ಮೊಟ್ಟೆ ಅತ್ಯಂತ ಪೌಷ್ಟಿಕವಾದ ಆಹಾರಗಳಲ್ಲಿ ಒಂದು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಸಾಕಷ್ಟು ಒಳ್ಳೆಯ ಪೋಷಕಾಂಶಗಳು ಇರುವ ಹಾಗೆಯೇ ಕೊಬ್ಬೂ ಇವೆ. ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ತೂಕ ಇಳಿಸುವ ಮಂದಿ, ದೇಹದಾರ್ಢ್ಯ ಬಲಪಡಿಸುವ ಮಂದಿ, ಜಿಮ್‌ಗೆ ಹೋಗಿ ವರ್ಕೌಟ್ ಮಾಡುವ ಮಂದಿ ಎಲ್ಲರಿಗೂ ಮೊಟ್ಟೆಯೇ ಆರಾಧ್ಯ ದೈವ. ಧಾವಂತದ ಬದುಕಿಗೆ ಹೇಳಿ ಮಾಡಿಸಿದ ಆಹಾರ ಇದಾದರೂ, ಮೊಟ್ಟೆಯನ್ನು ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊಟ್ಟೆ ಒಳ್ಳೆಯದೆಂದು ಕೇವಲ ಮೊಟ್ಟೆಯೊಂದನ್ನೇ ತಿಂದರೆ ಅದರಿಂದ ಖಂಡಿತ ಅಡ್ಡ ಪರಿಣಾಮಗಳೂ ಆದೀತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ಯಾಕೆಂದರೆ ಮೊಟ್ಟೆಯಲ್ಲಿ ಪ್ರೊಟೀನ್ ಇರುವಂತೆಯೇ, ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್ ಕೂಡಾ ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಮೊಟ್ಟೆ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವು (Egg Benefits) ಅತ್ಯಂತ ಅಗತ್ಯ.
ಮೊಟ್ಟೆಯಲ್ಲಿ ಏನೇನಿವೆ?
ಪ್ರೊಟೀನ್‌ನ ಜೊತೆಜೊತೆಗೇ, ಪೊಟಾಶಿಯಂ, ನಿಯಾಸಿನ್, ರೈಬೋ ಫ್ಲೇವಿನ್, ಮೆಗ್ನೀಷಿಯಂ, ಸೋಡಿಯಂ, ಫಾಸ್ಪರಸ್, ಕಬ್ಬಿಣಾಂಶ, ಝಿಂಕ್ ಮತ್ತಿತರ ಖನಿಜಾಂಶಗಳೂ, ವಿಟಮಿನ್ ಎ, ವಿಟಮಿನ್ ಡಿ, ವಿಟಮಿನ್ ಬಿ6, ಬಿ12, ಫೋಲಿಕ್ ಆಸಿಡ್, ಪ್ಯಾಂಟೋಥೆನಿಕ್ ಆಸಿಡ್, ಥೈಮೀನ್ ಇತ್ಯಾದಿಗಳೆಲ್ಲವೂ ಇವೆ. ಇವೆಲ್ಲವುಗಳ ಜೊತೆಗೆ, ಒಂದು ಮೊಟ್ಟೆಯಲ್ಲಿ 180ರಿಂದ 300 ಮಿಲಿಗ್ರಾಂಗಳಷ್ಟು ಕೊಲೆಸ್ಟೆರಾಲ್ ಇವೆ. ಇದು ಮೊಟ್ಟೆಯ ಹಳದಿ ಭಾಗವಾದ ಯೋಕ್‌ನಲ್ಲಿರುವುದರಿಂದ ಮೊಟ್ಟೆ ತಿನ್ನುವಾಗ ಇದನ್ನು ನೆನಪಿನಲ್ಲಿಟ್ಟಿರಬೇಕು. ಪ್ರತಿ ದಿನಕ್ಕೆ 300 ಎಂಜಿಗಿಂತ ಹೆಚ್ಚು ಕೊಲೆಸ್ಟೆರಾಲ್ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ತಜ್ಞರ ಲೆಕ್ಕಾಚಾರ. ಮೊಟ್ಟೆಯ ಬಿಳಿಲೋಳೆಯಲ್ಲಿ ಯಾವ ಕೊಲೆಸ್ಟೆರಾಲ್ ಕೂಡಾ ಇರುವುದರಿಂದ ಇದನ್ನು ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ಹಳದಿ ಭಾಗವನ್ನು ಸೇರಿಸಿಕೊಂಡು ನಿತ್ಯವೂ ಆಮ್ಲೆಟ್ ಮಾಡಿ ಸೇವಿಸುತ್ತಿದ್ದರೆ ಯೋಚನೆ ಮಾಡಲೇಬೇಕು. ಹೆಚ್ಚು ತಿನ್ನುವುದರಿಂದ ಕೊಲೆಸ್ಟೆರಾಲ್ ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿ, ಹೃದಯದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯವೂ ಇವೆ.
ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?
ಆರೋಗ್ಯಕರ ಆಹಾರ ಆಭ್ಯಾಸದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೊಂದು ಮೊಟ್ಟೆಯಂತೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ತಿನ್ನಬಹುದು. ಅಂದರೆ ವಾರಕ್ಕೆ ಹೆಚ್ಚೆಂದರೆ ನಾಲ್ಕು ಮೊಟ್ಟೆ ಸೇವನೆ ಆರೋಗ್ಯಕರ. ಮಕ್ಕಳು ದಿನಕ್ಕೊಂದರಂತೆ ಮೊಟ್ಟೆ ಸೇವಿಸಬಹುದು. ಹೃದ್ರೋಗ, ಅತಿಯಾದ ಕೊಲೆಸ್ಟೆರಾಲ್ ಇರುವ ಮಂದಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಆದರೆ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರ ನೀವು ತಿನ್ನುವುದಾದರೆ ಈ ಸಂಖ್ಯೆಯನ್ನು ಅನುಸರಿಸಬೇಕಾಗಿಲ್ಲ.
ಇದನ್ನೂ ಓದಿ: Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?