ಪ್ರತಿ ತಿಂಗಳು ಋತುಚಕ್ರದ ಸಂದರ್ಭ ಅತೀವವಾಗಿ ಕಾಡುವ ನೋವು (menstrual pain), ಮಾಂಸಖಂಡಗಳ ಸೆಳೆತಕ್ಕೆ ಮೆಫ್ಟಾಲ್ ಮಾತ್ರೆಯನ್ನು ಅನಾಯಾಸವಾಗಿ ನುಂಗಿ ನೆಮ್ಮದಿಯ ಉಸಿರು ಬಿಡುತ್ತೀರಾ? ಕೈಕಾಲು ಗಂಟು ನೋವು ಎಂಬ ಕಾರಣಕ್ಕೆ ಆಗಾಗ ಮೆಫ್ಟಾಲ್ ನುಂಗುವ ಅಭ್ಯಾಸ ನಿಮಗಿದೆಯೇ? ಹಾಗಾದರೆ ಎಚ್ಚರ. ಇದೀಗ ಭಾರತ ಸರ್ಕಾರವೇ ಅಧಿಕೃತವಾಗಿ ಈ ಬಗ್ಗೆ ಎಚ್ಚರಿಕೆ ನೀಡಿದೆ.
ಸಾಮಾನ್ಯವಾಗಿ ಬಹುತೇಕ ಮಂದಿ ದೇಹದ ಯಾವುದೇ ಭಾಗದಲ್ಲಿ ನೋವು ಕಂಡರೂ ಎಲ್ಲರೂ ತಕ್ಷಣ ನೋವಿನಿಂದ ಮುಕ್ತಿ ಪಡೆಯಲು ನೋವು ನಿವಾರಕ ಗುಳಿಗೆಯನ್ನು ಅಂದರೆ ಪೇನ್ ಕಿಲ್ಲರ್ ಮಾತ್ರೆಯನ್ನು ತೆಗೆದುಕೊಳ್ಳುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಭಾರತದಲ್ಲಿ ಮೆಫ್ಟಾಲ್ ಎಂಬ ಮಾತ್ರೆ ಬಹಳ ಸುಲಭವಾಗಿ ಎಲ್ಲರೂ, ಏನೇ ನೋವುಗಳಿದ್ದರೂ ಬಳಸುವ ಸಾಮಾನ್ಯ ಮಾತ್ರೆ. ಪ್ರತಿ ಮನೆಯಲ್ಲೂ ಮೆಫ್ಟಾಲ್ ಎಂಬ ನೋವುನಿವಾರಕ ಆಪತ್ಬಾಂಧವನಂತೆ ಕೆಲಸ ಮಾಡುತ್ತಿರುತ್ತದೆ. ವೈದ್ಯರು ಈ ಮಾತ್ರೆಯನ್ನು ಬರೆದುಕೊಟ್ಟರೋ ಇಲ್ಲವೋ, ಬಹುತೇಕ ಎಲ್ಲರೂ, ಋತುಚಕ್ರದ ಸಂದರ್ಭದಲ್ಲಿ ಕಾಡುವ ಸೊಂಟನೋವು, ಕೈಕಾಲುಗಳಲ್ಲಿ ಸೆಳೆತ, ಹಿಂಡಿದಂಥ ನೋವು, ಸಂಧಿವಾತ, ಗಂಟುನೋವು, ಉಳುಕು, ಕೀಲುನೋವು, ಹಲ್ಲುನೋವು ಮತ್ತಿತರ ಏನೇ ನೋವು ಸಂಬಂಧೀ ಸಮಸ್ಯೆಗಳಿಗೆ ಧಾರಾಳವಾಗಿ ನುಂಗುವುದು ಮೆಫ್ಟಾಲ್‌ನನ್ನೇ. ಮಕ್ಕಳಿಗೂ ಇದನ್ನು ಕೊಡಲಾಗುತ್ತದೆ. ಈ ಅಭ್ಯಾಸ ನಿಮಗೂ ಇದ್ದರೆ ಹುಷಾರು. ಇದೀಗ ಇಂಡಿಯನ್ ಫಾರ್ಮಾಕೋಪೋಯಿಯಾ ಕಮಿಷನ್ (ಐಪಿಸಿ), ಈ ಮಾತ್ರೆಯನ್ನು ಬೇಕಾಬಿಟ್ಟಿಯಾಗಿ ನಿಮ್ಮ ಎಲ್ಲ ನೋವುಗಳಿಗೂ ಧಾರಾಳವಾಗಿ ತಿನ್ನಬೇಡಿ, ಇದರಿಂದ ಸಾಕಷ್ಟು ತೊಂದರೆಗಳು, ಅಡ್ಡ ಪರಿಣಾಮಗಳು ಉಂಟಾಗಬಹುದು ಎಂದು ಎಚ್ಚರಿಸಿದೆ.
