Site icon Vistara News

Energy Drinks: ಅತೀವ ಸುಸ್ತಿಗೆ ಇಲ್ಲಿವೆ ಚೈತನ್ಯದಾಯಕ ಪಾನೀಯಗಳು!

Energy Drinks

ಬಹಳಷ್ಟು ಮಂದಿ ನಾವು ಸುಸ್ತಾದಾಗ ಕಾಫಿಯೋ ಚಹಾವನ್ನೋ ಕುಡಿಯುತ್ತೇವೆ. ಕೊಂಚ ಶಕ್ತಿ ಬಂದಂತಾಗಿ ಮತ್ತೆ ನಮ್ಮ ಕೆಲಸಗಳಿಗೆ ಮರಳುತ್ತೇವೆ. ಆದರೆ, ಕಾಫಿಯೋ, ಚಹಾವೋ ಕೇವಲ ಸ್ವಲ್ಪ ಹೊತ್ತಷ್ಟೇ ನಮ್ಮನ್ನು ಚುರುಕುಗೊಳಿಸಬಲ್ಲದು. ಇದರಲ್ಲಿರುವ ಕೆಫೀನ್‌ ಅಂಶವು ನಮ್ಮನ್ನು ಕೆಲಕಾಲ ಚುರುಕಾಗಿಸಿ, ಸುಸ್ತಾಗಿ ಬರುವ ನಿದ್ದೆಯನ್ನು ದೂರ ಓಡಿಸುತ್ತದೆ ನಿಜ. ಆದರೆ, ಯಾವಾಗಲೂ ಇದೇ ಸಮಸ್ಯೆ ನಮ್ಮನ್ನು ಕಾಡಿದಾಗ ಮಾಡುವುದೇನು? ಅತಿಯಾದ ಸುಸ್ತು ಕಾಡಿದಾಗ ಕಾಫಿ ಚಹಾಗಳು ನಮ್ಮ ಸಹಾಯಕ್ಕೆ ಬರಬಹುದೇ? ಹಾಗೆ ನೋಡಿದರೆ, ಸುಸ್ತಿಗೆ ನಾವು ಪೂರಕ ಆಹಾರಗಳನ್ನು ತೆಗೆದುಕೊಂಡಿರುವುದಿಲ್ಲ. ನಮ್ಮ ಕೆಟ್ಟ ಆಹಾರ ಪದ್ಧತಿ, ಪೋಷಕಾಂಶ ರಹಿತ, ಕ್ಯಾಲರಿ ಸೇವನೆಯೇ ನಮ್ಮನ್ನು ಇಂಥ ಸುಸ್ತಿನಿಂದ ಶಾಶ್ವತ ಪರಿಹಾರ ನೀಡುವುದಿಲ್ಲ. ಹಾಗಾಗಿ ಯಾವಾಗಲೂ ಕೆಲಸದ ನಡುವೆ ಸುಸ್ತಿನಂಥ ಸಮಸ್ಯೆಯಿಂದ ಬಳಲುವ ಮಂದಿ ಪೋಷಕಾಂಶಯುಕ್ತ ಶಕ್ತಿವರ್ಧಕ ಪೇಯಗಳನ್ನು ನಿತ್ಯಾಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳಬೇಕು. ಇಂತಹ ಪೇಯಗಳು (energy drinks) ಯಾವುವು ಎಂಬುದನ್ನು ನೋಡೋಣ.

