Site icon Vistara News

Barley Water For Lowering Cholesterol: ಕೊಲೆಸ್ಟ್ರಾಲ್‌ ಕಡಿಮೆ ಮಾಡಲು ಬಾರ್ಲಿ ನೀರು ನೆರವಾಗುವುದೇ?

barley water

ಕೊಲೆಸ್ಟ್ರಾಲ್‌ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಕೆಲವೊಂದು ಡಿಟಾಕ್ಸ್‌ ಪೇಯಗಳು ಈ ಸಮಸ್ಯೆ ಕಡಿಮೆ ಮಾಡುವುದಕ್ಕೆ ಸಹಕಾರಿ ಎಂದು ಯಾರಾರದ್ದೋ ಮಾತಲ್ಲಿ ಕೇಳಿರುತ್ತೀರಿ. ದೇಹದಲ್ಲಿನ ಬೇಡದ್ದನ್ನು ಹೊರಗಟ್ಟುವಲ್ಲಿ ಕೆಲವು ಆಹಾರಗಳು ಮತ್ತು ಪೇಯಗಳು ಒಂದಿಷ್ಟು ನೆರವು ನೀಡುವುದು ಸುಳ್ಳೇನಲ್ಲ. ಅಂಥವುಗಳಲ್ಲಿ ಒಂದು ಬಾರ್ಲಿ ನೀರು. ರಾತ್ರಿ ನೀರಿಗೆ ಹಾಕಿದ ಬಾರ್ಲಿಯನ್ನು ಸೋಸಿ, ನೀರನ್ನು ಬೆಳಗಿನ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಆರೋಗ್ಯಕ್ಕೆ ಹಲವು ರೀತಿಯ ಲಾಭಗಳುಂಟು (Barley Water For Lowering Cholesterol). ಏನವು?

ಕೊಲೆಸ್ಟ್ರಾಲ್‌ ಎಂದರೇನು?

ಸರಳವಾಗಿ ಹೇಳುವುದಾದರೆ, ರಕ್ತದಲ್ಲಿ ಇರಬಹುದಾದಂಥ ಜಿಡ್ಡಾದ ಪದಾರ್ಥ. ಅದೂ ನಮ್ಮ ದೇಹಕ್ಕೆ ಬೇಕಾದಂಥ ವಸ್ತುವೇ! ಹಾರ್ಮೋನುಗಳ ಉತ್ಪಾದನೆಗೆ, ಕೋಶಗಳ ಪುನರುತ್ಪತ್ತಿಗೆ ಈ ಕೊಲೆಸ್ಟ್ರಾಲ್‌ ಅಂಶ ಬೇಕು. ಆದರೆ ಅದೇ ಅತಿಯಾದಾಗ ತೊಂದರೆಯನ್ನು ಆಹ್ವಾನಿಸುತ್ತದೆ. ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂಥ ಮಾರಣಾಂತಿಕ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ಈ ಹಿನ್ನೆಲೆಯಲ್ಲಿ, ಬಾರ್ಲಿ ನೀರು ದೇಹದಲ್ಲಿ ಜಮೆಯಾಗಿರುವ ಕೊಲೆಸ್ಟ್ರಾಲ್‌ ಕಡಿಮೆ ಮಾಡುವುದಕ್ಕೆ ಮಾತ್ರವಲ್ಲ, ಇನ್ನೂ ಹಲವು ಅನುಕೂಲಗಳನ್ನು ಕಲ್ಪಿಸಿಕೊಡುತ್ತದೆ. ಆದರೊಂದು, ಕೇವಲ ಬಾರ್ಲಿ ನೀರು ಕುಡಿಯುತ್ತಾ ವೈದ್ಯರ ಸಲಹೆಯನ್ನು ಕಡೆಗಣಿಸುವಂತಿಲ್ಲ. ದೇಹದ ಸ್ವಾಸ್ಥ್ಯ ಸುಧಾರಣೆಗೆ ಇವೆಲ್ಲ ಒಟ್ಟಂದದಲ್ಲಿ ಪರಿಣಾಮ ಬೀರುವಂಥವು.

