್ನು ಕುಡಿಯುವ ಅಭ್ಯಾಸವಿದ್ದರೆ, ಅದರ ಬದಲಿಗೆ ಒಣದ್ರಾಕ್ಷಿಯನ್ನು ನೆನೆಸಿ ಅದರ ನೀರನ್ನು ಕುಡಿಯಬಹುದು. ಸಾಕಷ್ಟು ಉತ್ತಮ ಆರೋಗ್ಯದ ಲಾಭಗಳನ್ನೂ ಆ ಮೂಲಕ ಪಡೆಯಬಹುದು.
ಇದನ್ನೂ ಓದಿ: Bone Health In Winter: ಚಳಿಗಾಲದಲ್ಲಿ ಮೂಳೆಗಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?