Site icon Vistara News

Vegetarian Protein: ಸಸ್ಯಾಹಾರದಿಂದ ದೇಹದಾರ್ಢ್ಯತೆಗೆ ತೊಡಕಾಗುವುದೆ? ಇಲ್ಲಿದೆ ಉತ್ತರ

Vegetarian Protein

ಹೊಟ್ಟೆ ಕರಗಿಸುವ ಬಗ್ಗೆ ಮಾತಾಡುವುದು ಇತ್ತೀಚಿನ ಟ್ರೆಂಡ್‌ಗಳಲ್ಲಿ ಒಂದು. ಮಾತಾಡಿದ ಮಾತ್ರಕ್ಕೆ, ಈ ಬಗ್ಗೆ ಓದಿದ/ ನೋಡಿದ ಮಾತ್ರಕ್ಕೆ ಹೊಟ್ಟೆ ಕರಗುವುದೇನಿಲ್ಲವಲ್ಲ. ಇಂಥದ್ದೇ ಮತ್ತೊಂದು ಟ್ರೆಂಡ್‌ ಎಂದರೆ ರಟ್ಟೆ ಗಟ್ಟಿ ಮಾಡುವುದು. ಅಂದರೆ ದೇಹವನ್ನು ಹುರಿಗಟ್ಟಿಸುವುದು. ಇಂದಿನ ದಿನಗಳಲ್ಲಿ ಜಿಮ್‌ ಎಡತಾಕುವವರನ್ನು ನೋಡಿದರೆ, ದೇಹವನ್ನು ಕಟಿಕಟಿಯಾಗಿಸುವ ಆಸೆ ಎಷ್ಟೊಂದು ವ್ಯಾಪಕವಾಗಿದೆ ಎಂಬುದು ತಿಳಿಯುತ್ತದೆ. ಮಾಂಸಖಂಡಗಳನ್ನು ಉಬ್ಬಿಸುವುದಕ್ಕೆ ಜಿಮ್‌ನಲ್ಲಿ ವ್ಯಾಯಾಮ ಮಾಡುವುದು ಒಂದು ಹಂತ, ಇದಕ್ಕೆ ಪೂರಕವಾದ ಆಹಾರಗಳನ್ನು ಸೇವಿಸುವುದು ಮುಂದಿನ ಹಂತ. ಬೆಳೆಯುತ್ತಿರುವ ಹೊಟ್ಟೆಗೆ ಕಡಿವಾಣ ಹಾಕಿ, ರಟ್ಟೆ ಬೆಳೆಸುವ ಖಯಾಲಿ ಒಳ್ಳೆಯದೇ ಆದರೂ, ಅದಕ್ಕಾಗಿ ಒಂದೋ ಪ್ರೊಟೀನ್‌ ಪೂರಕಗಳನ್ನು ಸೇವಿಸಬೇಕು ಅಥವಾ ಮಾಂಸಾಹಾರಿಗಳಾಗಬೇಕು ಎಂಬುದು ಜನಪ್ರಿಯ ನಂಬಿಕೆ. ಇದು ನಿಜವೇ? ಸಸ್ಯಾಹಾರಿ ಆಗಿದ್ದುಕೊಂಡು ರಟ್ಟೆ ಬೆಳೆಸುವುದಕ್ಕೆ ಸಾಧ್ಯವಿಲ್ಲವೇ?
ಮಾಂಸಖಂಡಗಳ ಸಬಲತೆಗೆ ಪ್ರೊಟೀನ್‌ಗಳು ಅಗತ್ಯ ಎಂಬುದರಲ್ಲಿ ಪ್ರತಿ ಮಾತಿಲ್ಲ. ಪ್ರತಿ ಒಂದು ಕೆ.ಜಿ. ದೇಹದ ತೂಕಕ್ಕೆ 0.8 ರಿಂದ 1.2 ಗ್ರಾಂಗಳವರೆಗೆ ಪ್ರೊಟೀನ್‌ ಆಹಾರದಲ್ಲಿ ಬೇಕಾಗುತ್ತದೆ ಎನ್ನುತ್ತಾರೆ ಪೋಷಕಾಂಶ ತಜ್ಞರು. ಮಾತ್ರವಲ್ಲ, ವ್ಯಾಯಾಮ ಮಾಡಿದ ಒಂದು ತಾಸಿನೊಳಗೆ ಪ್ರೊಟೀನ್‌ಯುಕ್ತ ಆಹಾರ ಸೇವಿಸುವುದು ಸಹ ಮಾಂಸಖಂಡಗಳ ಬೆಳವಣಿಗೆಗೆ ಪೂರಕ ಎನ್ನುತ್ತವೆ ಅಧ್ಯಯನಗಳು. ಜೊತೆಗೆ, ವ್ಯಾಯಾಮದಿಂದ ಆಗಬಹುದಾದ ಮಾಂಸಖಂಡಗಳ ನೋವನ್ನೂ ಇಂತಹ ಆಹಾರಗಳು ದೂರ ಇರಿಸುತ್ತವೆ. ಆದರೆ ಸಸ್ಯಾಹಾರಿಗಳು ಮತ್ತು ವೇಗನ್‌ಗಳು, ಅಂದರೆ ಪ್ರಾಣಿಜನ್ಯ ಯಾವುದನ್ನೂ ಸೇವಿಸದವರು, ರಟ್ಟೆ ಬೆಳೆಸಬೇಕೆಂದರೆ ಏನು ಮಾಡಬೇಕು? (Vegetarian Protein) ಅವರ ಆಹಾರ ಹೇಗಿರಬೇಕು?

