Site icon Vistara News

Benefits Of Chikoo: ಚಿಕ್ಕೂ ಎಂಬ ಚಿಕ್ಕ ಹಣ್ಣಿನ ಸದ್ಗುಣಗಳು ಗೊತ್ತೇ?

Benefits Of Chikoo

ಮಾಗಿದ ಚಿಕ್ಕೂ ಅಥವಾ ಸಪೋಟ ಹಣ್ಣನ್ನು (Benefits of Chikoo) ಆಸ್ವಾದಿಸದವರು ಅಪರೂಪ. ರವೆ-ರವೆಯಾದ ಅನುಭೂತಿ ನೀಡುವ ಈ ಸಿಹಿಯಾದ ಹಣ್ಣಿನ ಮೂಲ ಉಷ್ಣವಲಯದ ಮಧ್ಯ ಅಮೆರಿಕಾ, ಮೆಕ್ಸಿಕೊದ ನಿತ್ಯಹರಿದ್ವರ್ಣ ಕಾಡುಗಳು. ಆದರೆ ಅದು ಖಂಡಾಂತರ ವಲಸೆ ಕೈಗೊಂಡು ಶತಮಾನಗಳೇ ಕಳೆದಿವೆ. ಕಂದು ಬಣ್ಣದ, ದೊರಗಾದ ಮೇಲ್ಮೈ ಹೊಂದಿರುವ ಅಕ್ಷಿಯಾಕಾರದ ಬೀಜಗಳುಳ್ಳ ಇದು ತಿನ್ನುವುದಕ್ಕೆ ರುಚಿ ಮಾತ್ರವಲ್ಲ, ಆರೋಗ್ಯಕ್ಕೆ ಅನುಕೂಲಕರವೂ ಹೌದು. ಏನೆಲ್ಲ ಪ್ರಯೋಜನಗಳಿವೆ (Benefits of Chikoo) ಇದನ್ನು ತಿನ್ನುವುದರಿಂದ?

Bone Health In Winter

ಸತ್ವಗಳ ಭಂಡಾರ

ಹಲವು ರೀತಿಯ ಖನಿಜಗಳು ಮತ್ತು ಜೀವಸತ್ವಗಳ ಭಂಡಾರ ಈ ಹಣ್ಣು. ಇದರಲ್ಲಿ ವಿಟಮಿನ್‌ ಸಿ ಅಗಾಧವಾಗಿದ್ದು, ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ನೀಡುವಲ್ಲಿ ಸಹಕಾರಿ. ವಿಟಮಿನ್‌ ಎ ಸಾಕಷ್ಟಿದ್ದು, ದೃಷ್ಟಿ ಮತ್ತು ತ್ವಚೆಯ ರಕ್ಷಣೆಗೆ ಇದರಿಂದ ಸಾಧ್ಯವಿದೆ. ಇದಲ್ಲದೆ, ಪೊಟಾಶಿಯಂ, ಕ್ಯಾಲ್ಶಿಯಂ, ತಾಮ್ರ, ಮೆಗ್ನೀಶಿಯಂ, ರಂಜಕ ಮತ್ತು ಕಬ್ಬಿಣದಂಥ ಖನಿಜಗಳು ಈ ಹಣ್ಣಿನಲ್ಲಿ ಅಡಕವಾಗಿದ್ದು, ದೇಹದ ಸಂಪೂರ್ಣ ಸ್ವಾಸ್ಥ್ಯ ರಕ್ಷಣೆಗೆ ಇವೆಲ್ಲ ಬೇಕಾದಂಥವು.

ನಾರಿನ ಗುಡಾಣ

ಹಣ್ಣುಗಳ ಪೈಕಿ ಅತಿ ಹೆಚ್ಚಿನ ನಾರಿನಂಶವನ್ನು ನೀಡುವಂಥವುಗಳಲ್ಲಿ ಸಪೋಟ ಮುಂಚೂಣಿಯಲ್ಲಿದೆ. ಒಂದು ದೊಡ್ಡ ಚಿಕ್ಕೂ ಹಣ್ಣಿನಲ್ಲಿ ೯ ಗ್ರಾಂನಷ್ಟು ನಾರು ದೇಹಕ್ಕೆ ದೊರೆಯುತ್ತದೆ. ಇದರ ರುಚಿ ಕಡು ಸಿಹಿಯೇ ಆದರೂ, ಅಪಾರ ಪ್ರಮಾಣದಲ್ಲಿ ನಾರಿನಂಶ ಇರುವುದರಿಂದ ತೂಕ ಇಳಿಸುವವರಿಗೆ ಇದು ಅಚ್ಚುಮೆಚ್ಚು. ಹೆಚ್ಚಿನ ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡಿ ಹಸಿವನ್ನು ಮುಂದೂಡುವುದು ಮಾತ್ರವಲ್ಲದೆ, ಜೀರ್ಣಾಂಗಗಳ ಆರೋಗ್ಯವನ್ನೂ ಸುಧಾರಿಸುತ್ತದೆ.

ಶಕ್ತಿ ಸಂಚಯನ

ಆಯಾಸವಾಗಿದ್ದಾಗ ಯಾವುದೋ ಎನರ್ಜಿ ಡ್ರಿಂಕ್‌ಗಾಗಿ ತಡಕಾಡುವುದು ಬೇಡ. ಸಪೋಟ ಹಣ್ಣಿನಲ್ಲಿರುವ ನೈಸರ್ಗಿಕ ಸಕ್ಕರೆಯಂಶ, ಅದರಲ್ಲೂ ಮುಖ್ಯವಾಗಿ ಫ್ರಕ್ಟೋಸ್‌ ಮತ್ತು ಸುಕ್ರೋಸ್‌ ಅಂಶಗಳು ತ್ವರಿತವಾಗಿ ದೇಹಕ್ಕೆ ಬೇಕಾದ ಚೈತನ್ಯವನ್ನು ಒದಗಿಸುತ್ತವೆ. ನಡುಬೆಳಗಿನ ಹೊತ್ತಿನಲ್ಲಿ ಹಸಿವಾದರೆ ಅಥವಾ ಸುಸ್ತೆನಿಸಿದರೆ ಒಂದು ಸಪೋಟ ಸಾಕು, ಆಯಾಸ ಪರಿಹಾರಕ್ಕೆ.

