Site icon Vistara News

Energy Drinks: ಎನರ್ಜಿ ಡ್ರಿಂಕ್‌ಗಳು ಶಕ್ತಿ ನೀಡುತ್ತವೆ, ಆದರೆ…

energy drink

ಬಹಳಷ್ಟು ಮಂದಿಗೆ ಆಗಾಗ ಎನರ್ಜಿ ಡ್ರಿಂಕ್‌ಗಳನ್ನು ಹೀರುವ ಅಭ್ಯಾಸವಿರುತ್ತದೆ. ವರ್ಕೌಟ್‌ ಮಾಡುವಾಗ, ವಾಕ್‌ ಮಾಡಿ ಬಂದ ಮೇಲೆ, ಸುಸ್ತಾದಾಗ, ತಿರುಗಾಡುವಾಗ, ಪ್ರವಾಸ ಮಾಡುವಾಗ, ಸಮಾರಂಭಗಳಲ್ಲಿ, ಪಾರ್ಟಿಗಳಲ್ಲಿ ಹೀಗೆ ಇದನ್ನು ಕುಡಿಯಲು ನೂರಾರು ಕಾರಣಗಳು. ದೇಹದಲ್ಲಿ ಇದ್ದಕ್ಕಿದ್ದಂತೆ ನವಚೈತನ್ಯ ತುಂಬಿಸಲು, ದೇಹದಲ್ಲಿ ಕಡಿಮೆಯಾದ ನೀರನ್ನು ಮತ್ತೆ ತುಂಬಿಕೊಳ್ಳಲು, ಹೀಗೆ ಇದಕ್ಕೆ ನಾನಾ ಕಾರಣಗಳು ಇವೆ ಎಂಬುದು ಸತ್ಯವೇ ಆಗಿದೆ. ಜೊತೆಗೆ ಶುಗರ್‌ ಫ್ರೀ ಎಂಬ ಒಕ್ಕಣೆ ಇದ್ದರಂತೂ ಮುಗಿಯಿತು, ʻಶುಗರ್‌ ಫ್ರೀ’ ತಾನೇ, ಇದು ಉತ್ತಮ ಎಂದು ತೀರ್ಮಾನ ತೆಗೆದುಕೊಳ್ಳುವಲ್ಲಿ ಹೆಜ್ಜೆ ಮುಂದಿರಿಸುತ್ತಾರೆ.

ಇಂತಹ ಪೇಯಗಳು ವ್ಯಾಯಾಮದಿಂದ, ಕೆಲಸದಿಂದ ಕಳೆದುಕೊಂಡ ಶಕ್ತಿಯ ಮಟ್ಟವನ್ನು ಮತ್ತೆ ದಿಢೀರ್‌ ಹೆಚ್ಚಿಸಿಕೊಂಡು ಲವಲವಿಕೆಯನ್ನು ಮತ್ತೆ ಪಡೆದುಕೊಳ್ಳುತ್ತಾರೆ ಕೂಡಾ. ಇದರಲ್ಲಿ ಶಕ್ತಿ ಸಿಗುವುದು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ, ಈ ಎನರ್ಜಿ ಡ್ರಿಂಕ್‌ಗಳ ನಿಜವಾದ ಸಾಧಕ ಬಾಧಕಗಳೇನು, ಇದು ನಿಜವಾಗಿಯೂ ಎಷ್ಟು ಒಳ್ಳೆಯದು ಮಾಡುತ್ತದೆ ಹಾಗೂ ಎಷ್ಟು ನಮ್ಮ ದೇಹಕ್ಕೆ ಒಳ್ಳೆಯದಲ್ಲ ಎಂಬುದನ್ನು ತಿಳಿಯೋಣ.