ಹೆಚ್ಚು ನಾರು

ನಮ್ಮ ದೇಹಕ್ಕೆ ಅಗತ್ಯವಾಗಿ ಬೇಕಾದಂಥ ಸತ್ವಗಳಲ್ಲಿ ನಾರು ಸಹ ಒಂದು. ಕರಗದಿರುವ ನಾರುಗಳು ನಮ್ಮ ಜೀರ್ಣಾಂಗಗಳ ಕ್ಷಮತೆ ಮತ್ತು ಶುದ್ಧತೆ ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಕರಗಬಲ್ಲಂಥ ನಾರುಗಳು ರಕ್ತದಲ್ಲಿನ ಕೊಲೆಸ್ಟ್ರಾಲ್‌ ಮಟ್ಟವನ್ನು ಕತ್ತರಿಸಲು ನೆರವಾಗುತ್ತವೆ. ಬಾರ್ಲಿ ನೀರಲ್ಲಿರುವುದು ಹೇರಳವಾದ ಕರಗಬಲ್ಲ ನಾರಿನಂಶ. ಹಾಗಾಗಿ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಬಾರ್ಲಿ ನೀರನ್ನು ಸೇವಿಸುವುದರಿಂದ ಬೇಡದ್ದನ್ನು ದೇಹದಿಂದ ಹೊರಗೆಸೆಯಲು ಅನುಕೂಲವಾಗುತ್ತದೆ.

ತೂಕ ಇಳಿಕೆ

ನಾರು ಹೆಚ್ಚಿರುವ ಆಹಾರಗಳು ದೀರ್ಘಕಾಲದವರೆಗೆ ಹೊಟ್ಟೆ ತುಂಬಿದ ಅನುಭವವನ್ನೇ ನೀಡುತ್ತವೆ. ಮಾತ್ರವಲ್ಲ, ರಕ್ತದಲ್ಲಿ ಸಕ್ಕರೆಯ ಮಟ್ಟ ದಿಢೀರ್‌ ಏರಿಳಿತ ಆಗದಂತೆ ನೋಡಿಕೊಳ್ಳುತ್ತವೆ. ಬಾರ್ಲಿ ನೀರು ಸಹ ಅಂಥದ್ದೇ ಪರಿಣಾಮವನ್ನು ನೀಡುತ್ತದೆ. ಇದರಿಂದ ಮಧುಮೇಹಿಗಳಿಗೆ ಅನುಕೂಲ. ಜೊತೆಗೆ, ತೂಕ ಇಳಿಸುವ ಉದ್ದೇಶವಿದ್ದರೆ ಹಸಿವನ್ನು ಮುಂದೂಡುವಂಥ ಈ ರೀತಿಯ ಆಹಾರಗಳು ದೇಹದಲ್ಲಿ ಜಮೆಯಾಗಿರುವ ಕೊಬ್ಬನ್ನು ಶಕ್ತಿಯಾಗಿ ಪರಿವರ್ತಿಸಲು ಚೋದನೆ ನೀಡುತ್ತವೆ.

ಡೈಯುರೇಟಿಕ್

ಮೂತ್ರಪಿಂಡಗಳ ಕಾರ್ಯಕ್ಷಮತೆ ಹೆಚ್ಚಳಕ್ಕೂ ಇದು ಪ್ರಚೋದನೆ ನೀಡುತ್ತದೆ. ಹೆಚ್ಚು ಮೂತ್ರವನ್ನು ಉತ್ಪತ್ತಿ ಮಾಡುವುದರಿಂದ ದೇಹದಲ್ಲಿ ಜಮೆಯಾಗುವ ಹೆಚ್ಚುವರಿ ಸೋಡಿಯಂನಿಂದ ಬಿಡುಗಡೆ ಪಡೆಯಬಹುದು. ಅಂದಮಾತ್ರಕ್ಕೆ ಸೋಡಿಯಂ ಅಂಶ ಹಾಳು ಎಂಬ ತೀರ್ಮಾನಕ್ಕೆ ಬರಬೇಕಿಲ್ಲ. ಅದೂ ನಮಗೆ ಬೇಕಾಗಿದ್ದೇ. ಆದರೆ ಅತಿಯಾದರೆ ಅಮೃತವೂ ವಿಷವೇ. ಮೂತ್ರಪಿಂಡಗಳಲ್ಲಿ ಕಲ್ಲಿನಂಥ ತೊಂದರೆಯಿದ್ದರೂ ಇದು ನೆರವಾದೀತು.

