Site icon Vistara News

Drumstick Leaves Benefits: ಸರ್ವಗುಣ ಸಂಪನ್ನ ನುಗ್ಗೆಸೊಪ್ಪಿನ ಮಹಾತ್ಮೆ!

drumstick leaves

ನುಗ್ಗೆಕಾಯಿ (Drumstick) ದಕ್ಷಿಣ ಭಾರತೀಯರ ಆಹಾರ ಶೈಲಿಯಲ್ಲಿ ಪ್ರಾತಿನಿಧ್ಯ ಪಡೆದ ಬಹುಮುಖ್ಯ ತರಕಾರಿ. ಹೇರಳವಾಗಿ ಕಬ್ಬಿಣಾಂಶ, ಕ್ಯಾಲ್ಶಿಯಂ ಹಾಗೂ ಇತರ ವಿಟಮಿನ್‌ ಹಾಗೂ ಪೋಷಕಾಂಶಗಳನ್ನು ತನ್ನೊಡಲಲ್ಲಿ ಹುದುಗಿಸಿಕೊಂಡಿರುವ ನುಗ್ಗೆಕಾಯಿಯ ಮಹತ್ವ ಎಲ್ಲರಿಗೂ ಗೊತ್ತೇ ಇದೆ. ತನ್ನದೇ ವಿಶೇಷ ಪರಿಮಳ ಹಾಗೂ ರುಚಿಯನ್ನು ಹೊಂದಿರುವ ನುಗ್ಗೆಕಾಯಿ ಮಾತ್ರವಲ್ಲ, ಅದರ ಸೊಪ್ಪೂ (Drumstick Leaves) ಕೂಡಾ ಕಾಯಿಯಷ್ಟೇ ಪೋಷಕಾಂಶಗಳನ್ನು ಹೊಂದಿದೆ. ಕಾಯಿಲೆಗಳಾದ ಸಾಮಾನ್ಯ ಜ್ವರ, ಮಲೇರಿಯಾ, ಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು ಸೇರಿದಂತೆ ಹಲವಾರು ರೋಗಗಳಿಗೆ ತನ್ನಲ್ಲಿ ಪರಿಹಾರಗಳನ್ನು ಇಟ್ಟಿರುವ ನುಗ್ಗೆಗಿಡ (Drumstick Leaves Benefits) ಒಂದು ಆರೋಗ್ಯ ಜಗತ್ತಿಗೊಂದು (health tips) ವಿಶೇಷ ವರ ಎಂದರೂ ತಪ್ಪಿಲ್ಲ. ನಮ್ಮ ಸುತ್ತಮುತ್ತ ಸದಾ ಲಭ್ಯವಿರುವ ಇಂತಹ ಸರಳ ಸುಲಭ ತರಕಾರಿ ಸೊಪ್ಪುಗಳನ್ನು ನಿತ್ಯದ ಆಹಾರಕ್ರಮದಲ್ಲಿ ಬಳಸುತ್ತಾ ಬಂದರೆ, ಎಷ್ಟೋ ಆರೋಗ್ಯ ಸಮಸ್ಯೆಗಳು (health guide) ಬರದಂತೆ ಮೊದಲೇ ಚಿವುಟಿ ಹಾಕಬಹುದು. ಅಂತ ತರಕಾರಿ, ಸೊಪ್ಪುಗಳಲ್ಲಿ ಅಗ್ರಸ್ಥಾನ ಈ ನುಗ್ಗೆಕಾಯಿಗೆ ಸಲ್ಲಬೇಕು.

ಹಾಗಾದರೆ, ಕಾಯಿ ಲಭ್ಯವಿಲ್ಲದಿದ್ದರೂ, ಸದಾ ಕಾಲ ಲಭ್ಯವಿರುವ ನುಗ್ಗೆಸೊಪ್ಪಿನಿಂದ ಏನೆಲ್ಲ ಪ್ರಯೋಜನಗಳಿವೆ ಹಾಗೂ ಹೇಗೆ ನಿತ್ಯದ ಆಹಾರದಲ್ಲಿ ಬಳಸಬಹುದು ಎಂಬುದನ್ನು ನೋಡೋಣ.

