Site icon Vistara News

World Alzheimer’s Day 2023: ನಿಮ್ಮ ಪತ್ನಿ, ಮಕ್ಕಳ ಬರ್ತ್‌ಡೇ ಕೂಡ ನೆನಪಾಗುತ್ತಿಲ್ಲವೆ? ತಪಾಸಣೆಗೆ ಇದು ಸಕಾಲ!

Alzheimers

ವಯಸ್ಸಾಗುತ್ತಿದ್ದಂತೆ ಶಾರೀರಿಕ ಬದಲಾವಣೆಗಳು ಸಹಜ. ದೇಹದಲ್ಲಿ ಸ್ನಾಯುಬಲ ಕಡಿಮೆಯಾಗುವುದು, ಮೂಳೆಗಳ ಸಾಂದ್ರತೆ ಕುಸಿಯುವುದು, ಚಯಾಪಚಯ ಕಡಿಮೆಯಾಗುವುದು, ಚರ್ಮ ಬಿಗಿ ಕಳೆದುಕೊಳ್ಳುವುದು, ಕಣ್ಣು-ಕಿವಿ ಅಷ್ಟಕ್ಕಷ್ಟೇ ಎನಿಸುವುದು… ಇವೆಲ್ಲಾ ಸಾಮಾನ್ಯ. ಅರವತ್ತಕ್ಕೆ ಅರುಳುಮರುಳು ಎಂಬಂತೆ ಮೆದುಳಿನ ಮೊನಚೂ ಕಡಿಮೆಯಾಗುವುದು ಹೊಸದಲ್ಲ. ಆದರೆ ಮೆದುಳಿನ ಕ್ಷಮತೆಯೇ ಕುಸಿಯಲಾರಂಭಿಸಿದರೆ, ಅದನ್ನು ವಯಸ್ಸಿನ ಪ್ರಭಾವ ಎಂದು ಬಿಟ್ಟುಬಿಡುವುದಕ್ಕೆ ಸಾಧ್ಯವಿಲ್ಲ. ವಿಶ್ವ ಅಲ್‌ಜೈಮರ್ಸ್‌ ದಿನದ (World Alzheimer’s Day 2023) ಹಿನ್ನೆಲೆಯಲ್ಲಿ, ಮರೆವಿನ ರೋಗದ ಬಗ್ಗೆ ಅರಿವು ಹೆಚ್ಚಿಸುವ ಪ್ರಯತ್ನವಿದು.

ವಿಸ್ಮೃತಿಯ ಮೂಲಕವೇ ಜೀವಕ್ಕೆ ಎರವಾಗುವ ಈ ರೋಗದ ಬಗ್ಗೆ ಜಾಗೃತಿ ಮೂಡಿಸುವುದಕ್ಕಾಗಿ ಸೆಪ್ಟೆಂಬರ್‌ ತಿಂಗಳ 21ನೇ ದಿನವನ್ನು ಅಲ್‌ಜೈಮರ್ಸ್‌ (World Alzheimer’s Day) ಅರಿವಿನ ದಿನವೆಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ವಿಶ್ವದಲ್ಲಿ ಈಗಾಗಲೇ ಸುಮಾರು ಆರು ಕೋಟಿ ಮಂದಿ ಅಲ್‌ಜೈಮರ್ಸ್‌ನಿಂದ ನರಳುತ್ತಿದ್ದು, ಈ ಸಂಖ್ಯೆ ಪ್ರತಿವರ್ಷವೂ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. 2019ರಲ್ಲಿ ಇದ್ದ ರೋಗಿಗಳ ಪ್ರಮಾಣಕ್ಕೆ ಹೋಲಿಸಿದರೆ, 2020ರಲ್ಲಿ ಈ ಪ್ರಮಾಣ ಮೂರು ಪಟ್ಟಯ ಹೆಚ್ಚಾಗುವುದು ನಿಶ್ಚಿತ ಎಂದು ಅಂದಾಜಿಸಲಾಗಿದೆ. 70 ವರ್ಷದ ನಂತರ ಮರಣ ಹೊಂದುತ್ತಿರುವವರ ಸಂಖ್ಯೆಯನ್ನು ಗಮನಿಸಿದರೆ, ಐವರಲ್ಲಿ ಒಬ್ಬರು ಅಲ್‌ಜೈಮರ್ಸ್‌ನಿಂದ ಮೃತಪಡುತ್ತಿದ್ದಾರೆ. ಹೆಚ್ಚಿನ ಬಾರಿ ತಮಗೆ ಈ ಸಮಸ್ಯೆ ಇದೆ ಎಂಬುದು ರೋಗಿಗಳಿಗಾಗಲೀ ಅವರ ಕುಟುಂಬಕ್ಕಾಗಲೀ ಗೊತ್ತೇ ಆಗಿರುವುದಿಲ್ಲ. ಹಾಗಾಗಿ ರೋಗದ ಆರಂಭಿಕ ಸೂಚನೆಗಳ ಬಗೆಗಿನ ಮಾಹಿತಿಯಿದು.

