ಚಳಿಗಾಲ ಬಂದಿದೆ. ದಪ್ಪ ದಪ್ಪ ಹೊದಿಕೆಗಳನ್ನು ಎಳೆದುಕೊಂಡು ಮುದುರಿಕೊಂಡು ಬೆಚ್ಚಗೆ ಮಲಗುವ ಈ ಚಳಿಗಾಲದಲ್ಲಿ ಬಿಸಿಬಿಸಿಯಾಗಿ ತಿಂದುಂಡು ಹಿತವಾಗಿ ಮಲಗಿಕೊಂಡಿರುವುದು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ! ಇಂಥ ಚಳಿಗಾಲದಲ್ಲಿ ದೇಹ ತನ್ನನ್ನು ತಾನು ಬೆಚ್ಚಗಿರಿಸಲು, ಇನ್ನಷ್ಟು ಮತ್ತಷ್ಟು ಕಷ್ಟಪಟ್ಟು ಕೆಲಸ ಮಾಡುತ್ತಾ, ಆರೋಗ್ಯವಾಗಿರಲು ಪ್ರಯತ್ನಪಡುತ್ತದೆ. ಇಂಥ ನಮ್ಮ ದೇಹಕ್ಕೆ ನಾವು ನಿತ್ಯವೂ, ಸೂಕ್ತ ಆಹಾರಗಳನ್ನು ಪೂರೈಕೆ ಮಾಡುತ್ತಾ ಇರಬೇಕು. ಈ ಆಹಾರದ ಸಹಾಯದಿಂದ ದೇಹ ಸೂಕ್ತವಾಗಿ ಕಾರ್ಯ ನಿರ್ವಹಣೆ ಮಾಡುವುದಷ್ಟೇ ಅಲ್ಲದೆ, ರೋಗ ನಿರೋಧಕ ಶಕ್ತಿಯನ್ನೂ ಪಡೆದುಕೊಳ್ಳುತ್ತದೆ. ಹೀಗೆ ಚಳಿಗಾಲದಲ್ಲಿ ದೇಹಕ್ಕೆ ಬೇಕೇಬೇಕಾದ ಆಹಾರಗಳ ಪೈಕಿ ಮೊಟ್ಟೆಯೂ ಒಂದು. ಬನ್ನಿ, ಮೊಟ್ಟೆಯನ್ನು ಚಳಿಗಾಲದಲ್ಲಿ ಯಾಕೆ ತಿನ್ನಲೇಬೇಕು ಎಂಬುದನ್ನು (Egg Benefits) ನೋಡೋಣ.
ಇದು ಆರೋಗ್ಯಕರ
ಮೊಟ್ಟೆ ಅತ್ಯಂತ ಆರೋಗ್ಯಕರ, ಪೋಷಕಾಂಶಯುಕ್ತ ಆಹಾರಗಳ ಪೈಕಿ ಮುಂಚೂಣಿಯಲ್ಲಿ ನಿಲ್ಲುತ್ತದೆ. ಇದರಲ್ಲಿ ಪೋಷಕಾಂಶಗಳು ಹೇರಳವಾಗಿ ಇದ್ದು, ಸಾಕಷ್ಟು ಆರೋಗ್ಯಕರ ಲಾಭಗಳನ್ನು ಒದಗಿಸುತ್ತದೆ. ನಮ್ಮ ದೇಹ ಸುಲಭವಾಗಿ ರೋಗಕ್ಕೆ ತುತ್ತಾಗುವುದು ಚಳಿಗಾಲದಲ್ಲೇ ಆದ್ದರಿಂದ ಮೊಟ್ಟೆಯಂತಹ ಆಹಾರದ ಸೇವನೆ ಚಳಿಗಾಲದಲ್ಲಿ ಬಹಳ ಮುಖ್ಯ. ಮೊಟ್ಟೆ ಚಳಿಗಾಲಕ್ಕೆ ಅಗತ್ಯವಾದ ಎಲ್ಲ ಬಗೆಯ ಪೋಷಕಾಂಶಗಳನ್ನು ದೇಹಕ್ಕೆ ನೀಡಿ ದೇಹಕ್ಕೆ ರೋಗ ರುಜಿನಗಳು ಬಾಧಿಸದಂತೆ ಪೋಷಣೆ ನೀಡುತ್ತದೆ.
ಹೆಚ್ಚಿನ ಪ್ರೊಟಿನ್ ಇದೆ
ಮೊಟ್ಟೆಯಲ್ಲಿ ಅತ್ಯಂತ ಹೆಚ್ಚು ಪ್ರೊಟೀನ್ ಇದೆ. ಒಂದು ಸಾಮಾನ್ಯ ಗಾತ್ರದ ಮೊಟ್ಟೆಯಲ್ಲಿ ಆರು ಗ್ರಾಂಗಳಷ್ಟು ಪ್ರೊಟೀನ್ ಇರುವುದುರಿಂದ ದೇಹಕ್ಕೆ ಪ್ರತಿದಿನ ಬೇಕಾದ ಪ್ರೊಟೀನನ್ನು ಮೊಟ್ಟೆ ತಿನ್ನುವ ಮೂಲಕ ಸುಲಭವಾಗಿ ಪಡೆಯಬಹುದು. ದೇಹದಲ್ಲಿ ಹೊರಗಿನಿಂದ ಬರುವ ರೋಗಕಾರಕ ವೈರಸ್, ಬ್ಯಾಕ್ಟೀರಿಯಾಗಳು ಹಾಗೂ ಇತರ ಇನ್‌ಫೆಕ್ಷನ್‌ಗಳನ್ನು ದೂರವಿರಿಸಲು ಅಗತ್ಯವಾಗಿ ಬೇಕಾದ ಪ್ರತಿರೋಧಕಗಳನ್ನು ಪ್ರಚೋದಿಸಲು ದೇಹಕ್ಕೆ ಪ್ರೊಟೀನ್ ಅವಶ್ಯಕತೆ ಇದೆ. ಹೀಗಾಗಿ ಮೊಟ್ಟೆ ಚಳಿಗಾಲಕ್ಕೆ ಅತ್ಯಂತ ಅವಶ್ಯಕ.
