Site icon Vistara News

Drinking Water Before Meals: ಊಟಕ್ಕಿಂತ ಎಷ್ಟು ಮೊದಲು ನೀರು ಕುಡಿದರೆ ಒಳ್ಳೆಯದು?

Drinking Water Before Meals

ಬೇಸಿಗೆಯ ಬಿರುಸಿಗೆ ದಿನವಿಡೀ ನೀರು (Health Tips Kannada) ಕುಡಿಯುತ್ತಲೇ ಇರುತ್ತೇವೆ. ಬಿಸಿಲಿನ ದಿನಗಳಲ್ಲಿ ಆರೋಗ್ಯವನ್ನು ಕ್ಷೇಮವಾಗಿ ಇರಿಸಿಕೊಳ್ಳಲು ನೀರು ಕುಡಿಯುವುದು (Drinking Water) ಅಗತ್ಯ. ಆದರೆ ಕುಡಿಯುವ ಸಮಯ ಯಾವುದು ಎಂಬುದು ಕೆಲವೊಮ್ಮೆ ಮುಖ್ಯವಾಗುತ್ತದೆ. ಅಂದರೆ ದಿನವಿಡೀ ಗುಟುಕರಿಸುತ್ತಲೇ ಇರುತ್ತೇವೆ ಎಂಬುದು ಹೌದಾದರೂ, ಊಟಕ್ಕಿಂತ ಎಷ್ಟು ಮೊದಲು-ನಂತರ ಕುಡಿಯಬಹುದು, ಊಟ ಮಾಡುವಾಗಲೂ ಬಾಯಾರಿಕೆ ಎನಿಸಿದರೆ ಆಗೇನು ಮಾಡಬಹುದೆಂಬ ಅನುಮಾನ ಕೆಲವರಿಗಾದರೂ ಬಂದೀತು. ಇನ್ನೇನು ಊಟದ ಹೊತ್ತು ಎನ್ನುವಾಗ ಚೆನ್ನಾಗಿ ನೀರು ಕುಡಿದರೆ ಪಚನಕ್ರಿಯೆಗೆ ಅಡ್ಡಿಯಾಗುತ್ತದೆ. ಇದರಿಂದ ಸತ್ವಗಳನ್ನು ಸರಿಯಾಗಿ ಹೀರಿಕೊಳ್ಳಲಾಗದು ದೇಹಕ್ಕೆ. ಹಾಗಾದರೆ ಬೇಸಿಗೆಯಾದರೂ ನೀರು ಕುಡಿಯುವ ಹೊತ್ತುಗಳನ್ನು ನಿರ್ವಹಿಸುವುದು ಹೇಗೆ? ಈ ಮೂಲಕ ಜೀರ್ಣಕ್ರಿಯೆ ಹೆಚ್ಚು-ಕಡಿಮೆ ಆಗದಂತೆ ಕಾಪಾಡಿಕೊಳ್ಳುವುದು ಹೇಗೆ?

