Site icon Vistara News

Dealing With Vertigo: ನಡೆಯುವಾಗ ಬ್ಯಾಲೆನ್ಸ್‌ ತಪ್ಪಿದಂತಾಗುತ್ತದೆಯೆ? ಈ ಸಮಸ್ಯೆ ಬಗ್ಗೆ ತಿಳಿದುಕೊಳ್ಳಿ

Vertigo

ಇದ್ದಕ್ಕಿದ್ದಂತೆ ತಲೆ ಸುತ್ತು ಬಂದು, ಸುತ್ತಲಿನ ಲೋಕವೆಲ್ಲ ಬುಗುರಿಯಂತೆ ತಿರುಗುವ ಹಾಗೆ ಭಾಸವಾಗಬಹುದು. ದೇಹದ ಸಮತೋಲನವೇ ತಪ್ಪಿದಂತಾಗಿ ವ್ಯಕ್ತಿ ಬೀಳಬಹುದು. ಜಗತ್ತಿನಲ್ಲಿ ಹತ್ತರಲ್ಲಿ ಒಬ್ಬರಿಗೆ ಬರಬಹುದಾದ ಇದೇನು ಕಾಯಿಲೆಯಲ್ಲ, ವರ್ಟಿಗೊ ಎಂದು ಕರೆಯಲಾಗುವ ಇದು ಹೆಚ್ಚಾಗಿ ಒಳಗಿವಿಯ ತೊಂದರೆಯಿಂದ ಬರುವಂಥದ್ದು. ಆದರೆ ವರ್ಟಿಗೊ ಬರುವುದಕ್ಕೆ ಇದೊಂದೇ ಕಾರಣವಲ್ಲ, ಹಲವಾರಿವೆ. ಸಿಕ್ಕಾಪಟ್ಟೆ ತಲೆಸುತ್ತುವ ಕಾರಣದಿಂದಲೇ ವ್ಯಕ್ತಿಯ ಜೀವನವನ್ನು ಕಷ್ಟಕ್ಕೆ ದೂಡುವ ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಸುಮಾರು 90 ಲಕ್ಷಕ್ಕಿಂತ ಹೆಚ್ಚು ಮಂದಿ ವರ್ಟಿಗೊದ ಸಮಸ್ಯೆಯಿಂದ ನರಳುತ್ತಿದ್ದಾರೆ. 60 ವರ್ಷದ ಮೇಲ್ಪಟ್ಟವರಲ್ಲಿ ಇದು ಕಂಡುಬರುವುದು ಹೆಚ್ಚಾದರೂ, ಕಡಿಮೆ ವಯೋಮಾನದವರನ್ನೂ ಬಾಧಿಸಬಹುದು. ಪುರುಷರಿಗಿಂತ ಮಹಿಳೆಯರಿಗೆ ಇದು ಹೆಚ್ಚು ತೊಂದರೆ ಕೊಡುತ್ತದೆ ಎನ್ನುತ್ತವೆ ಅಧ್ಯಯನಗಳು. ಮನೆಗೆಲಸ, ಶಾಪಿಂಗ್‌, ಕಚೇರಿ ಕೆಲಸ, ವಾಹನ ಚಾಲನೆ ಮುಂತಾದ ನಿತ್ಯದ ಕ್ರಿಯೆಗಳಿಗೂ ಇದರಿಂದ ಅಡ್ಡಿಯಾಗಬಹುದು. ಸೂಕ್ತ ಚಿಕಿತ್ಸೆ ನಡೆಯದಿದ್ದರೆ, ಸಾಮಾಜಿಕ ಬದುಕು ಮತ್ತು ಆರ್ಥಿಕ ಅನುಕೂಲಗಳ ಮೇಲೂ ದುಷ್ಪರಿಣಾಮ (Dealing With Vertigo) ಬೀರಬಹುದು.

ಏನಾಗುತ್ತದೆ?

