ಆರೋಗ್ಯ
Eye Care Tips: ಕಣ್ಣಿನ ಸಮಸ್ಯೆಗಳಿಂದ ಪಾರಾಗಲು ಈ ಮುಂಜಾಗ್ರತಾ ಕ್ರಮಗಳು ಗೊತ್ತಿರಲಿ!
ಕಣ್ಣಿನ ಆರೋಗ್ಯ ಕಾಪಾಡಲು, ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಣ್ಣಿನ ಆರೋಗ್ಯದ (Eye care tips) ನಿಟ್ಟಿನಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.
ಹೆಚ್ಚಿದ ಸ್ಕ್ರೀನ್‌ಟೈಮ್ (Screen time), ದಿನವಿಡೀ ಓದುವುದು, ಡ್ರೈವಿಂಗ್ ಮತ್ತಿತರ ಒಂದೇ ಬಗೆಯ ಕೆಲಸವನ್ನು ದಿನವಿಡೀ ಮಾಡುವುದು, ಪದೇ ಪದೆ ಮಾಡುವುದರಿಂದ ಕಣ್ಣಿನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ಗೊತ್ತೇ ಇದೆ. ಬಳಲಿದ ಕಣ್ಣು ಅನುಭವಿಸುವ ಒತ್ತಡದಿಂದ ಪಾರಾಗುವುದು ಸುಲಭವಲ್ಲ. ಕಣ್ಣಿಗೆ ನೀಡಬೇಕಾದ, ಸಿಗಬೇಕಾದ ವಿಶ್ರಾಂತಿ ಸಿಗಲೇಬೇಕು. ಇತ್ತೀಚಿನ ದಿನಗಳಲ್ಲಿ, ಕೆಲಸದ ನಂತರವೂ ವಿಶ್ರಾಂತಿಯ ನೆಪದಲ್ಲಿ ಮೊಬೈಲ್ ಫೋನ್ ಬಳಕೆ, ಮನರಂಜನೆಯ ನೆಪದಲ್ಲಿ ಗಂಟೆಗಟ್ಟಲೆ ಸಿನಿಮಾ ವೀಕ್ಷಣೆ ಇತ್ಯಾದಿಗಳು ಕೇವಲ ದೇಹಕ್ಕಷ್ಟೇ ವಿಶ್ರಾಂತಿ, ಬದಲಾವಣೆ ನೀಡಿದರೂ ಕಣ್ಣಿಗೆ ನೀಡುವಲ್ಲಿ ನಾವು ಎಡವುತ್ತೇವೆ. ಇದರಿಂದಾಗಿ ಕಣ್ಣುರಿ, ಕಣ್ಣು ತುರಿಕೆ, ಕಣ್ಣು ನೋವು, ಕಣ್ಣು ಒಣಗಿದಂತಾಗುವುದು, ಕಣ್ಣು ಮಬ್ಬಾದಂತಾಗುವುದು, ತಲೆಸುತ್ತು, ತಲೆನೋವು, ಬೆಳಕಿಗೆ ಕಣ್ಣು ನೋವಾಗುವುದು, ಓದಲು ಕಷ್ಟವಾಗುವುದು, ಒಂದೆಡೆ ದೃಷ್ಟಿ ಕೇಂದ್ರೀಕರಿಸಲು ಕಷ್ಟವಾಗುವುದು, ಕತ್ತು ಹಾಗೂ ಬೆನ್ನು ನೋವಾಗುವುದು ಇತ್ಯಾದಿ ಸಮಸ್ಯೆಗಳು ಹೆಚ್ಚಾಗಿವೆ. ಇವುಗಳಲ್ಲಿ ಹೆಚ್ಚಿನವು ಕಣ್ಣಿನ ಸಮಸ್ಯೆಯೆಂದು ಮೇಲ್ನೋಟಕ್ಕೆ ಅನಿಸದಿದ್ದರೂ, ಇವು ಕಣ್ಣಿನ ಸಮಸ್ಯೆಗಳೂ ಆಗಿರಬಹುದು ಎಂಬುದನ್ನು ನಾವು ಅರಿಯಲು ತಡ ಮಾಡಬಾರದು. ಹಾಗಾಗಿ ಇಂಥ ಸಮಸ್ಯೆಗಳು ತಲೆದೋರಿದ ಕೂಡಲೇ ಕಣ್ಣಿನ ವೈದ್ಯರ ನೆರವು ಸಲಹೆ ಅತ್ಯಂತ ಅಗತ್ಯ. ಇವುಗಳ ಜೊತೆಗೆ ಕಣ್ಣಿನ ಆರೋಗ್ಯ ಕಾಪಾಡಲು, ಒತ್ತಡ ಕಡಿಮೆ ಮಾಡಲು ಈ ಕೆಲವು ಮುಂಜಾಗ್ರತಾ ಕ್ರಮಗಳನ್ನು ಕಣ್ಣಿನ ಆರೋಗ್ಯದ (Eye care tips) ನಿಟ್ಟಿನಲ್ಲಿ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ.
1. 20:20 ನಿಯಮ ಪಾಲಿಸಿ: ಕಣ್ಣಿನ ಒತ್ತಡ ಆಗದಂತೆ ಮುಂಜಾಗ್ರತಾ ಕ್ರಮವಾಗಿ 20:20 ನಿಯಮ ಪಾಲಿಸಬಹುದು. 20 ನಿಮಿಷಗಳ ಕಾಲ ಒಂದು ಕೆಲಸ ಮಾಡಿದರೆ, ನಂತರ 20 ನಿಮಿಷ ಬೇರೆ ಕೆಲಸ ಮಾಡುವುದೇ ಈ ನಿಯಮ. ಇದರಿಂದ ಕಣ್ಣು ಒಂದೇ ಕಡೆಗೆ ದೃಷ್ಠಿ ನೆಡುವುದು ತಪ್ಪಿ ಕಣ್ಣಿನ ಮೇಲೆ ಒತ್ತಡ ಬೀಳುವುದು ತಪ್ಪುತ್ತದೆ. ಇದು ಸಾಧ್ಯವಾಗದಿದ್ದರೆ, ಬೆಳಗ್ಗಿನಿಂದ ಒಂದೇ ಬಗೆಯ ಕೆಲಸ ಕಂಪ್ಯೂಟರ್ ಪರದೆಯನ್ನು ನೋಡುತ್ತಾ ಕಳೆದಿದ್ದರೆ, ಮಧ್ಯಾಹ್ನ ಊಟದ ಸಮಯಕ್ಕೊಂದು ಸಣ್ಣ ವಾಕ್ ಮಾಡಿ. ದೃಷ್ಠಿ ಬದಲಾಯಿಸಿ. ಕಣ್ಣಿಗೆ ಕೆಲಕಾಲ ವಿಶ್ರಾಂತಿ ಕೊಡಿ.
