ʻತುಪ್ಪ ಇಲ್ಲದೆ ತುತ್ತು ಎತ್ತೋದ್ಹೇಗೆʼ ಎನ್ನುವುದು ಹಳೆಯ ಗಾದೆಯೇ ಹೌದಾದರೂ, ತುಪ್ಪ ಎನ್ನುವುದು ಹೇಗೆ ನಮ್ಮ ಆಹಾರದ ಭಾಗವಾಗಿದೆ ಎನ್ನುವುದನ್ನಿದು ಸೂಚಿಸುತ್ತದೆ. ಸಾವಿರಾರು ವರ್ಷಗಳಿಂದ ತುಪ್ಪ ಭಾರತೀಯ ಅಡುಗೆ ಮನೆಯ ಬೇರ್ಪಡಿಸಲಾಗದ ಭಾಗ. ರುಚಿಗೂ, ಆರೋಗ್ಯಕ್ಕೂ ಬೇಕಾದಂಥದ್ದು. ಆದರೆ ತೂಕ ಇಳಿಸುವವರಿಗೆ ತುಪ್ಪದ ಮೇಲೆ ಕೋಪ! ಇದರಿಂದ ತೂಕ ಹೆಚ್ಚಾಗುತ್ತದೆ, ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಇತ್ಯಾದಿ ಬಹಳಷ್ಟು ದೂರುಗಳು ಇದರ ಮೇಲುಂಟು. ಹಾಗಾಗಿ ತೂಕ ಇಳಿಸುವ ಇರಾದೆ ಇರುವವರು ಮೂಗಿನ ಮೇಲೆ ಮಾತ್ರವೇ ತುಪ್ಪ ಹಚ್ಚಿಕೊಳ್ಳುತ್ತಾರೆ- ಕಣ್ಣಲ್ಲಿ ನೋಡುವುದಕ್ಕೆ, ಮೂಗಿಗೆ ಪರಿಮಳಕ್ಕೆ ಮಾತ್ರ; ಬಾಯಿಗಿಲ್ಲ! ನಿಜಕ್ಕೂ ತುಪ್ಪ ಅಷ್ಟೆಲ್ಲಾ ತೂಕ ಏರಿಸುತ್ತದೆಯೇ (does ghee make you gain weight)? ಇದರಿಂದ ಆರೋಗ್ಯಕ್ಕೆ ಹಾನಿಯೇ?
ತಜ್ಞರ ಪ್ರಕಾರ, ತುಪ್ಪ ದೇಹಕ್ಕೆ ಒಳ್ಳೆಯದು. ಆದರೆ ಮಿತಿ ಮೀರಿ ತಿಂದರೆ ಅಮೃತವೂ ವಿಷವೇ. ಹಾಗಾಗಿ ಒಂದು ಹದದಲ್ಲಿ ತುಪ್ಪ ಸೇವಿಸಿದರೆ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. (does ghee make you gain weight) ಏನೆಲ್ಲಾ ಪ್ರಯೋಜನಗಳಿವೆ ಎಂಬುದನ್ನು ನೋಡಿದರೆ-
ತೂಕ ಏರುವುದೇ?
ತುಪ್ಪಕ್ಕೂ ತೂಕಕ್ಕೂ ನೇರ ಸಂಬಂಧ ಕಲ್ಪಿಸುವುದು ಕಷ್ಟ. ಅಧ್ಯಯನಗಳ ಪ್ರಕಾರ, ತುಪ್ಪದಲ್ಲಿರುವುದು ಮಧ್ಯಮ-ಪ್ರಮಾಣದ ಫ್ಯಾಟಿ ಆಮ್ಲಗಳು. ಇವುಗಳನ್ನು ದೇಹ ಶಕ್ತಿಯಾಗಿ ಉಪಯೋಗಿಸಿಕೊಳ್ಳುತ್ತದೆಯೇ ಹೊರತು ಕೊಬ್ಬಾಗಿ ಶೇಖರಿಸಿಟ್ಟುಕೊಳ್ಳುವುದಿಲ್ಲ. ತುಪ್ಪದಲ್ಲಿ ಹೇರಳವಾಗಿರುವ ಬಟೈರಿಕ್ ಆಮ್ಲವು ದೇಹದ ಚಯಾಪಚಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದನ್ನು ಮಿತಿಯಲ್ಲಿ ತಿನ್ನುವುದರಿಂದ ತೂಕ ಹೆಚ್ಚಲಾರದು
ಕೊಲೆಸ್ಟ್ರಾಲ್ ಹೆಚ್ಚುವುದೇ?
ಇಲ್ಲ ಎನ್ನುತ್ತಾರೆ ತಜ್ಞರು. ಡಯಟರಿ ಕೊಲೆಸ್ಟ್ರಾಲ್‌ನಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಮಟ್ಟ ವ್ಯತ್ಯಾಸ ಆಗುವುದಿಲ್ಲ ಎನ್ನುತ್ತವೆ ಅಧ್ಯಯನಗಳು. ತುಪ್ಪ, ಕೊಬ್ಬರಿ ಎಣ್ಣೆಯಂಥ ಮೀಡಿಯಂ ಚೈನ್ ಟ್ರೈಗ್ಲಿಸರೈಡ್ (ಎಂಸಿಟಿ) ಹೊಂದಿರುವ ವಸ್ತುಗಳಿಂದ ಆರೋಗ್ಯಕ್ಕೆ ಲಾಭವೇ ಹೊರತು ಹಾನಿಯಲ್ಲ.
ದೇಸಿ ತುಪ್ಪ ಬೇಡವೇ?
