ಚಳಿಯ ಋತುವಿನಲ್ಲಿ ಹೆಚ್ಚುವ ಅಲರ್ಜಿ ಸಮಸ್ಯೆಗಳು, ವೈರಸ್ ಸೋಂಕುಗಳು, ಸೈನಸ್ ತೊಂದರೆಗಳು, ಕುಗ್ಗೆ ಗಟ್ಟಿಯಾಗುವುದು- ಇಂಥ ಹಲವು ಕಾರಣಗಳಿರಬಹುದು (Ear Pain During Winter) ಕಿವಿನೋವಿಗೆ. ದೊಡ್ಡವರಿಗಿಂತ ಮಕ್ಕಳಲ್ಲಿ ಹೆಚ್ಚಾದರೂ, ಚಳಿ ತೀವ್ರವಾದಾಗ ವಯಸ್ಸಿನ ಭೇದವಿಲ್ಲದೆ ಎಲ್ಲರನ್ನೂ ಕಾಡುತ್ತದೆ. ಚಳಿಗಾಲದಲ್ಲಿ ಕಾಡುವ ಹಲವು ನೋವುಗಳ ಪೈಕಿ ಕಿವಿನೋವೂ ಒಂದು. ಚಳಿ ತೀವ್ರವಾಗಿರುವ ಜಾಗಗಳಲ್ಲಿ ವಯಸ್ಸಿನ ಭೇದವಿಲ್ಲದೆ ಕಿವಿನೋವು ಬರುತ್ತದೆ. ಇದು ದೊಡ್ಡವರಿಗಿಂತ ಮಕ್ಕಳಲ್ಲಿ ಅಧಿಕ. ತೀವ್ರವಾಗಿ ಮತ್ತು ದೀರ್ಘಕಾಲದವರೆಗೆ ಕಾಡದೆ ಹೋದರೂ ಮಕ್ಕಳನ್ನು ಗೋಳುಗುಟ್ಟಿಸಿ, ಪಾಲಕರನ್ನು ಆತಂಕದಲ್ಲಿ ಕೆಡವಲು ಬೇಕಷ್ಟಾಗುತ್ತದೆ. ಅದರಲ್ಲೂ ಚಳಿಗಾಲದಲ್ಲಿ ಕಿವಿ ಸೋಂಕುಗಳು ಬಿಡುವುದೇ ಇಲ್ಲ. ಏಕೆ ಹೀಗೆ?
ಚಳಿಗಾಲದಲ್ಲಿ ಕಿವಿನೋವು
ಚಳಿಯ ಋತುವಿನಲ್ಲಿ ಹೆಚ್ಚುವ ಅಲರ್ಜಿ ಸಮಸ್ಯೆಗಳು, ವೈರಸ್ ಸೋಂಕುಗಳು, ಸೈನಸ್ ತೊಂದರೆಗಳು, ಕುಗ್ಗೆ ಗಟ್ಟಿಯಾಗುವುದು- ಇಂಥ ಹಲವು ಕಾರಣಗಳಿರಬಹುದು ಕಿವಿನೋವಿಗೆ. ಚಳಿಗೆ ಕಿವಿಯ ರಕ್ತನಾಳಗಳು ಸಂಕೋಚಗೊಂಡು ನೋವು ತರಬಹುದು. ಸೈನಸ್ ಊದಿಕೊಂಡು ಕಿವಿಯ ಮೇಲೆ ಒತ್ತಡ ಹಾಕಬಹುದು. ವೈರಸ್ ಸೋಂಕು ತರುವ ನೆಗಡಿಯು ಕಿವಿ ನೋವಿಗೆ ಕಾರಣವಾಗಬಹುದು. ಕಿವಿಯಲ್ಲಿ ಕುಗ್ಗೆ ಕಟ್ಟಿ, ಗಟ್ಟಿಯಾಗಿ ಸಹಿಸಲು ಅಸಾಧ್ಯ ನೋವು ತರಬಹುದು. ಇವೆಲ್ಲ ಮಕ್ಕಳಿಂದ ದೊಡ್ಡವರವರೆಗೆ ಯಾರಲ್ಲೂ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಣಬಹುದು.