ವರ್ಟಿಗೊ ಸಮಸ್ಯೆ ಇದ್ದರೆ ಏನಾಗುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳೋಣ. ಕೂತಲ್ಲಿಂದ ಎದ್ದ ತಕ್ಷಣ ತಲೆ ಸುತ್ತುವುದು, ಸುತ್ತಲಿನ ಜಾಗವೆಲ್ಲ ತಿರುಗಿದ ಅನುಭವ, ತಲೆನೋವು, ಕೆಲವೊಮ್ಮೆ ಪ್ರಜ್ಞೆ ತಪ್ಪುವುದು, ದೇಹದ ಸಮತೋಲನ ತಪ್ಪಿ ಬೀಳಬಹುದು, ಬಿದ್ದಿದ್ದು ತೀವ್ರವಾದರೆ ಗಾಯವಾಗಬಹುದು ಅಥವಾ ಮೂಳೆ ಮುರಿಯಬಹುದು, ಕಿವಿಯಲ್ಲಿ ಜುಂಯ್‌ ಸದ್ದು, ಹೊಟ್ಟೆ ತೊಳೆಸಿದಂತಾಗುವುದು, ಅತಿಯಾಗಿ ಬೆವರುವುದು- ಇತ್ಯಾದಿ ಲಕ್ಷಣಗಳನ್ನು ವರ್ಟಿಗೊ ಬಾಧಿತರು ಅನುಭವಿಸಬಹುದು.

ಚಿಕಿತ್ಸೆ ಇಲ್ಲವೇ?

ಖಂಡಿತವಾಗಿಯೂ ಇದೆ. ಒಳಗಿವಿ ಅಥವಾ ಕೇಂದ್ರ ನರಮಂಡಲದ ತೊಂದರೆಯಿಂದಾಗಿ ಉಂಟಾಗುವ ಸಮಸ್ಯೆಯಿದು. ಮುಖ್ಯವಾಗಿ ಯಾವ ಕಾರಣಕ್ಕೆ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂಬುದನ್ನು ವೈದ್ಯರು ನಿರ್ಣಯಿಸಿದರೆ ಇದಕ್ಕೆ ಚಿಕಿತ್ಸೆ ನೀಡಬಹುದು. ಕೆಲವು ಔಷಧಗಳು, ಆಹಾರದಲ್ಲಿನ ಮತ್ತು ಜೀವನಶೈಲಿಯಲ್ಲಿನ ಬದಲಾವಣೆಯಿಂದ ರೋಗಿಯ ಬದುಕಿನ ತೊಂದರೆಯನ್ನು ತಪ್ಪಿಸಿ, ಸಮಸ್ಯೆಯನ್ನು ನಿಯಂತ್ರಿಸಲು ಸಾಧ್ಯವಿದೆ.

Sleeping

ಪರಿಹಾರವೇನು?

ವೈದ್ಯರು ಹೇಳಿದ ಔಷಧಿಗಳನ್ನು ಮತ್ತು ಸೂಚನೆಗಳನ್ನು ಪಾಲಿಸುವುದು ಕಡ್ಡಾಯ. ಜೊತೆಗೆ, ದೇಹಕ್ಕೆ ನೀರು ಕಡಿಮೆಯಾಗದಂತೆ ಎಚ್ಚರ ವಹಿಸಿ. ಇದರಿಂದ ತಲೆಸುತ್ತು ತೀವ್ರಗೊಳ್ಳುತ್ತದೆ. ಆಹಾರದಲ್ಲಿ ಕೆಲವು ಬದಲಾವಣೆಗಳು ನೆರವಾಗುತ್ತವೆ. ಉದಾ, ಉಪ್ಪು, ಮಸಾಲೆ, ಕೆಫೇನ್‌, ಖಾರದ ತಿನಿಸುಗಳು ಮತ್ತು ಆಲ್ಕೊಹಾಲ್ ಸೇವನೆಯನ್ನು ಕಡಿಮೆ ಮಾಡುವುದು ಸಹಾಯಕ.
ದೈನಂದಿನ ವ್ಯಾಯಾಮದ ಬಗ್ಗೆ ವೈದ್ಯರಲ್ಲಿ ಮಾತಾಡಿ. ಕುತ್ತಿಗೆಯ ಕೆಲವು ವ್ಯಾಯಾಮಗಳು ಈ ನಿಟ್ಟಿನಲ್ಲಿ ನೆರವಾಗಬಹುದು. ದೇಹದ ಸಮತೋಲನವನ್ನು ಹೆಚ್ಚಿಸುವ ವ್ಯಾಯಾಮಗಳು ಹೆಚ್ಚಿನ ನೆರವು ನೀಡುತ್ತವೆ. ಕೆಲವು ರೀತಿಯ ವರ್ಟಿಗೊಗೆ ಫಿಸಿಯೊ ಥೆರಪಿ ನೆರವಾಗಬಹುದು. ಈ ಬಗ್ಗೆ ವೈದ್ಯಕೀಯ ಸಲಹೆ ಬೇಕಾಗುತ್ತದೆ.
ಮಾನಸಿಕ ಒತ್ತಡವನ್ನು ಕಡಿಮೆ ಮಾಡಲೇಬೇಕು. ಇದಕ್ಕಾಗಿ ಧ್ಯಾನ, ಪ್ರಾಣಾಯಾಮಗಳು ಉಪಯುಕ್ತ. ರಕ್ತದೊತ್ತಡ ಇದ್ದರೆ, ಅದನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಅಗತ್ಯ. ಮಧುಮೇಹವೂ ಇದ್ದರೆ ಅದನ್ನೂ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ವರ್ಟಿಗೊ ಸಮಸ್ಯೆಯೂ ಹೆಚ್ಚಬಹುದು.