ಊಟದ ಮುನ್ನ

ಆಹಾರ ತೆಗೆದುಕೊಳ್ಳುವ ಮುನ್ನ ನೀರು ಕುಡಿಯುವ ಬಗ್ಗೆಯೂ ತಜ್ಞರಲ್ಲಿ ಒಮ್ಮತ ಇದೆ. ಬೆಳಗಿನ ತಿಂಡಿಯ ವಿಷಯಕ್ಕೆ ಬಂದರೆ, ಎದ್ದ ತಕ್ಷಣ ಒಂದೆರಡು ಗ್ಲಾಸ್‌ ನೀರು ಕುಡಿಯುವುದು ಸರಿಯಾದ ಕ್ರಮ. ಕೇವಲ ನೀರೆಂದಲ್ಲ, ಡಿಟಾಕ್ಸ್‌ ಪೇಯಗಳು, ಬಿಸಿ-ತಣ್ಣೀರು ಯಾವುದಾದರೂ ಸರಿ. ಇದನ್ನು ಕುಡಿದ ನಂತರ 45 ನಿಮಿಷಗಳು ಬಿಟ್ಟು ಉಪಾಹಾರ ಸೇವಿಸುವುದು ಒಳ್ಳೆಯದು. ಇದರಿಂದ ಜೀರ್ಣಕ್ರಿಯೆಗೆ ಸರಿಯಾದ ವಾತಾವರಣ ಹೊಟ್ಟೆಯಲ್ಲಿ ನಿರ್ಮಾಣ ಆಗುತ್ತದೆ. ಸತ್ವಗಳನ್ನು ಹೀರಿಕೊಳ್ಳಲು, ಅದನ್ನು ಜೀರ್ಣಿಸಿಕೊಳ್ಳಲು ಪಚನಾಂಗಗಳಿಗೆ ನೆರವಾಗುತ್ತದೆ. ಉಳಿದೆರಡು ಹೊತ್ತಿನ ಊಟಗಳ ವಿಷಯದಲ್ಲಿ ಸ್ವಲ್ಪ ವ್ಯತ್ಯಾಸ ಬೇಕು. 30 ನಿಮಿಗಳ ಮೊದಲು ಬೇಕಾದಷ್ಟು ನೀರು ಕುಡಿಯುವುದು ಹಲವು ರೀತಿಯಲ್ಲಿ ಒಳ್ಳೆಯದು. ಮೊದಲನೇದಾಗಿ, ಊಟ ಮಾಡುವ ಮುನ್ನ ನೀರು ಕುಡಿಯುವುದರಿಂದ ಜೀರ್ಣಕ್ರಿಯೆಗೆ ತೊಂದರೆಯಾಗುವುದು ತಪ್ಪುತ್ತದೆ. ಎರಡನೇದಾಗಿ, ಹೊಟ್ಟೆ ಅತಿಯಾಗಿ ಹಸಿದಿದ್ದರೆ ಸಿಕ್ಕಾಪಟ್ಟೆ ತಿನ್ನುವಂತಾಗುತ್ತದೆ. ಇದೀಗ ಹೊಟ್ಟೆ ಅತಿಯಾಗಿ ಹಸಿದಂತೆಯೂ ಅನಿಸದೆ, ಅಗತ್ಯಕ್ಕಿಂತ ಹೆಚ್ಚು ತಿನ್ನುವುದರ ಮೇಲೆ ಕಡಿವಾಣ ಹಾಕಿದಂತಾಗುತ್ತದೆ. ಹಾಗಾಗಿ ಊಟಕ್ಕಿಂತ 30 ನಿಮಿಷ ಮುನ್ನ ಬೇಕಾದಷ್ಟು ನೀರು ಕುಡಿಯುವುದು ಸರಿಯಾದ ಕ್ರಮ.

ಊಟ ಮಾಡುವಾಗ

ತಿಂಡಿ-ಊಟ ಮಾಡುವಾಗ ನೀರಿಟ್ಟುಕೊಳ್ಳುವುದು ಬಹಳಷ್ಟು ಜನರ ಪದ್ಧತಿ. ʻನೀರಿಲ್ಲದಿದ್ದರೆ ತುತ್ತು ಗಂಟಲಲ್ಲಿ ಇಳಿಯುವುದೇ ಇಲ್ಲʼ ಎನ್ನುವವರೂ ಇದ್ದಾರೆ. ಊಟ ಮಾಡುವಾಗ ನೀರು ಕುಡಿಯುವುದು ತಪ್ಪಲ್ಲದಿದ್ದರೂ, ಅತಿಯಾಗಿ ಕುಡಿಯುವುದು ಸರಿಯಲ್ಲ. ಹಾಗಾಗಿ ಬೇಕಾದಾಗ ಒಂದೊಂದೇ ಗುಟುಕು ಕುಡಿಯುವುದು ಒಳ್ಳೆಯದು. ಊಟದ ನಡುವೆ ಅಲ್ಪ ಪ್ರಮಾಣದ ನೀರು ಕುಡಿಯುವುದು ಒಳ್ಳೆಯದೇ ಎನ್ನುತ್ತಾರೆ ಕೆಲವು ಪೋಷಕಾಂಶ ತಜ್ಞರು. ಇದರಿಂದ ಆಹಾರವನ್ನು ನುಚ್ಚುನುರಿ ಮಾಡುವುದಕ್ಕೆ, ಅನ್ನನಾಳದಲ್ಲಿ ಸರಾಗವಾಗಿ ಕೆಳಗಿಳಿಯುವುದಕ್ಕೆ ಅನುಕೂಲವಾಗುತ್ತದೆ. ಈ ಮೂಲಕ ಪಚನವಾಗುವುದಕ್ಕೂ ಸುಲಭವಾಗುತ್ತದೆ. ಆದರೆ ಲೋಟಗಟ್ಟಲೆ ಕುಡಿಯುವ ಬದಲು ಸ್ವಲ್ಪ ಕುಡಿದರೆ ಒಳ್ಳೆಯದು.

