Site icon Vistara News

Empty Stomach Foods: ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಈ ಆಹಾರಗಳನ್ನು ತಿನ್ನಬೇಡಿ!

Empty Stomach Foods

ಬೆಳಗ್ಗೆ ಎದ್ದ ಕೂಡಲೇ (Empty Stomach Foods) ಸಾಮಾನ್ಯವಾಗಿ ಒಂದು ಲೋಟ ಚಹಾ ಮಾಡಿಕೊಂಡು ಸೋಫಾದಲ್ಲಿ ಕೂತು ಪೇಪರು ಓದುತ್ತಲೋ, ಸುಮ್ಮನೆ ಬಾಲ್ಕನಿಯಲ್ಲಿ ಒಂದ್ಹತ್ತು ನಿಮಿಷ ಚಹಾ ಹಿಡಿದು ಕೂರುವ ಅಭ್ಯಾಸ ನಮ್ಮಲ್ಲಿ ಬಹುತೇಕರಿಗಿದೆ. ಬೆಳಗ್ಗೆ ಎದ್ದ ಕೂಡಲೇ ಚಹಾ ಬೇಕು, ಇಲ್ಲವಾದರೆ ಕಷ್ಟ ಎಂಬಂಥ ಅಭ್ಯಾಸವನ್ನು ಅನೇಕರು ರೂಢಿಸಿಕೊಂಡಿರುತ್ತಾರೆ. ಆದರೆ, ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬುದು ನಮಗೆ ಗೊತ್ತಿದ್ದೂ ಇದನ್ನು ಬಿಡಲು ಸಾಧ್ಯವಾಗುವುದಿಲ್ಲ. ಇರಲಿ. ಇನ್ನೂ ಅನೇಕರು, ಈ ಅಭ್ಯಾಸವನ್ನು ತ್ಯಜಿಸಿ ಅನೇಕ ಹೊಸ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತಾರೆ. ಖಾಲಿ ಹೊಟ್ಟೆಯಲ್ಲಿ ನಿಂಬೆ ಹಣ್ಣು ಹಿಂಡಿದ ಬಿಸಿ ನೀರು, ತರಕಾರಿ ಸೇವನೆ ಇತ್ಯಾದಿ ಇತ್ಯಾದಿ ಅನೇಕ ಅಭ್ಯಾಸಗಳನ್ನು ಹಲವೆಡೆ ಓದಿ ತಿಳಿದುಕೊಂಡು, ಹಲವರ ಸಲಹೆ ಕೇಳಿ, ಆರೋಗ್ಯಕ್ಕೆ ಒಳ್ಳೆಯದು ಎಂದು ತಿಳಿದು ಅಭ್ಯಾಸ ಶುರು ಮಾಡಿರುತ್ತಾರೆ. ಆದರೆ, ಎಲ್ಲವೂ ಇವು ಒಳ್ಳೆಯದೇ ಎಂದು ಹೇಳಲು ಸಾಧ್ಯವಾಗುವುದಿಲ್ಲ. ಅಥವಾ ಕೆಲವರಿಗೆ ಒಳ್ಳೆಯದು ಮಾಡಿದೆ ಎಂದಾಕ್ಷಣ ಎಲ್ಲರಿಗೂ ಒಳ್ಳೆಯದನ್ನ ಮಾಡುತ್ತದೆ ಎಂದೇನಿಲ್ಲ. ಕಾರಣ ಒಬ್ಬೊಬ್ಬರ ದೇಹ ಪ್ರಕೃತಿಯೂ ಒಂದೊಂದು ಬಗೆಯದು. ಹೀಗಾಗಿ, ಬೆಳಗ್ಗೆ ಎದ್ದ ಕೂಡಲೇ, ಕೆಲವು ಆಹಾರಗಳನ್ನು ನಾವು ಆದಷ್ಟು ದೂರವಿರಿಸಿದರೆ ಒಳ್ಳೆಯದು. ಬನ್ನಿ, ಯಾವೆಲ್ಲ ಆಹಾರವನ್ನು ನಾವು ಬೆಳಗ್ಗೆ ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ತಿನ್ನುವುದು ಅಷ್ಟು ಯೋಗ್ಯವಲ್ಲ ಎಂಬುದನ್ನು ನೋಡೋಣ.