ಯಾವುದು ಸೂಕ್ತ?

ಹಾಲು, ಚೀಸ್‌, ಪನೀರ್‌ ಮುಂತಾದ ಡೈರಿ ಉತ್ಪನ್ನಗಳಲ್ಲಿ ಉತ್ತಮ ಪ್ರಮಾಣದ ಪ್ರೊಟೀನ್‌ ಪಡೆಯುವುದು ಸಾಧ್ಯ. ಈ ಆಹಾರಗಳಲ್ಲಿ ಗುಣಮಟ್ಟದ ಪ್ರೊಟೀನ್‌, ಸರಿಯಾದ ಪ್ರಮಾಣದಲ್ಲಿ ಕೊಬ್ಬು ದೊರೆಯುತ್ತದೆ. ಜೊತೆಗೆ ಮೊಸರಿನಂಥ ವಸ್ತುಗಳ ಸೇವನೆಯಿಂದ ಸಾಕಷ್ಟು ಪ್ರೊಬಯಾಟಿಕ್‌ ಸಹ ದೇಹಕ್ಕೆ ಲಭ್ಯವಾಗುತ್ತದೆ.

ಕಿನೊವಾ

ಗ್ಲುಟೆನ್‌ ಮುಕ್ತವಾದ ಈ ಧಾನ್ಯವನ್ನ ಸುಮಾರು ಕಪ್‌ನಷ್ಟು ಸೇವಿಸಿದರೆ ಅಜಮಾಸು 8 ಗ್ರಾಂನಷ್ಟು ಪ್ರೊಟೀನ್‌ ಲಭ್ಯವಾಗುತ್ತದೆ. ಹುಲ್ಲಿನಿಂದ ದೊರೆಯದ ಈ ಕಾಳುಗಳನ್ನು ಹುಸಿ ಧಾನ್ಯಗಳೆಂದೇ ಕರೆಯಲಾಗುತ್ತದೆ. ಇದರಲ್ಲಿರುವ ನಾರು, ಮೆಗ್ನೀಶಿಯಂ, ಕಬ್ಬಿಣ ಮತ್ತು ಸತುವಿನಂಥ ಖನಿಜಗಳಿಂದಾಗಿ ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸಿಯೇ ಇರಿಸುತ್ತದೆ.

ತೋಫು

ನೋಡಲು ಪನೀರ್‌ನಂತೆಯೇ ಕಾಣುವ ಇವು ಸೋಯಾ ಹಾಲಿನಿಂದ ತಯಾರಾದವು. ಕ್ಯಾಲ್ಸಿಯಂ, ಪೊಟಾಶಿಯಂ ಮತ್ತು ಕಬ್ಬಿಣದಂಶ ಹೇರಳವಾಗಿರುವ ಈ ಸಸ್ಯಜನ್ಯ ಪನೀರನ್ನು ಸುಮಾರು 85 ಗ್ರಾಂ ನಷ್ಟು ಸೇವಿಸಿದರೆ 8 ಗ್ರಾಂ ಪ್ರೊಟೀನ್‌ ಹೊಟ್ಟೆ ಸೇರುತ್ತದೆ.

