Site icon Vistara News

Radish Benefits: ಮೂಲಂಗಿಯೆಂದು ಮೂಲೆಗೆಸೆಯದಿರಿ! ಮೂಲಂಗಿ ಮಹಿಮೆಯ ತಿಳಿದುಕೊಳ್ಳಿ

Radish Benefits

ಚಳಿಗಾಲ ಬಂದಾಕ್ಷಣ ಮಾರುಕಟ್ಟೆಯನ್ನು ಅಲಂಕರಿಸುವ ತರಕಾರಿಗಳ ಪೈಕಿ ಅಗ್ರಗಣ್ಯ ಸ್ಥಾನ ಮೂಲಂಗಿಗೆ. ಬೆಳ್ಳನೆಯ ಉದ್ದದ ಮೂಲಂಗಿ ಗೆಡ್ಡೆಗಳು ತಮ್ಮ ಎಲೆಗಳ ಜೊತೆಗೆ ಬುಡಸಮೇತ ಕಿತ್ತು ಬಂದು ಮಾರುಕಟ್ಟೆಯಲ್ಲಿರುತ್ತವೆ. ನೋಡಲು ತಾಜಾವಾಗಿ ಕಾಣುವ ಮೂಲಂಗಿ ನಮ್ಮನ್ನು ಕೈಬೀಸಿ ಕರೆದರೂ (Radish Benefits) ಬಹುತೇಕರು ಮೂಲಂಗಿ ಎಂದರೆ ಮೂಗು ಮುರಿಯುತ್ತಾರೆ. ಕಾರಣ ಇದಕ್ಕಿರುವ ವಿಚಿತ್ರ ವಾಸನೆ ಬಹುತೇಕರಿಗೆ ಇಷ್ಟವಾಗುವುದಿಲ್ಲ. ಜೊತೆಗೆ ಇದರ ರುಚಿಯೂ ಕೆಲವರಿಗೆ ಆಗಿಬರುವುದಿಲ್ಲ. ಇನ್ನೂ ಕೆಲವರಿಗೆ ಮೂಲಂಗಿಯ ಯಾವ ಅಡುಗೆಯೂ ರುಚಿಕರವಾಗಿ ಅನಿಸದು. ಹೀಗಾಗಿ ಮೂಲಂಗಿ ಅಂದರೆ ಹಲವರಿಗೆ ಅಷ್ಟಕ್ಕಷ್ಟೇ.

ಆದರೆ, ಉತ್ತರ ಭಾರತದೆಲ್ಲೆಡೆ ಚಳಿಗಾಲ ಎಂದರೆ ಮೂಲಂಗಿ ಸಂಭ್ರಮ. ತಾಜಾ ಆಗ ಸಿಗುವ ಮೂಲಂಗಿ ಗಡ್ಡೆಗಳನ್ನು ಹಸಿಯಾಗಿ ತಿನ್ನುವ ಮಂದಿಯೂ ಇಲ್ಲಿ ಅನೇಕರು. ಊಟದ ಜೊತೆಗೆ ಸಲಾಡ್‌ನಂತೆ ಮೂಲಂಗಿ, ಕ್ಯಾರೆಟ್ಟನ್ನು ವೃತ್ತಾಕಾರವಾಗಿ ಕತ್ತರಿಸಿ ತಟ್ಟೆಯಲ್ಲಿಡುವುದು ಇಲ್ಲಿನವರಿಗೆ ರೂಢಿ. ಇನ್ನು ಮೂಲಂಗಿಯಿಂದ ಪರಾಠಾ, ಸಬ್ಜಿ, ಉಪ್ಪಿನಕಾಯಿ ಹೀಗೆ ಬಗೆಬಗೆಯ ಆಹಾರಗಳನ್ನು ತಯಾರಿಸಿ ನಿತ್ಯವೂ ತಿನ್ನುತ್ತಾರೆ ಕೂಡಾ. ಇಂಥ ಮೂಲಂಗಿ ತನ್ನ ವಿಶಿಷ್ಟ ವಾಸನೆಯಿಂದ ಹಲವರನ್ನು ತನ್ನ ಹತ್ತಿರ ಬರಲು ಬಿಡದಿದ್ದರೂ, ಖಂಡಿತವಾಗಿ ಮೂಲಂಗಿ ಎಂದು ಮೂಲೆಗುಂಪಾಗಿಸಬೇಡಿ. ಮೂಲಂಗಿ ಗುಣಗಳನ್ನು ತಿಳಿದರೆ, ಚಳಿಗಾಲದಲ್ಲಿ ತಾಜಾ ಆಗಿ ದೊರೆಯುವ ಈ ತರಕಾರಿಯನ್ನು ಖಂಡಿತವಾಗಿ ನೀವು ತಿನ್ನಲೇಬೇಕು. ಬನ್ನಿ, ಮೂಲಂಗಿಯ ಅದ್ಭುತ ಗುಣಗಳನ್ನು (Radish Benefits ತಿಳಿಯೋಣ).

