ಮಹಿಳೆಯರಿಗೆ ಮೊದಲ ನಾಲ್ಕು ವಾರಗಳ ನಂತರ ಆರಂಭವಾಗುವ ಸೂಚನೆಗಳನ್ನು ಅನುಸರಿಸಿ ಗರ್ಭಿಣಿ ಹೌದೊ ಅಲ್ಲವೊ ಎಂಬುದನ್ನು ಹೇಳುವುದು ಕ್ರಮ. ಜೊತೆಗೆ ಗರ್ಭ ಕಟ್ಟಿದೆಯೇ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕೆ ಮನೆಯಲ್ಲೇ ಉಪಯೋಗಿಸಬಹುದಾದ ಟೆಸ್ಟಿಂಗ್ ಕಿಟ್‌ಗಳು ಸುಲಭವಾಗಿ ಲಭ್ಯವಿದೆ. ಆದರೆ ಟೆಸ್ಟಿಂಗ್, ಸ್ಕ್ಯಾನಿಂಗ್ ಮುಂತಾದವುಗಳಿಗೂ ಮುನ್ನ, ಗರ್ಭಿಣಿಯಾಗಿರುವ ಸೂಚನೆಯನ್ನು ದೇಹ ನೀಡುತ್ತದಲ್ಲ (early signs of pregnancy), ಏನದು? ಯಾವುದದು?
ಗರ್ಭಾವಸ್ಥೆಗೆ ಎಲ್ಲರ ದೇಹಗಳೂ ಒಂದೇ ರೀತಿಯಲ್ಲಿ ಸ್ಪಂದಿಸುವುದಿಲ್ಲ. ಕೆಲವರಿಗೆ ಮೂರು ಅಥವಾ ನಾಲ್ಕನೇ ವಾರದಲ್ಲೇ ಗರ್ಭಿಣಿಯಾಗಿರುವ (early signs of pregnancy) ಸೂಚನೆಗಳು ಪ್ರಾರಂಭವಾದರೆ, ಕೆಲವರಿಗೆ ಏಳೆಂಟು ವಾರಗಳವರೆಗೆ ಏನೂ ತೋರುವುದಿಲ್ಲ. ಒಂದೇ ವ್ಯಕ್ತಿಗೆ ಒಂದು ಮಗುವಿನಲ್ಲಿ ಇದ್ದಂತೆ ಇನ್ನೊಂದು ಮಗುವಿನಲ್ಲಿ ಇಲ್ಲದೆ ಹೋಗಬಹುದು. ಹಾಗಾಗಿ ಈ ಸೂಚನೆಗಳಿಂದ ಮುಂದುವರಿದು ಗರ್ಭಿಣಿಯಾಗಿರುವುದನ್ನು ಖಾತ್ರಿ ಪಡಿಸಿಕೊಳ್ಳುವುದಕ್ಕೆ ಟೆಸ್ಟಿಂಗ್ ಮಾಡಲೇಬೇಕಾಗುತ್ತದೆ.
ಎಲ್ಲಕ್ಕಿಂತ ಮೊದಲ ನಿಖರ ಸೂಚನೆಯೆಂದರೆ ಮುಟ್ಟು ಬಾರದಿರುವುದು. ಆದರೆ ಸದಾ ಕಾಲ ಮುಟ್ಟು ಮುಂದೂಡುತ್ತಲೇ ಇರುವವರಲ್ಲಿ ಇದೇನು ಹೊಸದೆನಿಸುವುದಿಲ್ಲ. ಹಾಗಾಗಿ ಉಳಿದ ಸೂಚನೆಗಳನ್ನು ಅನುಸರಿಸಬೇಕಾಗುತ್ತದೆ. ದೇಹದಲ್ಲಿ ಈಸ್ಟ್ರೊಜೆನ್ ಮತ್ತು ಪ್ರೊಜೆಸ್ಟಿರಾನ್ ಚೋದಕಗಳ ಮಟ್ಟ ಏರುತ್ತಿದ್ದಂತೆ ಹಲವು ಬದಲಾವಣೆಗಳು ಗೋಚರಿಸುತ್ತವೆ. ನಾಲ್ಕು ವಾರಗಳಿಗೆ ಮುನ್ನವೇ ಹೊಟ್ಟೆಯಲ್ಲಿ ನೋವು, ಸ್ಪಾಟಿಂಗ್ ಕಾಣಬಹುದು ಕೆಲವರಲ್ಲಿ. ಬಹುಶಃ ಎಲ್ಲಕ್ಕಿಂತ ಮೊದಲ ಸೂಚನೆಗಳಿವು. ಆದರೆ ಎಲ್ಲರಲ್ಲೂ ಇದು ಕಾಣಬೇಕೆಂದಿಲ್ಲ.
