ನಿಮ್ಮ ತುಟಿ ಆಗಾಗ ಬಿರುಕು ಬಿಡುತ್ತಿರುತ್ತದೆಯೋ? ಒಡೆದ ತುಟಿಯನ್ನು ನಯವಾಗಿಸಲು ಕಷ್ಟ ಪಡುತ್ತಿದ್ದೀರೋ? ತುಟಿ ಒಡೆಯುವುದಕ್ಕೆ ಕಾರಣ ಈ ಚಳಿಗಾಲವೇ ಎಂದು ಕಾಲದ ಮೇಲೆ ಮುನಿಸಿಕೊಂಡಿದ್ದೀರೋ? ಒಡೆದ ತುಟಿಯನ್ನು ನಯವಾಗಿಸಲು ಮತ್ತೆ ಮತ್ತೆ ಲಿಪ್ ಬಾಮ್ ಹಚ್ಚಿಕೊಂಡು ಬಿರುಕಾಗುವ ಸಮಸ್ಯೆ ಕಡಿಮೆಯಾಗುತ್ತಿಲ್ಲ ಎಂದು ಚಿಂತಿತರಾಗಿದ್ದೀರಾ? ಹಾಗಾದರೆ ನಿಮ್ಮ ಈ ತಪ್ಪು ತಿಳುವಳಿಕೆಗಳನ್ನು ಬಿಟ್ಟು ಬಿಡಿ. ತುಟಿ ಒಡೆಯಲು, ಚಳಿಗಾಲವೂ ಒಂದು ಕಾರಣವಿದ್ದೀತಾದರೂ, ಚಳಿಗಾಲ ಮಾತ್ರ ಕಾರಣವಲ್ಲ ಎಂಬುದನ್ನು ನೀವು ಮೊದಲು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ತುಟಿ ಎಂಬ ಅತ್ಯಂತ ನಾಜೂಕಿನ ಭಾಗವೊಂದು ಬಿರುಕಾಗುತ್ತಿದೆ ಎಂಬರೆ ಅದು ಏನೋ ಹೇಳುತ್ತಿದೆ ಎಂದೇ ಅರ್ಥ. ತುಟಿಗಳ ಬಗ್ಗೆ ನಿಮ್ಮ ನಿರ್ಲಕ್ಷ್ಯ ಅಥವಾ ಕೊಡಬೇಕಾಗಿರುವ ಗಮನದ ಬಗ್ಗೆಯೂ ನಿಮಗಿದು ಹೇಳಬಹುದು. ಹಾಗಾದರೆ, ತುಟಿ ಒಡೆಯಲು ಬೇರೆ ಏನು ಕಾರಣಗಳಿದ್ದೀತು ಎಂಬ ಪ್ರಶ್ನೆಯೀಗ ನಿಮ್ಮಲ್ಲಿ ಎದ್ದರೆ ಇಲ್ಲಿ ಕೇಳಿ.
೧. ತುಟಿಗಳು ಬಿರುಕಾಗುತ್ತಿದೆ ಎಂದರೆ, ನಿಮ್ಮ ದೇಹಕ್ಕೆ ನೀವು ಬೇಕಾದ ಪ್ರಮಾಣದಲ್ಲಿ ನೀರು ಒದಗಿಸುತ್ತಿಲ್ಲ ಎಂಬುದೂ ಆಗಿರುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ಪ್ರಮಾಣದ ನೀರನ್ನು ನಾವು ಪ್ರತಿನಿತ್ಯ ಕುಡಿಯುವುದು ಅಗತ್ಯ. ಹಾಗಾಗಿ ನೀರಿನಂಶ ಕಡಿಮೆಯಾದರೂ ಹೀಗೆ ಆಗುವ ಸಂಭವವಿದೆ. ಯಾವುದೇ ಕಾಲವಿದ್ದರೂ ಸರಿಯಾದ ಪ್ರಮಾಣದಲ್ಲಿ ನೀರು ಸೇವಿಸಿ.
೨. ಮುಖ ತೊಳೆಯಲು ಬಳಸುವ ನೊರೆನೊರೆಯ ಫೇಸ್ ವಾಶ್ ಕೂಡಾ ಕೆಲವೊಮ್ಮೆ ತುಟಿಗಳಿಗೆ ಅಲರ್ಜಿ ತರಬಹುದು. ಇದರಿಂದಲೂ ತುಟಿಯೊಡೆಯುವ ಸಮಸ್ಯೆ ಇರಬಹುದು.
೩. ದಿನವೂ ಮುಖಕ್ಕೆ ಮೇಕಪ್ ಬಳಸುತ್ತೀರಾದರೆ, ಸಂಜೆ ಮನೆಗೆ ಬಂದು ಮೇಕಪ್ ತೆಗೆಯಲು, ಮೇಕಪ್ ರಿಮೂವರ್ ಬಳಸುತ್ತಿದ್ದೀರಾ? ಹಾಗಿದ್ದರೆ ಅದೂ ಕೂಡಾ ಕೆಲವರಿಗೆ ಅಲರ್ಜಿಯಾಗಬಹುದು. ಅದರಿಂದಾಗಿಯೂ ತುಟಿ ಒಣಗಿ ಬಿರುಕು ಬಿಡಬಹುದು.