2. ಅಂತರ ಕಾಪಾಡಿ: ಯಾವುದೇ ಡಿಜಿಟಲ್ ಪರದೆಯನ್ನು ಬಳಸಿ ನೀವು ಕೆಲಸ ಮಾಡುತ್ತಿದ್ದರೆ ಒಂದು ಅಂತರವನ್ನು ಸದಾ ಕಾಪಾಡಿ. ಕಣ್ಣಿಗೆ ಸ್ವಲ್ಪ ದೂರವಿರುವಂತೆ ಫೋನ್, ಕಂಪ್ಯೂಟರ್ ಪರದೆಯಿರಲಿ.
3. ಕಣ್ಣಿನ ವ್ಯಾಯಾಮ ಮಾಡಿ: ಕಣ್ಣನ್ನು ಬಳಸಿ ಮಾಡುವ ಕೆಲಸವೇ ನಿಮ್ಮ ಉದ್ಯೋಗವಾಗಿದ್ದರೆ ಖಂಡಿತವಾಗಿಯೂ ನಿತ್ಯವೂ ಕಣ್ಣಿನ ವ್ಯಾಯಾಮಕ್ಕೆ ಕೊಂಚ ಸಮಯ ಕೊಡಿ. ಸರಳ ಕಣ್ಣಿನ ವ್ಯಾಯಾಮವನ್ನು ಕಲಿತುಕೊಂಡು ಕಣ್ಣಿಗೆ ವಿಶ್ರಾಂತಿಯನ್ನು ನೀಡಿ, ಕಣ್ಣಿನ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ.
ಇದನ್ನೂ ಓದಿ: Health tips: ಮಾನಸಿಕ ಒತ್ತಡ, ಉದ್ವೇಗ ಶಮನಕ್ಕೆ ಖಂಡಿತ ಬೇಕು ಈ ಹಣ್ಣುಗಳು!
4. ಬೆಳಕಿರಲಿ: ಕಣ್ಣಿಗೆ ಸಂಬಂಧಪಟ್ಟ ಕೆಲಸ ಮಾಡುವಾಗ ಉತ್ತಮ ಬೆಳಕು ಇರುವಂತೆ ನೋಡಿಕೊಳ್ಳಿ. ಆ ಬೆಳಕು ಅತ್ಯಂತ ಪ್ರಕಾಶದ್ದಾಗದಿರಲಿ, ಹಾಗಂತ ಕಡಿಮೆ ಬೆಳಕೂ ಇರದಿರಲಿ. ಹದವಾದ, ಸರಿಯಾದ ಬೆಳಕಿನಲ್ಲಿ ಓದುವುದು ಅಥವಾ ಇತರ ಯಾವುದೇ ಕೆಲಸ ಮಾಡುವುದನ್ನು ರೂಢಿಸಿಕೊಳ್ಳಿ.
5. ಕಣ್ಮುಚ್ಚಿ ವಿಶ್ರಾಂತಿ ಕೊಡಿ: ಕಣ್ಣು ಒತ್ತಡ ಅನುಭವಿಸುಂತಾದಾಗ ಕಣ್ಮುಚ್ಚಿ ಕಣ್ಣಿಗೆ ಆಗಾಗ ವಿಶ್ರಾಂತಿ ಕೊಡಿ. ಕೆಲಸದ ಮಧ್ಯೆ ಆಗಾಗ ಒಂದೈದು ನಿಮಿಷ ಕಣ್ಮುಚ್ಚಿ ಕಣ್ಣನ್ನು ರಿಲ್ಯಾಕ್ಸ್ ಮಾಡಿಸಿ.
6. ಸಮರ್ಪಕ ಕನ್ನಡಕ ಧರಿಸಿ: ಕಣ್ಣಿನ ತೊಂದರೆಗೆ ಸರಿಯಾದ ಕನ್ನಡಕ ಅತ್ಯಂತ ಅಗತ್ಯ. ಕಣ್ಣಿನ ಪರೀಕ್ಷೆಯನ್ನು ಕಾಲಕಾಲಕ್ಕೆ ಮಾಡಿಸಿ ಅಗತ್ಯವಾದ ಕನ್ನಡಕ ಬಳಸಿ. ಬೇರೆಯವರ ಕನ್ನಡಕ, ಅಥವಾ ಎಷ್ಟೋ ವರ್ಷಗಳ ಹಿಂದೆ ಪರೀಕ್ಷೆ ಮಾಡಿಸಿಕೊಂಡು ಬಳಸಿದ ನಿಮ್ಮದೇ ಕನ್ನಡಕ ಬಳಸುವುದು ಇತ್ಯಾದಿ ತಪ್ಪುಗಳನ್ನು ಮಾಡಬೇಡಿ.
ಇದನ್ನೂ ಓದಿ: Health Tips: ಬೆಳ್ಳಂಬೆಳಗ್ಗೆ ಶೌಚವೇ ಒಂದು ಸಮಸ್ಯೆ: ಸುಲಭ ಶೌಚಕ್ಕೆ ಪಂಚಸೂತ್ರಗಳು!
ಆರೋಗ್ಯ
Sugar Vs Salt: ಸಕ್ಕರೆ ಮತ್ತು ಉಪ್ಪು: ಕಿಡ್ನಿಗೆ ಯಾವುದು ಹಿತಕರ?
ಜೀವಮಾನವಿಡೀ ಸಪ್ಪೆ ಆಹಾರವನ್ನು ತಿನ್ನಲು ಸಾಧ್ಯವಿಲ್ಲ ಮತ್ತು ಹಾಗೆ ತಿನ್ನುವ ಅಗತ್ಯವೂ ಇಲ್ಲ. ಮಿತಿಯಲ್ಲಿ ತಿನ್ನುವುದನ್ನು ಅಳವಡಿಸಿಕೊಳ್ಳುವುದು ಅಗತ್ಯ. ಉಪ್ಪು-ಸಕ್ಕರೆಯೂ (Sugar Vs Salt) ಉಳಿದೆಲ್ಲಾ ಆಹಾರದಂತೆ ಸಮತೋಲನದಲ್ಲಿ ಇರಬೇಕು.
