ಸಣ್ಣ ತೊಂದರೆಗಳಿಗೂ ಪ್ಯಾರಸೆಟಮಾಲ್ ನುಂಗುವ ಅಭ್ಯಾಸ ಹೆಚ್ಚಿರುವ ಈ ಹೊತ್ತಿನಲ್ಲಿ, ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನಕಾರರು ಮಹತ್ವದ ವರದಿಯನ್ನು ಮುಂದಿಟ್ಟಿದ್ದಾರೆ. ಪ್ಯಾರಸೆಟಮಾಲ್ ಪ್ರಮಾಣ ಹೆಚ್ಚಾದರೆ (Paracetamol overdose) ಯಕೃತ್‌ಗೆ ಹಾನಿಯಾದೀತು, ಜಾಗ್ರತೆ.
ಜ್ವರವೇ? ಒಂದು ಪ್ಯಾರಸೆಟಮಾಲ್ ನುಂಗಿದರಾಯ್ತು. ಹಲ್ಲು ನೋವೇ? ಒಂದು ಪ್ಯಾರಸೆಟಮಾಲ್ ಗುಳುಂ. ಹೀಗೆ ಕೊಂಚ ಮೈ ಬಿಸಿಯಾದರೆ, ಎಲ್ಲಾದರೂ ನೋವಿದ್ದರೆ ನಾವೇ ವೈದ್ಯರಾಗಿ ಪ್ಯಾರಸೆಟಮಾಲ್ ನುಂಗಿ ಕೂತುಬಿಡುತ್ತೇವೆ; ಸರ್ವ ರೋಗಕ್ಕೂ ಒಂದೇ ಮದ್ದು ಎಂಬಂತೆ! ಹೀಗೆ ನುಂಗುವ ಔಷಧಗಳು ಅತಿಯಾದರೆ ನಮ್ಮ ಯಕೃತ್ತಿನ ಆರೋಗ್ಯವನ್ನೇ ನುಂಗಿ ನೊಣೆಯುತ್ತವೆ ಎಂದು ಎಚ್ಚರಿಸುತ್ತವೆ ಇತ್ತೀಚಿನ ಅಧ್ಯಯನಗಳು.
ಅಧ್ಯಯನ ಹೇಳೋದೇನು?
ಎಡಿನ್‌ಬರ್ಗ್ ವಿಶ್ವವಿದ್ಯಾಲಯದ ಅಧ್ಯಯನಕಾರರು ಈ ಬಗ್ಗೆ ಇತ್ತೀಚೆಗೆ ನಡೆಸಿದ ಅಧ್ಯಯನಗಳು ಪ್ಯಾರಸೆಟಮಾಲ್ ಔಷಧಗಳ ಅಡ್ಡ ಪರಿಣಾಮಗಳ ಮೇಲೆ ಬೆಳಕು ಚೆಲ್ಲುತ್ತವೆ. ಪ್ರತಿ ಸಣ್ಣ ವಿಷಯಕ್ಕೂ, ವೈದ್ಯರ ಸಲಹೆ ಇಲ್ಲದೆಯೇ ಪ್ಯಾರಸೆಟಮಾಲ್ ಅಥವಾ ನೋವಿನ ಮಾತ್ರೆಗಳನ್ನು ನುಂಗುವುದರಿಂದ ಉಂಟಾಗುವ ಅಡ್ಡ ಪರಿಣಾಮಗಳು ಕೆಲವೊಮ್ಮೆ ಶಾಶ್ವತವೂ ಆಗಬಹುದು; ಗ್ರಹಚಾರ ಕೆಟ್ಟರೆ ಮಾರಣಾಂತಿಕವೂ ಆಗಬಹುದು ಎನ್ನುತ್ತಾರೆ ಅಧ್ಯಯನಕಾರರು.
