Site icon Vistara News

Early Symptoms Of Menopause: ದೇಹದಲ್ಲಿ ಈ ಲಕ್ಷಣಗಳು ಕಾಣಿಸಿದರೆ ಋತುಚಕ್ರ ಸದ್ಯದಲ್ಲೇ ನಿಲ್ಲುತ್ತದೆ ಎಂದರ್ಥ

Early Symptoms Of Menopause

ಬದಲಾವಣೆಗಳಿಗೆ ಹೊಂದಿಕೊಳ್ಳುವುದು (Early Symptoms Of Menopause) ಸುಲಭ ಎಂದು ಭಾವಿಸುವಂತಿಲ್ಲ. ಧನಾತ್ಮಕ ಬದಲಾವಣೆ ಆಗಿದ್ದರೆ ಬೇಗ ಹೊಂದಿಕೊಳ್ಳುತ್ತೇವೆ. ನಮಗಿಷ್ಟವಿಲ್ಲದ ಬದಲಾವಣೆಯಾದರೆ ಕಡ್ಡಿಯೂ ಗುಡ್ಡದಂತೆ ಕಾಣುತ್ತದೆ. ಮಹಿಳೆಯರ ಫಲವಂತಿಕೆಯ ದಿನಗಳು ಮುಗಿಯುವ ಸೂಚನೆಯಾಗಿ ಎದುರಾಗುವ ರಜೋನಿವೃತ್ತಿಯ ದಿನಗಳ ಬಗೆಗೂ ಇದನ್ನು ಅನ್ವಯಿಸಬಹುದು. ದೈಹಿಕ, ಮಾನಸಿಕ ಮತ್ತು ಭಾವನಾತ್ಮಕ ಬದಲಾವಣೆಗಳು ಒಟ್ಟಿಗೆ ಎದುರಾದರೆ, ಅವುಗಳನ್ನು ಎದುರಿಸುವುದು ಕಷ್ಟ ಎನಿಸಬಹುದು. ಆದರೆ ಅರಿವೇ ಗುರು ಎಂಬಂತೆ, ಈ ಬದಲಾವಣೆಗಳ ಬಗ್ಗೆ ಸರಿಯಾದ ಮಾಹಿತಿ ಇದ್ದಲ್ಲಿ, ಇದನ್ನು ನಿಭಾಯಿಸುವಲ್ಲಿನ ತೊಡಕು ಕಡಿಮೆಯಾಗಬಹುದು. ಹಾಗಾಗಿ ಋತುಬಂಧದ ದಿನಗಳ ಆರಂಭಿಕ ಲಕ್ಷಣಗಳನ್ನು ತಿಳಿದುಕೊಳ್ಳಿ.

ಮೂಡ್‌ ಬದಲಾವಣೆ

ಸಾಮಾನ್ಯವಾಗಿ 40ರಿಂದ 50ರ ನಡುವೆ ಯಾವಾಗಲಾದರೂ ಈ ಲಕ್ಷಣಗಳು ಪ್ರಾರಂಭವಾಗಬಹುದು. ಈಸ್ಟ್ರೋಜೆನ್‌ ಮತ್ತು ಪ್ರೊಜೆಸ್ಟಿರಾನ್‌ ಚೋದಕಗಳ ಮಟ್ಟದಲ್ಲಿ ಆಗುವ ಏರಿಳಿತದಿಂದಾಗಿ ಮಾನಸಿನ ತುಮುಲಗಳು, ಮೂಡ್‌ ಬದಲಾವಣೆ, ಕೋಪ, ಆತಂಕ, ಖಿನ್ನತೆಯಂಥ ಭಾವನೆಗಳು ಆವರಿಸುತ್ತವೆ. ಹಾರ್ಮೋನುಗಳ ಬದಲಾವಣೆ ಎನ್ನುವುದು ದೇಹದ ಮೇಲೆ ಬಹಳಷ್ಟು ರೀತಿಯಲ್ಲಿ ಪರಿಣಾಮ ಬೀರಬಲ್ಲದು.