ಚರ್ಮದ ಆರೋಗ್ಯಕ್ಕಾಗಿ

ಮೂಲಂಗಿಯಲ್ಲಿ ಹೇರಳವಾಗಿ ವಿಟಮಿನ್‌ ಸಿ ಹಾಗೂ ಕೆ ಇವೆ. ವಿಟಮಿನ್‌ ಸಿಯ ಸೇವನೆಯಿಂದ ದೇಃದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿ ದೇಹ ಸದೃಢವಾಗುತ್ತದೆ. ಚರ್ಮದಲ್ಲಿ ಕೊಲಾಜೆನ್‌ ಹೆಚ್ಚಿ ಚರ್ಮ ಆರೋಗ್ಯದಿಂದ ಕಂಗೊಳಿಸುತ್ತದೆ. ವಿಟಮಿನ್‌ ಕೆ ದೇಹದಲ್ಲಿ ಮೂಳೆಗಳನ್ನು ಗಟ್ಟಿಗೊಳಿಸಲು ಹಾಗೂ ರಕ್ತ ಹೆಪ್ಪುಗಟ್ಟಿಸಲು ಸಹಕಾರಿ. ಹಾಗಾಗಿ ಇವೆರಡನ್ನೂ ಹೇರಳವಾಗಿ ದೇಹಕ್ಕೆ ಒದಗಿಸುವ ಮೂಲಂಗಿ ಚಳಿಗಾಲಕ್ಕೆ ಅತ್ಯುತ್ತಮ ಆಹಾರವೂ ಹೌದು.

ನಾರಿನಂಶ ಹೆಚ್ಚಿದೆ

ಮೂಲಂಗಿಯಲ್ಲಿ ಸಾಕಷ್ಟು ನಾರಿನಂಶವಿದೆ. ಹೀಗಾಘಿ ಇದು ಜೀರ್ಣಕ್ರಿಯೆಗೆ ಅತ್ಯಂತ ಒಳ್ಳೆಯದು. ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವುದಷ್ಟೇ ಅಲ್ಲದೆ, ಜೀರ್ಣಾಂಗವ್ಯೂಹದ ಆರೋಗ್ಯಕ್ಕೂ ಇದು ಒಳ್ಳೆಯದು.

ತೂಕ ಇಳಿಸಲು ಸಹಕಾರಿ

ಮೂಲಂಗಿ ತೂಕ ಇಳಿಸುವ ಮಂದಿಯ ಸಂಗಾತಿ. ನಾರಿನಂಶ ಹೇರಳವಾಗಿರುವ ಮೂಲಂಗಿಯಲ್ಲಿ ಕ್ಯಾಲರಿ ಅತ್ಯಂತ ಕಡಿಮೆ. ಇದರ ಸೇವನೆಯಿಂದ ಹೊಟ್ಟೆ ತುಂಬಿದ ಅನುಭವವಾಗುತ್ತದೆ, ಹಾಗಾಗಿ, ಹಸಿವೆಯ ಚಿಂತೆ ಇರುವುದಿಲ್ಲ. ಸಹಜವಾಗಿಯೇ ಕಡಿಮೆ ತಿನ್ನುತ್ತೇವೆ. ಹೀಗಾಗಿ ತೂಕದಲ್ಲಿ ಇಳಿಕೆಯಾಗುತ್ತದೆ, ಅಥವಾ ಸಮತೋಲನೆ ಕಾಯ್ದುಕೊಳ್ಳಬಹುದು.