ಮರೆವಿನ ಮುನ್ಸೂಚನೆಗಳು

ತಮ್ಮ ವಸ್ತುಗಳನ್ನು ಎಲ್ಲೋ ಇಟ್ಟು, ಅದನ್ನು ಊರೆಲ್ಲ ಹುಡುಕುವುದು ಮನೆಗಳಲ್ಲಿ ಸಾಮಾನ್ಯ ಸಂಗತಿ. ಆದರೆ ನಿತ್ಯ ಬಳಕೆಯ ವಸ್ತುಗಳ ಜಾಗವನ್ನೂ ಮರೆಯುತ್ತಿದ್ದರೆ, ಪ್ರಯತ್ನಿಸಿದರೂ ನೆನಪಿಸಿಕೊಳ್ಳಲಾಗದಿದ್ದರೆ ಈ ಬಗ್ಗೆ ಎಚ್ಚರ ವಹಿಸಿ. ಇದನ್ನು ಕುಟುಂಬದವರ ಗಮನಕ್ಕೆ ತನ್ನಿ; ಹೀಗೆ ಆಗಾಗ ಆಗುತ್ತಿದೆಯೇ ಎಂದು ಕೇಳಿ.

ಅಂದಾಜಿಸಲು ಕಷ್ಟವಾಗುವುದು

ಉದ್ದ-ಅಗಲಗಳನ್ನು ಅಂದಾಜಿಸಲು ಕಷ್ಟವಾಗುತ್ತಿದ್ದರೆ, ಮನೆಯಲ್ಲಿ ನಿತ್ಯ ಬಳಸುವ ಪಾತ್ರೆಗಳ ಪ್ರಮಾಣವೂ ತಪ್ಪಲಾರಂಭಿಸಿದರೆ, ಯಾವುದು ಎಷ್ಟು ದೂರದಲ್ಲಿದೆ ಎಂಬ ಗೊಂದಲ ಕಂಡುಬಂದರೆ, ಬಣ್ಣಗಳ ಗುರುತು ಮರೆತಂತಾದರೆ, ಮೊದಲಿನಂತೆ ಧಿರಿಸುಗಳ ಮ್ಯಾಚಿಂಗ್‌ ತಿಳಿಯುವುದು ತ್ರಾಸಿನ ಕೆಲಸ ಎನಿಸಿದರೆ ಜಾಗ್ರತೆ ಮಾಡಿ.

ಇದನ್ನೂ ಓದಿ: Best Foods to boost memory: ವಿದ್ಯಾರ್ಥಿಗಳ ನೆನಪಿನ ಶಕ್ತಿ ಹೆಚ್ಚಿಸುವ ಆಹಾರಗಳಿವು…

World Alzheimer's Day 2023

ದಿನಾಂಕಗಳು ನೆನಪಾಗದು

ಆಪ್ತರ ಹುಟ್ಟಿದ ದಿನಗಳು, ಮದುವೆಯ ವಾರ್ಷಿಕೋತ್ಸವಗಳನ್ನೆಲ್ಲಾ ಮರೆಯುವುದು ದೊಡ್ಡ ವಿಷಯವಲ್ಲ. ಆದರೆ ಜೊತೆಗಿರುವ ಕುಟುಂಬಸ್ಥರು ಎಂದಾದರೂ ಹುಟ್ಟಿರಲೇಬೇಕು, ಅವರಿಗೊಂದು ಬರ್ತಡೇ ಇರಬೇಕು ಎಂಬುದೂ ಮರೆತುಹೋಗುತ್ತಿದ್ದರೆ, ಬದುಕಿನಲ್ಲಿ ಸದಾ ನೆನಪಿರುತ್ತಿರುವ ವ್ಯಕ್ತಿಗಳು, ದಿನಗಳು, ಸಂದರ್ಭಗಳೆಲ್ಲಾ ನೆನಪಿನಿಂದ ಮಾಸಿದಂತಾದರೆ- ಇದು ಎಚ್ಚರಿಕೆಯ ಗಂಟೆ.