ಆಗಾಗ ಬಾತ್‌ರೂಂ ಭೇಟಿ ಅನಿವಾರ್ಯವಾಗುತ್ತದೆ. ಸ್ತನಗಳಲ್ಲಿ ಬದಲಾವಣೆ ನಿಚ್ಚಳವಾಗುತ್ತದೆ. ಅಷ್ಟಾಗಿಯೂ ಗರ್ಭಿಣಿ ಹೌದೇ ಎಂಬುದನ್ನು ಖಾತ್ರಿ ಮಾಡಲು ಕಷ್ಟ. ಕಾರಣ ಸ್ತನಗಳಲ್ಲಿ ಕಾಣುವ ಬದಲಾವಣೆಗಳು ಎಷ್ಟೋ ಮಂದಿಗೆ ಮುಟ್ಟಿನ ದಿನಗಳಿಗೆ ಮೊದಲಿನ ಪಿಎಂಎಸ್ ಸ್ಥಿತಿಯಲ್ಲೂ ಆಗಬಹುದು. ನಾಲ್ಕರಿಂದ ಆರನೇ ವಾರದ ಅವಧಿಯಲ್ಲಿ ಬೆಳಗಿನ ಹೊತ್ತು ಓಕರಿಕೆ, ವಾಂತಿ, ತಲೆ ಸುತ್ತುವುದು, ಹೊಟ್ಟೆ ಉಬ್ಬರ, ಹಸಿವಿಲ್ಲದಿರುವುದು ಮುಂತಾದ ಸೂಚನೆಗಳು ಕಾಣಬಹುದು. ಇವು ಬೆಳಗಿನ ಹೊತ್ತೇ ಕಾಣಬೇಕೆಂದಿಲ್ಲ. ಸಂಜೆಯ ಹೊತ್ತೂ ಇರಬಹುದು. ಕೆಲವರಿಗೆ ದಿನವಿಡೀ ಕಾಡಬಹುದು. ಮೊದಲ ಮೂರು ತಿಂಗಳಿಗೆ ಈ ತಾಪತ್ರಯಗಳು ಹೋಗುವುದು ಸಾಮಾನ್ಯವಾದರೂ, ಹೋಗಲೇಬೇಕೆಂದೇನಿಲ್ಲ. ಇನ್ನೂ ಕೆಲವು ತಿಂಗಳು ಹೊಟ್ಟೆ ತೊಳೆಸುವ ಮತ್ತು ವಾಂತಿಯಾಗುವ ಅವಸ್ಥೆಗಳು ಮುಂದುವರಿಯಬಹುದು.
ಇವೆಲ್ಲವುಗಳೊಂದಿಗೆ ಸುಸ್ತು-ಆಯಾಸ ಜೊತೆಗೂಡುತ್ತವೆ. ದೇಹದಲ್ಲಿ ಪ್ರೊಜೆಸ್ಟಿರಾನ್ ಮಟ್ಟ ಹೆಚ್ಚಿದ್ದು ಇದಕ್ಕೆ ಒಂದು ಕಾರಣವಾದರೆ, ಊಟ ಸೇರದೆ ತಿಂದಿದ್ದೂ ಹೊಟ್ಟೆಯಲ್ಲಿ ನಿಲ್ಲದೆ ಇರುವುದು ಇನ್ನೊಂದು ಕಾರಣ. ಈ ಹಂತದಲ್ಲಿ ಸಾಕಷ್ಟು ದ್ರವಾಹಾರ ಸೇವನೆ ಮತ್ತು ವಿಶ್ರಾಂತಿ ಅಗತ್ಯ. ಹಾರ್ಮೋನುಗಳ ವ್ಯತ್ಯಾಸದಿಂದ ಜೀರ್ಣಾಂಗಗಳ ಕೆಲಸವೂ ಏರುಪೇರಾಗಿ ಹೊಟ್ಟೆಯುಬ್ಬರ, ಮಲಬದ್ಧತೆ ಕಾಡಬಹುದು. ಜೊತೆಗೆ, ದೊಡ್ಡದಾಗುತ್ತಿರುವ ಗರ್ಭಾಶಯದಿಂದಾಗಿ ಮೂತ್ರಪಿಂಡಗಳ ಮೇಲೆ ಒತ್ತಡ ಬೀಳುವುದರಿಂದ ಆಗಾಗ ಮೂತ್ರಶಂಕೆಯೂ ಇರುತ್ತದೆ.