ಬಾದಾಮಿ, ಶೇಂಗಾ ಬೆಣ್ಣೆ

ಪೀನಟ್‌ ಬಟರ್‌ ಮತ್ತು ಆಲ್ಮಂಡ್‌ ಬಟರ್ ಎಂದೇ ಖ್ಯಾತವಾಗಿರುವ ಇವುಗಳಲ್ಲೂ ಪ್ರೊಟೀನ್‌ ಹೇರಳವಾಗಿದೆ. ಎರಡು ಸ್ಲೈಸ್‌ ಇಡೀ ಧಾನ್ಯದ ಬ್ರೆಡ್‌ನೊಂದಿಗೆ ಎರಡು ಚಮಚ ಶೇಂಗಾ ಅಥವಾ ಬಾದಾಮಿ ಬೆಣ್ಣೆ ಸೇವಿಸುವುದರಿಂದ ದೇಹಕ್ಕೆ ಸುಮಾರು 14 ಗ್ರಾಂನಷ್ಟು ಪ್ರೊಟೀನ್‌ ದೊರೆಯಬಲ್ಲದು. ಚಿಯಾ, ಹೆಂಪ್‌, ಅಗಸೆ ಮತ್ತಿತರ ಬೀಜಗಳು: ನೀರಿನಲ್ಲಿ ನೆನೆಸಿದಾಗ ಲೋಳೆಯಂತಾಗುವ ಚಿಯಾ ಮತ್ತು ಅಗಸೆ ಬೀಜಗಳನ್ನು ಕೆಲವೊಮ್ಮೆ ಬೇಕಿಂಗ್‌ನಲ್ಲಿ ಮೊಟ್ಟೆಯ ಬದಲೀ ಎಂದು ಬಳಸಲಾಗುತ್ತದೆ. ಒಮೇಗಾ 3 ಫ್ಯಾಟಿ ಆಮ್ಲ, ಕ್ಯಾಲ್ಸಿಯಂ, ಕಬ್ಬಿಣ, ಸೆಲೆನಿಯಂನಂಥ ಅಮೂಲ್ಯ ಖನಿಜಗಳ ಖನಿಯಾಗಿರುವ ಈ ಬೀಜಗಳು ಸಹ ದೇಹಕ್ಕೆ ಒಳ್ಳೆಯ ಗುಣಮಟ್ಟದ ಪ್ರೊಟೀನ್‌ ಒದಗಿಸಬಲ್ಲವು. ಇದಲ್ಲದೆ, ಬಾದಾಮಿ, ಕುಂಬಳಕಾಯಿ ಬೀಜ, ಸೂರ್ಯಕಾಂತಿ ಬೀಜ ಮುಂತಾದ ಯಾವುದೇ ಬೀಜಗಳು ಉತ್ತಮ ಗುಣಮಟ್ಟದ ಪ್ರೊಟೀನ್‌ ನೀಡಬಲ್ಲವು.

ಸ್ಪಿರುಲಿನಾ

ಇದು ನೀಲಿ-ಹಸಿರು ಪಾಚಿಯಂಥದ್ದು. ವೇಗನ್‌ ಆಹಾರ ಕ್ರಮದವರಿಗೆ ಮೆಚ್ಚಾದಂಥದ್ದು. ಸುಮಾರು ಒಂದು ಟೇಬಲ್‌ ಚಮಚದಷ್ಟು ಸ್ಪಿರುಲಿನಾದಿಂದ 7 ಗ್ರಾಂ ನಷ್ಟು ಪ್ರೊಟೀನ್‌ ದೊರೆಯುತ್ತದೆ. ಇದನ್ನು ಹಾಗೆಯೇ ತಿನ್ನುವುದು ಕಷ್ಟವಾದ್ದರಿಂದ ಸ್ಮೂದಿ, ಗ್ರಾನೊಲಾ ಬಾರ್‌ಗಳು, ಸೂಪ್‌, ಸಲಾಡ್‌ ಮುಂತಾದ ಆಹಾರಗಳಲ್ಲಿ ಇವುಗಳನ್ನು ಸೇರಿಸಲಾಗುತ್ತದೆ. ವಿಟಮಿನ್‌ ಬಿ, ಕಬ್ಬಿಣ ಮತ್ತು ತಾಮ್ರದಂಥ ಖನಿಜಗಳು ಇದರಲ್ಲಿವೆ.

ಇದನ್ನೂ ಓದಿ: Summer Sweating: ಬೇಸಿಗೆಯಲ್ಲಿ ಬೆವರಿನ ದುರ್ಗಂಧ ದೂರ ಮಾಡುವುದು ಹೇಗೆ?

Exit mobile version