ನಿತ್ಯದ ಕೆಲಸಗಳಲ್ಲಿ ಗೊಂದಲ

ಎಷ್ಟೋ ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದ ಕೆಲಸಗಳಲ್ಲಿ ಗೊಂದಲ ಕಾಣಬಹುದು. ಪ್ರತೀ ತಿಂಗಳು ಪಾವತಿಸುವ ವಿದ್ಯುತ್‌ ಬಿಲ್ಲನ್ನು ಏನು ಮಾಡುವುದು, ಎಲ್ಲಿ ಕಟ್ಟುವುದು ಎಂಬುದೇ ತಿಳಿಯದಿರುವುದು; ಮನೆಯವರಿಗೆ ಪಾಯಸ ಮಾಡಲೆಂದು ಒಲೆ ಮುಂದೆ ನಿಂತರೆ ದಿಕ್ಕು ತೋಚದಿರಬಹುದು- ಹೀಗೆಲ್ಲ ಆದರೆ ಖಂಡಿತಕ್ಕೂ ವೈದ್ಯರನ್ನು ಕಾಣಬೇಕಾದ ಸಂದರ್ಭವಿದು.

ಮೂಡ್‌ ವ್ಯತ್ಯಯ

ಸದಾ ಹಸನ್ಮುಖಿ ವ್ಯಕ್ತಿಗಳ ಸಿಡುಕಿನ ನಡವಳಿಕೆಗಳು, ಕಾರಣವೇ ಇಲ್ಲದಿದ್ದರೂ ಬೇಸರದಿಂದ ಕೂರುವುದು, ಯಾವುದರಲ್ಲೂ ಆಸಕ್ತಿ ಇಲ್ಲದಂತೆ ಖಿನ್ನರಾಗಿರುವುದು, ತಮ್ಮ ಬಗ್ಗೆಯೂ ಗಮನ ಇಲ್ಲದಿರುವುದು- ಹೀಗೆ ಆಗಾಗ ಆಗುತ್ತಿದ್ದರೆ- ಇದು ಆ ವ್ಯಕ್ತಿಯ ಅರಿವಿಗೆ ಬಾರದಿರಬಹುದು. ಆದರೆ ಕುಟುಂಬದವರು ಇದನ್ನು ಗಂಭೀರವಾಗಿ ಪರಿಗಣಿಸಲೇಬೇಕು.

ಸಂವಹನದಲ್ಲಿ ತೊಡಕು

ಏನೋ ಹೇಳುವುದಕ್ಕೆ ಹೋಗಿ ಇನ್ನೇನೋ ಹೇಳುವುದು, ಭಾಷೆಯಲ್ಲಿ ಗೊಂದಲ, ಓದುವ- ಬರೆಯುವ ಸಂವಹನದಲ್ಲಿ ತೊಡಕು, ಬೇಕಾದ ಶಬ್ದಗಳು ನೆನಪಿಗೆ ಬಾರದಿರುವುದು, ಸಾಮಾಜಿಕ ಸಂಪರ್ಕದಿಂದ ಹಿಂದೆ ಸರಿಯುವುದು, ಯಾರನ್ನೂ ಭೇಟಿ ಮಾಡಲು ಹಿಂಜರಿಯುವುದು, ಮದುವೆ-ಮುಂಜಿಗಳಿಗೆ ಹೋಗಲೊಲ್ಲೆ ಎಂಬ ಹಠ- ಇವೂ ಸಹ ನರಮಂಡಲ ಮತ್ತು ಮೆದುಳಿನ ಆರೋಗ್ಯದ ಬಗ್ಗೆ ಆತಂಕಗಳನ್ನು ಹುಟ್ಟಿಸುತ್ತವೆ.

