ಬೇಸಿಗೆಯೆಂದರೆ ಬಿಸಿಲಿನ ಕಾಲ ಮಾತ್ರವಲ್ಲ; ಪಾನಕ, ಶರಬತ್ತು, ಹಣ್ಣಿನ ರಸಗಳು ಮತ್ತು ತರಹೇವಾರಿ ತಂಪು ಪಾನೀಯಗಳ ಕಾಲ. ಕುಡಿಯುವ ಪಾನೀಯಗಳಲ್ಲೇ ಹೆಚ್ಚಿನ ಪೋಷಕಾಂಶಗಳನ್ನು ಪಡೆಯುವುದು ಹೇಗೆ ಎಂಬುದನ್ನು ಅರಿತುಕೊಂಡರೆ, ಬೇಸಿಗೆಯಲ್ಲಿ ಸುಸ್ತು, ನಿಶ್ಶಕ್ತಿ ಕಾಡುವುದಿಲ್ಲ. ಸ್ವಲ್ಪ ಹುಳಿ, ಅಲ್ಪ ಒಗರು ಮತ್ತು ಕೊಂಚ ಸಿಹಿ ರುಚಿಯ ನೆಲ್ಲಿಕಾಯಿಯ ಶರಬತ್ತು ಕುಡಿಯುವುದರಿಂದ ಆಗುವ ಉಪಯೋಗಗಳೇನು (Health Benefits Of Amla Juice) ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ಆಯುರ್ವೇದದಲ್ಲಿ ಶತಶತಮಾನಗಳಿಂದ ಬಳಕೆಯಲ್ಲಿರುವ ನೆಲ್ಲಿಕಾಯಿ ಅಥವಾ ಆಮಲಕಿ ತನ್ನ ವಿಶೇಷ ಸತ್ವಗಳಿಂದ ಈಗ ವಿಶ್ವದೆಲ್ಲೆಡೆ ಹೆಸರಾಗಿದೆ. ವಿಟಮಿನ್-ಸಿಯಂಥ ಉತ್ಕರ್ಷಣ ನಿರೋಧಕಗಳಿಂದ ಭರಿತವಾದ ಇದು, ದೃಷ್ಟಿಗೆ, ಕೂದಲಿಗೆ, ಚರ್ಮಕ್ಕೆ ಉಪಯುಕ್ತ ಸತ್ವಗಳನ್ನು ಹೊಂದಿದೆ. ಮಧುಮೇಹ ನಿಯಂತ್ರಣಕ್ಕೆ ಮತ್ತು ತೂಕ ಇಳಿಕೆಗೆ ಅನುಕೂಲಕರವಾಗಿದೆ. ಜೊತೆಗೆ, ಹಲವು ರೀತಿಯ ಜೀವಸತ್ವಗಳು, ಖನಿಜಗಳು, ಫೈಟೊಕೆಮಿಕಲ್‌ಗಳು ಇಡೀ ದೇಹಕ್ಕೆ ಬೇಕಾದಂಥ ಸತ್ವಗಳನ್ನು ಒದಗಿಸಬಲ್ಲವು.
ಪ್ರತಿರೋಧಕ ಶಕ್ತಿ ಹೆಚ್ಚಳ
ವಿಟಮಿನ್ ಸಿ ಜೀವಸತ್ವ ನೆಲ್ಲಿಕಾಯಿಯಲ್ಲಿ ಅತ್ಯಧಿಕವಾಗಿದೆ. ದೇಹದ ಮೇಲೆ ದಾಳಿ ಮಾಡುವ ರೋಗಾಣುಗಳು ಮತ್ತು ಸೋಂಕುಗಳನ್ನು ತಡೆಯುವುದಕ್ಕೆ ವಿಟಮಿನ್ ಸಿ ದೊರೆಯಬೇಕಾದ್ದು ಅಗತ್ಯ. ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ನೆಗಡಿ, ಕೆಮ್ಮು, ಜ್ವರದಂಥ ತೊಂದರೆಗಳನ್ನು ದೂರ ಮಾಡಬಹುದು.
ಉತ್ಕರ್ಷಣ ನಿರೋಧಕಗಳು
ಹಲವು ರೀತಿಯ ಫ್ಲೆವನಾಯ್ಡ್‌ಗಳು, ಪಾಲಿಫೆನಾಲ್‌ಗಳು ನೆಲ್ಲಿಕಾಯಿಯಲ್ಲಿ ವಿಫುಲವಾಗಿವೆ. ಇವು ದೇಹದಲ್ಲಿ ಉರಿಯೂತ ಶಮನ ಮಾಡುವುದಕ್ಕೆ ಸಹಕಾರಿ. ಜೊತೆಗೆ, ಬೀಡಾಡಿಗಳಂತೆ ಅಲೆದುಕೊಂಡಿರುವ ಮುಕ್ತ ಕಣಗಳನ್ನು ನಿರ್ಬಂಧಿಸಲು ಇವು ಅಗತ್ಯ. ಇದರಿಂದ ಮಧುಮೇಹ, ಹೃದಯ ಸಮಸ್ಯೆಗಳು, ಕ್ಯಾನ್ಸರ್‌ನಂಥ ರೋಗಗಳ ಭೀತಿ ದೂರವಾಗುತ್ತದೆ.
