Site icon Vistara News

Super Food For Winter: ಪ್ರತಿರೋಧಕ ಶಕ್ತಿ ಹೆಚ್ಚಳಕ್ಕೆ ಕಿತ್ತಳೆ ಹಣ್ಣನ್ನು ತಪ್ಪದೇ ತಿನ್ನಿ

Super Food For Winter

ಕೋವಿಡ್‌ ಮತ್ತೆ ಸದ್ದು ಮಾಡುತ್ತಿದೆ. ಇಂಥ ಸಂದರ್ಭದಲ್ಲಿ ಅಗತ್ಯವಾಗಿ ಬೇಕಾದ್ದು ದೇಹದ (Super Food For Winter) ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು. ಇವೆಲ್ಲ ನಾವು ತಿನ್ನುವ ಆಹಾರಗಳಿಂದಲೇ ಬರಬೇಕು. ಇಂಥ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಹೊಳೆಯುತ್ತಾ ಪರಿಮಳ ಬೀರುತ್ತಿರುವ ಕಿತ್ತಳೆ ಹಣ್ಣುಗಳು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಮಹತ್ವದ ಕಾಣಿಕೆ ನೀಡಬಲ್ಲವು. ಚಳಿಗಾಲದ ಸೂಪರ್ಫುಡ್‌ ಎಂದೇ ಹೆಸರಾಗಿರುವ ಕಿತ್ತಳೆ ಹಣ್ಣುಗಳ ಸದ್ಗುಣಗಳನ್ನು ತಿಳಿದುಕೊಂಡರೆ, ಈ ಋತುಮಾನದಲ್ಲಿ ದೊರೆಯುವ ಹಣ್ಣನ್ನು ಖುಷಿಯಿಂದ ಮೆಲ್ಲಬಹುದು, ಆರೋಗ್ಯವನ್ನು ಗಟ್ಟಿ ಮಾಡಿಕೊಳ್ಳಬಹುದು. ಬರಬಹುದಾದ ವೈರಸ್‌ಗಳ ವಿರುದ್ಧ ತೋಳೇರಿಸಬಹುದು.

ಕಿತ್ತಳೆಯ ಗುಣಗಳು

ಫ್ಲೆವೊನಾಯ್ಡ್‌, ಕೆರೊಟಿನಾಯ್ಡ್‌ಗಳ ಗೋದಾಮಿನಂತಿವೆ ಕಿತ್ತಳೆಗಳು. ಈ ಉಪಕಾರಿ ಉತ್ಕರ್ಷಣ ನಿರೋಧಕಗಳು ದೇಹದಲ್ಲಿರುವ ಉರಿಯೂತವನ್ನು ಕಡಿಮೆ ಮಾಡುತ್ತವೆ. ಇದರಲ್ಲಿ ಸೋಡಿಯಂ ಅಂಶ ಇಲ್ಲ. ಬದಲಿಗೆ, ನಾರು ಮತ್ತು ಪೊಟಾಶಿಯಂ ಸಾಕಷ್ಟಿರುವುದರಿಂದ ಹೃದ್ರೋಗಿಗಳ ಸೇವನೆಗೆ ತಕ್ಕುದಾಗಿದೆ. ಮಾತ್ರವಲ್ಲ, ರಕ್ತದೊತ್ತಡ ಕಡಿಮೆ ಮಾಡುವಲ್ಲಿಯೂ ಈ ಅಂಶಗಳು ನೆರವು ನೀಡುತ್ತದೆ.

ವಿಟಮಿನ್‌ ಸಿ

ಪ್ರತಿದಿನ ಸೇವಿಸಬೇಕಾಗಿರುವ ವಿಟಮಿನ್‌ ಸಿ ಜೀವಸತ್ವದ ಸುಮಾರು ಶೇ.92ರಷ್ಟು ಒಂದು ದೊಡ್ಡ ಕಿತ್ತಳೆ ಹಣ್ಣಿನಲ್ಲಿ ದೊರೆಯುತ್ತದೆ. ಹಾಗಾಗಿಯೇ ಮಧುಮೇಹಿಗಳು, ಹೃದ್ರೋಗಿಗಳು ಮತ್ತು ಚಿಕಿತ್ಸೆ ಪಡೆಯುತ್ತಿರುವ ಕ್ಯಾನ್ಸರ್‌ ರೋಗಿಗಳಿಗೂ ಇದು ಪೂರಕ. ಕ್ಯಾನ್ಸರ್‌ಗೆ ಕಾರಣವಾಗುವ ಮುಕ್ತ ಕಣಗಳನ್ನು ಪ್ರತಿಬಂಧಿಸುವ ಸಾಮರ್ಥ್ಯ ಕಿತ್ತಳೆಯಲ್ಲಿರುವ ಉತ್ಕರ್ಷಣ ನಿರೋಧಕಗಳಿಗಿವೆ.