ಊಟದ ನಂತರ

ಊಟವಾದ ನಂತರ ಸಿಕ್ಕಾಪಟ್ಟೆ ನೀರು ಕುಡಿಯುವ ಅಭ್ಯಾಸವಿದ್ದರೆ, ಅದನ್ನು ದೂರ ಮಾಡುವುದು ಕ್ಷೇಮ. ಕಾರಣ, ಆಹಾರ ಹೊಟ್ಟೆ ಸೇರಿದ ಕೂಡಲೆ ಚೊಂಬುಗಟ್ಟಲೆ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಏರುಪೇರಾಗುತ್ತದೆ. ಅಜೀರ್ಣ, ಹೊಟ್ಟೆಯುಬ್ಬರದಂಥ ತೊಂದರೆಗಳು ಕಾಣಬಹುದು. ಬದಲಿಗೆ, ಆಹಾರ ಸೇವನೆಯ ನಂತರ ಅಗತ್ಯವಿರುವಷ್ಟೇ ನೀರು ಕುಡಿಯಿರಿ. ಅಲ್ಲಿಂದ 30-60 ನಿಮಿಷಗಳ ವಿರಾಮ ನೀಡಿ. ಆನಂತರ ಬೇಕಾದಷ್ಟು ನೀರು ಕುಡಿಯಿರಿ. ಇದರಿಂದ ಪಚನಕ್ರಿಯೆ ಸುಲಲಿತವಾಗಿ ನೆರವೇರುತ್ತದೆ. ಊಟದ ನಂತರ ಅತಿಯಾಗಿ ನೀರು ಕುಡಿಯುವುದು ಸಲ್ಲದಿದ್ದರೂ, ನೀರನ್ನಂತೂ ಕುಡಿಯಲೇ ಬೇಕು. ಇದರಿಂದ ಹೊಟ್ಟೆ ಚೆನ್ನಾಗಿ ತುಂಬಿದ ಅನುಭವ ದೊರೆಯುತ್ತದೆ. ಹಾಗಾಗಿ ನಡುವೆ ಚುಟುಕು ತಿನಿಸುಗಳನ್ನು ಬಾಯಾಡುವ ಬಯಕೆಗೆ ಕಡಿವಾಣ ಹಾಕುವುದು ಸುಲಭವಾಗುತ್ತದೆ. ಆದರೆ ಆಹಾರದ ನಂತರ ಔಷಧ ತೆಗೆದುಕೊಳ್ಳುವುದಿದ್ದರೆ, ಯಾವುದಾದರೂ ಆರೋಗ್ಯ ಸಮಸ್ಯೆಗಳಿದ್ದರೆ ಅವರ ಅಗತ್ಯಕ್ಕೆ ತಕ್ಕಂತೆ ನೀರು ಕುಡಿಯುವುದು ಸೂಕ್ತ.

ಇದನ್ನೂ ಓದಿ: Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

8-8 ನಿಯಮ

ಬೇಸಿಗೆಯಲ್ಲಿ ಮಾತ್ರವೇ ಅಲ್ಲ, ಎಲ್ಲಾ ದಿನಗಳಲ್ಲೂ 8 ಔನ್ಸ್‌ ಗ್ಲಾಸಿನ ತುಂಬಾ 8 ಬಾರಿ ನೀರು ಕುಡಿಯಲೇ ಬೇಕು ಎನ್ನುತ್ತಾರೆ ಆಹಾರ ತಜ್ಞರು. ದೇಹಕ್ಕೆ ಸಾಕಷ್ಟು ನೀರುಣಿಸುವುದರಿಂದ ಜೀರ್ಣಾಂಗಗಲ್ಲಿರುವ ಬ್ಯಾಕ್ಟೀರಿಯಗಳ ಸಮತೋಲನವನ್ನು ಕಾಪಾಡಿಕೊಳ್ಳಬಹುದು. ಇದರಿಂದ ಜೀರ್ಣಕ್ರಿಯೆ ಸರಾಗ ಆಗಿ, ಮಲಬದ್ಧತೆ ದೂರವಾಗಿ, ದೇಹ-ಮನಸ್ಸುಗಳಿಗೆ ಚೈತನ್ಯ ದೊರೆತು, ಪ್ರತಿರೋಧಕ ಶಕ್ತಿ ಪ್ರಬಲವಾಗುತ್ತದೆ. ಹಾಗಾಗಿ ಸಾಕಷ್ಟು ನೀರು ಕುಡಿಯಿರಿ.

Exit mobile version