Site icon Vistara News

Orange Varieties: ಭಾರತದ ಈ ಬಗೆಬಗೆಯ ಕಿತ್ತಳೆ ಹಣ್ಣುಗಳ ವಿಶೇಷತೆಗಳ ಬಲ್ಲಿರಾ?

Orange Varieties

ಕೆಲವೊಮ್ಮೆ ಏನಾದರೂ ಹುಳಿಹುಳಿಯಾಗಿ, ಸಿಹಿಸಿಹಿಯಾಗಿ, ತಾಜಾ ಅನುಭೂತಿ ನೀಡುವ ಏನಾದರೊಂದು ತಿನ್ನಬೇಕು ಎಂಬ ಬಯಕೆಯಾದಾಗಲೆಲ್ಲ ನೆನಪಾಗುವುದು ಕಿತ್ತಳೆ (orange varieties) ಹಣ್ಣು. ಬೇಸಿಗೆಯಿರಲಿ, ಚಳಿಗಾಲವಿರಲಿ ಕಿತ್ತಳೆಯ ಆಸೆಗೆ ಕಾಲಮಿತಿಯಿಲ್ಲ. ಬೇಸಿಗೆಯಲ್ಲಿ ಅತ್ಯುತ್ತಮ ದಾಹ ಇಂಗಿಸುವ ಹಣ್ಣಿದು. ಚಳಿಗಾಲದಲ್ಲಿ ಹೇರಳವಾಗಿ ಮಾರುಕಟ್ಟೆಗೆ ಬಂದು ಗುಡ್ಡೆ ಬೀಳುವ ಈ ಹಣ್ಣು ನಮ್ಮಲ್ಲಿ ರೋಗನಿರೋಧಕ ಶಕ್ತಿ ಬೆಳೆಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಹೀಗೆ ಹೆಚ್ಚು ಕಡಿಮೆ ವರ್ಷಪೂರ್ತಿ ತಿನ್ನಬಹುದಾದ ಹಣ್ಣುಗಳ ಪೈಕಿ ಕಿತ್ತಳೆಗೆ ಮಹತ್ವದ ಸ್ಥಾನ. ಇಂಥ ಕಿತ್ತಳೆ ಹಣ್ಣಿನಲ್ಲಿಯೂ ಬಹಳಷ್ಟು ಬಗೆಗಳಿವೆ ಎಂಬುದು ತಿಳಿದಿದೆಯಾ? ಮಾವು, ಸೇಬಿನಲ್ಲಿ ಬಗೆಗಳಿರುವುದು ಗೊತ್ತು, ಪೇರಳೆಯಲ್ಲಿರುವುದೂ ಗೊತ್ತು, ಇನ್ನೂ ಅನೇಕ ಹಣ್ಣುಗಳ ಬಗೆಗೂ ಗೊತ್ತು. ಆದರೆ ಕಿತ್ತಳೆಯಲ್ಲಿ ಎಂಥ ವಿಧಗಳಿವೆ ಎಂದು ಯೋಚಿಸಲು ಹೊಂಟಿರಾ? ಹಾಗಾದರೆ ಬನ್ನಿ, ವೈವಿಧ್ಯಮಯ ಕಿತ್ತಳೆಯ ಪ್ರಪಂಚದಲ್ಲೊಮ್ಮೆ ಸವಾರಿ ಮಾಡೋಣ.

ಭಾರತದಲ್ಲಿ ಲಭ್ಯವಿರುವ ಕಿತ್ತಳೆಗಳ ಪೈಕಿ ಐದು ಬಗೆಯವು ಪ್ರಮುಖವಾದವು.

ನಾಗಪುರ ಕಿತ್ತಳೆ

ಮಹಾರಾಷ್ಟ್ರದ ನಾಗಪುರ ಸುತ್ತಮುತ್ತ ಬೆಳೆಯುವ ಈ ಕಿತ್ತಳೆಗೆ ಅಲ್ಲಿನದೇ ಹೆಸರು. ಭಾರತದಲ್ಲಿ ನಾಗಪುರದಲ್ಲಿ ಹೇರಳವಾಗಿ ಕಿತ್ತಳೆ ಬೆಳೆಯುವುದರಿಂದ ನಾಗಪುರದ ಕಿತ್ತಳೆ, ಭಾರತದ ಕಿತ್ತಳೆಗಳ ರಾಜ. ಇಲ್ಲಿನ ಕಿತ್ತಳೆಗೆ ಅದರದೇ ಆದ ಶ್ರೀಮಂತವಾದ ಕೇಸರಿ ಬಣ್ಣ ಹಾಗೂ ಸಿಹಿಯಾದ ರುಚಿಯೇ ಬಂಡವಾಳ. ಬಹುಮುಖ್ಯವಾಗಿ ಇವು ಬೀಜರಹಿತವಾದವು.