ಕೆಲವು ವಾಸನೆಗಳು ತ್ರಾಸು ಹೆಚ್ಚಿಸುವುದು ಇದೇ ದಿನಗಳಲ್ಲಿ. ಇದರಿಂದಾಗಿ ಊಟ ಸೇರುವುದು ಇನ್ನಷ್ಟು ಕಷ್ಟವಾಗುತ್ತದೆ. ಕೆಲವರಿಗೆ ಯಾವ್ಯಾವುದೋ ಆಹಾರಗಳನ್ನು ಮೆಲುವ ಬಯಕೆ ಕಾಡಬಹುದು. ಎದೆ ಉರಿ, ಅಜೀರ್ಣ, ಆಸಿಡಿಟಿಯ ಲಕ್ಷಣಗಳು ತೀವ್ರವಾದರೆ ಅಹಾರವನ್ನು ಒಮ್ಮೆಲೆ ಸೇವಿಸದೆ, ಕಂತುಗಳನ್ನು ಸೇವಿಸಬಹುದು. ಇದರಿಂದ ಜೀರ್ಣಾಂಗಗಳ ಮೇಲಿನ ಒತ್ತಡ ತಗ್ಗುತ್ತದೆ. ಊಟದ ನಂತರ ಸಣ್ಣದೊಂದು ವಾಕಿಂಗ್ ಹಿತವಾಗುತ್ತದೆ. ಆಹಾರ ಸೇವಿಸಿದ ತಕ್ಷಣ ಮಲಗುವುದು ಖಂಡಿತ ಒಳ್ಳೆಯದಲ್ಲ. ಇದರಿಂದ ಎದೆ ಉರಿ ಹೆಚ್ಚುವ ಸಾಧ್ಯತೆಯಿದೆ. ಹಾಗೂ ಆಸಿಡಿಟಿ ಕಡಿಮೆ ಆಗದಿದ್ದರೆ, ಅಂಗಡಿಯಲ್ಲಿ ಸಿಕ್ಕಿದ ಆಂಟಾಸಿಡ್ ಖಂಡಿತ ನುಂಗುವುದಲ್ಲ. ವೈದ್ಯರಲ್ಲಿ ಕೇಳಲೇಬೇಕು.
ರಕ್ತದೊತ್ತಡ ಏರುಪೇರಾಗುವ ಸಾಧ್ಯತೆಗಳು ಕೆಲವರಿಗೆ ಕಾಣುತ್ತವೆ. ಈ ಹಂತದಲ್ಲಿ ದೇಹಕ್ಕೆ ನೀರು ಚೆನ್ನಾಗಿ ಬೇಕು. ಸುಸ್ತು, ಆಯಾಸ ಹೆಚ್ಚಾಗದಂತೆ ವಿಶ್ರಾಂತಿಯೂ ಅಗತ್ಯ. ತಲೆನೋವು, ಬೆನ್ನುನೋವಿನ ತೊಂದರೆ ಆರಂಭವಾದರೆ ಅಚ್ಚರಿಯಿಲ್ಲ. ಮೊದಲ ಮೂರು ತಿಂಗಳಲ್ಲಿ ಗರ್ಭಿಣಿಯ ಮೂಡ್ ಬದಲಾವಣೆ ಆಗುತ್ತಿರುವುದು ಸಹ ಸಾಮಾನ್ಯ ಸಂಗತಿಯೇ. ಈ ಎಲ್ಲಾ ಲಕ್ಷಣಗಳು ಕಾಣಬೇಕೆಂದಿಲ್ಲ. ಇವುಗಳಲ್ಲಿ ಕೆಲವು ಕಾಣಬಹುದು, ಬಹಳಷ್ಟು ಕಾಣಬಹುದು ಅಥವಾ ಹೆಚ್ಚಿನದ್ದು ಕಾಣದೆಯೇ ಇರಬಹುದು.