ರೋಗ ನಿರೋಧಕ ಶಕ್ತಿ

ಸಿ ಜೀವಸತ್ವ ವಿಫುಲವಾಗಿರುವ ಈ ಹಣ್ಣುಗಳ ಸೇವನೆಯಿಂದ ರೋಗನಿರೋಧಕ ಶಕ್ತಿ ವೃದ್ಧಿಸುತ್ತದೆ. ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಫ್ಲೂನಂಥ ಲಕ್ಷಣಗಳಿಂದ ಬಿಡುಗಡೆ ಪಡೆಯುವುದಕ್ಕೆ ಕಿತ್ತಳೆ ಹಣ್ಣುಗಳ ಸೇವನೆ ಒಳ್ಳೆಯ ಮಾರ್ಗ. ಬಿಳಿ ರಕ್ತಕಣಗಳ ಉತ್ಪತ್ತಿಗೆ ಪ್ರೋತ್ಸಾಹ ನೀಡುವ ಇದು, ಸೋಂಕುಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀರ್ಣಾಂಗಗಳು ಚುರುಕು

ಕಿತ್ತಳೆಯಲ್ಲಿ ನೀರು ಮತ್ತು ನಾರಿನಂಶ ವಿಫುಲವಾಗಿದ್ದು, ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ. ಇದರಿಂದ ಮಲಬದ್ಧತೆಯಂಥ ಸಮಸ್ಯೆಯನ್ನು ದೂರ ಮಾಡಬಹುದು. ಜೊತೆಗೆ, ಜೀರ್ಣಾಂಗಗಳಲ್ಲಿ ಉತ್ತಮ ಬ್ಯಾಕ್ಟೀರಿಯಗಳ ಸಂಖ್ಯೆಯನ್ನು ವೃದ್ಧಿಸಿ, ದೇಹಾರೋಗ್ಯವನ್ನೇ ಉತ್ತಮಪಡಿಸಿಕೊಳ್ಳಬಹುದು.

ಮಧುಮೇಹಿಗಳಿಗೆ ಪೂರಕ

ಮಧುಮೇಹಿಗಳೂ ಈ ಹಣ್ಣನ್ನು ಸೇವಿಸಬಹುದು ಎಂಬುದನ್ನು ಅಧ್ಯಯನಗಳಿಂದ ದೃಢಪಡಿಸಲಾಗಿದೆ. ಪ್ರತಿ ಬಾರಿ ನಾವು ಏನನ್ನೇ ತಿಂದಾಗಲೂ ರಕ್ತದಲ್ಲಿನ ನಮ್ಮ ಸಕ್ಕರೆ ಪ್ರಮಾಣ ಒಮ್ಮೆ ಏರುತ್ತದೆ. ಕೆಲ ಸಮಯದ ನಂತರ ಅದು ಕೆಳಗಿಳಿಯುತ್ತದೆ. ಆದರೆ ಈ ಪ್ರಕ್ರಿಯೆ ನಿಧಾನಕ್ಕೆ ನಡೆಯಬೇಕೇ ಹೊರತು ದಿಢೀರನೇ ಸಕ್ಕರೆಯ ಪ್ರಮಾಣ ಏರಿಳಿಯುವಂತಿಲ್ಲ. ಹಾಗಾಗಿಯೇ ಗ್ಲೈಸೆಮಿಕ್‌ ಸೂಚಿ ಕಡಿಮೆ ಇರುವಂಥ ಆಹಾರಗಳಿಗೆ ಹೆಚ್ಚಿನ ಮಹತ್ವ ಇರುವುದು. ಒಂದು ದೊಡ್ಡ ಗಾತ್ರದ ಕಿತ್ತಳೆ ಹಣ್ಣಿನ ಕ್ಯಾಲರಿ ಅಜಮಾಸು 140 ಗ್ರಾಂನಷ್ಟು. ಇದರಲ್ಲಿ ಹೇರಳವಾಗಿರುವ ನಾರಿನಂಶವು ಕಿತ್ತಳೆಯಲ್ಲಿರುವ ಸಕ್ಕರೆಯ ಅಂಶ ನಿಧಾನವಾಗಿ ರಕ್ತವನ್ನು ಸೇರುವಂತೆ ಕೆಲಸ ಮಾಡುತ್ತದೆ. ಹಾಗಾಗಿ ಮಧ್ಯಮ ಪ್ರಮಾಣದಲ್ಲಿ ಕಿತ್ತಳೆ ಹಣ್ಣುಗಳನ್ನು ಮಧುಮೇಹಿಗಳು ಸೇವಿಸಬಹುದು ಎನ್ನುತ್ತಾರೆ ತಜ್ಞರು.