ಚರ್ಮಕ್ಕೆ ಕಾಂತಿ
ಇದರಲ್ಲಿರುವ ವಿಟಮಿನ್ ಸಿ ಅಂಶವು ಕೊಲಾಜಿನ್ ಉತ್ಪಾದನೆಯನ್ನು ಪ್ರಚೋದಿಸುತ್ತದೆ. ಹಾಗಾಗಿ ಚರ್ಮದಲ್ಲಿ ಸುಕ್ಕು ಬರುವುದು ಕಡಿಮೆಯಾಗಿ, ತಾರುಣ್ಯಭರಿತ ತ್ವಚೆಯನ್ನು ಹೊಂದಬಹುದು. ಜೊತೆಗೆ, ಚರ್ಮದ ಹೊಳಪು ಹೆಚ್ಚಿಸಿ, ತ್ವಚೆಯನ್ನು ಬಿಗಿ ಮಾಡಿ, ಕಪ್ಪುಕಲೆಗಳನ್ನು ತೆಗೆಯುತ್ತದೆ. ಹಾಗಾಗಿ ಕಾಂತಿಯುಕ್ತ ತ್ವಚೆಯನ್ನು ಪಡೆಯಲು ಈ ಮೂಲಕ ನೆರವಾಗುತ್ತದೆ.
ಜೀರ್ಣಾಂಗಗಳು ಚುರುಕು
ಜೀರ್ಣಕಾರಿ ಕಿಣ್ವಗಳನ್ನು ಉತ್ಪಾದಿಸಲು ನೆಲ್ಲಿಕಾಯಿ ಪ್ರಚೋದನೆ ನೀಡುತ್ತದೆ. ಇದರಿಂದ ಜೀರ್ಣಾಂಗಗಳು ಚುರುಕಾಗುತ್ತವೆ. ಆಹಾರ ಸುಲಲಿತವಾಗಿ ಪಚನವಾಗುತ್ತವೆ ಎಂಬುದಷ್ಟೇ ಅಲ್ಲ, ಸತ್ವಗಳನ್ನೂ ಚೆನ್ನಾಗಿ ಹೀರಿಕೊಳ್ಳಲು ದೇಹಕ್ಕೆ ಸಾಧ್ಯವಾಗುತ್ತದೆ. ಲಘುವಾದ ವಿರೇಚನದ ಗುಣವನ್ನೂ ಆಮಲಕಿ ಹೊಂದಿದೆ. ಹಾಗಾಗಿ ಮಲಬದ್ಧತೆಯನ್ನು ನಿವಾರಿಸಲು ಇದು ಸಹಾಯ ಮಾಡುತ್ತದೆ.
ಕೂದಲು ಸೊಂಪು
ತಲೆಗೂದಲ ಬೆಳವಣಿಗೆಗೆ ನೆಲ್ಲಿಕಾಯಿ ಎಣ್ಣೆ ಪರಾಂಪರಾಗತ ಔಷಧಿಯಲ್ಲಿ ಪ್ರಸಿದ್ಧವಾದುದು. ತಲೆಗೆ ಹಾಕುವುದು ಮಾತ್ರವಲ್ಲ, ಇದನ್ನು ಹೊಟ್ಟೆಗೆ ಹಾಕಿದರೂ ಕೂದಲುಗಳಿಗೆ ಲಾಭವಿದೆ. ತಲೆಯ ಚರ್ಮದ ಆರೋಗ್ಯ ಹೆಚ್ಚಿಸಿ, ಹೊಟ್ಟಿನಂಥ ಸಮಸ್ಯೆಗಳನ್ನು ದೂರ ಮಾಡುತ್ತದೆ. ಕೂದಲೆಳೆಗಳ ಬುಡವನ್ನು ಸದೃಢ ಮಾಡಿ, ಕೂದಲು ತುಂಡಾಗದಂತೆ ಅಥವಾ ಉದುರದಂತೆ ತಡೆಯುತ್ತದೆ. ಜೊತೆಗೆ ಕೂದಲಿನ ಬೆಳವಣಿಗೆಗೂ ಪೋಷಣೆ ನೀಡುತ್ತದೆ.
ದೃಷ್ಟಿ ಉತ್ತಮ
ನೆಲ್ಲಿಕಾಯಲ್ಲಿರುವ ವಿಟಮಿನ್ ಎ ಅಂಶವು ಕಣ್ಣಿನ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದಂಥ ಪೋಷಕ ಸತ್ವ. ಜೊತೆಗೆ, ಕೆರೊಟಿನಾಯ್ಡ್‌ಗಳಂಥ ಉತ್ಕರ್ಷಣ ನಿರೋಧಕಗಳು ದೃಷ್ಟಿ ಮಂದವಾಗದಂತೆ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ವಯಸ್ಸಾದಂತೆ ಕಾಡುವ ಕ್ಯಾಟರಾಕ್ಟ್ ನಂಥ ಸಮಸ್ಯೆಗಳು ಬಾರದಂತೆ ಮುಂದೂಡುತ್ತವೆ.