Site icon Vistara News

Muskmelon Benefits: ಬೇಸಿಗೆಯಲ್ಲಿ ಕರಬೂಜದ ಹಣ್ಣನ್ನು ಭರಪೂರ ತಿನ್ನಿ!

Muskmelon Benefits

ʻಬಂತಲ್ಲ ಬೇಸಿಗೆ, ಕೆಟ್ಟ ಬಿಸಿಲುʼ ಎಂದು ಗೊಣಗುವವರಿಗೆ ಬೇಸಿಗೆಯ ಹಣ್ಣುಗಳ ಪರಿಚಯ ಇದೆಯೋ ಇಲ್ಲವೋ. ಕಲ್ಲಂಗಡಿ, ದ್ರಾಕ್ಷಿಯಿಂದ ಹಿಡಿದು ಕರಬೂಜ, ಮಾವಿನಹಣ್ಣುಗಳವರೆಗೆ, ಬಳಲುವ ಶರೀರಗಳ ದಾಹ ತಣಿಸಲೋ ಎಂಬಂತೆ ನಿಸರ್ಗವೇ ಮಾಡಿಕೊಟ್ಟ ಅನುಕೂಲವಿದು. ಕರಬೂಜಕ್ಕೆ ಮಧುಫಲ ಎಂಬ ಹೆಸರೂ ಇದೆ. ಕಲ್ಲಂಗಡಿ, ಕುಂಬಳಕಾಯಿಗಳ ಜಾತಿಗೆ ಸೇರಿದ ಈ ಹಣ್ಣು ಮೊದಲಿಗೆ ಪಶ್ಚಿಮ ಏಷ್ಯಾ ದೇಶಗಳ ಬೆಳೆಯಾಗಿದ್ದರೂ, ನಂತರದ ವರ್ಷಗಳಲ್ಲಿ ಬ್ರೆಜಿಲ್‌, ಅಮೆರಿಕಾ ಮತ್ತು ಏಷ್ಯಾದ ಹಲವಾರು ಭಾಗಗಳಿಗೆ ತನ್ನ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಭಾರತದಲ್ಲೂ ತಮಿಳುನಾಡು, ಆಂಧ್ರ, ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಇದನ್ನು ಬೆಳೆಯಲಾಗುತ್ತದೆ. ಏನಿವೆ ಇದನ್ನು ತಿನ್ನುವುದರ ಲಾಭಗಳು (Muskmelon Benefits) ಎಂಬುದನ್ನು ನೋಡೋಣ.

ಪೌಷ್ಟಿಕಾಂಶಗಳು ಏನಿವೆ?

ವಿಟಮಿನ್‌ ಸಿ ಹೆಚ್ಚಿನ ಪ್ರಮಾಣದಲ್ಲಿರುವ ಫಲವಿದು. ಬೇಸಿಗೆಯಲ್ಲಿ ದಾಳಿ ಇಡಬಹುದಾದ ರೋಗಗಳನ್ನು ದೂರ ಇರಿಸುವುದಕ್ಕೆ ಅಗತ್ಯವಾದ ರಕ್ಷಾಕವಚನ್ನು ಸಿ ಜೀವಸತ್ವ ಒದಗಿಸುತ್ತದೆ. ಜೊತೆಗೆ, ಕಣ್ಣು, ಕೂದಲು ಮತ್ತು ಚರ್ಮಗಳ ಸ್ವಾಸ್ಥ್ಯಕ್ಕೆ ಬೇಕಾದ ವಿಟಮಿನ್‌ ಎ ಸಹ ಹೇರಳವಾಗಿದೆ. ಇದರಲ್ಲಿರುವ ಗ್ಯಾಲಿಕ್‌ ಆಮ್ಲ, ಎಲಾಜಿಕ್‌ ಆಮ್ಲದಂಥ ಆಂಟಿ ಆಕ್ಸಿಡೆಂಟ್‌ಗಳು ದೇಹದಲ್ಲಿ ಕೋಶಗಳ ಹಾನಿಯನ್ನು ತಡೆದು, ಶರೀರವನ್ನು ಪುನರುಜ್ಜೀವನಗೊಳಿಸುತ್ತವೆ. ರಕ್ತನಾಳಗಳನ್ನು ಸಡಿಲಿಸಿ, ರಕ್ತ ಪರಿಚಲನೆಯನ್ನು ಚುರುಕುಗೊಳಿಸುತ್ತದೆ. ಹಾಗಾಗಿ ಬೇಸಿಗೆಯಲ್ಲಿ ಕರಬೂಜದ ಹಣ್ಣನ್ನು ಯಥಾವತ್‌ ಆಗಿ ಅಥವಾ, ಪಾನಕ, ಸಲಾಡ್‌ ಯಾವುದೇ ರೀತಿಯಲ್ಲಿ ಸೇವಿಸಲು ಯೋಗ್ಯವಾಗಿದೆ.