ರಕ್ಷಣಾ ಕವಚ

ಹಲವು ಮಾರಣಾಂತಿಕ ಕಾಯಿಲೆಗಳನ್ನೂ ಬರದಂತೆ ಮೂಲಂಗಿ ಕಾಪಾಡುತ್ತದೆ. ಮೂಲಂಗಿಯಲ್ಲಿ ಆಂಥೋಸಯನಿನ್‌, ಫ್ಲೇವನಾಯ್ಡ್‌ ಹಾಗೂ ಇತರ ಕೆಲವು ಆಂಟಿ ಆಕ್ಸಿಡೆಂಟ್‌ಗಳು ಇರುವುದರಿಂದ ಅವುಫರೀ ರ್ಯಾಡಿಕಲ್‌ಗಳ ವಿರುದ್ಧ ರಕ್ಷಣಾ ಕವಚದಂತೆ ವರ್ತಿಸುತ್ತವೆ.

ನೀರಿನ ಅಂಶ ಹೆಚ್ಚಿದೆ

ದೇಹವು ಆರೋಗ್ಯವಾಗಿರಬೇಕಾದರೆ, ಚರ್ಮ ಕಂಗೊಳಿಸಬೇಕಾದರೆ ದೇಹಕ್ಕೆ ಸರಿಯಾಗಿ ನೀರು ಸಿಗಬೇಕು. ಮೂಲಂಗಿಯಲ್ಲಿ ನೀರು ಹೆಚ್ಚಿದೆ. ಹೀಗಾಗಿ, ಇದರ ಸೇವನೆಯಿಂದ ದೇಹಕ್ಕೆ ಹೆಚ್ಚು ನೀರು ಸಿಗುತ್ತದೆ. ಆರೋಗ್ಯ ಇಮ್ಮಡಿಸುತ್ತದೆ.

ರಕ್ತದೊತ್ತಡ ನಿಯಂತ್ರಣ

ಇತ್ತೀಚೆಗಿನ ಕೆಲವು ಸಂಶೋಧನೆಗಳ ಪ್ರಕಾರ ಮೂಲಂಗಿಯಲ್ಲಿ ರಕ್ತದೊತ್ತಡವನ್ನು ಕಡಿಮೆ ಮಾಡಿಸುವ ಗುಣವೂ ಇದೆ. ಹೀಗಾಗಿ ಇದು ರಕ್ಯದೊತ್ತಡವನ್ನು ಸಮತೋಲನಗೊಳಿಸುವ ಮೂಲಕ ಪರೋಕ್ಷವಾಗಿ ಹೃದಯಕ್ಕೆ ಒಳ್ಳೆಯದನ್ನೇ ಮಾಡುತ್ತದೆ.

ಹೇರಳ ಪೋಷಕಾಂಶ

ಚರ್ಮದ ಕಾಳಜಿ ಮಾಡುವ ಮಂದಿ ಮೂಲಂಗಿಯ ಮೊರೆ ಹೋಗಬಹುದು. ಮೂಲಂಗಿಯಲ್ಲಿರುವ ಪೋಷಕಾಂಶಗಳು ಚರ್ಮದ ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು. ಅತ್ಯುತ್ತಮ ಸುಂದರ ತ್ವಚೆ ಅವರದಾಗುತ್ತದೆ

ಇದನ್ನೂ ಓದಿ: Health Tips: ಮೊಸರು, ಲಸ್ಸಿ, ಮಜ್ಜಿಗೆ; ಇವುಗಳಲ್ಲಿ ಯಾವುದು ಒಳ್ಳೆಯದು?

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version