ನಿಜವಾಗಿ ನೋಡಿದರೆ, ಎಲ್ಲ ಶಕ್ತಿವರ್ಧಕ ಪೇಯಗಳಲ್ಲೂ ಹೆಚ್ಚಿನ ಪ್ರಮಾಣದಲ್ಲಿರುವುದು ಕೆಫಿನ್.‌ ಇದಕ್ಕೆ ಮಿದುಳಿನ ಕೆಲಸ ಮಾಡುವ ಕ್ಷಮತೆಯನ್ನು ದಿಢೀರ್‌ ವೃದ್ಧಿಸುವ ಸಾಮರ್ಥ್ಯವಿದೆ. ಹಾಗಿದ್ದಾಗ್ಯೂ ಇದರಲ್ಲಿರುವ ಕೆಫಿನ್‌ ಪ್ರಮಾಣ, ಒಂದು ಬ್ರ್ಯಾಂಡ್‌ನ ಡ್ರಿಂಕ್‌ನಿಂದ ಇನ್ನೊಂದು ಬ್ರ್ಯಾಂಡ್‌ ಡ್ರಿಂಕ್‌ಗೆ ವ್ಯತ್ಯಾಸವಿದೆ. ಆದರೂ ಬಹುತೇಕ ಪೇಯಗಳಲ್ಲಿರುವ ಸಾಮಾನ್ಯ ವಸ್ತುಗಳು ಒಂದೇ. ಸಕ್ಕರೆ, ವಿಟಮಿನ್‌ ಬಿ, ಅಮೈನೋ ಆಸಿಡ್‌ ಇತ್ಯಾದಿಗಳು ಇರುತ್ತವೆ. ಸಕ್ಕರೆ, ಕ್ಯಾಲರಿಯ ಮುಖ್ಯ ಭಾಗವಾದ್ದರಿಂದ ಹಾಗೂ ದಿಢೀರ್‌ ಶಕ್ತಿ ನೀಡುವ ಪ್ರಮುಖ ವಸ್ತುವಾದ್ದರಿಂದ ಬಹುತೇಕ ಎಲ್ಲ ಪೇಯಗಳಲ್ಲೂ ಇರುವ ಸಾಮಾನ್ಯ ವಸ್ತುವಿದು. ಬಿ ವಿಟಮಿನ್‌ ದಿಢೀರ್‌ ಶಕ್ತಿ ನೀಡುವ ಇನ್ನೊಂದು ಅಂಶವಾದ್ದರಿಂದ ಇದು ಸಾಮಾನ್ಯವಾಗಿ ಎಲ್ಲ ಪೇಯಗಳಲ್ಲೂ ಇರುತ್ತವೆ. ಅಮೈನೋ ಆಸಿಡ್‌ನ ಡಿರೈವೇಟಿವ್‌ಗಳಾದ ಟಾರಿನ್‌ ಹಾಗೂ ಎಲ್‌ ಕಾರ್ನಿಟೈನ್‌ ಎಂಬವುಗಳೂ ಕೂಡಾ ದೇಹದಲ್ಲಿ ನೈಸರ್ಗಿಕವಾಗಿ ಉತ್ಪತ್ತಿಯಾಗುವಂಥವುಗಳು. ಇವೆಲ್ಲವೂ ಸಾಮಾನ್ಯವಾಗಿ ಎಲ್ಲ ಎನರ್ಜಿ ಪಾನೀಯಗಳಲ್ಲೂ ಇರುತ್ತವೆ.

ಇಂತಹ ಪಾನೀಯಗಳಲ್ಲಿ ಸಾಧಕಗಳೂ ಬಾಧಕಗಳೂ ಎರಡೂ ಇವೆ ಎಂಬುದನ್ನು ನಾವು ಗಮನದಲ್ಲಿಡಬೇಕು. ಇವು ದಿಡೀರ್‌ ಆಗಿ ಮಿದುಳು ಚುರುಕಾಗುವಂತೆ ಮಾಡುವುದು ನಿಜವೇ. ಇದು ಜ್ಞಾಪಕಶಕ್ತಿ, ಏಕಾಗ್ರತೆ ಪ್ರತಿಕ್ರಿಯಿಸಬಲ್ಲ ಸಮಯ ಇತ್ಯಾದಿಗಳಲ್ಲಿ ಕ್ಷಮತೆಯನ್ನು ಹೆಚ್ಚಿಸುತ್ತವೆ ಎಂಬುದು ನಿಜವೇ. ಜೊತೆಗೆ ತಲೆಸುತ್ತುವುದು, ಸುಸ್ತು ಇತ್ಯಾದಿಗಳಿಗೆ ದಿಢೀರ್‌ ಪರಿಣಾಮ ಬೀರಿ ಕಡಿಮೆಗೊಳಿಸುವುದೂ ನಿಜವೇ. ಆದರೆ, ಇದನ್ನು ಪದೇ ಪದೇ ಕುಡಿಯುವುದರಿಂದ ಸಾಕಷ್ಟು ಬಾಧಕಗಳೂ ಇವೆ ಎಂಬುದನ್ನು ನಾವು ಗಮನದಲ್ಲಿಡಬೇಕು.