1. ಬಾಳೆಹಣ್ಣಿನ ಸ್ಮೂದಿ: ಬಾಳೆಹಣ್ಣಿನಲ್ಲಿ ಪೊಟಾಶಿಯಂ ಹಾಗೂ ಮೆಗ್ನೀಶಿಯಂ ಹೇರಳವಾಗಿದೆ. ನಾರಿನಂಶವೂ ಹೆಚ್ಚಿದೆ. ಇದು ರಕ್ತದಲ್ಲಿರುವ ಸಕ್ಕರೆಯ ಅಂಶವನ್ನು ಏರುವಂತೆ ಮಾಡಿ ಸುಸ್ತಿಗೆ ಪರಿಹಾರ ಒದಗಿಸುತ್ತದೆ. ಬೆಳಗ್ಗೆ ಒಂದು ಬಾಳೆಹಣ್ಣು ತಿನ್ನುವುದರಿಂದಲೂ ಇಂಥ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು. ಹಾಲಿನ ಜೊತೆ ಬಾಳೆಹಣ್ಣಿನ ಸ್ಮೂದಿ ಮಾಡುವುದು ಇಷ್ಟವಾಗದಿದ್ದರೆ, ಮೊಸರಿನ ಜೊತೆ ಬಾಳೆಹಣ್ಣಿನ ಲಸ್ಸಿಯಂತೆಯೂ ಮಾಡಿ ಕುಡಿಯಬಹುದು. ಬಾದಾಮಿ ಹಾಗೂ ಇತರ ಹಣ್ಣುಗಳನ್ನೂ ಇದಕ್ಕೆ ಸೇರಿಸಬಹುದು.

2. ಹರ್ಬಲ್‌ ಚಹಾ: ಮಾರುಕಟ್ಟೆಯ ಹರ್ಬಲ್‌ ಚಹಾಕ್ಕಿಂತಲೂ ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಹರ್ಬಲ್‌ ಚಹಾ ಒಳ್ಳೆಯ ರಿಲೀಫ್‌ ನೀಡುತ್ತದೆ. ಏಲಕ್ಕಿ, ಶುಂಠಿ, ಅರಿಶಿನವನ್ನು ನೀರಿಗೆ ಹಾಕಿ ಕುದಿಸುವ ಮೂಲಕ ಹರ್ಬಲ್‌ ಸಹಾ ಮಾಡಬಹುದು. ಇದರಲ್ಲಿ ಆಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿದ್ದು, ರಕ್ತ ಪರಿಚಲನೆಯನ್ನು ಇದು ಹೆಚ್ಚು ಮಾಡುತ್ತದೆ. ಸುಸ್ತಿನಿಂದ ತಲೆ ಸುತ್ತಿದಂತಾಗುವುದು ಸೇರಿದಂತೆ ಅನೇಕ ಸಮಸ್ಯೆಗಳಿಗೆ ಇದು ಒಳ್ಳೆಯ ಪೇಯ.

3. ದಾಳಿಂಬೆ ಜ್ಯೂಸ್‌: ದಾಳಿಂಬೆಯಲ್ಲಿ ವಿಟಮಿನ್‌ ಸಿ, ಕೆ ಹಾಗೂ ಇ ಹೇರಳವಾಗಿದ್ದು, ಮ್ಯಾಂಗನೀಸ್‌, ಕಬ್ಬಿಣಾಂಶ, ಫಾಸ್ಪರಸ್‌, ಪೊಟಾಶಿಯಂ ಹಾಗೂ ಝಿಂಕ್‌ನಂತಹ ಖನಿಜಾಂಶಗಳೂ ಇವೆ. ಇದು ಶಕ್ತಿಯನ್ನು ಹೆಚ್ಚಿಸುವುದಲ್ಲದೆ, ಕೊಲೆಸ್ಟೆರಾಲ್‌ ಹಾಗೂ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ದಾಳಿಂಬೆ ಜ್ಯೂಸ್‌ಗೆ ಸಕ್ಕರೆಯನು ಹಾಕದೆ ಹಾಗೇ ಮಾಡುವುದು ಒಳ್ಳೆಯದು. ಸ್ವಲ್ಪ ನಿಂಬೆಹಣ್ಣನ್ನೂ ಇದಕ್ಕೆ ಹಿಂಡಿ ಕುಡಿದರೆ ರುಚಿಯಾಗಿರುತ್ತದೆ.