ಇದಲ್ಲದೆ, ವಯಸ್ಕರಲ್ಲಿ ಕಾಡುವಂಥ ಕಿವಿನೋವುಗಳಿರುತ್ತವೆ. ಇವು ಕೆಲವೊಮ್ಮೆ ದೀರ್ಘಕಾಲೀನ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತವೆ. ಇಂಥ ಸೋಂಕಿನ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ. ಕಿವಿ ಸೋಂಕನ್ನು ಮುಖ್ಯವಾಗಿ ಮೂರು ಭಾಗಗಳಲ್ಲಿ- ಒಳಗಿನ, ನಡುವಿನ ಮತ್ತು ಹೊರಕಿವಿಯ ಸೋಂಕು ಎಂದು ವಿಂಗಡಿಸಲಾಗುತ್ತದೆ.
ಒಳಗಿವಿಯ ಸೋಂಕು
ಒಳಗಿವಿಯಲ್ಲಿ ಸಮಸ್ಯೆಯಾದರೆ ಕಿವಿ ನೋವು ಮಾತ್ರವೇ ಅಲ್ಲ, ತಲೆ ಸುತ್ತುವುದು, ವಾಂತಿ, ವರ್ಟಿಗೊ ಅಥವಾ ಇದ್ದಕ್ಕಿದ್ದಂತೆ ಕಿವಿ ಕೇಳದಂತೆಯೂ ಆಗಬಹುದು. ಹೆಚ್ಚಿನ ಸಾರಿ ಸೋಂಕಿಗಿಂತಲೂ ಮುಖ್ಯವಾಗಿ ಒಳಗಿವಿಯ ಭಾಗಗಳಲ್ಲಿ ಉರಿಯೂತ ಇಷ್ಟೆಲ್ಲಾ ಅವಾಂತರಗಳಿಗೆ ಕಾರಣವಾಗುತ್ತದೆ. ಅಪರೂಪಕ್ಕೆ ಮೆನೆಂಜೈಟಿಸ್‌ನಂಥ ಗಂಭೀರ ಸಮಸ್ಯೆಗಳ ಸೂಚಕವೂ ಆಗಿರಬಹುದು. ಹಾಗಾಗಿ ಇದಕ್ಕೆ ವೈದ್ಯರ ಭೇಟಿಯ ಹೊರತಾಗಿ ಅನ್ಯಮಾರ್ಗವಿಲ್ಲ.
ನಡುಗಿವಿಯ ಸೋಂಕು
ಕಿವಿಯ ಪೊರೆಯ ಹಿಂಭಾಗದ ಭಾಗವೇ ಮಧ್ಯದ ಅಥವಾ ನಡುಗಿವಿ. ಕಿವಿ ಪೊರೆಯ ಹಿಂಭಾಗ ದ್ರವ ಶೇಖರಣೆ ಆದ ಸಂದರ್ಭದಲ್ಲಿ ಉಂಟಾಗುವ ಸಮಸ್ಯೆಯಿದು. ಈ ದ್ರವ ಉಂಟುಮಾಡುವ ಒತ್ತಡದಿಂದಾಗಿ ಪೊರೆ ಉಬ್ಬಿದಂತಾಗುವುದು, ಕಿವಿನೋವು, ಕಿವಿಯೊಳಗೆ ನೀರು ತುಂಬಿದಂಥ ಅನುಭವ ಉಂಟಾಗುತ್ತದೆ. ಈ ಸಂದರ್ಭದಲ್ಲಿ ಜ್ವರವೂ ಕಾಣಿಸಿಕೊಳ್ಳಬಹುದು. ಈ ಸೋಂಕು ಕಡಿಮೆಯಾಗುವವರೆಗೆ ಶ್ರವಣ ಸಾಮರ್ಥ್ಯವೂ ಕುಂಠಿತಗೊಳ್ಳಬಹುದು. ಕೆಲವೊಮ್ಮೆ ಬ್ಯಾಕ್ಟೀರಿಯಾ ಅಥವಾ ವೈರಸ್ ಸೋಂಕಿನಿಂದಲೂ ಈ ಸಮಸ್ಯೆ ಉಂಟಾಗಬಹುದು. ಅಂದರೆ, ನೆಗಡಿಯಂಥ ಸಮಸ್ಯೆಯೂ ಹೀಗೆ ದ್ರವ ಶೇಖರಿಸಿಕೊಳ್ಳಲು ಕಾರಣವಾಗಬಹುದು. ಈ ಸಮಸ್ಯೆ ಅಲ್ಪಕಾಲದಲ್ಲಿ ತನ್ನಷ್ಟಕ್ಕೇ ಕಡಿಮೆಯಾಗದಿದ್ದರೆ, ವೈದ್ಯೋಪಚಾರ ಬೇಕಾಗಬಹುದು.