ಇದೂ ಒಂದು ತಪ್ಪು ಕಲ್ಪನೆ. ದೇಸಿ ತುಪ್ಪದಲ್ಲಿ ಅಡುಗೆ ಮಾಡುವ ಬಗ್ಗೆ ಏಕಾಭಿಪ್ರಾಯವಿಲ್ಲ. ಆದರೆ ಬಹುಪಾಲು ಖಾದ್ಯ ತೈಲಗಳಿಗಿಂತ ಹೆಚ್ಚಿನ ಸುಡುವ ಬಿಂದು ಅಥವಾ ಸ್ಮೋಕ್ ಪಾಯಿಂಟ್ ತುಪ್ಪಕ್ಕಿದೆ. ಹಾಗಾಗಿ ಹುರಿಯುವ, ಕರಿಯುವಂಥ ಅಡುಗೆಗಳಲ್ಲೂ ತುಪ್ಪವನ್ನು ಬಳಸುವುದು ಸುರಕ್ಷಿತ. ಅಡುಗೆ ತೈಲಗಳು ಬೇಗ ಸುಟ್ಟು ಕರಕಲಾದರೆ ಅಥವಾ ಹೊಗೆ ಬಂದರೆ, ಅಂಥವು ಖಾದ್ಯಗಳಲ್ಲಿನ ಬಳಕೆಗೆ ಯೋಗ್ಯವಲ್ಲ.
ಪೋಷಕಾಂಶಗಳಿವೆಯೇ?
ಯಾಕಿಲ್ಲ! ಕರಗಬಲ್ಲಂಥ ಎ, ಡಿ, ಇ ಮತ್ತು ಕೆ೨ ವಿಟಮಿನ್ಗಳ ಆಗರವಿದು. ಇದರಿಂದ ದೇಹದ ಚಯಾಪಚಯ ಹೆಚ್ಚಿ, ಜೀರ್ಣಾಂಗಗಳ ಕ್ಷಮತೆ ವೃದ್ಧಿಸಿ, ಕಣ್ಣು, ಹೃದಯದಂಥ ಅಂಗಗಳು ಚುರುಕುಗೊಂಡು, ರೋಗ ನಿರೋಧಕ ಶಕ್ತಿಯೂ ಸುಧಾರಿಸುತ್ತದೆ.
ರಕ್ತದೊತ್ತಡ ಏರಿದರೆ?
ಎಲ್ಲಾ ಜಿಡ್ಡುಗಳಿಂದಲೂ ರಕ್ತದೊತ್ತಡ ಹೆಚ್ಚುತ್ತದೆ ಎಂಬುದು ಪ್ರಚಲಿತದಲ್ಲಿರುವ ನಂಬಿಕೆ. ಒಮೇಗಾ ೩ ಮತ್ತು ಒಮೇಗಾ ೬ ಫ್ಯಾಟಿ ಆಮ್ಲಗಳನ್ನು ಹೊಂದಿರುವ ತುಪ್ಪದಿಂದ ರಕ್ತದೊತ್ತಡ ಏರುವುದಿಲ್ಲ; ಹೃದಯದ ಆರೋಗ್ಯಕ್ಕೂ ತೊಂದರೆಯಿಲ್ಲ. ಅದರರ್ಥ ಸಾಲ ಮಾಡಿಯಾದರೂ ತುಪ್ಪ ತಿನ್ನಬೇಕು ಎಂದಲ್ಲ, ನಿಯಂತ್ರಣದಲ್ಲಿದ್ದರೆ ಸಾಕು.
ಅಲರ್ಜಿ ಆದರೆ?
ತುಪ್ಪಕ್ಕೆ ಅಲರ್ಜಿ ಆಗುವಂಥ ಸಂಭವ ಅತಿ ಕಡಿಮೆ. ಲ್ಯಾಕ್ಟೋಸ್ (ಹಾಲಿನ) ಅಲರ್ಜಿ ಇರುವವರೂ ತಿನ್ನಬಹುದಾದಂಥ ವಸ್ತುವಿದು. ತುಪ್ಪದಲ್ಲಿ ಹಾಲಿನ ಅಂಶ ಏನೂ ಉಳಿಯದೆ ಹೋಗುವುದರಿಂದ ಅಲರ್ಜಿಯ ತಾಪತ್ರಯವೂ ಕಡಿಮೆ
FAQ
ತುಪ್ಪ ತಿಂದರೆ ಹೊಟ್ಟೆಯ ಸುತ್ತಳತೆ ಹೆಚ್ಚಾಗುತ್ತದಾ?
ಇಲ್ಲ. ದೇಹಕ್ಕೆ ಅಗತ್ಯವಾದ ಅಮೈನೊ ಆಮ್ಲಗಳು ತುಪ್ಪದಲ್ಲಿದ್ದು, ದೇಹದಲ್ಲಿ ಕೊಬ್ಬು ಶೇಖರವಾಗುವುದಿಲ್ಲ. ತೂಕ ಇಳಿಸುವವರು ತುಪ್ಪ ತಿನ್ನಬಹುದು
ದಿನಕ್ಕೆಷ್ಟು ತುಪ್ಪ ತಿನ್ನಬೇಕು?
ದಿನಕ್ಕೆ 3-4 ಟೀಸ್ಪೂನ್ ತುಪ್ಪ ತಿನ್ನುವುದು ಸರಿ ಎನ್ನುತ್ತಾರೆ ತಜ್ಞರು
ಇದನ್ನೂ ಓದಿ: Dental Health: ಸದಾ ಜಗಿಯುತ್ತಿರುವುದರಿಂದ ಹಲ್ಲುಗಳು ಗಟ್ಟಿಯಾಗುತ್ತವೆ ಅನ್ನೋದು ನಿಜವೆ?