ದೇಹದ ಸುಸ್ಥಿತಿಯಲ್ಲಿ ಇರುವುದಕ್ಕೆ ಎಲ್ಲಾ ಅಂಗಗಳು ಸಮರ್ಪಕವಾಗಿ ಕೆಲಸ ಮಾಡುತ್ತಿರಬೇಕು ಎಂಬುದು ಗೊತ್ತಿರುವುದೇ. ಹೊಟ್ಟೆಗೆ ಹೋದ ಆಹಾರವನ್ನು ಜೀರ್ಣಾಂಗಗಳು ಸರಿಯಾಗಿ ಚೂರ್ಣಿಸುವುದರಿಂದ ತೊಡಗಿ, ಬೇಡದ್ದನ್ನು ಮೂತ್ರಪಿಂಡಗಳು ಹೊರಹಾಕುವವರೆಗೆ ಎಲ್ಲಿಯೂ ಕೊಂಡಿ ತಪ್ಪಬಾರದು. ಹಾಗಾದರೆ ತಿನ್ನುವಾಗಲೂ ಬೇಕಾದ್ದೇನು ಮತ್ತು ಬೇಡದ್ದೇನು ಎಂಬ ಎಚ್ಚರ ಬೇಕಲ್ಲವೇ? ಆಗ ಮಾತ್ರ ಕರುಳು ಮತ್ತು ಮೂತ್ರಪಿಂಡಗಳ ಮೇಲಿನ ಹೆಚ್ಚುವರಿ ಒತ್ತಡವನ್ನು ಕಡಿಮೆ ಮಾಡಬಹುದು. ಈ ನಿಟ್ಟಿನಲ್ಲಿ ಸಕ್ಕರೆ ಮತ್ತು ಉಪ್ಪು- ಇವುಗಳಲ್ಲಿ ಕಿಡ್ನಿಗೆ ಯಾವುದು ಹಿತ? ಈ ಎರಡು ಪ್ರಮುಖ ಅಂಶಗಳು (Sugar Vs Salt) ನಮ್ಮ ಆಹಾರದಲ್ಲಿ ಹೇಗಿರಬೇಕು, ಎಷ್ಟಿರಬೇಕು ಎಂಬ ಮಾಹಿತಿ ಇಲ್ಲಿದೆ.
ಸಕ್ಕರೆ ಮತ್ತು ಕಿಡ್ನಿಯ ಸಂಬಂಧ
ಮೂತ್ರಪಿಂಡಗಳು ಮತ್ತು ಸಕ್ಕರೆ ನಡುವಿನ ನೇರ ಸಂಬಂಧ ಸ್ವಲ್ಪ ಕಡಿಮೆಯೇ ಎನ್ನಬಹುದು. ಆದರೆ ಸಕ್ಕರೆಯ ಸೇವನೆ ಅತಿಯಾದರೆ ಮಧುಮೇಹ, ಬೊಜ್ಜು, ಹೃದಯದ ತೊಂದರೆಗಳು ಅಮರಿಕೊಳ್ಳಲು ಕಾಯುತ್ತಿರುತ್ತವೆ. ಮಧುಮೇಹದಂಥ ಸಮಸ್ಯೆ ಕ್ರಮೇಣ ಕಿಡ್ನಿಯನ್ನು ಅಪಾಯಕ್ಕೆ ದೂಡುತ್ತದೆ. ನಿಯಂತ್ರಣಕ್ಕೆ ಬಾರದಂತೆ ಸಕ್ಕರೆ ಕಾಯಿಲೆ ಹೆಚ್ಚಾದರೆ ಅದು ನೇರವಾಗಿ ಡಯಾಬಿಟಿಕ್ ನೆಫ್ರೊಪಥಿಗೆ ಕಾರಣವಾಗುತ್ತದೆ. ಅಂದರೆ ರಕ್ತದಲ್ಲಿರುವ ಕಶ್ಮಲಗಳನ್ನು ಬೇರ್ಪಡಿಸಿ ಹೊರಹಾಕುವ ಕಿಡ್ನಿಗಳ ಸಾಮರ್ಥ್ಯ ಕುಸಿದು ನಂತರ, ಕಿಡ್ನಿ ವೈಫಲ್ಯಕ್ಕೆ ದಾರಿ ಮಾಡಿಕೊಡುತ್ತದೆ. ಮಾತ್ರವಲ್ಲ, ಹೃದಯ ತೊಂದರೆಗಳಿಗೂ ರಕ್ತದ ಏರೊತ್ತಡಕ್ಕೂ ನೇರ ನಂಟು. ಇದು ಮೂತ್ರಪಿಂಡಗಳ ಸಮಸ್ಯೆಗೆ ರಹದಾರಿ ಕಲ್ಪಿಸುತ್ತದೆ. ಹಾಗಾಗಿ ಸಕ್ಕರೆ ಸೇವನೆ ತಕ್ಷಣಕ್ಕೆ ಕಿಡ್ನಿಗಳ ಮೇಲೆ ಒತ್ತಡ ಹಾಕದಿದ್ದರೂ, ಪರೋಕ್ಷವಾಗಿ ಮೂತ್ರಪಿಂಡದ ಸಮಸ್ಯೆಗಳಿಗೆ ತಳುಕು ಹಾಕಿಕೊಳ್ಳುತ್ತದೆ
ಉಪ್ಪು ಮತ್ತು ಕಿಡ್ನಿ ಅರೋಗ್ಯಕ್ಕಿರುವ ನಂಟು
ಉಪ್ಪಿಗಿಂತ ರುಚಿಯಿಲ್ಲ ಎಂಬುದನ್ನು ಮೊದಲಿಗೇ ಒಪ್ಪಿಕೊಂಡವರು ನಾವು. ಹಾಗಾಗಿ ಉಪ್ಪು ಅಥವಾ ಸೋಡಿಯಂ ಕ್ಲೋರೈಡ್ ನಮ್ಮ ಆಹಾರದ ಅವಿಭಾಜ್ಯ ಅಂಗ. ಸಮರ್ಪಕ ಕಾರ್ಯ ನಿರ್ವಹಣೇಗೆ ನಮ್ಮ ಶರೀರಕ್ಕೆ ಸಣ್ಣ ಪ್ರಮಾಣದಲ್ಲಿ ಸೋಡಿಯಂ ಬೇಕು. ಅದು ದೊರೆಯದಿದ್ದರೆ ಒಂದಿಷ್ಟು ಸಮಸ್ಯೆಗಳು ಗಂಟಿಕ್ಕಿಕೊಳ್ಳುತ್ತವೆ. ಹಾಗೆಂದು ಸೋಡಿಯಂ ದೇಹಕ್ಕೆ ಹೆಚ್ಚಾದರೆ, ಆ ಒತ್ತಡದ ನೇರ ಫಲಾನುಭವಿ ನಮ್ಮ ಮೂತ್ರಪಿಂಡಗಳು. ಉಪ್ಪಿನಂಶ ದೇಹಕ್ಕೆ ಹೆಚ್ಚಾದರೆ ರಕ್ತದೊತ್ತಡಕ್ಕೆ ನಾಂದಿ ಹಾಡುತ್ತದೆ. ಇದೂ ಸಹ ಕಿಡ್ನಿಗಳ ಮೇಲೆ ದುಷ್ಪರಿಣಾಮ ಬೀರುತ್ತವೆ. ಈ ಎಲ್ಲವುಗಳ ಪರಿಣಾಮವಾಗಿ ಕಿಡ್ನಿಗಳ ಆರೋಗ್ಯ ಕೈಕೊಟ್ಟು, ರೋಗಗಳು ದಾಳಿಯಿಡುತ್ತವೆ. ಅಂತಿಮವಾಗಿ ಕಿಡ್ನಿ ವೈಫಲ್ಯವನ್ನು ಎದುರಿಸಬೇಕಾಗುತ್ತದೆ. ಮಾತ್ರವಲ್ಲ, ಉಪ್ಪು ತಿಂದ ಮೇಲೆ ನೀರು ಕುಡಿಯಲೇಬೇಕು ಎಂಬ ಮಾತಿನಂತೆ, ಅತಿಯಾಗಿ ನೀರನ್ನೂ ದೇಹ ಹಿಡಿದಿರಿಸಿಕೊಳ್ಳುತ್ತದೆ
ಏನು ಮಾಡಬೇಕು?