ಜೀರ್ಣಕಾರಿ

ನಾರಿನಂಶ ಧಾರಾಳವಾಗಿ ಇರುವುದರಿಂದ ಇದು ಜೀರ್ಣಾಂಗಗಳ ಕ್ಷಮತೆಯನ್ನು ಹೆಚ್ಚಿಸುತ್ತದೆ. ನೈಸರ್ಗಿಕವಾದ ವಿರೇಚಕದಂತೆ ಚಿಕ್ಕೂ ಕೆಲಸ ಮಾಡುವುದರಿಂದ ಮಲಬದ್ಧತೆಯನ್ನು ನಿವಾರಣೆ ಮಾಡುತ್ತದೆ. ಇದರಲ್ಲಿರುವ ಟಾನಿನ್‌ ಮತ್ತು ಪಾಲಿಫೆನಾಲ್‌ಗಳು ಜೀರ್ಣಾಂಗಗಳ ಉರಿಯೂತ ಶಮನ ಮಾಡಿ, ಪಚನಾಂಗಗಳ ಸಾಮರ್ಥ್ಯವನ್ನು ವೃದ್ಧಿಸುತ್ತವೆ.

ಹೃದಯದ ಮಿತ್ರ

ಇದರಲ್ಲಿರುವ ಪೊಟಾಶಿಯಂ ಅಂಶವು ರಕ್ತದೊತ್ತಡ ನಿರ್ವಹಿಸುವಲ್ಲಿ ಅಗತ್ಯವಾಗಿ ಬೇಕಾದಂಥದ್ದು. ಇದಲ್ಲದೆ, ಭರಪೂರ ನಾರಿನಂಶವು ಸಹ ದೇಹದಲ್ಲಿ ಕೆಟ್ಟ ಕೊಬ್ಬು ನಿಯಂತ್ರಣಕ್ಕೆ ಉಪಯುಕ್ತ. ಉರಿಯೂತ ಶಮನ ಮಾಡುವಂಥ ಉತ್ಕರ್ಷಣ ನಿರೋಧಕಗಳು ರಕ್ತ ಪರಿಚಲನೆ ಸರಾಗ ಆಗುವಂತೆ ಮಾಡುವಲ್ಲಿ ನೆರವಾಗುತ್ತವೆ. ಈ ಎಲ್ಲ ಗುಣಗಳಿಂದಾಗಿ ಚಿಕ್ಕೂ ಹಣ್ಣು ಹೃದಯದ ಸ್ನೇಹಿತ ಎನಿಸಿಕೊಂಡಿದೆ.

ಮೂಳೆಗಳ ಬಲವರ್ಧನೆ

ಈ ಹಣ್ಣಿನಲ್ಲಿರುವ ಕ್ಯಾಲ್ಶಿಯಂ, ರಂಜಕ ಮತ್ತು ಕಬ್ಬಿಣದ ಸತ್ವಗಳು ಎಲುಬುಗಳ ಬಲವರ್ಧನೆಗೆ ಬೇಕಾದವು. ನಿಯಮಿತವಾಗಿ ಇದನ್ನು ಸೇವಿಸುತ್ತಿದ್ದರೆ ಮೂಳೆಗಳನ್ನು ಸದೃಢವಾಗಿ ಇರಿಸಿಕೊಳ್ಳಬಹುದು. ಬೆಳೆಯುವ ಮಕ್ಕಳಿಗೆ ಇದನ್ನು ಹಿತ-ಮಿತವಾಗಿ ನೀಡಿದರೆ, ಮೂಳೆಗಳ ಬೆಳವಣಿಗೆಯೂ ಚೆನ್ನಾಗಿರುತ್ತದೆ.

ದೃಷ್ಟಿ, ಚರ್ಮ, ಕೂದಲಿಗೆ ಹಿತ

ಇದರಲ್ಲಿರುವ ವಿಟಮಿನ್‌ ಎ ಮತ್ತು ಇ ಅಂಶಗಳು ನಮ್ಮ ದೃಷ್ಟಿ, ಚರ್ಮ ಮತ್ತು ಕೂದಲುಗಳನ್ನು ಕಾಪಾಡುತ್ತದೆ. ಇದರ ಬೀಜದಿಂದ ತಯಾರಿಸಲಾಗುವ ಎಣ್ಣೆಯು ಕೂದಲಿಗೆ ಉಪಯುಕ್ತ ಪೋಷಣೆಯನ್ನು ಒದಗಿಸುತ್ತದೆ. ಕೂದಲವನ್ನು ಮೃದುವಾಗಿಸಿ ಹೊಳಪು ಹೆಚ್ಚಿಸುತ್ತದೆ. ವಿಟಮಿನ್‌ ಅಂಶವು ದೃಷ್ಟಿಯನ್ನು ಕಾಪಾಡುವಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ಚರ್ಮಕ್ಕೂ ಲಾಭ.

ಇದನ್ನೂ ಓದಿ: Ramphal Health Benefits: ರಾಮಫಲವೆಂಬ ಆರೋಗ್ಯಸೂತ್ರ

Exit mobile version