ಭಾರತದ ಫಾರ್ಮಾಕೋವಿಜಿಲೆನ್ಸ್ ಪ್ರೋಗ್ರಾಮ್ ಅಡಿಯಲ್ಲಿ, ಮಾತ್ರೆಗಳ ಅಡ್ಡ ಪರಿಣಾಮಗಳ ಬಗೆಗೆ ಅಧ್ಯಯನಗಳೂ ನಡೆಯುತ್ತಿದ್ದು ಇದೀಗ ಮೆಫ್ಟಾಲ್ ಬಗೆಗೆ ಈ ಆತಂಕಕಾರಿ ವಿಚಾರವನ್ನು ಹೊರಹಾಕಿದೆ. ಮೆಫ್ಟಾಲ್‌ನಂತಹ ಮಾತ್ರೆಯಿಂದ ತಾತ್ಕಾಲಿಕವಾಗಿ ನೋವು ಶಮನಗೊಂಡರೂ ಸಮಸ್ಯೆಯ ಮೂಲದಲ್ಲಿ ಪರಿಹಾರವಾಗಿರುವುದಿಲ್ಲ. ಆದರೆ, ಸುಲಭದ ದಾರಿ ಇದಾದ್ದರಿಂದ ಬಹುತೇಕರು ಈ ಅಭ್ಯಾಸವನ್ನು ಮಾಡಿಕೊಂಡಿರುತ್ತಾರೆ. ಆದರೆ, ಇದರಿಂದ ಸಾಕಷ್ಟು ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಇದು ಹೇಳಿದೆ.
ಬಹುಮುಖ್ಯವಾಗಿ, ಮುಟ್ಟಿನ ದಿನಗಳಲ್ಲಿ ನೋವು ಅನುಭವಿಸುವ ಬಹುತೇಕ ಮಹಿಳೆಯರು ಪ್ರತೀ ತಿಂಗಳು ಮೆಫ್ಟಾಲ್ ಸೇವಿಸುವ ಅಭ್ಯಾಸ ಮಾಡಿಕೊಂಡಿರುತ್ತಾರೆ. ಇದು ಮುಟ್ಟಿನ ನೋವನ್ನು ಆ ಸಮಯದಲ್ಲಿ ಕಡಿಮೆ ಮಾಡಬಹುದು. ಆದರೆ, ಮುಟ್ಟಿನ ನೋವಿಗೆ ಆಗುವ ಕಾರಣವನ್ನು ಬುಡದಿಂದ ತೆಗೆಯಲು ಸಹಾಯ ಮಾಡುವುದಿಲ್ಲ. ಮುಟ್ಟಿನ ನೋವಿಗೆ ಕಾರಣವೇನು ಎಂಬುದನ್ನು ಕಂಡುಹಿಡಿದು ಆ ನಿಟ್ಟಿನಲ್ಲಿ ಮಹಿಳೆಯರು ವೈದ್ಯರನ್ನು ಸಂಪರ್ಕಿಸುವುದು ಒಳ್ಳೆಯದೇ ಹೊರತು, ಈ ರೀತಿ ನೋವು ನಿವಾರಕ ಗುಳಿಗೆಗಳನ್ನು ತಿನ್ನುವುದರಿಂದ ಮುಂದೆ ಹಲವಾರು ಸಮಸ್ಯೆಗಳನ್ನು ಕೈಯಾರೆ ಆಹ್ವಾನ ಮಾಡಿದಂತಾಗುವುದು.
ಈ ಮೆಫ್ಟಾಲ್‌ನಲ್ಲಿರುವ ಮೆಫೆನಾಮಿಕ್ ಆಮ್ಲವು ದೇಹದ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದು. ಇದರಿಂದ ಡ್ರೆಸ್ ಸಿಂಡ್ರೋಮ್ (Drug Reaction with Eosinophilia and Systemic Symptoms) ಕೂಡಾ ಉಂಟಾಗಬಹುದು. ಇದು ತೀವ್ರ ಅಲರ್ಜಿಯಂಥ ಸಮಸ್ಯೆಯಾಗಿದ್ದು, ಮೆಫ್ಟಾಲ್ ಸೇವಿಸಿದ ಎರಡರಿಂದ ಎಂಟು ವಾರಗಳ ಸಮಯದಲ್ಲಿ ಚರ್ಮದ ಮೇಲೆ ದದ್ದು, ಗುಳ್ಳೆ, ಉರಿಯೂತ, ಹಾಗೂ ಜ್ವರ ಮತ್ತಿತರ ಸಮಸ್ಯೆಗಳಿಗೆ ಕಾರಣವಾಗಬಹುದು. ಹೀಗಾಗಿ, ಮೆಫ್ಟಾಲ್ ನೀವು ಸೇವಿಸಿದ್ದರೆ, ಆಗಾಗ ಸೇವಿಸುವ ಅಭ್ಯಾಸವಿದ್ದರೆ ಜಾಗರೂಕತೆ ವಹಿಸಿ. ಮೆಫ್ಟಾಲ್ ಸೇವಿಸಿದ ಮೇಲೆ ಈ ಲಕ್ಷಣಗಳು, ಸಮಸ್ಯೆಗಳು ಕಾಣಿಸಿಕೊಂಡರೆ, ಜನರು www.ipc.gov.in ವೆಬ್‌ಸೈಟ್ ಅಥವಾ ಆಂಡ್ರಾಯ್ಡ್ ಮೊಬೈಲ್ ಅಪ್ಲಿಕೇಶನ್ ಎಡಿಆರ್, ಪಿವಿಪಿಐ ಮತ್ತು ಪಿವಿಪಿಐ ಸಹಾಯವಾಣಿ ಸಂಖ್ಯೆ 1800-180-3024 ಮೂಲಕ ರಾಷ್ಟ್ರೀಯ ಸಮನ್ವಯ ಕೇಂದ್ರಕ್ಕೆ ವರದಿ ಮಾಡಬೇಕು ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!