ಅನಿಯಮಿತ ಋತುಸ್ರಾವ

ಮಾಸಿನ ಸ್ರಾವದ ಮೇಲೆ ಇದು ನಿಶ್ಚಿತವಾಗಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಅತಿಯಾದ ಸ್ರಾವದಿಂದ ಹೈರಾಣಾದರೆ ಕೆಲವೊಮ್ಮೆ ಅತ್ಯಲ್ಪವೇ ಆಗಬಹುದು. ಅಂತೂ ಈ ದಿನಗಳು ಅದಷ್ಟೂ ವರ್ಷಗಳು ಇದ್ದಂತೆ ಸಾಮಾನ್ಯವಾಗಿ ಇರುವುದಿಲ್ಲ. ಆದರೆ ಒಂದು ತಿಂಗಳು ತಪ್ಪಿತು ಎಂದಾದರೆ ಅದು ಋತುಬಂಧದ ಕಾರಣಕ್ಕೇ ಎಂಬ ತೀರ್ಮಾನಕ್ಕೆ ಬರುವುದಲ್ಲ. ಗರ್ಭಾವಸ್ಥೆಗೂ ಇರಬಹುದು. ಹಾಗಾಗಿ ವೈದ್ಯರನ್ನು ನೋಡುವುದು ಸೂಕ್ತ.

ಬೆವರುವುದು

ಮೈಮೇಲೆಲ್ಲ ಬಿಸಿನೀರು ಚೆಲ್ಲಿದ್ದಂತೆ, ಇದ್ದಕ್ಕಿದ್ದ ಹಾಗೆ ಮುಖ-ಮೈಯೆಲ್ಲ ಕೆಂಪಾಗಿ ಬಿಸಿಯಾದ ಅನುಭವ. ಬೆವರಿಳಿದು ತೊಟ್ಟ ವಸ್ತ್ರಗಳೂ ಒದ್ದೆಯಾಗಬಹುದು. ಇವೆಲ್ಲ ಪ್ರಾರಂಭವಾದರೆ ಋತುಬಂಧ ಹತ್ತಿರವಿದೆ ಎಂದು ಅರ್ಥ ಮಾಡಿಕೊಳ್ಳಬಹುದು. ಕೆಲವೇ ಸೆಂಕೆಂಡುಗಳಿಂದ ಹಿಡಿದು ಕೆಲವು ನಿಮಿಷಗಳವರೆಗೂ ಈ ಬಿಸಿ-ಬೆವರಿನ ಅನುಭವ ಇರಬಹುದು.

ನಿದ್ದೆ ವ್ಯತ್ಯಾಸ

ದೇಹದ ಕೆಲವು ಕ್ರಿಯೆಗಳಲ್ಲಿ ವ್ಯತ್ಯಾಸ ಆಗಬಹುದು. ಹಾರ್ಮೋನುಗಳ ಕೆಲಸ ಸುಸೂತ್ರವಾಗಿದ್ದರೆ ಇಡೀ ದೇಹ ಕ್ಷೇಮವಾಗಿ ಇರಬಲ್ಲದು. ಹೀಗೆ ಏರುಪೇರಾಗುವ ಅಂಶಗಳಲ್ಲಿ ನಿದ್ದೆಯೂ ಒಂದು. ಮೈಯೆಲ್ಲ ಬಿಸಿಯಾಗಿ ಬೆವರುತ್ತಿದ್ದರಂತೂ ಎಂಥಾ ಚಳಿಗಾಲವೂ ಲೆಕ್ಕಕ್ಕೆ ಸಿಗುವುದಿಲ್ಲ. ರಾತ್ರಿ ಮಲಗಿದರೆ ನಿದ್ದೆಯೂ ಮಾಯವಾಗಿ, ಹಗಲಿನ ಸುಸ್ತು, ಆಯಾಸ ಹೆಚ್ಚಿಸುತ್ತದೆ.

ಶುಷ್ಕತೆ

ಈಸ್ಟ್ರೋಜೆನ್‌ ಇಳಿಮುಖವಾದಂತೆ ಎಲ್ಲೆಡೆ ಶುಷ್ಕತೆ ಹೆಚ್ಚುತ್ತದೆ. ಚಳಿಗಾಲ ಇಲ್ಲದಿದ್ದರೂ ಮೈ-ಮುಖವೆಲ್ಲ ಒಣಗಿ ಬಿರಿದಂತಾಗಬಹುದು. ಮೂತ್ರನಾಳದ ಸೋಂಕಿನ ಸಾಧ್ಯತೆಗಳು ಹೆಚ್ಚಬಹುದು. ಈ ಸಮಸ್ಯೆ ಹೆಚ್ಚಾದರೆ ವೈದ್ಯರನ್ನು ಸಲಹೆಯನ್ನು ಪಡೆಯುವುದು ಅನಿವಾರ್ಯ. ಸಾಮಾನ್ಯಕ್ಕಿಂತ ಅಧಿಕ ಪ್ರಮಾಣದಲ್ಲಿ ನೀರು ಕುಡಿಯುವುದು ಈ ಲಕ್ಷಣಗಳ ನಿಯಂತ್ರಣಕ್ಕೆ ನೆರವಾಗುತ್ತದೆ.

