ಪ್ರತಿಯೊಬ್ಬರ ಕೆಲಸದ ರೀತಿಯ ಮೇಲೆ ಅವರ ಆಹಾರದ ಅಗತ್ಯಗಳು ನಿರ್ಧಾರವಾಗಬೇಕು. ಅಂದರೆ, ಇಡೀ ದಿನ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರಿಗಿಂತ ದಿನವಿಡೀ ಓಡಾಡಿಕೊಂಡು ಕೆಲಸ ಮಾಡುವವರಿಗೆ ಬೇಕಾದ ಆಹಾರ ಭಿನ್ನವಾಗಿರುತ್ತದೆ. ನಿಜಕ್ಕೂ ಅಷ್ಟೆಲ್ಲಾ ಯೋಚಿಸುವವರಾರು? ಹೊತ್ತು-ಹೊತ್ತಿಗೆ ಒಂದಿಷ್ಟು ಹೊಟ್ಟೆಗೆ ಬಿದ್ದರಾಯ್ತಪ್ಪ. ಪರಿಣಾಮ, ಸದಾ ಓಡಾಡಿಕೊಂಡಿರುವವರಿಗೆ ಸರಿಯಾದ ಪೋಷಕಾಂಶಗಳು ದೊರೆಯದೆ, ಸುಸ್ತು-ಆಯಾಸ, ನೋವು-ಸವೆತದಂಥ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಸದಾ ಕುಳಿತು ಕೆಲಸ ಮಾಡುವವರ ಆಹಾರಕ್ರಮ ಸರಿ ಇಲ್ಲದಿದ್ದರೆ, ತೂಕ ಹೆಚ್ಚುವುದು, ಸೊಂಟದ ಸುತ್ತ ನೆರಿಗೆಗಳು ಸಮೃದ್ಧಿಗೊಳ್ಳುವುದು, ಅಜೀರ್ಣ ಮುಂತಾದ ತೊಂದರೆಗಳು ಗಂಟು ಬೀಳುತ್ತವೆ. ಇಡೀ ದಿನ ಕುಳಿತು ಕೆಲಸ ಮಾಡುವವರ ಆಹಾರ ಕ್ರಮ ಹೇಗಿದ್ದರೆ ಒಳಿತು ಎಂಬ ಬಗ್ಗೆ ಆಹಾರ ತಜ್ಞರ ಹೇಳಿಕೆಯ ಕುರಿತು ಸ್ವಲ್ಪ ಗಮನ (Working Tips) ಹರಿಸಿದರೆ-
ಬೆಳಗ್ಗೆ ಏನು ತಿನ್ನಬೇಕು?
ಬೆಳಗ್ಗೆ ಎದ್ದ ತಕ್ಷಣ ಶೇಂಗಾ-ಬಾದಾಮಿಯಂಥ ಬೀಜಗಳನ್ನು ಸ್ವಲ್ಪ ತಿನ್ನಬಹುದು. ರಾತ್ರಿ ಮಲಗುವಾಗ ಇವುಗಳನ್ನು ನೀರಿಗೆ ಹಾಕಿಟ್ಟಿದ್ದರೆ ಇನ್ನೂ ಒಳ್ಳೆಯದು. ಬೆಳಗಿನ ತಿಂಡಿಗೆ ಸಾಂಪ್ರದಾಯಿಕವಾದ ದೋಸೆ-ಚಟ್ನಿ, ಇಡ್ಲಿ-ಸಾಂಬಾರ್, ತರಕಾರಿ ಉಪ್ಪಿಟ್ಟು… ಇತ್ಯಾದಿಗಳು ಸೂಕ್ತ. ಶರ್ಕರಪಿಷ್ಟಾದಿಗಳು, ಪ್ರೋಟೀನ್, ಕೊಬ್ಬು ಮತ್ತು ನಾರಿನಂಶಗಳ ಸಮತೋಲಿತ ಆಹಾರ ಅಗತ್ಯ. ಹಾಗಂತ ಹೊಟ್ಟೆಯನ್ನು ಚೆನ್ನಾಗಿ ತುಂಬಿಸಿಕೊಳ್ಳುವುದಲ್ಲ, ಸ್ವಲ್ಪ ಜಾಗವಿರಲಿ.