ಚರ್ಮ, ಕಣ್ಣುಗಳ ಆರೋಗ್ಯ

ಸಿ, ಡಿ, ಎ ನಂಥ ಜೀವಸತ್ವಗಳು ಹೆಚ್ಚಿರುವ ಈ ಹಣ್ಣುಗಳಿಂದ ದೇಹದಲ್ಲಿ ಕೊಲಾಜಿನ್‌ ಪ್ರಮಾಣ ವೃದ್ಧಿಸುತ್ತದೆ. ಇದರಿಂದ ನೆರಿಗೆಗಳು ಕಡಿಮೆಯಾಗಿ ಚರ್ಮದ ಆರೋಗ್ಯ ಸುಧಾರಿಸುತ್ತದೆ. ವಿಟಮಿನ್‌ ಎ ವಿಫುಲವಾಗಿ ಇರುವುದರಿಂದ ಕಣ್ಣುಗಳ ಕಾರ್ನಿಯ ಆರೋಗ್ಯ ಕಾಪಾಡುವಲ್ಲಿ ಇದು ನೆರವಾಗುತ್ತದೆ. ಇದರಿಂದ ಇರುಳುಗುರುಡಿನಂಥ ಸಮಸ್ಯೆಗಳು ದೂರ ಉಳಿದು, ದೃಷ್ಟಿ ಚುರುಕಾಗುತ್ತದೆ.

ಸೇವನೆ ಹೇಗೆ?

ಈ ಹಣ್ಣನ್ನು ಪಲ್ಪ್‌ ಅಥವಾ ಜ್ಯೂಸ್‌ ಮಾಡದೆಯೇ ಇಡಿಯಾಗಿ ಸೇವಿಸುವುದು ಸರಿಯಾದ ಕ್ರಮ. ಅದರ ರಸವನ್ನಷ್ಟೇ ಸೇವಿಸಿದರೆ, ಹಣ್ಣಿನಲ್ಲಿರುವ ನಾರಿನಂಶ ದೊರೆಯದೆ ಹೋಗುತ್ತದೆ. ಹಾಗೊಮ್ಮೆ ಜ್ಯೂಸ್‌ ಮಾಡಲೇಬೇಕೆಂದಿದ್ದರೆ ಹೆಚ್ಚುವರಿ ಸಿಹಿಯನ್ನು ಸೇರಿಸಲೇಕೂಡದು. ಇದರಿಂದ ಕಿತ್ತಳೆಯ ಉತ್ತಮ ಗುಣಗಳ ಮೇಲೆ ದೃಷ್ಟಿಬೊಟ್ಟು ಇಟ್ಟಂತಾಗುತ್ತದೆ. ಉಳಿದ ಹಣ್ಣುಗಳ ಜೊತೆಗೆ ಸಾಲಡ್‌ಗಳಲ್ಲಿ ಸೇರಿಸಿಯೂ ತಿನ್ನಬಹುದು.

ಇದನ್ನೂ ಓದಿ: Health Tips for Winter: ಚಳಿಗಾಲದಲ್ಲಿ ನ್ಯುಮೋನಿಯಾ, ಶ್ವಾಸಕೋಶದ ಸಮಸ್ಯೆಗಳಿಂದ ದೂರ ಇರಲು ಹೀಗೆ ಮಾಡಿ…

Exit mobile version