ಬಹಳಷ್ಟು ಮಂದಿಗೆ ಊಟ ಉಂಡಿದ್ದು ಪೂರ್ತಿಯಾಗಬೇಕು ಎಂದಾದಲ್ಲಿ ಊಟದ ಕೊನೆಗೊಂದು ಮೊಸರೋ ಮಜ್ಜಿಗೆಯೋ ಇರಬೇಕು. ಮೊಸರನ್ನ ಸಿಕ್ಕಿದರೂ (Curd Rice Benefits) ಆದೀತು. ಅದೂ ಇಲ್ಲದಿದ್ದರೆ, ಮಜ್ಜಿಗೆ ನೀರು ಕುಡಿಯಲು ಸಿಕ್ಕರೆ, ಅಥವಾ ಲಸ್ಸಿಯೊಂದಾದರೂ ಆದೀತು. ಒಟ್ಟಾರೆ ಮೊಸರು, ಮಜ್ಜಿಗೆಯಲ್ಲಿಯೇ ಊಟ ಕೊನೆಗೊಳ್ಳಬೇಕು. ಇಲ್ಲದಿದ್ದರೆ ಹೊಟ್ಟೆಯಲ್ಲಿ ಯಾಕೋ ತಳಮಳ, ಹೊಟ್ಟೆ ತಂಪಾದ ಅನುಭವ ಸಿಗದೇ ಇರುವುದು, ಊಟ ಮಾಡಿದಂತ ಖುಷಿ ಸಿಗದೇ ಇರುವುದು ಹೀಗೆ ಹಲವರಿಗೆ ಹಲವು ಬಗೆಯ ಭಾವ, ಅನುಭವ. ಒಟ್ಟಾರೆ ದಕ್ಷಿಣ ಭಾರತೀಯರಾದವರಿಗೆ ಊಟದ ನಂತರ ಮಜ್ಜಿಗೆ ಮೊಸರು ಬೇಕೇ ಬೇಕು.
ಮೊಸರಿಗೆ ಒಂದು ನೆಮ್ಮದಿ ನೀಡುವ ಶಕ್ತಿ ಇದೆ. ಅದು ಸಂತೃಪ್ತ ಭಾವ. ಉಂಡ ಮೇಲೆ ಉಂಡದ್ದು ತೃಪ್ತಿಯಾಗುವ ಭಾವವದು. ಇದು ಚಂದದ ಊಟದ ನಂತರ ಸುಖ ನಿದ್ದೆಯನ್ನೂ ನೀಡಬಲ್ಲುದು. ಹೆಚ್ಚು ಉಂಡರೆ ಖಂಡಿತ ಮಲಗಬೇಕಾಗುವ ಪರಿಸ್ಥಿತಿ ಬಂದರೂ, ಹೊಟ್ಟೆಯಲ್ಲೇನೋ ಹಿತವಾದ ಅನುಭವ. ಈ ಹಿತವಾದ ಅನುಭವವೇ ಊಟ ಮಾಡಿದ್ದರ ಖುಷಿ, ಸಂತೋಷದ ಅನುಭವ. ಎಷ್ಟೋ ಬಾರಿ ಏನೇ ತಿಂದುಂಡರೂ ಕೊನೆಗೊಂದು ಮೊಸರನ್ನವೇ ಸಾಕಿತ್ತು, ಬೇರೇನೂ ಬೇಡ ಅನಿಸುವುದುಂಟು. ಅದ್ಯಾಕೆ ಎಂದರೆ ಇದಕ್ಕೇ. ಈ ಖುಷಿ, ನೆಮ್ಮದಿ, ಊಟ ಮಾಡಿದ್ದರ ಹಿತವಾದ ಅನುಭವ ಇದು ಕಟ್ಟಿಕೊಡಬಲ್ಲ ಕಾರಣಕ್ಕೇ. ಹಾಗಾದರೆ, ಮೊಸರಿನಲ್ಲಿ ಅಂಥದ್ದೇನಿದೆ ಎಂದು ನಿಮಗೆ ಅನಿಸಬಹುದು, ಕೇವಲ ಅಭ್ಯಾಸ ಬಲದಿಂದ ಹಾಗನಿಸುತ್ತಿದೆ ಅನಿಸಲೂಬಹುದು. ಆದರೆ, ನಿಜವಾಗಿಯೂ ಮೊಸರಿಗೆ ಸಂತೋಷ ನೀಡುವ ಗುಣವಿದೆ. ಆ ಗುಣ ಬಂದಿದ್ದು ಮೊಸರಿನಲ್ಲಿರುವ ಟ್ರಿಪ್ಟೋಫನ್ ಎಂಬ ರಾಸಾಯನಿಕದಿಂದ!