11 ಗಂಟೆ ಹೊತ್ತಿಗೆ ಏನು?
ನಡು-ಬೆಳಗಿನ ಹೊತ್ತಿಗೆ ಹೊಟ್ಟೆಗೇನಾದೂ ಇರಲಿ ಎಂಬುದು ತಜ್ಞರ ಅಭಿಮತ. ಮತ್ತಿನ್ನೇನಲ್ಲ, ಒಂದು ತಾಜಾ ಎಳನೀರು ಅಥವಾ ತಂಪಾದ ಮಜ್ಜಿಗೆಯಾದರೂ ಸಾಕು. ಹಸಿವೆಯೇ ಆಗಿದೆ ಎನಿಸಿದರೆ ಒಂದು ಕಪ್ ತಾಜಾ ಹಣ್ಣು ಸೂಕ್ತ. ಊಟ-ತಿಂಡಿಗಳ ನಡುವೆ ಅತಿ ದೀರ್ಘ ಕಾಲಾವಕಾಶವಿರುವುದು ಸಲ್ಲದು. ಇನ್ನು ಮಧ್ಯಾಹ್ನದ ಊಟಕ್ಕೆ ಹಿಂದಿನಿಂದಲೂ ಜಾರಿಯಲ್ಲಿರುವ ಅನ್ನ-ಸಾಂಬಾರ್, ಚಪಾತಿ-ಪಲ್ಯ ಮತ್ತು ಕಡ್ಡಾಯವಾಗಿ ಮೊಸರು. ಯಾವುದೇ ಆಹಾರವನ್ನು ತಿನ್ನುವಾಗಲೂ ದಿನದ ಹೆಚ್ಚು ಹೊತ್ತು ಕುಳಿತೇ ಕೆಲಸ ಮಾಡಬೇಕು ಎಂಬುದು ನೆನಪಿನಲ್ಲಿರಬೇಕು.
ಸಂಜೆಯ ಚಹಾ ಜತೆ?
ಸಂಜೆಯ ಚಹಾ ಹೊತ್ತಿಗೆ ಏನಾದರೂ ಬಾಯಾಡಬೇಕು ಎನಿಸುವುದು ಸಹಜ. ಕುರುಕಲು ತಿಂಡಿಗಳೆಲ್ಲಾ ನಮ್ಮ ಉದರ ಸೇರುವುದು ಹೆಚ್ಚಾಗಿ ಇದೇ ಹೊತ್ತಿಗೆ. ಈ ಹೊತ್ತಿಗೆ ಹೆಡೆಯೆತ್ತುವ ಹಸಿವನ್ನು ನಿವಾರಿಸಲು ಮೊಳಕೆ ಕಾಳುಗಳ ಚಾಟ್, ಎಣ್ಣೆ-ಚೀಸ್ ರಹಿತವಾದ ಬ್ರೆಡ್ ಸ್ಟಿಕ್‌ಗಳು, ಹಣ್ಣು-ತರಕಾರಿಗಳ ಸಾಲಡ್ ಮುಂತಾದವುಗಳನ್ನು ಅಲ್ಪ ಪ್ರಮಾಣದಲ್ಲಿ ಹೊಟ್ಟೆಗಿಳಿಸಬಹುದು. ನೆನಪಿಡಿ, ಒಂದು ಊಟವನ್ನು ಗಡದ್ದಾಗಿ ಮಾಡುವುದಕ್ಕಿಂತ ಅಷ್ಟೇ ಪ್ರಮಾಣದ ಕ್ಯಾಲರಿಯನ್ನು ಎರಡು-ಮೂರು ಊಟ ಅಥವಾ ಸ್ನ್ಯಾಕ್‌ಗಳಿಗೆ ಹಂಚುವುದು ಪ್ರಯೋಜನಕಾರಿ. ರಾತ್ರಿಯ ಊಟ ಆದಷ್ಟೂ ಸರಳವಾಗಿರಲಿ, ತಡವಾಗಿ ಆಗದಿರಲಿ. ಊಟದ ಸಮಯ ಮತ್ತು ಮಲಗುವ ಸಮಯದ ನಡುವೆ ಮೂರು ತಾಸುಗಳ ಅಂತರ ಅಗತ್ಯ.