ಅಂಗಾಂಗ ವೈಫಲ್ಯ
ಭಾರತದಲ್ಲಿ ಬಳಸುವ ಪ್ಯಾರಸೆಟಮಾಲ್ ಪ್ರಮಾಣಕ್ಕಿಂತ ಪಶ್ಚಿಮ ದೇಶಗಳಲ್ಲಿ ಪ್ಯಾರಸೆಟಮಾಲ್ ಅಥವಾ ಅಸೆಟೋಮೆನೊಫಿನ್ ಬಳಸುವ ಪ್ರಮಾಣ ಹೆಚ್ಚು. ಆದರೆ ಕೋವಿಡ್ ನಂತರದ ದಿನಗಳಲ್ಲಿ ಪ್ಯಾರಸೆಟಮಾಲ್ ಬಳಸುವ ಪ್ರಮಾಣ ಎಲ್ಲಾ ದೇಶಗಳಲ್ಲಿ ಮೊದಲಿಗಿಂತ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಇಂಥ ಅಧ್ಯಯನಗಳು ಮಹತ್ವ ಪಡೆದಿವೆ. ರೋಗದ ಉಪಶಮನಕ್ಕಾಗಿ ಬಳಸುವ ಈ ಔಷಧಗಳು ಮಿತಿ ಮೀರಿದರೆ ಅಪಾಯಗಳಿಗೆ ಆಹ್ವಾನ ನೀಡುತ್ತವೆ ಎಂಬುದು ಸಾಬೀತಾಗಿದೆ. ಕೆಲವು ಸಂದರ್ಭಗಳಲ್ಲಿ, ಯಕೃತ್ತಿನ ಮೇಲೆ ದುಷ್ಟಪರಿಣಾಮ ಬೀರುವ ಈ ಔಷಧಗಳು, ಅಲ್ಲಿನ ಆರೋಗ್ಯವಂತ ಕೋಶಗಳನ್ನು ಹಾಳು ಮಾಡುತ್ತವೆ ಹಾಗೂ ಅಂಗದ ವೈಫಲ್ಯಕ್ಕೂ ಕಾರಣವಾಗಬಹುದು.
ಪರಿಣಾಮ ಹೇಗೆ?
ಅಂಗ ವೈಫಲ್ಯಕ್ಕೆ ಕಾರಣವಾಗುವ ರೀತಿಯನ್ನೂ ಈ ಅಧ್ಯಯನ ಸ್ಪಷ್ಟಪಡಿಸುತ್ತದೆ. ಯಾವುದೇ ಕೋಶಗಳು ತಮ್ಮ ಅಂಗಗಳ ಗೋಡೆಯ ಜೊತೆಗಿನ ಸಂಪರ್ಕವನ್ನು ಕಳೆದುಕೊಂಡರೆ ಆಪತ್ತು ಎದುರಾಗುತ್ತದೆ. ಇದರಿಂದ ಆ ಕೋಶಗಳು ಕ್ರಮೇಣ ಸಾಯಬಹುದು. ಇಂಥ ಸಂದರ್ಭಗಳಲ್ಲಿ ಅಂಗಗಳು ಪೂರ್ಣ ಅಥವಾ ಭಾಗಶಃ ಹಾನಿಗೊಂಡು ವಿಫಲವೂ ಆಗಬಹುದು. ಈ ವಿಷಯವೇನೂ ಹೊಸದಲ್ಲ; ಅಂಗಗಳ ವಿಫಲತೆಯ ಕಾರಣಗಳ ಬಗ್ಗೆ ವೈದ್ಯ ವಿಜ್ಞಾನಕ್ಕೆ ಗೊತ್ತಿರುವಂಥದ್ದೇ. ಆದರೆ ಇಂಥ ಪ್ರಕ್ರಿಯೆಗಳು ಪ್ಯಾರಸೆಟಮಾಲ್ನ ದುಷ್ಪರಿಣಾಮಗಳಲ್ಲಿ ಗಮನಕ್ಕೆ ಬಂದಿರಲಿಲ್ಲ.
ನುಂಗಬಾರದೇ?