ಮೊಸರಿನಲ್ಲಿ ಟ್ರಿಪ್ಟೋಫನ್ ಎಂಬ ಬಗೆಯ ಅಪರೂಪದ ಅಮೈನೋ ಆಸಿಡ್ ಇರುವುದರಿಂದ ಈ ಬಗೆಯ ಸಂತೋಷ ನಮಗೆ ಸಿಗುತ್ತದೆ. ಈ ಬಗೆಯ ಅಮೈನೋ ಆಸಿಡ್ ದೇಹದಲ್ಲಿ ಉತ್ಪತ್ತಿ ಮಾಡುವ ಶಕ್ತಿ ಇರುವುದಿಲ್ಲ. ಇದನ್ನು ಆಹಾರದ ಮೂಲಕ ಪಡೆಯಬೇಕು. ಈ ಟ್ರಿಪ್ಟೋಫನ್ ದೇಹದಲ್ಲಿ ಸೆರೊಟೋನಿನ್ ಎಂಬ ಹಾರ್ಮೋನನ್ನು ಕಟ್ಟುವ ಪ್ರಮುಖ ಮೂಲ. ಈ ಸೆರೆಟೋನಿನ್ ಹಾರ್ಮೋನಿಗೆ ದೇಹದಲ್ಲಿ ಸಾಕಷ್ಟು ಕೆಲಸಗಳಿವೆ. ಕಲಿಕೆ, ಸ್ಮರಣಶಕ್ತಿಯಿಂದ ಜೀರ್ಣಕ್ರಿಯೆಯವರೆಗೆ ಸೆರೆಟೋನಿನ್ ಹಾರ್ಮೋನಿನ ಪಾತ್ರ ಬಹುಮುಖ್ಯವಾದದ್ದು. ಇದು ನಮ್ಮ ಭಾವನೆ, ಸಂತೋಷದ ಮೇಲೂ ಪ್ರಮುಖ ಪರಿಣಾಮ ಬೀರುತ್ತದೆ. ನಮ್ಮನ್ನು ಸಂತೋಷವಾಗಿ, ಖುಷಿಯಾಗಿ, ಸದಾ ಕ್ರಿಯಾಶೀಲರಾಗಿ, ಮಾನಸಿಕವಾಗಿ ಉಲ್ಲಾಸದಾಯಕವಾಗಿ, ಏಕಾಗ್ರಚಿತ್ತವಾಗಿ ಕೆಲಸ ಮಾಡುವಂತೆ ಮಾಡುವ ಶಕ್ತಿಯೂ ಇದರಲ್ಲಿದೆ. ಹೀಗಾಗಿ ಸೆರೆಟೋನಿನ್ ಹಾರ್ಮೋನಿನ ಏರುಪೇರು ಮಾನಸಿಕ ಪ್ರಕ್ಷುಬ್ದತೆಯನ್ನೂ ತಂದೊಡ್ಡಬಹುದು.
ಇಂಥ ಸೆರೆಟೋನಿನ್‌ಗೆ ಮೂಲ ಪ್ರೇರಣೆಯಾಗಿ ನಿಮ್ಮಬಲ್ಲ ಅಮೈನೋ ಆಸಿಡ್ ಆಗಿರುವ ಟ್ರಿಪ್ಟೋಫನ್ ಕಾರ್ಬೋಹೈಡ್ರೇಟ್ ಜೊತೆಗೆ ಸೇರಿದಾಗ ಇನ್ನೂ ಅತ್ಯುತ್ತಮವಾಗಿ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತದೆಯಂತೆ. ಹಾಗಾಗಿ, ಮೊಸರಿನಲ್ಲಿರುವ ಟ್ರಿಪ್ಟೋಫನ್ ಹಾಗೂ ಅನ್ನದಲ್ಲಿರುವ ಕಾರ್ಬೋಹೈಡ್ರೇಟ್ ಎಷ್ಟೊಳ್ಳೆ ಕಾಂಬಿನೇಶನ್ ಆಗುತ್ತದೆ ಎಂದರೆ, ಇವೆರಡರ ಸುಯೋಗದಿಂದ ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾಗುವ ಸೆರೆಟೋನಿನ್ ಹಾರ್ಮೋನಿನ ಉತ್ಪಾದನೆಗೆ ಪ್ರಚೋದನೆ ನೀಡುತ್ತದೆ. ಫಲವಾಗಿ ಮೊಸರನ್ನ ತಿನ್ನುವ ಮೂಲಕ ಸಂತೋಷವಾಗಿ, ಉಲ್ಲಸಿತರಾಗಿ, ಸಂತೃಪ್ತಿಯ ಅನುಭವವೂ ನಮಗಾಗುತ್ತದೆ!
ಇದನ್ನೂ ಓದಿ: Nails Health Tips: ಆರೋಗ್ಯದ ಗುಟ್ಟು ರಟ್ಟಾಗಬೇಕಿದ್ದರೆ ಉಗುರುಗಳನ್ನು ನೋಡಿ!