ಸಕ್ಕರೆ, ಉಪ್ಪುಗಳನ್ನು (Sugar Vs Salt) ಹೆಚ್ಚು ತಿಂದರೆ ಕಿಡ್ನಿಯ ಮೇಲೆ ದುಷ್ಪರಿಣಾಮ ಬೀರುತ್ತದೆ ಮತ್ತು ಇನ್ನಿತರ ರೋಗಗಳನ್ನೂ ತರುತ್ತದೆ ಎಂಬ ಕಾರಣಕ್ಕೆ ಜೀವಮಾನವಿಡೀ ಸಪ್ಪೆ ಆಹಾರವನ್ನು ತಿನ್ನಲು ಸಾಧ್ಯವಿಲ್ಲ ಮತ್ತು ಹಾಗೆ ತಿನ್ನುವ ಅಗತ್ಯವೂ ಇಲ್ಲ. ಮಿತಿಯಲ್ಲಿ ತಿನ್ನುವುದನ್ನು ಅಳವಡಿಸಿಕೊಳ್ಳುವುದು ಅಗತ್ಯ. ಉಪ್ಪು-ಸಕ್ಕರೆಯೂ ಉಳಿದೆಲ್ಲಾ ಆಹಾರದಂತೆ ಸಮತೋಲನದಲ್ಲಿ ಇರಬೇಕು. ಒಂದು ಹಿತ, ಇನ್ನೊಂದು ಅಹಿತ ಎನ್ನುವಂತಿಲ್ಲ- ಅತ್ತ ದರಿ, ಇತ್ತ ಪುಲಿ! ಹಾಗಾಗಿ, ಕಿಡ್ನಿ-ಸ್ನೇಹಿ ಡಯಟ್‌ನ ಬಗೆಗೆ ಹೇಳುವುದಾದರೆ,
ಹೆಚ್ಚುವರಿ ಸಕ್ಕರೆಭರಿತ ಆಹಾರಗಳನ್ನು ಹತ್ತಿರ ಸೇರಿಸಬೇಡಿ
ಸೋಡಾ, ಕೃತಕ ಬಣ್ಣ-ಸಕ್ಕರೆ ಭರಿತ ಪಾನೀಯಗಳು, ಸಂಸ್ಕರಿತ ಆಹಾರಗಳಲ್ಲಿ ಸಕ್ಕರೆ ಅಂಶ ಹೆಚ್ಚಿರುತ್ತದೆ. ಇವುಗಳನ್ನು ದೂರ ಮಾಡಿ. ಹಬ್ಬಕ್ಕೋ ಹುಣ್ಣಿಮೆಗೋ ತಿನ್ನುವ ಪಾಯಸ-ಲಾಡುಗಳಿಗಿಂತ ಈ ಕೃತಕ ಮತ್ತು ಸಂಸ್ಕರಿತ ಆಹಾರಗಳೇ ಹೆಚ್ಚಿನ ತೊಂದರೆ ನೀಡುತ್ತವೆ.
ಸಂರಕ್ಷಿಸಿಟ್ಟ ಆಹಾರಗಳಿಗಿಂತ ತಾಜಾ ಆಹಾರಗಳು ನಿಮ್ಮ ಆಯ್ಕೆಯಾಗಿರಲಿ
ಸಂರಕ್ಷಿತ ಆಹಾರಗಳಲ್ಲಿ ಉಪ್ಪಿನಂಶ ಹೆಚ್ಚಿರುತ್ತದೆ. ಪ್ಯಾಕೆಟ್ ಕುರುಕಲುಗಳಂತೆಯೇ ತೊಕ್ಕು, ಉಪ್ಪಿನಕಾಯಿಗಳ ಅತಿಯಾದ ಬಳಕೆಯೂ ಸಮಸ್ಯೆಗೆ ಮೂಲವಾಗುತ್ತದೆ. ಒಂದೊಮ್ಮೆ ರೆಡಿ ಆಹಾರಗಳನ್ನು ಖರೀದಿಸಬೇಕಾಗಿ ಬಂದರೆ, ಅದರ ಮೇಲೆ ಪೋಷಕಾಂಶಗಳ ಮಾಹಿತಿಯಿದ್ದರೆ ಸೋಡಿಯಂ ಅಂಶದ ಮೇಲೆ ಗಮನಹರಿಸಿ.
ಆಹಾರದಲ್ಲಿ ಸಾಕಷ್ಟು ಹಣ್ಣು-ತರಕಾರಿಗಳನ್ನು ಸೇರಿಸಿಕೊಳ್ಳಿ
ನೀರು ಯಥೇಚ್ಛವಾಗಿ ಕುಡಿಯಿರಿ, ಇದರಿಂದ ಕಿಡ್ನಿಯ ಕೆಲಸ ಹಗುರವಾಗುತ್ತದೆ.
ಇದನ್ನೂ ಓದಿ: Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ
ಆರೋಗ್ಯ
Health tips for Monsoon : ಮಳೆಗಾಲದ ಖುಷಿ ಅನುಭವಿಸಿ, ಆದರೆ ರೋಗಗಳನ್ನು ದೂರ ಇರಿಸಿ
ಮಳೆಯೊಂದಿಗೆ ಮುತ್ತಿಕೊಳ್ಳುವ ಸೋಂಕು ರೋಗಗಳಿಗೆ (Health tips for Monsoon) ತಡೆಯೊಡ್ಡಲು ತಯಾರಿ ಬೇಕಲ್ಲ. ಮಳೆಗಾಲದಲ್ಲಿ ಸೊಳ್ಳೆ, ನೀರು ಮತ್ತು ಗಾಳಿಯಿಂದ ಹರಡುವ ಕಾಯಿಲೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಇಲ್ಲಿದೆ ಮಾಹಿತಿ.
ಮಳೆಗಾಲವೆಂದರೆ ಜೀವ ಧರಿಸುವ ಕಾಲವೂ ಹೌದು, ರೋಗ ತರಿಸುವ ಕಾಲವೂ ಹೌದು! ಹಾಗಾಗಿ ವರ್ಷ ಋತುವಿನಲ್ಲಿ ಸಾಮಾನ್ಯವಾಗಿ ಕಾಡುವ ಸೋಂಕುಗಳು (Health tips for Monsoon) ಮತ್ತು ಮುನ್ನೆಚ್ಚರಿಕೆಗಳ ಬಗೆಗಿನ ವಿವರಗಳು ಇಲ್ಲಿವೆ.