4. ಚಿಯಾ ಬೀಜ ಹಾಕಿದ ಕಲ್ಲಂಗಡಿ ಹಣ್ಣಿನ ಜ್ಯೂಸ್‌: ಬೇಸಿಗೆಯಲ್ಲಿ ಧಾರಾಳವಾಗಿ ಸಿಗುವ ಕಲ್ಲಂಗಡಿ ಹಣ್ಣು, ಬೇಸಿಗೆಯ ಸುಸ್ತಿಗೆ ದಿವ್ಯೌಷಧ. ಇದರಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ಕಬ್ಬಿಣಾಂಶವೂ ಇದೆ. ದೇಹವನ್ನು ತಂಪಾಗಿಟ್ಟು, ಶಕ್ತಿವರ್ಧಿಸುವ ಪೇಯಗಳಲ್ಲಿ ಇದು ಪ್ರಮುಖವಾದದ್ದು. ಕಲ್ಲಂಗಡಿ ಜ್ಯೂಸಿಗೆ ಅರ್ಧಗಂಟೆ ಮೊದಲು ನೆನೆ ಹಾಕಿದ ಚಿಯಾ ಬೀಜಗಳನ್ನು ಸೇರಿಸಿದರೆ, ಪ್ರೊಟೀನ್‌ಯುಕ್ತ ಕಲ್ಲಂಗಡಿ ಜ್ಯೂಸ್‌ ರೆಡಿಯಾಗುತ್ತದೆ. ಚಿಯಾ ಬೀಜಗಳಲ್ಲಿ ಸಾಕಷ್ಟು ಪ್ರೊಟೀನ್‌ ಇರುವುದರಿಂದ ಹಾಗೂ ಆರೋಗ್ಯಕರವಾದ ಒಮೆಗಾ ೩ ಫ್ಯಾಟಿ ಆಸಿಡ್‌ ಇರುವುದರಿಂದ ಇದು ಶಕ್ತಿವರ್ಧಕವಾಗಿಯೂ ಕೆಲಸ ಮಾಡುತ್ತದೆ.

5. ಎಳನೀರಿನ ಜ್ಯೂಸ್‌ಗಳು: ಎಳನೀರಿನಲ್ಲಿ ಸಾಕಷ್ಟು ಖನಿಜಾಂಶಗಳೂ ಪೋಷಕಾಂಶಗಳೂ ಇರುವುದರಿಂದ ಇದು ಸುಸ್ತಿನ ಸಮಸ್ಯೆಗೆ ನಿಃಶಕ್ತಿಗೆ ಅತ್ಯಂತ ಒಳ್ಳೆಯದು. ಎಳನೀರಿನಿಂದ ಮಾಡಿದ ನಿಂಬೆ ಪಾನಕ, ಎಳನೀರಿನ ಶರಬತ್ತು, ಎಳನೀರಿನ ಕೋಕಂ ಜ್ಯೂಸ್‌, ಎಳನೀರಿನ ಪುದಿನ ಜ್ಯೂಸ್‌ ಇತ್ಯಾದಿಗಳೂ ಕೂಡಾ ಒಳ್ಳೆಯದು. ಎಳನೀರಿನ ಜೊತೆಗೆ ಬೇರೆ ಹಣ್ಣುಗಳನ್ನೂ, ಮೂಲಿಕೆಗಳನ್ನೂ ಸೇರಿಸಿ ಜ್ಯೂಸ್‌ ಮಾಡಿ ಹೀರಿದರೆ ತಾಜಾ ಅನುಭೂತಿ ಸಿಗದಿದ್ದರೆ ಕೇಳಿ! ಬೇಸಿಗೆ ಕಾಲದ ಸುಸ್ತಿಗೆ ಎಳನೀರಿನಂಥ ನೈಸರ್ಗಿಕ ಉಪಾಯ ಇನ್ನೊಂದಿಲ್ಲ.

Exit mobile version