Site icon Vistara News

Egg Benefits: ಬೆಳಗ್ಗಿನ ಉಪಹಾರವಾಗಿ ಮೊಟ್ಟೆ ನಮ್ಮ ಹೊಟ್ಟೆಗೆ ಯಾಕೆ ಒಳ್ಳೆಯದು ಗೊತ್ತೇ?

Boiled Eggs

ಮೊಟ್ಟೆ ಬಹುತೇಕರ ಬೆಳಗ್ಗಿನ (morning breakfast) ಉಪಹಾರ. ತೂಕ ಇಳಿಸುವ ಮಂದಿಯ, ಜಿಮ್‌ನಲ್ಲಿ ವರ್ಕೌಟ್‌ ಮಾಡುವ, ಬೆಳಗ್ಗೆ ವಾಕ್‌, ಯೋಗ ಅಥವಾ ವ್ಯಾಯಾಮ ಮಾಡುವ ಮಂದಿಯ, ಗಡಿಬಿಡಿಯಲ್ಲಿ ಆಫೀಸ್‌ಗೆ ಅಥವಾ ಕಾಲೇಜ್‌ಗೆ ಹೋಗುವವರ, ಬೆಳಗ್ಗೆ ತಡವಾಗಿ ಎದ್ದ ಮೇಲೆ ಏನು ತಿಂಡಿ ಎಂದು ತಲೆಬಿಸಿ ಮಾಡಿಕೊಳ್ಳುವ, ಮಕ್ಕಳನ್ನು ಗಡಿಬಿಡಿಯಲ್ಲಿ ಶಾಲೆಗೆ ಕಳಿಸುವ ಅಮ್ಮಂದಿರ, ಬಗೆಬಗೆಯ ತಿಂಡಿ ಮಾಡಲು ಪುರುಸೊತ್ತಿಲ್ಲದಿರುವವರ, ಬ್ಯಾಚುಲರ್‌ಗಳ, ಹೀಗೆ ನಾನಾ ಬಗೆಯ ಮಂದಿಗೆ ಮೊಟ್ಟೆಯೇ ಬೆಳಗ್ಗಿನ ಆರಾಧ್ಯ ದೈವ. ಮೊಟ್ಟೆ ಒಂದು ಜೊತೆಗಿದ್ದರೆ, ಹೊಟ್ಟೆಯ ಚಿಂತೆಯಿಲ್ಲ (Egg benefits) ಎಂಬ ಭಾವ ಹಲವರದ್ದು. ಮೊಟ್ಟೆ ಬೆಳಗ್ಗಿಗೆ ಬೆಸ್ಟ್‌ ಕೂಡಾ.

ಮೊಟ್ಟೆಯಲ್ಲಿ ಪೋಷಕಾಂಶಗಳ ಮಹಾಪೂರವೇ ಇದೆ. ಹೆಚ್ಚು ಖರ್ಚಿಲ್ಲದೆ ಹೊಟ್ಟೆ ತುಂಬಿಸುವ ಆಹಾರವಿದು. ವಿಟಮಿನ್‌ ಬಿ2, ಬಿ6, ಬಿ12, ಎ, ಡಿ, ಇ, ಖನಿಜಾಂಶಗಳಾದ ಕಬ್ಬಿಣ, ಝಿಂಕ್‌, ಪಾಸ್ಪರಸ್‌, ಆಂಟಿ ಆಕ್ಸಿಡೆಂಟ್‌ಗಳೂ ಸೇರಿದಂತೆ ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮೊಟ್ಟೆಯಿಂದ ಸಾಕಷ್ಟು ಆರೋಗ್ಯದ ಲಾಭಗಳಿವೆ. ಮೊಟ್ಟೆಯನ್ನು ಬೆಳಗ್ಗಿನ ಉಪಹಾರ ತಿನ್ನುವುದರಿಂದ ಏನೆಲ್ಲ ಉಪಯೋಗಗಳಿವೆ ಎಂಬುದನ್ನು ನೋಡೋಣ ಬನ್ನಿ.

1. ಮೊಟ್ಟೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್‌ ಇದೆ. ಪ್ರೊಟೀನ್‌ ನಮ್ಮ ದೇಹಕ್ಕೆ ಬೇಕಾಗುವ ಅತ್ಯಂತ ಅವಶ್ಯಕ ಪೋಷಕಾಂಶಗಳಲ್ಲಿ ಒಂದು. ದೇಹದ ಮಾಂಸಖಂಡಗಳನ್ನು ಗಟ್ಟಿಮುಟ್ಟಾಗಿಸುವುದಕ್ಕೆ, ಶಕ್ತಿ ಸಾಮರ್ಥ್ಯ ಹೊಂದುವುದಕ್ಕೆ, ತೂಕ ಇಳಿಸುವುದಕ್ಕೆ ಪ್ರೊಟೀನ್‌ ಬೇಕೇ ಬೇಕು. ಬೆಳಗ್ಗಿನ ಹೊತ್ತು ವಾಕಿಂಗ್‌, ವ್ಯಾಯಾಮ ಅಥವಾ ಇನ್ನಾವುದೇ ದೈಹಿಕ ವ್ಯಾಯಾಮ ಮಾಡಿದ ನಂತರ ಮೊಟ್ಟೆಯನ್ನು ಸೇವಿಸುವುದರಿಂದ ಇದರ ಲಾಭಗಳನ್ನು ದೇಹ ಸರಿಯಾಗಿ ಪಡೆಯುತ್ತದೆ.