ಮಳೆಗಾಲದ ಹೊಸಿಲಲ್ಲಿದ್ದೇವೆ. ನೈಋತ್ಯ ಮುಂಗಾರು ಕೇರಳವನ್ನು ಯಾವತ್ತು ಪ್ರವೇಶಿಸುತ್ತದೆ ಎಂಬ ನಿರೀಕ್ಷೆಯಲ್ಲೇ ಇದ್ದೇವೆ. ಈಗ ಹೊಳೆಯುತ್ತಿರುವ ಆಗಸ ಯಾವಾಗ ಮಂಕಾಗುತ್ತದೆ, ಎಂದಿಗೆ ಮೋಡ ಕವಿಯುತ್ತದೆ, ಯಾವತ್ತು ತುಂತುರು ಮಳೆ ಶುರುವಾಗುತ್ತದೆ ಎಂದೆಲ್ಲಾ ಹವಾಮಾನ ವರದಿಯನ್ನು ನೋಡಿಯೇ ನೋಡುತ್ತೇವೆ. ಇಷ್ಟಾದರೆ ಮುಗಿಯಲಿಲ್ಲ, ಮಳೆಗಾಲಕ್ಕೊಂದು ಸರಿಯಾದ ತಯಾರಿ ಬೇಡವೇ? ಹಿಂದಿನ ದಿನಗಳಂತೆ, ಕೊಡೆ, ರೇನ್‌ಕೋಟು, ಗಂಬೂಟು ಎಂದೆಲ್ಲಾ ಸಿದ್ಧತೆ ಬೇಕಿಲ್ಲ. ಆದರೆ ಮಳೆಯೊಂದಿಗೆ ಮುತ್ತಿಕೊಳ್ಳುವ ಸೋಂಕು ರೋಗಗಳಿಗೆ (Health tips for Monsoon) ತಡೆಯೊಡ್ಡಲು ತಯಾರಿ ಬೇಕಲ್ಲ. ಮಳೆಗಾಲದಲ್ಲಿ ಸೊಳ್ಳೆ, ನೀರು ಮತ್ತು ಗಾಳಿಯಿಂದ ಹರಡುವ ಕಾಯಿಲೆಗಳ ಬಗ್ಗೆ ಹಾಗೂ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಇಲ್ಲಿದೆ ಮಾಹಿತಿ.
ಸೊಳ್ಳೆಯಿಂದ ಹರಡುವ ರೋಗಗಳು
ಮಳೆಗಾಲವೆಂದರೆ ಹುಲ್ಲಿನಿಂದ ಹಿಡಿದು ಮರಗಳವರೆಗೆ, ಹುಳು-ಹುಪ್ಪಡಿಗಳಿಂದ ಹಿಡಿದು ಸೊಳ್ಳೆಗಳವರೆಗೆ ಸರ್ವತ್ರ ಚಿಗುರುವ ಕಾಲ. ಗಟ್ಟಿಯಾಗಿ ಹೆಜ್ಜೆ ಊರಿದಲ್ಲೂ ನೀರು ನಿಲ್ಲುವ ಮಳೆಗಾಲದ ದಿನಗಳೆಂದರೆ ಸೊಳ್ಳೆಗಳಿಗೆ ಸಂತಾನೋತ್ಪತ್ತಿಯ ದಿನಗಳು. ವಿಶ್ವಮಟ್ಟದಲ್ಲಿ ಶೇ. ೩೪ರಷ್ಟು ಡೆಂಗೂ ಪ್ರಕರಣಗಳು ಮತ್ತು ಶೇ. ೩ ಮಲೇರಿಯಾ ಪ್ರಕರಣಗಳಿಗೆ ಭಾರತವೇ ತವರು. ಹಾಗಾಗಿ ಸೊಳ್ಳೆಗಳಿಂದ ಹರಡುವ ರೋಗಗಳ ಬಗ್ಗೆ ಗಮನಿಸೋಣ (Health tips for Monsoon).
ಮಲೇರಿಯಾ
ಅನಾಫಿಲಿಸ್ ಹೆಣ್ಣು ಸೊಳ್ಳೆಯು ಕಚ್ಚಿದಾಗ ದೇಹ ಸೇರುವ ಪ್ಮಾಸ್ಮೋಡಿಯಂ ಎಂಬ ಏಕಕೋಶ ಜೀವಿಯಿಂದ ಬರುವ ಕಾಯಿಲೆಯಿದು. ಸರಿಯಾದ ಸಮಯಕ್ಕೆ ಸೂಕ್ತ ಚಿಕಿತ್ಸೆ ದೊರೆಯದಿದ್ದರೆ ಇದು ಪ್ರಾಣಘಾತುಕವೂ ಆಗಬಲ್ಲದು. ಮುನ್ನೆಚ್ಚರಿಕೆಯಿಂದ ಇದನ್ನು ತಡೆಯುವುದು ಸಾಧ್ಯವಿದ್ದರೂ, ಜಾಗತಿಕ ಮಟ್ಟದಲ್ಲಿ ಪ್ರತಿವರ್ಷ ಲಕ್ಷಗಟ್ಟಲೆ ಜೀವಗಳು ಈ ರೋಗಕ್ಕೆ ಬಲಿಯಾಗುತ್ತಿವೆ.
ಏನಿದರ ಲಕ್ಷಣಗಳು?: ಸೊಳ್ಳೆ ಕಚ್ಚಿದ ೧೦ ದಿನಗಳ ನಂತರ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ಜ್ವರ, ಮೈಕೈ ನೋವು, ಚಳಿಯಾಗಿ ನಡುಕ, ಜ್ವರ ಕಡಿಮೆಯಾದರೆ ಸಿಕ್ಕಾಪಟ್ಟೆ ಬೆವರುವುದು, ತಲೆನೋವು, ವಾಂತಿ, ಡಯರಿಯದಂಥ ಚಿಹ್ನೆಗಳು ಕಂಡುಬರುತ್ತವೆ. ಈ ಯಾವುದೇ ಲಕ್ಷಣಗಳು ಕಂಡರೂ ವೈದ್ಯರೊಂದಿಗೆ ಸಮಾಲೋಚನೆ ಅಗತ್ಯ.
ಡೆಂಗೂ
ಏಡಿಸ್ ಹೆಣ್ಣು ಸೊಳ್ಳೆಯಿಂದ ಹರಡುವ ವೈರಸ್ ಸೋಂಕಿದು. ಸೊಳ್ಳೆ ಕಚ್ಚಿದ ನಾಲ್ಕಾರು ದಿನಗಳ ನಂತರ ರೋಗದ ಚಿಹ್ನೆಗಳು ಕಾಣಿಸಿಕೊಳ್ಳುತ್ತವೆ. ಸಾಮಾನ್ಯವಾಗಿ ಫ್ಲೂ ಮಾದರಿಯಲ್ಲಿ ಇರುವ ಈ ಕಾಯಿಲೆಯಲ್ಲಿ ಕೆಲವೊಮ್ಮೆ ರಕ್ತದಲ್ಲಿ ಪ್ಲೇಟ್‌ಲೆಟ್‌ಗಳು ಕುಸಿದು ಜೀವಕ್ಕೆ ಎರವಾಗುವ ಸಾಧ್ಯತೆಯಿದೆ.
