Site icon Vistara News

Heat Stroke: ನೀರು ಕುಡಿದು ತಂಪಾಗಿರಿ, ಹೀಟ್‌ ಸ್ಟ್ರೋಕ್‌ ತಪ್ಪಿಸಿಕೊಳ್ಳಿ

Heat Stroke

ಬಿಸಿಲಿನ ತಾಪ (Heat stroke) ಮುಗಿಲು ಮುಟ್ಟುತ್ತಿದೆ. ಮಾರ್ಚ್‌ ತಿಂಗಳಲ್ಲಿ ವಿಪರೀತ ಎನಿಸುವಷ್ಟು ಸೂರ್ಯ ತನ್ನ ಕಿರಣಗಳನ್ನು ಝಳಪಿಸುತ್ತಿದ್ದಾನೆ. ರಾಜ್ಯದ ಹಲವು ಕಡೆಗಳಲ್ಲಿ ತಾಪಮಾನ 40 ಡಿ.ಸೆ. ಈಗಾಗಲೇ ದಾಟಿದ್ದು, ಈ ಬೇಸಿಗೆ ಕಳೆಯುವುದು ಹೇಗಪ್ಪಾ ಎಂಬ ಚಿಂತೆ ಎಲ್ಲರ ಮುಖದಲ್ಲಿ ಕಾಣುತ್ತಿದೆ. ಉಷ್ಣತೆ ಇನ್ನೂ ಹೆಚ್ಚಬಹುದು ಎಂಬ ಎಚ್ಚರಿಕೆ ಸರಕಾರದಿಂದ, ತಜ್ಞರಿಂದ ಬಂದಿದೆ. ಇಂಥ ತೀಕ್ಷ್ಣ ಉರಿ ಸೆಕೆಯಲ್ಲಿ ಬಿಸಿಲಿನ ಆಘಾತದ ಅಪಾಯ ಹೆಚ್ಚುತ್ತದೆ. ಕಾರಣ, ದೇಹದ ತಾಪಮಾನವನ್ನು ಕಾಯ್ದುಕೊಳ್ಳುವ ಸಹಜ ತಂತ್ರಗಳು ಕೆಲವೊಮ್ಮೆ ದೇಹಕ್ಕೇ ಕೈಕೊಟ್ಟಾಗ ಆರೋಗ್ಯ ಏರುಪೇರಾಗುವುದು ನಿಶ್ಚಿತ. ಸುಸ್ತು, ಆಯಾಸ, ಡಯರಿಯಾ, ವಾಂತಿ, ನಿರ್ಜಲೀಕರಣ, ಮಾನಸಿಕ ಗೊಂದಲ, ಹೀಟ್‌ ಸ್ಟ್ರೋಕ್‌ ಮುಂತಾದ ಹಲವು ರೀತಿಯ ಸಮಸ್ಯೆಗಳು ಎರಗಬಹುದು. ಈಗಾಗಲೇ ಇರುವಂಥ ಆರೋಗ್ಯ ಸಮಸ್ಯೆಗಳು ಉಲ್ಭಣಿಸಬಹುದು. ಬಿಸಿಲಿನ ಆಘಾತದಿಂದ ವ್ಯಕ್ತಿಗಳ ವರ್ತನೆಯಲ್ಲೂ ವ್ಯತ್ಯಾಸ ಕಾಣಬಹುದು.