1. ನುಗ್ಗೆಸೊಪ್ಪು ಹೃದಯವನ್ನು ಆರೋಗ್ಯವಾಗಿಡಲು ಪರೋಕ್ಷವಾಗಿ ಸಹಾಯ ಮಾಡುತ್ತದೆ. ಹೃದಯದ ಆರೋಗ್ಯಕ್ಕೆ ಯಾವಾಗಲೂ ಕುತ್ತು ತರುವ ಅತಿಯಾದ ಕೊಲೆಸ್ಟೆರಾಲನ್ನು ಕಡಿಮೆಗೊಳಿಸುವ ತಾಕತ್ತು ನುಗ್ಗೆಸೊಪ್ಪಿಗಿದೆ. ಇದರಲ್ಲಿರುವ ಝಿಂಕ್‌ ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಕಡಿಮೆ ಮಾಡುವುದಲ್ಲದೆ ಮಧುಮೇಹವನ್ನೂ ದೂರವಿಡಲು ಸಹಾಯ ಮಾಡುತ್ತದೆ.

2. ನುಗ್ಗೆಸೊಪ್ಪಿನಲ್ಲಿರುವ ಅತಿಯಾದ ಆಂಟಿ ಆಕ್ಸಿಡೆಂಟ್‌ಗಳಾದ ಕ್ವೆರ್ಚೆಟಿನ್‌ ಹಾಗೂ ಕ್ಲೋರೋಜೆನಿಕ್‌ ಆಸಿಡ್‌ಗಳು ದೇಹದಲ್ಲಿ ಆಂಟಿ ಆಕ್ಸಿಡೆಂಟ್‌ ಹೆಚ್ಚಾಗುವಲ್ಲಿ ತಮ್ಮದೇ ಕೊಡುಗೆ ನೀಡುತ್ತವೆ.

3. ನುಗ್ಗೆ ಸೊಪ್ಪು ಚರ್ಮದ ಕಾಂತಿಗೆ ಅತ್ಯುತ್ತಮ. ಇದರಲ್ಲಿರುವ ಆಂಟಿಸೆಪ್ಟಿಕ್‌ ಗುಣಗಳು ಚರ್ಮವನ್ನು ನಯವಾಗಿ ರೋಗರಹಿತವಾಗಿ ಹೊಳೆಯುವಂತೆ ಮಾಡುತ್ತದೆ.

4. ನಿದ್ರಾಹೀನತೆಯ ತೊಂದರೆಯಿರುವ ಮಂದಿಗೆ ನುಗ್ಗೆ ಸೊಪ್ಪು ಸಹಕಾರಿ. ಇದು ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ನೀಡುವುದಲ್ಲದೆ ಇವೆಲ್ಲವುಗಳ ಪರಿಣಾಮವನ್ನು ನಿದ್ದೆಯ ಮೇಲೂ ತೋರಿಸುತ್ತದೆ. ಇದು ಶಕ್ತಿವರ್ಧಕವೂ ಆಗಿರುವುದಲ್ಲದೆ, ದೇಹಕ್ಕೆ ಬೇಕಾದ ಸಂಪೂರ್ಣ ವಿಟಮಿನ್ನುಗಳು ಹಾಗೂ ಪೋಷಕಾಂಶಗಳನ್ನು ಪೂರೈಕೆ ಮಾಡುತ್ತದೆ.

5. ಜೀರ್ಣಕ್ರಿಯೆ ಸಮಸ್ಯೆ ಎದುರಿಸುವ ಮಂದಿಗೆ ನುಗ್ಗೆ ಸೊಪ್ಪು ಒಳ್ಳೆಯದು. ಅಲ್ಸರ್‌, ಗ್ಯಾಸ್ಟ್ರೈಟಿಸ್‌, ಮಲಬದ್ಧತೆ, ಹೊಟ್ಟೆ ಉಬ್ಬರಿಸುವುದು ಮತ್ತಿತರ ಜೀರ್ಣಕ್ರಿಯೆ ಸಂಬಂಧೀ ಸಮಸ್ಯೆಗಳಿಗೆ ನುಗ್ಗೆಸೊಪ್ಪು ಸೇವನೆಯ ಮೂಲಕ ಪರಿಹಾರ ನೀಡಬಹುದು.

ಹಾಗಾದರೆ, ಯಾವ ಬಗೆಯಲ್ಲಿ ನುಗ್ಗೆಸೊಪ್ಪನ್ನು ಸೇವಿಸಬಹುದು ಎಂಬುದನ್ನು ನೋಡೋಣ.