ಚೆನ್ನಾಗಿ ನಿದ್ದೆ ಮಾಡಿ

ನಿತ್ಯವೂ ಎಂಟು ತಾಸು ನಿದ್ದೆ ಮಾಡುವ ಗುರಿಯನ್ನು ಇರಿಸಿಕೊಳ್ಳಿ. ನಿದ್ದೆಗೆಟ್ಟರೆ ವರ್ಟಿಗೊ ನಿಯಂತ್ರಣ ಕಷ್ಟ. ಮಲಗುವಾಗ ಅತಿ ಎತ್ತರದ ತಲೆದಿಂಬು ಬೇಡ. ಇದು ಸಮಸ್ಯೆಯನ್ನು ಹೆಚ್ಚಿಸಬಹುದು. ಕುತ್ತಿಗೆಗೆ ಹಿತ ಎನಿಸುವಷ್ಟೇ ಎತ್ತರದ ದಿಂಬು ಸಾಕು.
ಪ್ರಖರ ಬೆಳಕು, ಶಬ್ದ, ದಿಢೀರ್‌ ಚಲನೆಗಳು ಇದ್ದಕ್ಕಿದ್ದಂತೆ ತಲೆ ಸುತ್ತು ತರಿಸುತ್ತವೆ. ಇವುಗಳಿಗೆ ಅವಕಾಶ ಕೊಡಬೇಡಿ. ಮೈಗ್ರೇನ್‌ ಸಮಸ್ಯೆಯೂ ವರ್ಟಿಗೊಗೆ ದಾರಿ ಮಾಡಬಹುದು. ಮೆಟ್ಟಿಲು ಹತ್ತಿಳಿಯುವಾಗ ರೇಲಿಂಗ್‌ ಹಿಡಿಯುವುದು ಸುರಕ್ಷಿತ. ಈ ಸಮಸ್ಯೆಯಿಂದ ಬಳಲುವವರು ಬಹಳಷ್ಟು ಜನರಿದ್ದಾರೆ, ನೀವೊಬ್ಬರೇ ಅಲ್ಲ. ಸೂಕ್ತ ಚಿಕಿತ್ಸೆಯಿಂದ ಸಾಮಾನ್ಯ ಬದುಕು ಸಾಗಿಸಲು ಖಂಡಿತ ಸಾಧ್ಯವಿದೆ.

ಇದನ್ನೂ ಓದಿ: Pet Dog Licking: ಸಾಕು ನಾಯಿ ನಿಮ್ಮ ಮುಖ ನೆಕ್ಕುತ್ತದೆಯೆ? ಹುಷಾರ್‌!

Exit mobile version