ಸ್ಪೈಸೀ ಆಹಾರಗಳು

ಬೆಳಗ್ಗೆ ಎದ್ದ ಕೂಡಲೇ ಸ್ಪೈಸೀ ಆಹಾರದ ಸೇವನೆ ಒಳ್ಳೆಯದಲ್ಲ. ಬೆಳಗ್ಗೆ ಕಾಲಿ ಹೊಟ್ಟೆಗೆ ಉತ್ತಮ ಆರೋಗ್ಯಕರವಾದ, ದಿನವಿಡೀ ದೇಹ ಉಲ್ಲಾಸ ಪಡೆಯುವ ಆಹಾರ ನೀಡಬೇಕೇ ಹೊರತು ಬೆಳ್ಳಂಬೆಳಗ್ಗೆಯೇ ಆಲಸ್ಯತನವನ್ನು ಆವಾಹಿಸುವ ಆಹಾರವನ್ನು ತಿನ್ನಬಾರದು. ಬೆಳಗ್ಗೆ ಖಾಲಿ ಹೊಟ್ಟೆಗೆ ಸ್ಪೈಸೀಯಾದ ಮಸಾಲೆಯುಕ್ತ ಆಹಾರವನ್ನು ನೀಡಿದರೆ, ಹೊಟ್ಟೆಯ ಒಳಪದರಕ್ಕೆ ಕಿರಿಕಿರಿಯಾದ ಭಾವ ಉಂಟಾಗುತ್ತದೆ. ಹೀಗಾಗಿ, ದೇಹವನ್ನು ತಂಪಾಗಿಡುವ ಪೋಷಕಾಂಶಯುಕ್ತ, ಮಸಾಲೆಯಿಲ್ಲದ ಆಹಾರ ಸೇವಿಸಿ. ದೇಹಕ್ಕೆ ಹಿತವಾದ ಅನುಭವ ನೀಡುವ ಆಹಾರ ಒಳ್ಳೆಯದು.

ಸಿಹಿತಿನಿಸುಗಳು

ಬೆಳಗ್ಗೆ ಸಿಹಿತಿನಿಸು ತಿನ್ನುವ ಕ್ರಮ ಹಲವರ ಪದ್ಧತಿಯಲ್ಲಿದೆ. ಆದರೆ ಇದು ಒಳ್ಳೆಯದಲ್ಲ. ಇನ್ನೂ ಕೆಲವರು ಈಗ ಆಧುನಿಕ ಪಾಶ್ಚಾತ್ಯ ಶೈಲಿಯ ಅನುಕರಣೆಯಲ್ಲಿ ಪ್ಯಾನ್‌ ಕೇಕ್‌, ವ್ಯಾಫಲ್‌ಗಳನ್ನು ಸೇವಿಸುವ ಅಭ್ಯಾಸವನ್ನೂ ಆರಂಭಿಸಿದ್ದಾರೆ. ಅಷ್ಟೇ ಅಲ್ಲ, ಮಕ್ಕಳಿಗೆ ಬ್ರೆಡ್‌ ಮೇಲೆ ಒಂದಿಷ್ಟು ಜ್ಯಾಮ್‌, ಚಾಕೋಲೇಟ್‌ ಸಿರಪ್‌ಗಳನ್ನು ಸುರಿದು ತಿನ್ನಿಸುವುದೂ ಉಂಟು. ಆದರೆ ಈ ಅಭ್ಯಾಸಗಳಾವುದೂ ಹೊಟ್ಟೆಗೆ ಒಳ್ಳೆಯದಲ್ಲ ನೆನಪಿಡಿ. ಇದು ತೂಕ ಹೆಚ್ಚಿಸುವ ಜೊತೆಗೆ, ಪಿತ್ತಕೋಶದ ಮೇಲೆ ಹೆಚ್ಚಿನ ಒತ್ತಡವನ್ನು ಹಾಕುತ್ತದೆ.

ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!

ತಂಪು ಪಾನೀಯಗಳು

ಬೆಳಗ್ಗೆ ಎದ್ದು ಹಲವರು ತಂಪು ಪಾನೀಯಗಳನ್ನೂ ಸೇವಿಸುವುದೂ ಇದೆ. ಐಸ್ಡ್‌ ಟೀ, ಹಣ್ಣಿನ ಜ್ಯೂಸ್‌ಗಳು, ಪ್ಯೇಕೇಜ್ಡ್‌ ಡ್ರಿಂಕ್‌ಗಳು ಇತ್ಯಾದಿಗಳನ್ನು ಬೆಳಗ್ಗಿನ ಹೊತ್ತು ಕುಡಿಯುತ್ತಾರೆ. ತಣ್ಣಗಿನ ಇಂತಹ ಡ್ರಿಂಕ್‌ಗಳನ್ನು ಬೆಳಗ್ಗೆ ಕುಡಿಯುವುದರಿಂದ ಇದ್ದಕ್ಕಿದ್ದ ಹಾಗೆ ಶಕ್ತಿ ಬಂದಂಥ ಅನುಭವವಾದರೂ, ಇವು ಜೀರ್ಣಕ್ರಿಯೆಯನ್ನು ಕುಂಠಿತಗೊಳಿಸುತ್ತವೆ. ಅಷ್ಟೇ ಅಲ್ಲ, ಇದರಲ್ಲಿರುವ ಅಧಿಕ ಸಕ್ಕರೆಯೂ ದೇಹದ ಮೇಲೆ ಕೆಟ್ಟ ಪರಿಣಾಮವನ್ನೇ ಬೀರುತ್ತದೆ.

ಸಿಟ್ರಸ್‌ ಹಣ್ಣುಗಳು

ಬೆಳಗ್ಗೆ ಎದ್ದ ಕೂಡಲೇ ಸಿಟ್ರಸ್‌ ಹಣ್ಣುಗಳನ್ನು ಸೇವಿಸುವ ಅಭ್ಯಾಸವಿದ್ದರೆ ಬಿಡಿ. ಇವು ದೇಹದಲ್ಲಿ ಆಸಿಡ್‌ ಮಟ್ಟವನ್ನು ಏರಿಸುತ್ತದೆ. ಜೊತೆಗೆ ಜೀರ್ಣಕ್ರಿಯೆಯನ್ನೂ ಕುಂಠಿತಗೊಳಿಸುವ ಸಾಧ್ಯತೆ ಹೆಚ್ಚು.

ಹಸಿ ತರಕಾರಿಗಳು

ಹಸಿ ತರಕಾರಿಗಳು ದೇಹಾರೋಗ್ಯಕ್ಕೆ ಒಳ್ಳೆಯದು ನಿಜ. ಆದರೆ ಖಾಲಿ ಹೊಟ್ಟೆಯಲ್ಲಿ ಹಸಿ ತರಕಾರಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಇವು ಕರಗಲು ಸ್ವಲ್ಪ ಹೆಚ್ಚೇ ಸಮಯ ಬೇಕು. ಅಷ್ಟೇ ಅಲ್ಲ, ಬೆಳಗಿನ ಹೊತ್ತು ಖಾಲಿ ಹೊಟ್ಟೆಯಲ್ಲಿರುವಾಗ, ಜೀರ್ಣಾಂಗಗಳಿಗೆ ಹೆಚ್ಚಿನ ಒತ್ತಡವನ್ನು ಕೊಟ್ಟು ಕೆಲಸವನ್ನು ಮಾಡಿಸುತ್ತವೆ. ಹಾಗಾಗಿ, ಜೀರ್ಣಕ್ರಿಯೆಗೆ ಹೆಚ್ಚು ಒತ್ತಡವಾಗದಂಥ ಆಹಾರವನ್ನು ಬೆಳಗ್ಗೆ ತಿನ್ನುವುದು ಒಳ್ಳೆಯದು.

Exit mobile version