ಆರೋಗ್ಯಕರ ಕೊಬ್ಬು
ಮೊಟ್ಟೆಯಲ್ಲಿ ಒಂದು ಅತ್ಯುತ್ತಮ ಪ್ರಮಾಣದಲ್ಲಿ ಕೊಬ್ಬೂ ಇದೆ. ಚಳಿಗಾಲಕ್ಕೆ ದೇಹಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶಗಳ ಪೈಕಿ ಕೊಬ್ಬು ಪ್ರಮುಖವಾದುದು. ಇಲ್ಲಿ ಸಿಗುವ ಕೊಬ್ಬಿನಿಂದ ನೀವೇನೂ ತೂಕ ಹೆಚ್ಚಿಸಿಕೊಳ್ಳುವ ಭಯವಿಲ್ಲ. ದೇಹಕ್ಕೆ ಅಗತ್ಯ ರೀತಿಯಲ್ಲಿ ಒಳ್ಳೆಯ ಕೊಬ್ಬನ್ನು ಪೂರೈಸಿ ಅಂಗಾಂಶಗಳ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುವ ಮೊಟ್ಟೆಯನ್ನು ಚಳಿಗಾಲದಲ್ಲಿ ಇದಕ್ಕಾದರೂ ತಿನ್ನಬೇಕು.
ವಿಟಮಿನ್ ಡಿ ಹೇರಳ
ಬಹಳಷ್ಟು ಮಂದಿಗೆ ಪೋಷಕಾಂಶಗಳ ವಿಚಾರಕ್ಕೆ ಬಂದಾಗ ಕೊರತೆಯಾಗುವುದು ವಿಟಮಿನ್ ಡಿಯಲ್ಲಿ. ಯಾಕೆಂದರೆ ಡಿ ವಿಟಮಿನ್ ಅನ್ನು ನೇರವಾಗಿ ನಮ್ಮ ದೇಹಕ್ಕೆ ಬೇಖಾದಷ್ಟು ಪ್ರಮಾಣದಲ್ಲಿನಾವು ಸೇವಿಸುವ ಆಹಾರದಲ್ಲಿ ಪಡೆಯುವುದು ಕಷ್ಟ. ಸೂರ್ಯನೂ ಕೂಡಾ ಇದರಲ್ಲಿ ಮುಖ್ಯ ಪಾತ್ರ ವಹಿಸುತ್ತಾನೆ. ಇದನ್ನು ಬಿಟ್ಟರೆ ಆಹಾರದ ವಿಷಯದಲ್ಲಿ ವಿಟಮಿನ್ ಡಿಯ ಪೂರೈಕೆ ಮಾಡುವಲ್ಲಿ ಮುಂಚೂಣಿಯ ಸ್ಥಾನ ಇರುವುದು ಮೊಟ್ಟೆಗೆ. ಹೀಗಾಗಿ, ಚಳಿಗಾಲದಲ್ಲಿ ಸೂರ್ಯನ ಬೆಳಕಿನಿಂದಲೂ ಕಡಿಮೆ ವಿಟಮಿನ್ ಡಿ ಸಿಗುವ ಕಾಲದಲ್ಲಿ ಮೊಟ್ಟೆಯನ್ನು ತಿನ್ನಲೇಬೇಕು.
ನೆಗಡಿ ನಿವಾರಿಸುವ ಪೋಷಕಾಂಶ
ಮೊಟ್ಟೆಯಲ್ಲಿ ಝಿಂಕ್ ಹೇರಳವಾಗಿ ಇರುವುದರಿಂದ ಹಾಗೂ ಇದು ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ರೋಗಗಳಾದ, ಶೀತ, ನೆಗಡಿ, ಜ್ವರಗಳಿಗೆ ಅತ್ಯಂತ ಅಗತ್ಯ ಬೇಕಾಗುವ ಪೋಷಕಾಂಶವಾಗಿದೆ. ಅಷ್ಟೇ ಅಲ್ಲ, ಮೊಟ್ಟೆಯಲ್ಲಿ ಬಿ6 ಹಾಗೂ ಬಿ 12 ಹೇರಳವಾಗಿ ಇದ್ದು ಇದು ರೋಗ ನಿರೋಧಕ ಶಕ್ತಿಯನ್ನು ಬೆಳಸಲು ಮುಖ್ಯ ಪಾತ್ರ ವಹಿಸುತ್ತದೆ. ಹಾಗಾಗಿ ಮೊಟ್ಟೆ ಚಳಿಗಾಲಕ್ಕೆ ಒಳ್ಳೆಯದು.
ಇದನ್ನೂ ಓದಿ: Health Care Of Women After Thirty: ಮೂವತ್ತರ ನಂತರ ಮಹಿಳೆಯರ ಆರೋಗ್ಯ ಕಾಳಜಿ ಹೀಗಿರಲಿ