೪. ಕೆಲವರ ತುಟಿಗಳಿಗೆ ಪುದಿನ, ಬಬಲ್ ಗಮ್, ಚ್ಯೂಯಿಂಗ್ ಗಮ್ ಹಾಗೂ ಮೌತ್ ವಾಶ್‌ಗಳಿಂದಲೂ ಅಲರ್ಜಿಯಾಗಬಹುದು. ಹಾಗಾಗಿ ಇಂತಹ ಪರಿಮಳದ ಲಿಪ್ ಬಾಮ್‌ಗಳ ಬಳಕೆಯನ್ನು ನಿಯಂತ್ರಣ ಮಾಡಬಹುದು. ಇದರ ಬದಲಾಗಿ, ತುಪ್ಪ, ಎಣ್ಣೆ, ಬೆಣ್ಣೆಯನ್ನು ಬಳಸುವುದು ಉತ್ತಮ.
೫. ಸಿಗರೇಟ್ ಸೇವನೆ ಕೂಡಾ ತುಟಿಗಳಿಗೆ ಒಳ್ಳೆಯದಲ್ಲ. ಇದರಿಂದ ತುಟಿ ಕಪ್ಪಾಗುವುದರ ಜೊತೆಗೆ ಬಿರುಕುಂಟಾಗುವುದು ಮತ್ತಿತರ ಸಮಸ್ಯೆಗಳನ್ನು ತಂದೊಡ್ಡಬಹುದು.
ಇದನ್ನೂ ಓದಿ: Winter skin care: ಚಳಿಗಾಲದ ಒಣ ತ್ವಚೆಯ ಮಂದಿಗೆ ಇಲ್ಲಿವೆ ಸುಲಭ ಪರಿಹಾರ!
೬. ಆಲ್ಕೋಹಾಲ್ ಸೇವನೆ ಕೂಡಾ ತುಟಿಗಳನ್ನು ಒಣಗಿಸುತ್ತದೆ. ಇದರಿಂದ ತುಟಿ ಬಿರುಕು ಬಿಡುತ್ತದೆ.
೭. ಲಾಂಗ್ ಲಾಸ್ಟಿಂಗ್ ಅಂದರೆ, ಬಹಳ ಗಂಟೆಗಳವರೆಗೆ ಇರಬಲ್ಲ ಲಿಪ್‌ಸ್ಟಿಕ್‌ಗಳ ಬಳಕೆ ಕೂಡಾ ತುಟಿಗಳಿಗೆ ತೊಂದರೆ ಉಂಟು ಮಾಡುತ್ತದೆ. ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮ್ಯಾಟ್ ಲಿಪ್‌ಸ್ಟಿಕ್‌ಗಳಿಂದಲೂ ಇದೇ ಸಮಸ್ಯೆ ತಲೆದೋರಬಹುದು.
೮. ಪದೇ ಪದೇ ತುಟಿಗಳಿಗೆ ಸ್ಕ್ರಬ್ ಮಾಡುವುದು, ತುಟಿಗಳನ್ನು ಕಚ್ಚುವ ಅಭ್ಯಾಸ ಬೆಳೆಸಿಕೊಳ್ಳುವುದು, ಬಿರುಕು ಬಿಟ್ಟ ಜಾಗದ ಚರ್ಮವನ್ನು ಕಚ್ಚಿ ಎಳೆದು ತೆಗೆಯುವುದು ಇತ್ಯಾದಿಗಳು ಸಮಸ್ಯೆಯನ್ನು ಇನ್ನಷ್ಟು ಮತ್ತಷ್ಟು ಉಲ್ಬಣಿಸುವಂತೆ ಮಾಡುತ್ತದೆ.
೯. ತುಟಿಯನ್ನು ನಯವಾಗಿ ನುಣುಪಾಗಿ, ಬಿರುಕಿನ ತೊಂದರೆಗಳಿಲ್ಲದಂತೆ ಕಾಪಾಡಿಕೊಳ್ಳಲು ವಿಟಮಿನ್, ಸಿ, ವಿಟಮಿನ್ ಇ, ಹಾಗೂ ಒಮೆಗಾ ೩ ಫ್ಯಾಟಿ ಆಸಿಡ್‌ಗಳಿರುವ ಆಹಾರ ಸೇವಿಸಬಹುದು, ಅಥವಾ ಈವುಗಳಿರುವ ಸಪ್ಲಿಮೆಂಟ್‌ಗಳನ್ನೂ ಕೂಡಾ ಸೇವಿಸಬಹುದು.
೧೦. ಕೆಲವು ಔಷಧಿಗಳೂ ಕೂಡಾ ಪ್ರಭಾವ ಬೀರಿರಬಹುದು. ಹಾಗಾಗಿ ನೀವು ನಿತ್ಯ ತಿನ್ನುವ ಔಷಧಿಗಳಿದ್ದರೆ ಒಮ್ಮೆ ಗಮನಿಸಿ ನೋಡಿ. ಔಷಧಿಗಳಿದ್ದಾಗ ಸರಿಯಾಗಿ ನೀರು ಕುಡಿಯಬಹುದು.
ಇದನ್ನೂ ಓದಿ: Winter Health Care | ಚಳಿಯಿಂದಾಗಿ ಆಗಾಗ ತಲೆನೋವು ಬರುತ್ತಿದೆಯೇ? ಇವುಗಳನ್ನು ಪ್ರಯತ್ನಿಸಿ