ಇದನ್ನೂ ಓದಿ: Health Tips: ಹುಷಾರು! ಸಿಗರೇಟಿನ ಬೂದಿಯಿಂದಲೂ ಚರ್ಮರೋಗ ಬರಬಹುದು!

ಕೆಲವು ಸಂಶೋದನೆಗಳ ಪ್ರಕಾರ ಈ ಶಕ್ತಿವರ್ಧಕ ಪೇಯಗಳು ಹೃದಯ ಸಂಬಂಧೀ ತೊಂದರೆಗಳನ್ನೂ ತಂದೊಡ್ಡುತ್ತವೆ. ಅಧಿಕ ರಕ್ತದೊತ್ತಡದಂತಹ ತೊಂದರೆಗಳೂ ಬರುವ ಸಂಭವ ಹೆಚ್ಚು. ಇದು ತಂದೊಡ್ಡುವ ಹೃದಯ ಸಂಬಂಧೀ ತೊಂದರೆಗಳು ಇದರಲ್ಲಿರುವ ಕೆಫೀನ್‌ ಅಂಶದಿಂದಾಗಿದೆ. ಒಮ್ಮೆ ಮೂರು ಪಾನೀಯಗಳನ್ನು ಕುಡಿದರೆ, ಅಥವಾ ಆಲ್ಕೋಹಾಲ್‌ ಜೊತೆಗೆ ಬೆರೆಸಿ ಕುಡಿದರೆ, ಅಂಥವರಲ್ಲಿ ಹೃದಯ ಸಂಬಂಧೀ ಕಾಯಿಲೆ ಬರುವ ಸಂಭವ ಹೆಚ್ಚು ಎನ್ನಲಾಗಿದೆ. ಯುವಜನರಲ್ಲಿ ಇಂತಹ ಎನರ್ಜಿ ಡ್ರಿಂಕ್‌ ಕುಡಿಯುವ ಸಂಸ್ಕೃತಿ ಹೆಚ್ಚಿದ್ದು, ಅಲ್ಲದೆ, ಇದನ್ನು ಮಧ್ಯಪಾನದ ಜೊತೆಗೆ ಬೆರೆಸಿ ಕುಡಿಯುವ ಸಂಸ್ಕೃತಿಯೂ ಹೆಚ್ಚೇ ಇದೆ.

ಗರ್ಭಿಣಿಯರು, ಹಾಲುಣಿಸುವ ತಾಯಂದಿರು, ಪುಟ್ಟ ಮಕ್ಕಳು, ಹದಿಹರೆಯದ ಮಕ್ಕಳು ಇಂತಹ ಪಾನೀಯಗಳಿಂದ ದೂರವಿರುವುದು ಒಳ್ಳೆಯದು. ದಿಢೀರ್‌ ಕೊಡುವ ಶಕ್ತಿ, ತಾಜಾತನದಿಂದಾಗಿ ಇವುಗಳೆಡೆಗೆ ಆಕರ್ಷಣೆ ಸಹಜವಾದರೂ, ಉಪಯೋಗಗಳು ಇರುವುದು ನಿಜವೆನಿಸಿದರೂ, ಇಂತಹ ಪಾನೀಯಗಳಿಂದ ದೂರ ಇದ್ದಷ್ಟೂ ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನೂ ನೆನಪಿನಲ್ಲಿಡಿ. ಹಾಗಾಗಿ ಆದಷ್ಟೂ ಇಂತಹ ಕೃತಕ ಪೇಯಗಳಿಂದ ದೂರವಿದ್ದು, ನೈಸರ್ಗಿಕವಾಗಿ ದೊರೆಯುವ ಹಣ್ಣು ತರಕಾರಿಗಳ ರಸದಿಂದ ಸಿಗುವ ಶಕ್ತಿಯನ್ನೇ ಉಪಯೋಗಿಸುವುದು ಉತ್ತಮ.

ಇದನ್ನೂ ಓದಿ: Health Tips: ನಿಃಶಕ್ತಿ, ಶಕ್ತಿಹೀನತೆಯ ಬೇಸಿಗೆಗೆ ನಮಗೆ ಬೇಕು ಶಕ್ತಿವರ್ಧಕ ಆಹಾರ!

Exit mobile version