ಈವರೆಗೆ ಹೇಳಿದ್ದೆಲ್ಲಾ ಬರೀ ಸಂಕಷ್ಟಗಳೇ ಆದವು, ಎಂದರೆ ಹಾಗೇನಿಲ್ಲ. ಹೆಚ್ಚುವ ಹಾರ್ಮೋನುಗಳಿಂದಾಗಿ ರಕ್ತ ಸಂಚಾರವೂ ಹೆಚ್ಚುತ್ತದೆ. ಇದರಿಂದ ದೇಹದ ತೈಲಗ್ರಂಥಿಗಳು ಹೆಚ್ಚು ಕೆಲಸ ಮಾಡುತ್ತವೆ. ಇದರಿಂದ ಕೆಲವರಿಗೆ ಮೊಡವೆ ಬರಬಹುದು. ಆದರೆ ಹೆಚ್ಚಿನವರಿಗೆ ಮುಖದ ಚರ್ಮ ಕಾಂತಿಯುಕ್ತವಾಗಿ, ತಿಳಿ ಗುಲಾಬಿ ಬಣ್ಣಕ್ಕೆ ತಿರುಗುತ್ತದೆ. ಯಾವುದೇ ಜಾದೂ ಕ್ರೀಮುಗಳಿಲ್ಲದೆಯೂ, ಜಾಹೀರಾತುಗಳಲ್ಲಿ ತೋರಿಸಿದಂತೆ ಸುಂದರವಾಗಿ ತ್ವಚೆ ನಳನಳಿಸುತ್ತದೆ.
ಮುಂದಿನ ಪ್ರಶ್ನೆಯೆಂದರೆ, ಪ್ರೆಗ್ನೆನ್ಸಿ ಟೆಸ್ಟಿಂಗ್ ಯಾವಾಗ ಮಾಡಬೇಕು ಎಂಬುದು. ಹಿಂದಿನ ಋತುಚಕ್ರದ ದಿನದಿಂದ ಐದು ವಾರಗಳ ನಂತರ ಪರೀಕ್ಷೆ ಮಾಡಿಕೊಳ್ಳಬಹುದು. ತೀರಾ ಮೊದಲೇ ಮಾಡಿದರೆ ಸರಿಯಾದ ಫಲಿತಾಂಶ ಬಾರದೆ ಇರಬಹುದು. ಹಾಗಾಗಿ ಐದು ವಾರಗಳ ನಂತರ ಮಾಡುವುದು ಒಳಿತು.
FAQ
ಗರ್ಭಾವಸ್ಥೆಯ ಸೂಚನೆಗಳು ಯಾವಾಗ ಕಾಣುತ್ತವೆ?
ಕೆಲವರಿಗೆ ಮೂರು ಅಥವಾ ನಾಲ್ಕನೇ ವಾರಗಳಿಗೇ ಕಾಣಬಹುದು. ಹೆಚ್ಚಾಗಿ ಐದಾರನೇ ವಾರಗಳಿಗೆ ಕಾಣುವುದು ಸಾಮಾನ್ಯ. ಏಳೆಂಟನೇ ವಾರಗಳ ನಂತರ ಈ ಸೂಚನೆಗಳು ಪ್ರಾರಂಭವಾಗುವುದೂ ಇದೆ.
ಮನೆಯಲ್ಲೇ ಟೆಸ್ಟಿಂಗ್ ಮಾಡಬಹುದೇ?
ಖಂಡಿತ. ಫಾರ್ಮಸಿಗಳಲ್ಲಿ ದೊರೆಯುವ ಯಾವುದಾದರೂ ಒಳ್ಳೆಯ ಬ್ರಾಂಡ್ ಕಿಟ್ ತರಬಹುದು. ಇವುಗಳು ಶೇ. 99ರಷ್ಟು ಸರಿಯುತ್ತರ ನೀಡುತ್ತವೆ. ಇದರಲ್ಲಿ ಖಾತ್ರಿಯಾದ ಮೇಲೆ ವೈದ್ಯರಲ್ಲಿ ಹೋಗುವುದು ಉತ್ತಮ
ಇದನ್ನೂ ಓದಿ: Green Tea Benefits: 9 Health Benefits Of Green Tea