ಬಹೂಪಯೋಗಿ ಹಣ್ಣು

ಮಾನಸಿಕ ಒತ್ತಡವನ್ನು ಕಳೆದು ದೇಹ ಮತ್ತು ಮನಸ್ಸಿಗೆ ತಂಪೆರೆಯುವ ಸಾಮರ್ಥ್ಯ ಇದಕ್ಕಿದೆ. ಜೊತೆಗೆ, ಇದರಲ್ಲಿರುವ ಪೊಟಾಶಿಯಂನಂಥ ಖನಿಜಗಳು ನಿದ್ದೆಯನ್ನು ಉದ್ದೀಪಿಸುವ ಗುಣ ಹೊಂದಿವೆ. ಅಧಿಕ ನೀರಿನಂಶದಿಂದ ದೇಹದ ಬಳಲಿಕೆಯನ್ನೂ ದೂರ ಮಾಡಿ, ಕಣ್ತುಂಬಾ ನಿದ್ದೆ ಬರಿಸುತ್ತದೆ. ಇದರಲ್ಲಿರುವ ವಿಟಮಿನ್‌ ಎ ಅಂಶವು ದೃಷ್ಟಿಯನ್ನು ಚುರುಕುಗೊಳಿಸಿ, ಕಣ್ಣನ್ನು ಸೋಂಕುಗಳಿಂದ ರಕ್ಷಿಸುತ್ತದೆ. ಈ ಹಣ್ಣಿನ ಪ್ರಖರ ಹಳದಿ, ಕಿತ್ತಳೆ ಮತ್ತು ಕೆಂಪು ಬಣ್ಣಗಳು ಹೆಚ್ಚಿನ ಕೆರೋಟಿನಾಯ್ಡ್‌ಗಳಿರುವ ಸಂಕೇತ. ಈ ಅಂಶ ಹೆಚ್ಚಿದ್ದಷ್ಟೂ ಕಣ್ಣಿನ ಆರೋಗ್ಯಕ್ಕೆ ಉತ್ತಮ.
ಉದರ ಸಂಬಂಧೀ ಸಮಸ್ಯೆಗಳಿಗೂ ಇದು ಮದ್ದು. ಅಜೀರ್ಣದ ಸಮಸ್ಯೆಗಳನ್ನು ದೂರ ಮಾಡಿ, ಅಸಿಡಿಟಿಯನ್ನು ಹತೋಟಿಯಲ್ಲಿ ಇರಿಸುತ್ತದೆ. ಮಾತ್ರವಲ್ಲ, ನಿಯಮಿತ ಸೇವನೆಯಿಂದ ಹೊಟ್ಟೆ ಹುಣ್ಣು ಮತ್ತು ಮಲಬದ್ಧತೆಗೂ ಉಪಶಮನ ನೀಡುತ್ತದೆ. ಇದರಲ್ಲಿ ಅಧಿಕ ಪ್ರಮಾಣದಲ್ಲಿರುವ ನಾರಿನ ಅಂಶದಿಂದಾಗಿ ಸಹಜ ವಿರೇಚಕದಂತೆ ಕೆಲಸ ಮಾಡಿ, ಹೊಟ್ಟೆಯನ್ನು ಸ್ವಚ್ಛ ಮಾಡುತ್ತದೆ.