ಬದಲಾವಣೆ

ಸ್ತನಗಳ ಗಾತ್ರದಲ್ಲಿ ಬದಲಾವಣೆ ಕಾಣಬಹುದು. ಈಸ್ಟ್ರೋಜೆನ್‌ ಕಡಿಮೆ ಆಗುತ್ತಿದ್ದಂತೆ, ಫಲವಂತಿಕೆಯ ದಿನಗಳ ಕ್ಷೀಣಿಸುತ್ತಿವೆ ಎಂಬುದನ್ನು ದೇಹ ಸ್ವಾಭಾವಿಕವಾಗಿಯೇ ಗ್ರಹಿಸುತ್ತದೆ. ಸ್ತನಗಳ ಬದಲಾವಣೆಗಳೆಲ್ಲ ದೇಹದ ಈ ತಿಳಿವಳಿಕೆಯ ಭಾಗವಾಗಿಯೇ ಆಗುವಂಥವು. ಸ್ತನಗಳಲ್ಲಿ ನೋವು ಕಂಡರೂ ಅಚ್ಚರಿಯಿಲ್ಲ. ಆದರೆ ಈ ದಿನಗಳಲ್ಲಿ ಆಗುವ ಯಾವುದೇ ಬದಲಾವಣೆಯನ್ನು ʻಸಹಜʼ ಎಂದು ಉಪೇಕ್ಷೆ ಮಾಡದೆ, ಸ್ತ್ರೀರೋಗ ತಜ್ಞರಲ್ಲಿ ಸಲಹೆ ಪಡೆಯುವುದು ಅಗತ್ಯ.

ನೋವುಗಳು

ಕೈ, ಕಾಲು, ಕೀಲುಗಳಲ್ಲೆಲ್ಲ ನೋವು ಕಾಡಬಹುದು. ಮೈಗ್ರೇನ್‌ನಿಂದ ನರಳುವವರ ಸಂಖ್ಯೆಯೂ ಅಧಿಕವೇ. ಹಾರ್ಮೋನುಗಳ ಕುಸಿತದಿಂದ ಮೂಳೆಗಳ ಸಾಂದ್ರತೆ ಕಡಿಮೆಯಾಗುವುದರಿಂದ ದೇಹದಲ್ಲಿ ಎಲ್ಲೆಂದರಲ್ಲಿ ನೋವು ಸತಾಯಿಸುತ್ತದೆ. ಇದರಿಂದಾಗಿ ಸುಸ್ತು, ಆಯಾಸ ಇನ್ನಷ್ಟು ತೀವ್ರವಾಗಬಹುದು.

ಇದನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?

ನಿಭಾಯಿಸುವುದು ಹೇಗೆ?

ಋತುಬಂಧ ಸಮೀಪಿಸಿದೆಯೇ ಎಂಬುದನ್ನು ತಿಳಿಯುವುದಕ್ಕೆ ತಜ್ಞ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳಿ. ಕೆಲವೊಮ್ಮೆ ಈ ಲಕ್ಷಣಗಳು ಒಂದೆರಡು ವರ್ಷಗಳಲ್ಲಿ ಮುಗಿಯದೆ ದೀರ್ಘಕಾಲ ತೆಗೆದುಕೊಳ್ಳಬಹುದು. ಆಗ ನಿಯಮಿತವಾಗಿ ತಪಾಸಣೆ ಅಗತ್ಯ. ಉಳಿದಂತೆ, ಆರೋಗ್ಯದ ಬಗ್ಗೆ ಕಾಳಜಿ ಮಾಡುವುದು ಆವಶ್ಯಕ. ಮನಸ್ಸಿಗೆ ಅನಿಸಿದ್ದನ್ನು ಯಾರೊಂದಿಗಾದರೂ ಹೇಳಿಕೊಳ್ಳಿ. ಹೇಳಲಾಗದಿದ್ದರೆ ನಿಯಮಿತವಾಗಿ ಡೈರಿ ಬರೆಯಿರಿ. ಸತ್ವಯುತ ಆಹಾರ ಮತ್ತು ವ್ಯಾಯಾಮಗಳನ್ನು ಎಂದಿಗೂ ತಪ್ಪಿಸಬೇಡಿ.

Exit mobile version