ಹೆಚ್ಚಿದ ಸ್ಕ್ರೀನ್‌ಟೈಮ್ (Screen time), ದಿನವಿಡೀ ಓದುವುದು, ಡ್ರೈವಿಂಗ್ ಮತ್ತಿತರ ಒಂದೇ ಬಗೆಯ ಕೆಲಸವನ್ನು ದಿನವಿಡೀ ಮಾಡುವುದು, ಪದೇ ಪದೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಗೊತ್ತೇ ಇದೆ. ಬಳಲಿದ ಕಣ್ಣು ಅನುಭವಿಸುವ ಒತ್ತಡದಿಂದ ಪಾರಾಗುವುದು ಸುಲಭವಲ್ಲ. ಕಣ್ಣಿಗೆ ನೀಡಬೇಕಾದ, ಸಿಗಬೇಕಾದ ವಿಶ್ರಾಂತಿ ಸಿಗಲೇಬೇಕು. ಇತ್ತೀಚಿನ ದಿನಗಳಲ್ಲಿ, ಕೆಲಸದ ನಂತರವೂ ವಿಶ್ರಾಂತಿಯ ನೆಪದಲ್ಲಿ ಮೊಬೈಲ್ ಫೋನ್ ಬಳಕೆ, ಮನರಂಜನೆಯ ನೆಪದಲ್ಲಿ ಗಂಟೆಗಟ್ಟಲೆ ಸಿನಿಮಾ ವೀಕ್ಷಣೆ ಇತ್ಯಾದಿಗಳು ಕೇವಲ ದೇಹಕ್ಕಷ್ಟೇ ವಿಶ್ರಾಂತಿ, ಬದಲಾವಣೆ ನೀಡಿದರೂ ಕಣ್ಣಿಗೆ ನೀಡುವಲ್ಲಿ ನಾವು ಎಡವುತ್ತೇವೆ. ಇದರಿಂದಾಗಿ ಕಣ್ಣುರಿ, ಕಣ್ಣು ತುರಿಕೆ, ಕಣ್ಣು ನೋವು, ಕಣ್ಣು ಒಣಗಿದಂತಾಗುವುದು, ಕಣ್ಣು ಮಬ್ಬಾದಂತಾಗುವುದು, ತಲೆಸುತ್ತು, ತಲೆನೋವು, ಬೆಳಕಿಗೆ ಕಣ್ಣು ನೋವಾಗುವುದು, ಓದಲು ಕಷ್ಟವಾಗುವುದು, ಒಂದೆಡೆ ದೃಷ್ಟಿ ಕೇಂದ್ರೀಕರಿಸಲು ಕಷ್ಟವಾಗುವುದು, ಕತ್ತು ಹಾಗೂ ಬೆನ್ನು ನೋವಾಗುವುದು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿವೆ. ಇವುಗಳಲ್ಲಿ ಹೆಚ್ಚಿನವು ಕಣ್ಣಿನ ಸಮಸ್ಯೆಯೆಂದು ಮೇಲ್ನೋಟಕ್ಕೆ ಅನಿಸದಿದ್ದರೂ, ಇವು ಕಣ್ಣಿನ ಸಮಸ್ಯೆಗಳೂ ಆಗಿರಬಹುದು ಎಂಬುದನ್ನು ನಾವು ಅರಿಯಲು ತಡ ಮಾಡಬಾರದು. ಹಾಗಾಗಿ ಇಂಥ ಸಮಸ್ಯೆಗಳು ತಲೆದೋರಿದ ಕೂಡಲೇ ಕಣ್ಣಿನ ವೈದ್ಯರ ನೆರವು ಸಲಹೆ ಅತ್ಯಂತ ಅಗತ್ಯ. ಇವುಗಳ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಲು, ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಣ್ಣಿನ ಆರೋಗ್ಯದ (Eye care tips) ನಿಟ್ಟಿನಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.
1. 20:20 ನಿಯಮ ಪಾಲಿಸಿ: ಕಣ್ಣಿನ ಒತ್ತಡ ಆಗದಂತೆ ಮುಂಜಾಗ್ರತಾ ಕ್ರಮವಾಗಿ 20:20 ನಿಯಮ ಪಾಲಿಸಬಹುದು. 20 ನಿಮಿಷಗಳ ಕಾಲ ಒಂದು ಕೆಲಸ ಮಾಡಿದರೆ, ನಂತರ 20 ನಿಮಿಷ ಬೇರೆ ಕೆಲಸ ಮಾಡುವುದೇ ಈ ನಿಯಮ. ಇದರಿಂದ ಕಣ್ಣು ಒಂದೇ ಕಡೆಗೆ ದೃಷ್ಠಿ ನೆಡುವುದು ತಪ್ಪಿ ಕಣ್ಣಿನ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ. ಇದು ಸಾಧ್ಯವಾಗದಿದ್ದರೆ, ಬೆಳಗ್ಗಿನಿಂದ ಒಂದೇ ಬಗೆಯ ಕೆಲಸ ಕಂಪ್ಯೂಟರ್ ಪರದೆಯನ್ನು ನೋಡುತ್ತಾ ಕಳೆದಿದ್ದರೆ, ಮಧ್ಯಾಹ್ನ ಊಟದ ಸಮಯಕ್ಕೊಂದು ಸಣ್ಣ ವಾಕ್ ಮಾಡಿ. ದೃಷ್ಠಿ ಬದಲಾಯಿಸಿ. ಕಣ್ಣಿಗೆ ಕೆಲಕಾಲ ವಿಶ್ರಾಂತಿ ಕೊಡಿ.