ನೀರು ಕಡಿಮೆ ಕುಡಿಯಬೇಡಿ

ತೀಕ್ಷ್ಣ ಬಿಸಿಲಿಗೆ ದೀರ್ಘಕಾಲ ಒಡ್ಡಿಕೊಳ್ಳುವುದರಿಂದ, ಚೆನ್ನಾಗಿ ನೀರು ಕುಡಿಯದಿರುವುದರಿಂದ ಮೊದಲಿಗೆ ಸುಸ್ತು, ಆಯಾಸ ಕಾಣಿಸಿಕೊಳ್ಳುತ್ತದೆ. ಇದನ್ನು ಸೂಕ್ತವಾಗಿ ನಿರ್ವಹಿಸದಿದ್ದಲ್ಲಿ ಹೀಟ್‌ಸ್ಟ್ರೋಕ್‌ ಉಂಟಾಗಬಹುದು. ಅಂದರೆ, ಜ್ವರದ ಯಾವುದೇ ಲಕ್ಷಣವಿಲ್ಲದಿದ್ದರೂ, ದೇಹದ ಉಷ್ಣತೆ 104 ಡಿಗ್ರಿ ಫ್ಯಾರನ್‌ಹೀಟ್‌ ಅಥವಾ ಅದಕ್ಕಿಂತಲೂ ಹೆಚ್ಚು ತಲುಪಬಹುದು. ಇದಕ್ಕೆ ತಕ್ಷಣವೇ ವೈದ್ಯಕೀಯ ಚಿಕಿತ್ಸೆ ಬೇಕು. ಸೂಕ್ತ ಚಿಕಿತ್ಸೆ ದೊರೆಯದಿದ್ದಲ್ಲಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು. ಏನಿದರ ಲಕ್ಷಣಗಳು?

ತೀವ್ರವಾಗಿ ಹೆಚ್ಚುವ ದೇಹದ ಉಷ್ಣತೆ

ತೀವ್ರವಾದ ಜ್ವರದಲ್ಲಿ ಏರುವ ದೇಹದ ಉಷ್ಣತೆಯಂತೆಯೇ 40 ಡಿ. ಸೆ. ಅಥವಾ 104 ಡಿ. ಫ್ಯಾರನ್‌ಹೀಟ್‌ ತಲುಪುತ್ತದೆ. ಕೆಲವೊಮ್ಮೆ ಅದಕ್ಕಿಂತ ಹೆಚ್ಚೂ ಇರಬಹುದು. ಹೃದಯದ ಬಡಿತ ತೀವ್ರಗತಿಯಲ್ಲಿರುತ್ತದೆ. ಈ ಹಂತದಲ್ಲಿ ತಕ್ಷಣ ಎಚ್ಚೆತ್ತುಕೊಂಡು ಆಸ್ಪತ್ರೆಗೆ ಧಾವಿಸುವುದು ಕ್ಷೇಮ. ಚರ್ಮ ಒಣಗುವುದು, ಕೆಂಪಾಗುವುದು ಇಂಥವೆಲ್ಲಾ ಈ ಲಕ್ಷಣಗಳ ಜೊತೆಜೊತೆಗೇ ಕಾಣಬಹುದು.

ಉಸಿರಾಟ

ಹೃದಯದ ಬಡಿತಕ್ಕೆ ಪೂರಕವಾಗಿ ಉಸಿರಾಟವೂ ತೀವ್ರವಾಗಿರುತ್ತದೆ. ಬಡಿತ ಮತ್ತು ಉಸಿರಾಟದ ಮೂಲಕ ಹೆಚ್ಚಿನ ಆಮ್ಲಜನಕ ಒದಗಿಸಿ, ಶರೀರವನ್ನು ತಂಪಾಗಿಸುವ ಯತ್ನವನ್ನು ದೇಹ ತಂತಾನೇ ಮಾಡುತ್ತಿರುತ್ತದೆ. ಈ ಹಂತದಲ್ಲಿ ಉಸಿರಾಟದ ತೊಂದರೆ ಮತ್ತು ಅತೀವ ಬೆವರು ಸಹ ಗೋಚರಿಸಬಹುದು ಅಥವಾ ಬೆವರೇ ಬಾರದೆಯೂ ಇರಬಹುದು.

ಗೊಂದಲ

ದೇಹದಲ್ಲಿನ ಈ ಬದಲಾವಣೆಯಿಂದ ಮೆದುಳಿನಲ್ಲೂ ಸಮಸ್ಯೆಗಳು ಕಂಡು ಬರುತ್ತವೆ. ಬಿಸಿಲಿನ ಆಘಾತಕ್ಕೆ ಒಳಗಾದ ವ್ಯಕ್ತಿಗಳಲ್ಲಿ ಗೊಂದಲ, ಕೋಪ, ದೇಹದ ಅಸಮತೋಲನ, ಕೆಲವೊಮ್ಮೆ ಅಪಸ್ಮಾರವೂ ಕಂಡುಬಂದೀತು. ಇಂಥವರಿಗೆ ವೈದ್ಯಕೀಯ ಚಿಕಿತ್ಸೆ ಅಗತ್ಯವಾಗಿ ಬೇಕು.