ಪ್ರೊಟಿನ್ ಕೊರತೆ ಆಗದಿರಲಿ
ನಮ್ಮ ಆಹಾರದಲ್ಲಿ ಪ್ರೊಟೀನ್ ಕೊರತೆಯಿದ್ದರೆ ಪದೇಪದೆ ಹಸಿವಾಗುತ್ತದೆ ಎನ್ನುತ್ತಾರೆ ತಜ್ಞರು. ನಮ್ಮ ಸ್ನಾಯುಗಳನ್ನು ಬಲಗೊಳಿಸುವುದರಿಂದ ಹಿಡಿದು, ರೋಗ ನಿರೋಧಕ ಶಕ್ತಿ ವೃದ್ಧಿಸುವವರೆಗೆ ಹಲವು ಪ್ರಮುಖ ಕೆಲಸಗಳನ್ನು ಪ್ರೊಟೀನ್ ನಿರ್ವಹಿಸುತ್ತದೆ. ಮಾತ್ರವಲ್ಲ, ಹಸಿವಿನ ಹಾರ್ಮೋನ್ ಗ್ರೆಲಿನ್ ಕಡಿಮೆ ಮಾಡಿ, ಸಂತೃಪ್ತಿಯ ಭಾವನೆ ಮೂಡಿಸುವ ಪೆಪ್ಟೈಡ್ ಹಾರ್ಮೋನುಗಳನ್ನು ಚುರುಕು ಮಾಡುತ್ತದೆ. ಹಾಗಾಗಿ ದೇಹಕ್ಕೆ ಅಗತ್ಯವಿಲ್ಲದಿದ್ದರೂ ತಿನ್ನಬೇಕೆಂಬ ಕಳ್ಳ ಹಸಿವನ್ನು ಮೆಟ್ಟಲು ನೆರವಾಗುತ್ತದೆ.
ನಾರಿನಂಶ ಮುಖ್ಯ
ಇನ್ನು ನಾರಿನಂಶವನ್ನು ಮರೆಯುವುದು ಹೇಗೆ? ಆಗಾಗ ಅಜೀರ್ಣದ ಸಮಸ್ಯೆ ಉಂಟಾಗುತ್ತಿದೆ, ಹೊಟ್ಟೆ ಉಬ್ಬರಿಸುತ್ತಿದ್ದೆ ಎಂದಾದರೆ ಜೀರ್ಣಾಂಗಗಳಲ್ಲಿ ಒಳ್ಳೆಯ ಬ್ಯಾಕ್ಟೀರಿಯಗಳ ಪ್ರಮಾಣದಲ್ಲಿ ಏರುಪೇರು ಇರಬಹುದು. ಅಥವಾ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಿದೆ ಎನ್ನುತ್ತದೆಯೇ ನಿಮ್ ರಕ್ತ ಪರೀಕ್ಷೆಯ ವರದಿ? ಅದೂ ಇಲ್ಲದಿದ್ದರೆ ಮಲಬದ್ಧತೆ ಗಂಟುಬಿದ್ದಿದೆ ಎಂದಾದರೆ- ಈ ಎಲ್ಲದಕ್ಕೂ ಒಂದೇ ಮದ್ದು… ಆಹಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾರಿನಂಶ ಬೇಕು. ಆಗ ಈ ಸಮಸ್ಯೆಗಳಿಗೆ ಪರಿಹಾರ ಮಾತ್ರವಲ್ಲ, ಸದಾ ಕುಳಿತು ಕೆಲಸ ಮಾಡಿದ್ದರಿಂದ ಹೆಚ್ಚಾದ ತೂಕವಿದೆಯಲ್ಲ, ಅದನ್ನು ಇಳಿಸುವುದಕ್ಕೂ ಇದು ಉಪಯೋಗವಾಗುತ್ತದೆ.
ಇದನ್ನೂ ಓದಿ: Benefits Of Eating Fruits: ಈ ಹಣ್ಣುಗಳನ್ನು ಸೇವಿಸುವ ಮೂಲಕವೂ ನೀವು ಕ್ಯಾಲ್ಶಿಯಂ ಪಡೆಯಬಹುದು!