ಕಿನ್ನೋ

ಕಿನ್ನೋ ಹೆಸರಿನ ಕಿತ್ತಳೆಯೂ ಕೂಡಾ ಭಾರತದಲ್ಲಿ ಅತ್ಯಂತ ಪ್ರಸಿದ್ಧವಾದ ಇನ್ನೊಂದು ವೆರೈಟಿ. ಇದು ಬಹುಮುಖ್ಯವಾಗಿ ಭಾಋತದ ಉತ್ತರ ಭಾಗದಲ್ಲಿ ಅಂದರೆ, ಪಂಜಾಬ್‌, ಹರ್ಯಾಣ ಹಾಗೂ ಸುತ್ತಮುತ್ತಲ ರಾಜ್ಯಗಳಲ್ಲಿ ಚಳಿಗಾಲದಲ್ಲಿ ಬೆಳೆಯುತ್ತವೆ. ಇದನ್ನು ಬೆಳೆಯಲು ಚಳಿಗಾಲದ ವಾತಾವರಣ ಅತ್ಯಂತ ಅಗತ್ಯವಾಗಿದ್ದು, ಹಿಮಾಲಯದ ಹಳ್ಳಿಗಳಲ್ಲೂ ಇದನ್ನು ಸಾಕಷ್ಟು ಬೆಳೆಯಲಾಗುತ್ತದೆ. ಮುಖ್ಯವಾಗಿ ಇದು ರಸಭರಿತವಾಗಿದ್ದು, ಹುಳಿ ಸಿಹಿಯಾದ ಶ್ರೀಮಂತವಾದ ರುಚಿಯನ್ನು ಹೊಂದಿರುವುದರಿಂದ ಜ್ಯೂಸ್‌ಗೆ ಹೆಚ್ಚಾಗಿ ಬಳಸಲಾಗುತ್ತದೆ.

ಕೊಡಗಿನ ಕಿತ್ತಳೆ

ಕೇವಲ ಉತ್ತರ ಭಾರತವಲ್ಲದೆ, ದಕ್ಷಿಣ ಭಾರತದಲ್ಲೀ ಕಿತ್ತಳೆ ಬೆಳೆಯಲಾಗುತ್ತದೆ ಎಂದರೆ ಅದು ನಮ್ಮ ಕರ್ನಾಟಕದ ಕೊಡಗು ಜಿಲ್ಲೆಯಲ್ಲಿ. ಕೂರ್ಗ್‌ ಮ್ಯಾಂಡರಿನ್‌ ಹೆಸರಿನ ಈ ಕಿತ್ತಳೆ ಬೇರೆ ಕಿತ್ತಳೆಗಳಿಗೆ ಹೋಲಿಸಿದರೆ ಕೊಂಚ ಸಣ್ಣ ಗಾತ್ರದ್ದಾಗಿದೆ. ಆದರೆ, ರುಚಿಯಲ್ಲಿ ಹಾಗೂ ಘಮದಲ್ಲಿ ಯಾವ ಕಿತ್ತಳೆಗೂ ಕಡಿಮೆಯಿಲ್ಲ. ಜ್ಯಾಮ್‌ಗೂ ಇದು ಹೇಳಿ ಮಾಡಿಸಿದ ಕಿತ್ತಳೆ.

ಮುದ್ಖೇದ್‌ ಕಿತ್ತಳೆ

ನಾಗಪುರದ ಕಿತ್ತಳೆಯ ಹೊರತಾಗಿ ಮಹಾರಾಷ್ಟ್ರದ ಮುದ್ಖೇದ್‌ ಕಿತ್ತಳೆಯೂ ಕೂಡಾ ಸಾಕಷ್ಟು ಜನಪ್ರಿಯವಾದ ಬಗೆ. ಸಾಮಾನ್ಯ ಗಾತ್ರದ ಈ ಕಿತ್ತಳೆ ಹಣ್ಣಿನ ಘಮ ವಿಶೇಷವಾದದ್ದು. ಜೊತೆಗೆ ರಸಭರಿತವೂ ಕೂಡಾ.

ಖಾಸಿ ರಕ್ತ ಕಿತ್ತಳೆ (ಖಾಸಿ ಬ್ಲಡ್‌ ಆರೆಂಜ್)

ಸಿಹಿ ಹಾಗೂ ಹುಳಿರುಚಿಗಳ ಸಮ್ಮಿಲನವಾದ ಈ ಕಿತ್ತಳೆಯು ಈಶಾನ್ಯ ರಾಜ್ಯಗಳ ಖಾಸಿ ಪರ್ವತ ಪ್ರಾಂತ್ಯದಲ್ಲಿ ಬೆಳೆಯುತ್ತದೆ. ಈ ಕಿತ್ತಲೆ ಹಣ್ಣು ತನ್ನ ಬಣ್ಣದಲ್ಲಿ ವಿಶೇಷತೆಯನ್ನು ಹೊಂದಿದೆ. ಅದಕ್ಕಾಗಿಯೇ ಇದರ ಹೆಸರಿನ ಜೊತೆ ಬ್ಲಡ್‌ ಎಂಬ ಹೆಸರನ್ನೂ ಹೊಂದಿದೆ. ಯಾಕೆಂದರೆ, ಇದರ ಬಣ್ಣವೇ ಹಾಗೆ, ರಕ್ತವರ್ಣ! ಕಡುವಾದ ಕೆಂಪು ಬಣ್ಣವನ್ನು ಹೊಂದಿರುವುದರಿಂದ ಇದು ಹಲವು ಅಡುಗೆಗಳಿಗೆ ತನ್ನ ಬಣ್ಣವನ್ನೂ ನೀಡುವ ಮೂಲಕ ಪ್ರಸಿದ್ಧವಾಗಿದೆ.

ಈ ಐದು ಬಗೆಯ ಕಿತ್ತಳೆಗಳು ನಗರಗಳಲ್ಲಿ ಲಭ್ಯವಿದ್ದರೂ, ಈ ಊರುಗಳ ಕಡೆಗೆ ಪಯಣ ಬೆಳೆಸಿದಾಗ, ಇಲ್ಲಿನ ಕಿತ್ತಳೆ ತೋಟಕ್ಕೆ ಭೇಟಿ ನೀಡಿ, ಕಿತ್ತಳೆಯ ರುಚಿ ನೋಡಲು ಮರೆಯದಿರಿ!

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Exit mobile version