ಲಕ್ಷಣಗಳು: ಜ್ವರ, ತೀವ್ರವಾದ ತಲೆನೋವು, ಕಣ್ಣಿನ ಹಿಂಭಾಗದಲ್ಲಿ ನೋವು, ಕೀಲು ಮತ್ತು ಸ್ನಾಯುಗಳಲ್ಲಿ ನೋವು, ಮೈಮೇಲೆ ದದ್ದುಗಳು, ವಾಂತಿ- ಜ್ವರದೊಂದಿಗೆ ಈ ಪೈಕಿ ಯಾವುದೇ ಎರಡು ಲಕ್ಷಣಗಳನ್ನು ಕಂಡರೂ ವೈದ್ಯರನ್ನು ಸಂಪರ್ಕಿಸಬೇಕು.
ಚಿಕೂನ್‌ಗುನ್ಯಾ
ಸೊಳ್ಳೆ ಕಚ್ಚುವುದರಿಂದ ಹರಡುವ ಚಿಕೂನ್‌ಗುನ್ಯಾ ವೈರಸ್‌ನಿಂದಲೇ ಬರುವ ರೋಗವಿದು. ಜ್ವರದೊಂದಿಗೆ ತೀವ್ರವಾದ ಕೀಲುನೋವು ಇದರ ಪ್ರಮುಖ ಲಕ್ಷಣಗಳು. ಸೋಂಕಿತ ಸೊಳ್ಳೆ ಕಚ್ಚಿದ ೪-೮ ದಿನಗಳ ಅಂತರದಲ್ಲಿ ರೋಗಚಿಹ್ನೆಗಳು ಕಂಡುಬರುತ್ತವೆ. ಈ ಸೊಳ್ಳೆಗಳು ರಾತ್ರಿಯಲ್ಲಿ ಮಾತ್ರವೇ ಅಲ್ಲ, ಹಗಲಿನಲ್ಲೂ ಕಚ್ಚುತ್ತವೆ. ಏಷ್ಯಾ ಮತ್ತು ಭಾರತೀಯ ಉಪಖಂಡದಲ್ಲಿ ಮುಖ್ಯವಾಗಿ ಈ ಕಾಯಿಲೆ ಸದ್ದು ಮಾಡುತ್ತಿದೆ.
ತಡೆ ಹೇಗೆ?: ಸೊಳ್ಳೆಯಿಂದ ಹರಡುವ ಯಾವುದೇ ರೋಗವಾದರೂ, ಅದನ್ನು ತಡೆಯುವ ಕ್ರಮದಲ್ಲಿ ವಿಶೇಷ ವ್ಯತ್ಯಾಸವಿಲ್ಲ. ಮನೆಯ ಸುತ್ತಲೂ ನೀರು ನಿಲ್ಲದಂತೆ ನಿಗಾ ವಹಿಸಿ. ತೆರೆದ ಚರಂಡಿಯೇ ಬೇಕೆಂದಿಲ್ಲ, ಎಳನೀರಿನ ಚಿಪ್ಪುಗಳು, ರಸ್ತೆಗುಂಡಿಗಳಿಂದ ಹಿಡಿದು, ಎಲ್ಲೆಲ್ಲಿ ನೀರಿನ ಪಸೆಯಿದ್ದರೂ ಸೊಳ್ಳೆಗಳು ಸೃಷ್ಟಿ ಕಾರ್ಯ ನಡೆಸುತ್ತವೆ. ಮನೆಯಲ್ಲಿ ನೀರಿರಬಹುದಾದ ಕೂಲರ್‌ಗಳು, ಬಕೆಟ್ ಇತ್ಯಾದಿಗಳ ಬಗ್ಗೆ ಗಮನಕೊಡಿ. ನೀರು ತುಂಬಿಸಿಸುವ ಎಲ್ಲವನ್ನೂ ಮುಚ್ಚಿಡಿ. ನೀರು ನಿಲ್ಲುವಂಥ ಜಾಗಗಳಿದ್ದರೆ ಅವುಗಳ ಮೇಲೆ ಕೀಟನಾಶಕ ಸಿಂಪಡಿಸಿ.
ಮೈ ತುಂಬಾ ವಸ್ತ್ರಗಳನ್ನು ಧರಿಸಿದರೆ, ಸೊಳ್ಳೆಗಳು ಕಚ್ಚುವುದರಿಂದ ತಪ್ಪಿಸಿಕೊಳ್ಳಬಹುದು. ಸೊಳ್ಳೆ ನಿರೋಧಕ ಕ್ರೀಮ್, ಸ್ಪ್ರೇ ಅಥವಾ ಪ್ಯಾಚ್‌ಗಳು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತವೆ. ಸೊಳ್ಳೆಗಳ ಉಪಟಳಕ್ಕೆ ಕೆಲವು ನೈಸರ್ಗಿಕ ಉಪಾಯಗಳೂ ಚಾಲ್ತಿಯಲ್ಲಿವೆ. ರಾತ್ರಿ ಮಲಗುವಾಗ ಕಡ್ಡಾಯವಾಗಿ ಸೊಳ್ಳೆ ಪರದೆ ಉಪಯೋಗಿಸಿ. ಚಿಕ್ಕ ಮಕ್ಕಳಿದ್ದರೆ ಎಲ್ಲಕ್ಕಿಂತ ಹೆಚ್ಚು ಅಪಾಯ ಅವರಿಗೇ ಆಗಬಹುದು, ಎಚ್ಚರವಹಿಸಿ.
ನೀರಿನಿಂದ ಹರಡುವ ರೋಗಗಳು: ಹೊಸ ನೀರು ಬಂದು ಹಳೆ ನೀರು ಕೊಚ್ಚಿ ಹೋಗುವ ಈ ಸಮಯವು, ನೀರು ಕಲುಷಿತವಾಗುವ ಪರ್ವಕಾಲ ಎಂದರೆ ತಪ್ಪಾಗುವುದಿಲ್ಲ. ಬಾವಿ, ಕೆರೆ, ಕಾಲುವೆ, ನದಿ- ಹೀಗೆ ಕುಡಿಯುವ ನೀರಿದ ಮೂಲಗಳೆಲ್ಲಿದ್ದಲ್ಲೂ ನೀರಿನ ಪ್ರಮಾಣ ಮತ್ತು ಗುಣಮಟ್ಟ ಬದಲಾಗಿರುತ್ತದೆ. ಕುಡಿಯುವ ನೀರಿಗೆ ಚರಂಡಿ ನೀರು ಸೇರುವ ಅಪಾಯವಿರುವ ಕಾಲವಿದು. ಪ್ರತಿವರ್ಷ ವಿಶ್ವಮಟ್ಟದಲ್ಲಿ ಸುಮಾರು ೫ ಲಕ್ಷ ಮಂದಿ ಶುದ್ಧ ಕುಡಿಯುವ ನೀರಿನ ಅಭಾವದಿಂದ ನಾನಾ ರೋಗಗಳಿಗೆ ತುತ್ತಾಗಿ ಸಾಯುತ್ತಿದ್ದಾರೆ.