ಇದನ್ನೂ ಓದಿ: Oral Health: ಬಾಯೆಂಬ ದೇಹಾರೋಗ್ಯದ ಕನ್ನಡಿಯನ್ನು ಸ್ವಚ್ಛವಾಗಿಡಿ

World Alzheimer's Day 2023

ಮುಂದುವರಿದ ಲಕ್ಷಣಗಳು

ಸದಾ ಮಾಡುವ ಕೆಲಸಗಳನ್ನು ಮರೆಯುವುದು, ಅತೀ ಪರಿಚಿತ ದಾರಿಯೂ ತಪ್ಪುವುದು, ಹಣಕಾಸು, ವ್ಯಾಪಾರ-ವ್ಯವಹಾರಗಳನ್ನು ನಿವರ್ಹಿಸಲು ಅಸಾಧ್ಯವೆಂಬ ಸ್ಥಿತಿ, ಯಾವುದೇ ಕೆಲಸವನ್ನು ಕಾರ್ಯರೂಪಕ್ಕೆ ತರುವುದೂ ಕಷ್ಟವೆಂಬ ಅವಸ್ಥೆ, ವೈಯಕ್ತಿಕ ಶುಚಿತ್ವದತ್ತ ಗಮನ ನೀಡದಿರುವುದು- ಇಂಥವೆಲ್ಲಾ ರೋಗದ ಲಕ್ಷಣಗಳು ಮುಂದುವರಿಯುತ್ತಿರುವುದನ್ನು ಸೂಚಿಸುತ್ತವೆ.

ಗುಣವಾಗುವುದಿಲ್ಲ!

ಹೌದು, ಇದು ಗುಣವಾಗದ ರೋಗ. ಆದರೆ ಪ್ರಾರಂಭದಲ್ಲೇ ಪತ್ತೆಯಾದರೆ ರೋಗ ಮುಂದುವರಿಯುವುದನ್ನು ನಿಧಾನ ಮಾಡಬಹುದು. ನಿತ್ಯದ ಕೆಲಸಕ್ಕೆ ತೊಂದರೆಯಾಗದಂತೆ, ವೈಯಕ್ತಿಕ ಬದುಕು ಸಹನೀಯವಾಗುವಂತೆ ಮಾಡಬಹುದು. ಲಕ್ಷಣಗಳನ್ನು ಆಧರಿಸಿ ಸೂಕ್ತ ಚಿಕಿತ್ಸೆ ದೊರೆಯುವ ಸಾಧ್ಯತೆಯೂ ಇದೆ.

ಈ ಬಾರಿ ವಿಶ್ವ ಅಲ್‌ಜೈಮರ್ಸ್‌ ದಿನದ ಘೋಷವಾಕ್ಯವೇನು?

ರೋಗ ಗುರುತಿಸುವುದಕ್ಕೆ ತೀರಾ ಮೊದಲಾಯಿತು ಎಂದಿಲ್ಲ, ತಡವಾಯಿತೂ ಎಂದೂ ಇಲ್ಲ (Never too early, never too late). ಈ ಬಗ್ಗೆ ಸರಿಯಾದ ಅರಿವಿದ್ದರೆ, ಮರೆವಿನ ರೋಗವನ್ನು ಗುರುತಿಸಬಹುದು.

ಈ ರೋಗಕ್ಕೆ ಈ ಹೆಸರೇಕೆ ಇಟ್ಟಿದ್ದಾರೆ?

ಜರ್ಮನಿಯ ಮನೋರೋಗ ಮತ್ತು ನರರೋಗ ತಜ್ಞ ಅಲಾಯ್ಸ್‌ ಅಲ್‌ಜೈಮರ್ಸ್‌ ಈ ರೋಗವನ್ನು ೧೯೦೬ರಲ್ಲಿ ಪತ್ತೆ ಮಾಡಿದ್ದ. ಈ ರೋಗದ ಲಕ್ಷಣಗಳನ್ನು ಗುರುತಿಸಿ, ೫೦ ವರ್ಷದ ಮಹಿಳೆಯೊಬ್ಬರಿಗೆ ಇಂಥ ಹೊರ ರೋಗವೊಂದು ಕಾಡುತ್ತಿರುವುದನ್ನು ಲೋಕಕ್ಕೆ ತಿಳಿಸಿದ್ದ. ಆತನ ನೆನಪಿನಲ್ಲಿ ಅವನ ಹೆಸರನ್ನು ಈ ರೋಗಕ್ಕೆ ಇರಿಸಲಾಗಿದೆ.

Exit mobile version