2. ಅಂತರ ಕಾಪಾಡಿ: ಯಾವುದೇ ಡಿಜಿಟಲ್ ಪರದೆಯನ್ನು ಬಳಸಿ ನೀವು ಕೆಲಸ ಮಾಡುತ್ತಿದ್ದರೆ ಒಂದು ಅಂತರವನ್ನು ಸದಾ ಕಾಪಾಡಿ. ಕಣ್ಣಿಗೆ ಸ್ವಲ್ಪ ದೂರವಿರುವಂತೆ ಫೋನ್, ಕಂಪ್ಯೂಟರ್ ಪರದೆಯಿರಲಿ.
3. ಕಣ್ಣಿನ ವ್ಯಾಯಾಮ ಮಾಡಿ: ಕಣ್ಣನ್ನು ಬಳಸಿ ಮಾಡುವ ಕೆಲಸವೇ ನಿಮ್ಮ ಉದ್ಯೋಗವಾಗಿದ್ದರೆ ಖಂಡಿತವಾಗಿಯೂ ನಿತ್ಯವೂ ಕಣ್ಣಿನ ವ್ಯಾಯಾಮಕ್ಕೆ ಕೊಂಚ ಸಮಯ ಕೊಡಿ. ಸರಳ ಕಣ್ಣಿನ ವ್ಯಾಯಾಮವನ್ನು ಕಲಿತುಕೊಂಡು ಕಣ್ಣಿಗೆ ವಿಶ್ರಾಂತಿಯನ್ನು ನೀಡಿ, ಕಣ್ಣಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಇದನ್ನೂ ಓದಿ: Health tips: ಮಾನಸಿಕ ಒತ್ತಡ, ಉದ್ವೇಗ ಶಮನಕ್ಕೆ ಖಂಡಿತ ಬೇಕು ಈ ಹಣ್ಣುಗಳು!
4. ಬೆಳಕಿರಲಿ: ಕಣ್ಣಿಗೆ ಸಂಬಂಧಪಟ್ಟ ಕೆಲಸ ಮಾಡುವಾಗ ಉತ್ತಮ ಬೆಳಕು ಇರುವಂತೆ ನೋಡಿಕೊಳ್ಳಿ. ಆ ಬೆಳಕು ಅತ್ಯಂತ ಪ್ರಕಾಶದ್ದಾಗದಿರಲಿ, ಹಾಗಂತ ಕಡಿಮೆ ಬೆಳಕೂ ಇರದಿರಲಿ. ಹದವಾದ, ಸರಿಯಾದ ಬೆಳಕಿನಲ್ಲಿ ಓದುವುದು ಅಥವಾ ಇತರ ಯಾವುದೇ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.
5. ಕಣ್ಮುಚ್ಚಿ ವಿಶ್ರಾಂತಿ ಕೊಡಿ: ಕಣ್ಣು ಒತ್ತಡ ಅನುಭವಿಸುಂತಾದಾಗ ಕಣ್ಮುಚ್ಚಿ ಕಣ್ಣಿಗೆ ಆಗಾಗ ವಿಶ್ರಾಂತಿ ಕೊಡಿ. ಕೆಲಸದ ಮಧ್ಯೆ ಆಗಾಗ ಒಂದೈದು ನಿಮಿಷ ಕಣ್ಮುಚ್ಚಿ ಕಣ್ಣನ್ನು ರಿಲ್ಯಾಕ್ಸ್ ಮಾಡಿಸಿ.
6. ಸಮರ್ಪಕ ಕನ್ನಡಕ ಧರಿಸಿ: ಕಣ್ಣಿನ ತೊಂದರೆಗೆ ಸರಿಯಾದ ಕನ್ನಡಕ ಅತ್ಯಂತ ಅಗತ್ಯ. ಕಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ ಅಗತ್ಯವಾದ ಕನ್ನಡಕ ಬಳಸಿ. ಬೇರೆಯವರ ಕನ್ನಡಕ, ಅಥವಾ ಎಷ್ಟೋ ವರ್ಷಗಳ ಹಿಂದೆ ಪರೀಕ್ಷೆ ಮಾಡಿಸಿಕೊಂಡು ಬಳಸಿದ ನಿಮ್ಮದೇ ಕನ್ನಡಕ ಬಳಸುವುದು ಇತ್ಯಾದಿ ತಪ್ಪುಗಳನ್ನು ಮಾಡಬೇಡಿ.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!