ಹೃದಯ-ಸ್ನೇಹಿ

ಇದೇ ಪೊಟಾಶಿಯಂ ಸತ್ವಗಳಿಂದಾಗಿ, ರಕ್ತದ ಒತ್ತಡ ನಿಯಂತ್ರಣಕ್ಕೆ ನೆರವು ದೊರೆಯುತ್ತದೆ ಮತ್ತು ಹೃದಯದ ಆರೋಗ್ಯ ಕಾಪಾಡುವಲ್ಲಿ ನೆರವಾಗುತ್ತದೆ. ಅದಲ್ಲದೆ, ಹೃದಯಸ್ನೇಹಿ ಎನಿಸಿಕೊಳ್ಳುವುದಕ್ಕೆ ಮತ್ತೂ ಕಾರಣಗಳಿವೆ. ಕರಬೂಜದಲ್ಲಿರುವ ಅಡೆನೋಸಿನ್‌ ಎಂಬ ಅಂಶವು ರಕ್ತ ಹೆಪ್ಪುಗಟ್ಟದಂತೆ ನೋಡಿಕೊಳ್ಳುವ ಮತ್ತು ರಕ್ತ ನೀರಾಗಿಸುವ ಗುಣವನ್ನು ಹೊಂದಿದೆ. ಹಾಗಾಗಿ ಹೃದಯಕ್ಕೆ ರಕ್ತ ಪೂರೈಕೆಯಲ್ಲಿ ತೊಂದರೆಯಾಗದಂತೆ ಕಾಪಾಡುತ್ತದೆ.
ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಕಾಡುವ ಹೊಟ್ಟೆನೋವನ್ನು ಶಮನ ಮಾಡಬಲ್ಲದು. ರಕ್ತ ನೀರಾಗುವಂತೆ ನೋಡಿಕೊಳ್ಳುವ ಗುಣದಿಂದಲೇ, ರಕ್ತಸ್ರಾವ ಸರಾಗವಾಗುವಂತೆ ಮಾಡಿ ಹೊಟ್ಟೆಯ ನೋವನ್ನು ಕಡಿಮೆ ಮಾಡುತ್ತದೆ. ಹಾಗಾಗಿ ಮುಟ್ಟಿನ ಮೊದಲ ದಿನವೇ ಕರಬೂಜ ಸೇವನೆಯನ್ನು ಪರಂಪರಾಗತ ವೈದ್ಯ ಪದ್ಧತಿಯನ್ನು ಪ್ರೋತ್ಸಾಹಿಸುತ್ತಾರೆ.

ತೂಕ ಇಳಿಕೆಗೆ

ತಿನ್ನುವುದಕ್ಕೆ ಸಿಹಿ ರುಚಿಯ ಈ ಹಣ್ಣಿನಲ್ಲಿರುವ ಕ್ಯಾಲರಿಗಳು ಕಡಿಮೆ. ನೀರಿನ ಪ್ರಮಾಣವೇ ಹೆಚ್ಚಿರುವುದರಿಂದ ತೂಕ ಇಳಿಸುವವರಿಗೆ ಒಳ್ಳೆಯ ಆಯ್ಕೆ. ಬೇಗ ಹೊಟ್ಟೆ ತುಂಬಿದ ಅನುಭವ ನೀಡಿ, ದೀರ್ಘಕಾಲದವರೆಗೆ ಹೊಟ್ಟೆ ಹಸಿವಾಗದಂತೆ ಕಾಪಾಡುತ್ತದೆ. ಹೆಚ್ಚು ನೀರಿನಂಶ ಹೊಂದಿರುವ ಇದು ಶರೀರವನ್ನು ತಂಪಾಗಿಸುವ ಗುಣವನ್ನು ಹೊಂದಿದೆ. ಜೊತೆಗೆ, ಡೈಯುರೇಟಿಕ್‌ ಸಹ ಹೌದಾಗಿದ್ದು, ಬೇಡದ ಕಶ್ಮಲಗಳನ್ನು ದೇಹದಿಂದ ಹೊರದೂಡುತ್ತದೆ. ಮೂತ್ರಪಿಂಡಗಳ ಆರೋಗ್ಯವನ್ನೂ ರಕ್ಷಿಸುತ್ತದೆ.

ಇದನ್ನೂ ಓದಿ: Healthy Breakfast: ಬೆಳಗಿನ ಉಪಾಹಾರಕ್ಕೆ ಇಡ್ಲಿ, ದೋಸೆಗಳೇ ಬೆಸ್ಟ್;‌ ಏಕೆ ಗೊತ್ತೆ?

Exit mobile version