ಟೈಫಾಯ್ಡ್
ಸಾಲ್ಮೊನೆಲ್ಲಾ ಟೈಫಿ ಎಂಬ ರೋಗಾಣುವಿನಿಂದ ಬರುವ ಇದು ಮಾರಣಾಂತಿಕ ರೋಗ. ಕಲುಷಿತವಾದ ಆಹಾರ ಮತ್ತು ನೀರಿನಿಂದಲೇ ಇದು ದೇಹ ಸೇರುತ್ತದೆ. ಜಾಗತಿಕವಾಗಿ, ಪ್ರತಿವರ್ಷ ಸುಮಾರು ೨ ಕೋಟಿ ಮಂದಿ ಟೈಫಾಯ್ಡ್‌ಗೆ ತುತ್ತಾದರೆ, ಸೂಕ್ತ ಚಿಕಿತ್ಸೆಯಿಲ್ಲದೆ ಸುಮಾರು ಒಂದೂವರೆ ಲಕ್ಷ ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಲಕ್ಷಣಗಳು: ದೀರ್ಘ ಕಾಲದವರೆಗೆ ಜ್ವರ, ಸುಸ್ತು, ತಲೆನೋವು, ವಾಂತಿ, ಕಿಬ್ಬೊಟ್ಟೆಯಲ್ಲಿ ನೋವು, ಡಯರಿಯಾದಂಥ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದಕ್ಕೆ ವೈದ್ಯರ ಶುಶ್ರೂಷೆಯ ಜೊತೆಗೆ ಸರಿಯಾದ ಆಹಾರವನ್ನೂ ತೆಗೆದುಕೊಳ್ಳಬೇಕು. ಸ್ವಚ್ಛತೆ ಕಡೆಗೆ ಗಮನ ನೀಡಲೇಬೇಕು.
ಕಾಲರಾ
ವಿಬ್ರಿಯೊ ಕಾಲೆರೆ ಎಂಬ ಬ್ಯಾಕ್ಟೀರಿಯಾದಿಂದ ಕಲುಷಿತ ನೀರು ಮತ್ತು ಆಹಾರದ ಮೂಲಕ ಇದು ಮಾನವರಿಗೆ ಹರಡುತ್ತದೆ. ತೀವ್ರವಾದ ಅತಿಸಾರ ಭೇದಿ ಇದರ ಪ್ರಮುಖ ಲಕ್ಷಣ. ಉಳಿದಂತೆ ಹೆಚ್ಚಿನ ಲಕ್ಷಣಗಳು ತೋರಿಸಿಕೊಳ್ಳುವುದಿಲ್ಲ ಈ ರೋಗ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ತೀವ್ರ ನಿರ್ಜಲೀಕರಣಕ್ಕೆ ಒಳಗಾಗಿ ಜೀವಕ್ಕೆ ಅಪಾಯ ಕಟ್ಟಿಟ್ಟಿದ್ದು.
ಲೆಪ್ಟೊಸ್ಪಿರೋಸಿಸ್
ಲೆಪ್ಟೊಸ್ಪೈರ ಎಂಬ ವೈರಸ್‌ನಿಂದ ಮುಖ್ಯವಾಗಿ ಮಳೆಗಾಲದಲ್ಲಿಯೇ ಬರುವ ರೋಗವಿದು. ಇದು ಮಾನವರಿಗೆ ಮಾತ್ರವಲ್ಲ, ಪ್ರಾಣಿಗಳಿಗೂ ಬರಬಹುದು. ಸೋಂಕಿತ ವ್ಯಕ್ತಿ ಅಥವಾ ಪ್ರಾಣಿಯ ಮೂತ್ರದಿಂದ ನೀರಿನ ಮೂಲವನ್ನು ಈ ರೋಗಾಣು ಸೇರುತ್ತದೆ. ಅಲ್ಲಿ ಹಲವಾರು ವಾರಗಳು ಅಥವಾ ತಿಂಗಳವರೆಗೆ ಅದು ಇರಬಲ್ಲುದು. ಹಾಗಾಗಿ ಕೊಚ್ಚೆ ನೀರಿನ ಸಂಪರ್ಕದಿಂದ ದೂರ ಇರುವುದು ಅಗತ್ಯ. ಜ್ವರ, ನಡುಕ, ಸ್ನಾಯುನೋವು, ತಲೆನೋವು ಮುಂತಾದವು ಇದರ ಲಕ್ಷಣಗಳು.
ಹೊರಗೆ ಹೋಗುವಾಗ ಕಡ್ಡಾಯವಾಗಿ ಪಾದರಕ್ಷೆಗಳನ್ನು ಧರಿಸಿ. ಯಾವುದೇ ತೆರೆದ ಗಾಯಗಳಿದ್ದರೆ ಅದರಕ್ಕೆ ಚಿಕಿತ್ಸೆ ಪಡೆದುಕೊಳ್ಳಿ. ಈ ರೋಗಗಳಲ್ಲದೆ, ಕಾಮಾಲೆ ಅಥವಾ ಜಾಂಡೀಸ್, ಹೆಪಟೈಟಿಸ್ ಎ, ಗ್ಯಾಸ್ಟ್ರೋಎಂಟರೈಟಿಸ್ ಮುಂತಾದ ಹಲವಾರು ರೋಗಗಳು ಮಳೆಗಾಲದಲ್ಲಿ ಕಲುಷಿತ ನೀರು-ಆಹಾರದಿಂದ ಅಮರಿಕೊಳ್ಳುತ್ತವೆ
ತಡೆ ಹೇಗೆ?: ನೀರನ್ನು ಕುದಿಸಿಯೇ ಕುಡಿಯಿರಿ. ಆದಷ್ಟೂ ಹೊರಗಿನ, ಅದರಲ್ಲೂ ದಾರಿಬದಿಯ ಆಹಾರವನ್ನು ಸೇವಿಸಬೇಡಿ. ಮನೆಯಲ್ಲಿ ಆಹಾರ ವಸ್ತುಗಳನ್ನು ಮುಟ್ಟುವಾಗಲೂ ಕೈ ಶುಚಿ ಮಾಡಿಕೊಳ್ಳಿ. ಹಸಿಯಾಗಿ ಸೇವಿಸುವುದನ್ನು ಕಡಿಮೆ ಮಾಡಿ. ಹಣ್ಣುಗಳನ್ನು ತಿನ್ನುವ ಮುನ್ನ ಚೆನ್ನಾಗಿ ತೊಳೆಯಿರಿ. ನೀರಿನಲ್ಲಿ ಈಜುವುದು ಈ ದಿನಗಳಲ್ಲಿ ಸೂಕ್ತವಲ್ಲ. ಕೆಲವು ರೋಗಗಳಿಗೆ ಲಸಿಕೆಗಳು ಲಭ್ಯವಿದ್ದು, ಮುನ್ನೆಚ್ಚರಿಕೆಗೆ ಹಾಕಿಸಿಕೊಳ್ಳಬಹುದು.