ಹಾಗಾದರೆ ಪ್ಯಾರಸೆಟಮಾಲ್ ನುಂಗುವುದು ಅಪಾಯವೇ? ಇಷ್ಟು ದಿನ ನುಂಗಿದ್ದೇವೆ, ಇನ್ನೂ ಬದುಕಿದ್ದೇವಲ್ಲ! ಇದು ಹಲವರ ಪ್ರಶ್ನೆಯಾಗಿರಬಹುದು. ವಿಷಯ ಹಾಗಲ್ಲ. ಯಾವುದೇ ಔಷಧವನ್ನು ವೈದ್ಯರ ಸಲಹೆಯ ಮೇರೆ, ಅವರು ಹೇಳಿದಂತೆ, ಹೇಳಿದಷ್ಟು ತೆಗೆದುಕೊಂಡರೆ ಅಪಾಯ ಕಡಿಮೆ. ನಮ್ಮಿಷ್ಟದಂತೆ ತಿನ್ನುವುದರಲ್ಲಿ ಸಮಸ್ಯೆಗಳು ಎದುರಾಗುತ್ತವೆ. ಆರೋಗ್ಯವಂತ ವಯಸ್ಕನಿಗೆ ೨೪ ತಾಸುಗಳಲ್ಲಿ ಎಷ್ಟು ಎಂ.ಜಿ. ಪ್ಯಾರಸೆಟಮಾಲ್ ನೀಡಬಹುದು ಎನ್ನುವುದಕ್ಕೆ ನಿರ್ದೇಶನಗಳನ್ನು ನೀಡಲಾಗುತ್ತದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ಇದ್ದಂತೆ ನಮಗಿರುವುದು ಅಸಾಧ್ಯ. ಒಂದೊಮ್ಮೆ ಆಕಸ್ಮಿಕವಾಗಿ ಮಿತಿಮೀರಿದ ಪ್ಯಾರಸೆಟಮಾಲ್ ಔಷಧಿಯನ್ನು ಸೇವಿಸಿದರೆ, ತಕ್ಷಣವೇ ವೈದ್ಯರನ್ನು ಕಾಣುವುದು ಅಗತ್ಯ. ಶಾಶ್ವತವಾಗಿ ಯಕೃತ್ ಹಾನಿಗೆ ಒಳಗಾಗದಂತೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಿದೆ ಎನ್ನುತ್ತಾರೆ ತಜ್ಞರು.
ಸುರಕ್ಷಿತ ಬಳಕೆಗೆ ಅಧ್ಯಯನ
ಔಷಧಗಳ ಅಡ್ಡ ಪರಿಣಾಮಗಳಿಂದ ಉಂಟಾಗುವ ಯಕೃತ್ತಿನ ಸಮಸ್ಯೆಯ ಬಗ್ಗೆ ಗಂಭೀರ ಅಧ್ಯಯನಗಳು ವಿಶ್ವದ ಹಲವೆಡೆಗಳಲ್ಲಿ ನಡೆದಿವೆ. ಇರುವುದಕ್ಕಿಂತ ಸುರಕ್ಷಿತವಾದ ಔಷಧಿಗಳನ್ನು ಅಭಿವೃದ್ಧಿ ಪಡಿಸುವ ಬಗ್ಗೆ ಮತ್ತು ಇರುವ ಔಷಧಿಗಳನ್ನೇ ಸುರಕ್ಷಿತವಾಗಿ ಬಳಸುವ ಬಗ್ಗೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ವೈದ್ಯರ ಸಲಹೆಯಿಲ್ಲದೆ ಅಂಗಡಿಗಳಲ್ಲಿ ದೊರೆಯುವ ಔಷಧಿಗಳೆಂದರೆ ಬೇಕಾದಾಗ ನುಂಗಿದರಾಯ್ತು ಎನ್ನುವ ಮನಸ್ಥಿತಿಯಿಂದ ಹೊರಬಂದು, ಸುರಕ್ಷಿತ ಬಳಕೆಯ ಬಗ್ಗೆ ಜನ ಎಚ್ಚೆತ್ತುಕೊಳ್ಳುವುದು ಅಗತ್ಯ.
ಇದನ್ನೂ ಓದಿ: Balancing Hormones Naturally: ಹಾರ್ಮೋನು ಸಮತೋಲನಕ್ಕೆ ಬೇಕು ಇಂಥ ಆಹಾರಗಳು