ತಲೆನೋವು

ತೀವ್ರವಾದ ತಲೆನೋವು, ತಲೆಸುತ್ತುವುದು, ಹೊಟ್ಟೆ ತೊಳೆಸುವುದು, ವಾಂತಿ- ಇವೆಲ್ಲವೂ ನಿರ್ಜಲೀಕರಣದ ಲಕ್ಷಣಗಳಾಗಿರಬಹುದು. ಮೈ ಮುಟ್ಟಿದರೆ ಬಿಸಿಯ ಅನುಭವ ಮತ್ತು ಚರ್ಮ ಒಣಗಿದಂಥ ಲಕ್ಷಣಗಳು ಕಾಣಬಹುದು. ಮೊದಲಿಗೆ ಸಿಕ್ಕಾಪಟ್ಟೆ ಬೆವರುವ ದೇಹದಿಂದ ಕ್ರಮೇಣ ಒಂದು ಹನಿ ಬೆವರೂ ಬಾರದಿರಬಹುದು. ಇಂಥ ಸಂದರ್ಭಗಳಲ್ಲೂ ಚಿಕಿತ್ಸೆ ಬೇಕಾಗುತ್ತದೆ.

ಮಾಂಸಖಂಡಗಳಲ್ಲಿ ನೋವು

ಬಿಸಿಲಿನ ಆಘಾತದಿಂದ ಮಾಂಸಖಂಡಗಳಲ್ಲಿ ನೋವು, ಏಳಲಾರದಂಥ ಸುಸ್ತು ಆರಂಭವಾಗಿ ನಂತರ ಎಚ್ಚರ ತಪ್ಪಬಹುದು. ತೀವ್ರವಾದ ಸೆಖೆಯ ದಿನಗಳಲ್ಲಿ ಸಿಕ್ಕಾಪಟ್ಟೆ ವ್ಯಾಯಾಮ ಮಾಡಿದಾಗ ಮೊದಲಿಗೆ ಕಾಣುವ ಲಕ್ಷಣಗಳೆಂದರೆ ಕಾಲು, ತೋಳು ಅಥವಾ ಕಿಬ್ಬೊಟ್ಟೆಯಲ್ಲಿ ನೋವು. ಚೆನ್ನಾಗಿ ನೀರು, ಒಆರೆಸ್‌ನಂಥ ಎಲೆಕ್ಟ್ರೋಲೈಟಿಕ್‌ ಪೇಯಗಳು ದೇಹಕ್ಕೆ ತುರ್ತಾಗಿ ಬೇಕಾಗುತ್ತದೆ.

ತಂಪಾಗಿಸಿ

ದೇಹದ ಬಿಸಿ ಹೆಚ್ಚುತ್ತ ಹೋದಂತೆ ಜೀವಾಪಾಯವೂ ಹೆಚ್ಚುತ್ತಲೇ ಹೋಗುತ್ತದೆ. ಇಂಥ ಸಂದರ್ಭಗಳಲ್ಲಿ ಚಿಕಿತ್ಸೆಗಾಗಿ ಧಾವಿಸುವುದು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಆ ವ್ಯಕ್ತಿಯ ದೇಹದ ಉಷ್ಣತೆಯನ್ನು ಕಡಿಮೆ ಮಾಡುವುದು. ವ್ಯಕ್ತಿಯನ್ನು ನೆರಳಿರುವ, ತಂಪಾದ, ತಾಜಾ ಗಾಳಿ ಬರುವ ಜಾಗಕ್ಕೆ ಸ್ಥಳಾಂತರಿಸಿ. ಒಆರೆಸ್‌ನಂಥ ಎಲೆಕ್ಟ್ರೋಲೈಟಿಕ್‌ ಪೇಯಗಳನ್ನು ಸ್ವಲ್ಪ ಸ್ವಲ್ಪವಾಗಿ ಕುಡಿಸುತ್ತಿರಿ. ಸಾಧ್ಯವಾದರೆ ಮೈಯನ್ನೆಲ್ಲಾ ತಂಪಾದ ಒದ್ದೆ ಬಟ್ಟೆಯಲ್ಲಿ ಒರೆಸಿ, ಚೆನ್ನಾಗಿ ಗಾಳಿ ಹಾಕಿ.

Exit mobile version