ಜೀರ್ಣಾಂಗಗಳು ಕ್ಷೇಮ

ಬಾರ್ಲಿ ನೀರು ಪ್ರೊಬಯಾಟಿಕ್‌ನಂತೆಯೂ ಕೆಲಸ ಮಾಡಬಲ್ಲದು. ಜೊತೆಗೆ ನಾರಿನಂಶವೂ ಸೇರಿರುವುದರಿಂದ ಜೀರ್ಣಾಂಗಗಳಲ್ಲಿ ಇರಬೇಕಾದ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಬೇಡದ್ದನ್ನು ದೇಹದಿಂದ ಹೊರಹಾಕಿ, ಜೀರ್ಣಾಂಗಗಳನ್ನು ಶುದ್ಧವಾಗಿಡುವಲ್ಲಿಯೂ ಇದು ಸಹಕಾರಿ. ಈ ಮೂಲಕ ಪಚನಾಂಗಗಳನ್ನು ಕ್ಷೇಮವಾಗಿ ಇರಿಸಬಲ್ಲದು ಬಾರ್ಲಿ ನೀರು.

ಉತ್ಕರ್ಷಣ ನಿರೋಧಕಗಳು

ಇದರಲ್ಲಿರುವ ಸೆಲೆನಿಯಂ ಮತ್ತು ವಿಟಮಿನ್‌ ಸಿಯಂಥ ಉತ್ಕರ್ಷಣ ನಿರೋಧಕಗಳು ನಮ್ಮ ದೇಹದ ಪ್ರತಿರೋಧಕ ಶಕ್ತಿಯನ್ನು ಜಾಗೃತವಾಗಿ ಇರಿಸಬಲ್ಲವು. ಇದನ್ನು ನಿಯಮಿತವಾಗಿ ಸೇವಿಸುವುದರಿಂದ ಋತುಮಾನದ ಬದಲಾವಣೆಯ ಸಂದರ್ಭದಲ್ಲಿ, ವಾತಾವರಣದ ಏರುಪೇರಿನಲ್ಲೂ ಸೋಂಕುಗಳೊಂದಿಗೆ ಹೋರಾಡುವ ದೇಹದ ಸಾಮರ್ಥ್ಯ ಕುಗ್ಗುವುದಿಲ್ಲ.

ಕೊಲಾಜಿನ್‌ ಹೆಚ್ಚಳ

ದೇಹಕ್ಕೆ ಬೇಕಷ್ಟು ನೀರಿನ ಪೂರೈಕೆ ಇಲ್ಲದಿದ್ದರೆ ತೊಂದರೆಗಳು ಹಲವು ರೀತಿಯಲ್ಲಿ ಬಾಧಿಸಬಲ್ಲವು. ಅವುಗಳಲ್ಲಿ ಒಂದು ಚರ್ಮ ಸುಕ್ಕಾಗುವುದು. ಇಂಥ ಸಂದರ್ಭಗಳಲ್ಲಿ ಬಾರ್ಲಿ ನೀರಿನ ಸೇವನೆಯಿಂದ ದೇಹಕ್ಕೆ ನೀರಿನ ಪೂರೈಕೆಯೂ ಆಗುತ್ತದೆ ಮತ್ತು ಇದರಲ್ಲಿರುವ ಸತ್ವಗಳು, ಕೊಲಾಜಿನ್‌ ಉತ್ಪಾದನೆಗೆ ಪ್ರಚೋದನೆಯನ್ನೂ ನೀಡುತ್ತವೆ. ಈ ಎಲ್ಲದರಿಂದ ಚರ್ಮ ಸುಕ್ಕಾಗುವುದನ್ನು ಮುಂದೂಡಬಹುದು.

ಇದನ್ನೂ ಓದಿ: Skin Care in Summer: ಬೇಸಿಗೆಯಲ್ಲಿ ಚರ್ಮದ ಆರೈಕೆ ಮಾಡಿಕೊಳ್ಳೋದು ಹೇಗೆ?

Exit mobile version