1. ನುಗ್ಗೆಸೊಪ್ಪಿನ ಚಹಾ: ನುಗ್ಗೆ ಸೊಪ್ಪಿನ ಚಹಾ ಸೇವನೆಯಿಂದ ತೂಕವನ್ನು ಕಡಿಮೆಗೊಳಿಸಬಹುದು. ಹಸಿ ಅಥವಾ ಒಣಗಿಸಿದ ನುಗ್ಗೆ ಸೊಪ್ಪನ್ನು ನೀರಿನಲ್ಲಿ ಕುದಿಸಿ ಮಾಡುವ ಪೋಷಕಾಂಶಯುಕ್ತವಾದ ಈ ಚಹಾವನ್ನು ಬೇರೆ ಚಹಾದ ಬದಲಿಗೆ ಸೇವನೆ ಮಾಡುವ ಮೂಲಕ ಪ್ರಯೋಜನ ಪಡೆಯಬಹುದು. ಅತಿ ಹೆಚ್ಚು ಕ್ಯಾಲರಿ ಆಹಾರಗಳ ಬದಲಿಗೆ ಇದನ್ನು ಸೇವಿಸಿದರೆ, ದೇಹಕ್ಕೆ ಕಡಿಮೆ ಕ್ಯಾಲರಿಯಲ್ಲಿ ಪೋಷಕಾಂಶಯುಕ್ತ ಆಹಾರವೂ ಸಿಗುತ್ತದೆ. ಪರಿಣಾಮ ತೂಕ ಸಮತೋಲನ ಕಾಯ್ದುಕೊಳ್ಳುತ್ತದೆ.

ಇದನ್ನೂ ಓದಿ: Drumstick: ಹಿತ್ತಿಲ ಗಿಡ ನುಗ್ಗೆಸೊಪ್ಪಿನಲ್ಲಿದೆ ಸರ್ವರೋಗಗಳಿಗೂ ಪರಿಹಾರ!

2. ನುಗ್ಗೆಸೊಪ್ಪಿನ ಪುಡಿ: ನುಗ್ಗೆಸೊಪ್ಪನ್ನು ಒಣಗಿಸಿ, ವಿವಿಧ ಬೇಳೆಗಳನ್ನು ಹಾಕಿ ಜೊತೆಗೆ ಬೆಳ್ಳುಳ್ಳಿ ಹಾಗೂ ಇತರ ಮಸಾಲೆಗಳನ್ನೂ ಸೇರಿಸಿ ಮಾಡುವ ಮುರುಗಂಕಾಯಿ ಪೊಡಿ/ ನುಗ್ಗೆಸೊಪ್ಪಿನ ಪುಡಿ ಬಗೆಬಗೆಯಲ್ಲಿ ಆಹಾರದ ರುಚಿ ಹೆಚ್ಚಿಸುತ್ತದೆ. ಈ ಪುಡಿಯನ್ನು ಬಳಸಿ, ರೈಸ್‌ಬಾತ್‌ ಮಾಡಬಹುದು, ದೋಸೆಯ ಮೇಲೆ ಉದುರಿಸಿ ತಿನ್ನಬಹುದು. ಅಥವಾ ದೋಸೆಯೊಂದಿಗೆ ತುಪ್ಪ ಹಾಕಿ ಚಟ್ನಿಪುಡಿಯಂತೆ ತಿನ್ನಬಹುದು.

3. ವಿವಿಧ ಸೊಪ್ಪುಗಳಿಂದ ಮಾಡುವ ಸೂಪ್‌, ಅಥವಾ ಸ್ಮೂದಿಗಳಲ್ಲಿ ನುಗ್ಗೆಸೊಪ್ಪನ್ನು ಬಳಸುವ ಮೂಲಕ ಇದು ಹೊಟ್ಟೆ ಸೇರುವ ಇತರ ಉಪಾಯಗಳನ್ನು ಕಂಡುಕೊಳ್ಳಬಹುದು. ನುಗ್ಗೆ ಸೊಪ್ಪಿನ ಚಟ್ನಿ, ರಸಂ ಮತ್ತಿತರ ಬಗೆಗಳನ್ನೂ ಇದರಲ್ಲಿ ಮಾಡಬಹುದಾಗಿದೆ.

ಇದನ್ನೂ ಓದಿ: Health Tips: ಶೃಂಗಾರದ ಹೊಂಗೆಮರ ಹೂಬಿಡಬೇಕೆ? ಇವುಗಳನ್ನು ಮರೆಯದೆ ಸೇವಿಸಿ!

Exit mobile version