ಹೊರಕಿವಿಯ ಸೋಂಕು
ಕಿವಿ ಪೊರೆಯಿಂದ ಹೊರಗೆ ಚಾಚಿಕೊಂಡಿರುವ ಭಾಗವೆಲ್ಲಾ ಹೊರಕಿವಿ. ಮೊದಲಿಗೆ ತುರಿಕೆ ಮತ್ತು ಗುಳ್ಳೆಗಳಂತೆ ಆರಂಭವಾಗುವ ಸೋಂಕು ನಂತರ ಕೆಂಪಾಗಿ ಊದಿಕೊಂಡು ನೋವು ನೋಡಬಹುದು. ಕೆಲವೊಮ್ಮೆ ಕಿವಿಯೊಳಗೆ ನೀರು ಅಥವಾ ತೇವಾಂಶ ಸೇರಿದಾಗ ಬ್ಯಾಕ್ಟೀರಿಯ ಅಥವಾ ಶಿಲೀಂಧ್ರಗಳ ಬೆಳವಣಿಗೆಗೆ ಕಾರಣವಾಗುತ್ತದೆ. ಯಾವುದಾದರೂ ವಸ್ತುವನ್ನು ಕಿವಿಯೊಳಗೆ ಹಾಕಿ ಉಜ್ಜಿದಾಗಲೂ ಇಂಥ ಸಮಸ್ಯೆ ಉದ್ಭವಿಸಬಹುದು. ಮೊದಲಿಗೆ ಸಣ್ಣ ಗಾಯವಾಗಿ, ಅದೇ ವ್ರಣವಾಗಬಹುದು. ಹಾಗಾಗಿ ಯಾವುದೇ ವಸ್ತುಗಳನ್ನು ಕಿವಿಯೊಳಗೆ ಹಾಕುವುದು ಸಲ್ಲದು. ನೆಗಡಿಯಂಥ ಸೋಂಕುಗಳೂ ಕಿವಿನೋವಿಗೆ ಕಾರಣವಾಗಬಹುದು.
ಕಿವಿನೋವಿಗೆ ಕಾರಣ ಯಾವುದೇ ಇರಲಿ, ಮನೆಮದ್ದು ಪ್ರಯತ್ನಿಸುವುದು ಶ್ರವಣೇಂದ್ರಿಯಕ್ಕೆ ಅಪಾಯಕಾರಿಯಾಗಿಯೂ ಪರಿಣಮಿಸಬಹುದು. ಅದರಲ್ಲೂ ಮಕ್ಕಳನ್ನು ಪ್ರಯೋಗಕ್ಕೆ ಒಡ್ಡಲೇಬಾರದು. ಕಿವಿನೋವಿನ ಕಾರಣ ನಿರ್ಧರಿಸಿ ಚಿಕಿತ್ಸೆ ನೀಡುವುದಕ್ಕೆ ವೈದ್ಯರು ಮಾತ್ರವೇ ಸಮರ್ಥರು. ಆದರೆ ಅಲರ್ಜಿಗಳನ್ನು ನಿಯಂತ್ರಿಸಿಕೊಳ್ಳುವುದು, ಕಿವಿಗಳನ್ನು ಮುಚ್ಚಿ ಬೆಚ್ಚಗಿರಿಸಿಕೊಳ್ಳುವುದು, ಕುಗ್ಗೆ ಕಟ್ಟದಂತೆ ಸ್ವಚ್ಛತೆ ಕಾಪಾಡುವುದು, ಹ್ಯುಮಿಡಿಫಯರ್ ಉಪಯೋಗಿಸುವುದು, ಚೆನ್ನಾಗಿ ನೀರು ಕುಡಿಯುವುದು- ಇವೆಲ್ಲ ಯಾರೂ ಮಾಡಬಹುದಾಗಿದ್ದು. ಈ ಕೆಲವು ಉಪಕ್ರಮಗಳು ಚಳಿಯಲ್ಲಿ ಕಿವಿನೋವಿನಿಂದ ಕೊಂಚ ಮುಕ್ತಿ ನೀಡಬಹುದು.
ಇದನ್ನೂ ಓದಿ: Food Beneficial For Eye Health: ಕಣ್ಣಿನ ಆರೋಗ್ಯಕ್ಕೆ ಯಾವ ಆಹಾರಗಳು ಬೇಕು?