2. ನಮ್ಮ ದೇಹದ ಅಂಗಾಂಶಗಳ ಬೆಳವಣಿಗೆ, ರಿಪೇರಿ ಹಾಗೂ ಹೊಸ ಅಂಗಾಂಶಗಳ ಉತ್ಪಾದನೆಗೆ ಪ್ರಚೋದನೆಗೆ ಅತ್ಯಂತ ಅಗತ್ಯವಾದ ಒಂಭತ್ತು ಬಗೆಯ ಅಮೈನೋ ಆಸಿಡ್‌ಗಳು ಮೊಟ್ಟೆಯಲ್ಲಿದೆ. ಮೊಟ್ಟೆಯಲ್ಲಿ ಅತ್ಯಂತ ಹೆಚ್ಚು ಪ್ರೊಟೀನ್‌ ಕೂಡಾ ಇದೆ. ಪ್ರೊಟೀನ್‌ ಸಮೃದ್ಧವಾಗಿರುವ ಆಹಾರ ಸೇವನೆ ಸದೃಢ ಕಾಯಕ್ಕೆ ಅತ್ಯಂತ ಅಗತ್ಯ ಕೂಡಾ. ಅಷ್ಟೇ ಅಲ್ಲ, ಮೊಟ್ಟೆ ಬೆಳಗ್ಗೆ ಹೊಟ್ಟೆ ತುಂಬಿಸಬಲ್ಲ ಆಹಾರ. ಬೆಳಗ್ಗೆ ಮೊಟ್ಟೆ ತಿಂದರೆ ಮಧ್ಯಾಹ್ನದವರೆಗೆ ಹಸಿವಿನ ಸುಳಿವಿರುವುದಿಲ್ಲ.

3. ಮೊಟ್ಟೆಯಲ್ಲಿ ಮಿದುಳಿನ ಆರೋಗ್ಯಕ್ಕೆ ಅತ್ಯಂತ ಅಗತ್ಯವಾಗಿ ಬೇಕಿರುವ ಕೊಲೈನ್‌ ಎಂಬ ವಿಟಮಿನ್‌ ಇದೆ. ಈ ವಿಟಮಿನ್‌ ಮಿದುಳಿಗೆ ಸ್ಮರಣ ಶಕ್ತಿ ಹೆಚ್ಚಿಸುವಲ್ಲಿ ಮಾತ್ರವಲ್ಲದೆ, ಮಾನಸಿಕ ಶಕ್ತಿ ಸಾಮರ್ಥ್ಯವನ್ನು ಹೆಚ್ಚಿಸುವಲ್ಲಿ ನೆರವಾಗುತ್ತದೆ.

4. ಲುಟೈನ್‌ ಹಾಗೂ ಝಿಆಕ್ಸಾನ್ಥಿನ್‌ ಎಂಬ ಎರಡು ಬಗೆಯ ಆಂಟಿ ಆಕ್ಸಿಡೆಂಟ್‌ಗಳು ವಯಸ್ಸಾದ ಮೇಲೆ ಉಂಟಾಗುವ ಕಣ್ಣಿನ ಸಮಸ್ಯೆಗಳ ತೊಂದರೆಯನ್ನು ಕಡಿಮೆ ಮಾಡುತ್ತವೆ. ಈ ಆಂಟಿ ಆಕ್ಸಿಡೆಂಟ್‌ಗಳು ಮೊಟ್ಟೆಯಲ್ಲಿ ಇರುವುದರಿಂದ ಕಣ್ಣಿನ ಆರೋಗ್ಯಕ್ಕೂ ಮೊಟ್ಟೆ ಅತ್ಯಂತ ಒಳ್ಳೆಯದು.

5. ಇವೆಲ್ಲಕ್ಕಿಂತ ಮುಖ್ಯವಾಗಿ ಮೊಟ್ಟೆಯನ್ನು ಹಲವು ಬಗೆಯಲ್ಲಿ ಬೆಳಗ್ಗೆ ತಿನ್ನಬಹುದು. ಸುಲಭವಾಗಿ ಮಾಡಬಹುದಾದ ಮೊಟ್ಟೆಯನ್ನು ಹಾಗೆಯೇ ಬೇಯಿಸಿ ತಿನ್ನಬಹುದು. ಅಥವಾ ಆಮ್ಲೆಟ್‌, ಸ್ಕ್ರಾಂಬಲ್ಡ್‌ ಹೀಗೆ ನಾನಾ ರೂಪಗಳಲ್ಲಿ ರುಚಿಯಾಡಿ ಬಹುಬೇಗನೆ ತಯಾರಿಸಿ ಹೆಚ್ಚು ಪರಿಶ್ರಮವಿಲ್ಲದೆ ಹೊಟ್ಟೆ ತುಂಬಿಸಿಕೊಳ್ಳಬಹುದು ಎಂಬುದೇ ಎಲ್ಲಕ್ಕಿಂತ ಹೆಚ್ಚು ಲಾಭದಾಯಕವಾದುದು. ಹೀಗೆ ಮೊಟ್ಟೆ ಸಾರ್ವಕಾಲಿಕ, ಸಮಕಾಲೀನ ಸುಲಭವಾದ ಬೆಳಗ್ಗಿನ ಉಪಹಾರ ಎಂಬುದರಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ: Lips Health Tips: ನಿಮಗೆ ತಿಳಿದಿರಲಿ, ತುಟಿಯಂಚಲ್ಲಿದೆ ಆರೋಗ್ಯದ ಸೂಚನೆ!

Exit mobile version