ಗಾಳಿಯಲ್ಲಿ ಹರಡುವ ಸೋಂಕುಗಳು: ಶಾಲೆ ಆರಂಭವಾಗುವ ಸುಮೂರ್ತವೇ ಮಳೆಗಾಲದ ಆರಂಭಕ್ಕೂ ಒದಗಿ ಬರುವುದರಿಂದ, ಗಾಳಿಯಲ್ಲಿ ಹರಡುವ ನಾನಾ ರೀತಿಯ ವೈರಸ್ ಸೋಂಕುಗಳು ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತವೆ. ನಂತರ, ಮನೆಮಂದಿಗೆಲ್ಲಾ ಹರಡುತ್ತದೆ.
ಇದನ್ನೂ ಓದಿ: Hair care in Monsoon: ಮಳೆಗಾಲದಲ್ಲಿ ತಲೆಕೂದಲು ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್
ನೆಗಡಿ, ಕೆಮ್ಮು: ಮಳೆಗಾಲದ ಆರಂಭಕ್ಕೆ ಮೂಗಿನಲ್ಲೂ ಮಳೆ ಆರಂಭವಾಗುವುದು ಸಾಮಾನ್ಯ. ಅದರಲ್ಲೂ ಮಕ್ಕಳು, ವೃದ್ಧರು ಮತ್ತು ಚೇತರಿಕೆಯಲ್ಲಿರುವ ರೋಗಿಗಳಿಗೆ ಇದರ ಉಪಟಳ ಹೆಚ್ಚು. ಮೊದಲಿಗೆ ನೆಗಡಿ, ನಂತರ ಕೆಮ್ಮು, ಒಮ್ಮೊಮ್ಮೆ ಮುಂದುವರಿದು ಜ್ವರ, ಗಂಟಲು ನೋವು ಎಂದೆಲ್ಲಾ ಸರಣಿ ಬೆಳೆಯುತ್ತಾ ಹೋಗುತ್ತದೆ.
ಫ್ಲೂ: ಇನ್‌ಫ್ಲುಯೆನ್ಜಾ ಎನ್ನಲಾಗುವ ಫ್ಲೂ ವೈರಸ್‌ಗಳು ತಂಟೆ ಮಾರಿಗಳು. ಕೆಮ್ಮಿದಾಗ, ಸೀನಿದಾಗ ಇವು ಗಾಳಿಯಲ್ಲಿ ಸೇರುತ್ತವೆ. ಜ್ವರ, ಚಳಿ, ಗಂಟಲು ನೋವು, ನೆಗಡಿ, ಕೆಮ್ಮು, ಸ್ನಾಯುನೋವು, ತಲೆ ನೋವು, ಸುಸ್ತು, ವಾಂತಿ, ಡಯರಿಯಾ- ಇವುಗಳಲ್ಲಿ ಒಂದಿಷ್ಟು ಅಥವಾ ಎಲ್ಲಾ ಲಕ್ಷಣಗಳೂ ಕಾಣಿಸಬಹುದು. ಕೆಲವೊಮ್ಮೆ ಕಫ ಬಿಗಿದು ಉಬ್ಬಸವನ್ನೂ ಎಬ್ಬಿಸಬಹುದು.
ಮುನ್ನೆಚ್ಚರಿಕೆ ಹೇಗೆ?: ಕೆಮ್ಮುವಾಗ, ಸೀನುವಾಗ ಮೂಗು, ಬಾಯಿಗಳನ್ನು ಮುಚ್ಚಿಕೊಳ್ಳಿ. ಸೋಂಕು ಇದ್ದರೆ ಮಾಸ್ಕ್ ಧರಿಸಿ, ಇತರರಿಗೆ ಹರಡದಂತೆ ಜಾಗ್ರತೆ ಮಾಡಿ. ಸೋಂಕು ಇರುವವರಿಂದ ಮಕ್ಕಳು, ವೃದ್ಧರನ್ನು ದೂರ ಇಡಿ. ನೈರ್ಮಲ್ಯದ ಅಭ್ಯಾಸವನ್ನು ಮಕ್ಕಳಿಗೆ ಮಾಡಿಸಿ. ಬೆಚ್ಚಗಿನ ನೀರನ್ನು ಸಾಕಷ್ಟು ಕುಡಿಯಿರಿ. ಮನೆಯಲ್ಲಿ ಸಾಕಷ್ಟು ಗಾಳಿ-ಬೆಳಕು ಇರುವಂತೆ ನೋಡಿಕೊಳ್ಳಿ. ಈ ಯಾವುದೇ ಸೋಂಕುಗಳಿಗೆ ಸ್ವಯಂವೈದ್ಯ ಮಾಡಿಕೊಳ್ಳಬೇಡಿ, ಆಸ್ಪತ್ರೆಗೆ ತೆರಳಿ.
ಇದನ್ನೂ ಓದಿ: Monsoon Travel Tips: ʻಮಳೆಗಾಲದಲ್ಲಿ ಪ್ರವಾಸʼ ಎಂಬ ದಿವ್ಯಾನುಭೂತಿ: ಹೊರಡುವಾಗ ಇವಿಷ್ಟು ನೆನಪಿರಲಿ!
ಆರೋಗ್ಯ
Hair care in Monsoon: ಮಳೆಗಾಲದಲ್ಲಿ ತಲೆಕೂದಲು ಕಾಪಾಡಿಕೊಳ್ಳಲು ಇಲ್ಲಿವೆ ಟಿಪ್ಸ್
ನಿತ್ಯ ತಲೆಕೂದಲು ಒದ್ದೆಯಾಗುವುದು, ಸರಿಯಾಗಿ ಒಣಗದಿರುವುದು ಮಳೆಗಾಲದಲ್ಲಿ ಸಾಮಾನ್ಯ. ಮಳೆಗಾಲದಲ್ಲಿ ನಿಮ್ಮ ತಲೆಕೂದಲ ಬಗ್ಗೆ ಹೀಗೆ ಕಾಳಜಿ ವಹಿಸಿ.
ಬೇಸಗೆ ಎಂಬ ಧಗೆ ಮುಗಿದು ಮಳೆ ಶುರುವಾಗುತ್ತಿದ್ದಂತೆ ಮನಸ್ಸು ದೇಹ ಎರಡೂ ಮುದಗೊಂಡು ಉಲ್ಲಾಸಗೊಳ್ಳುತ್ತದೆ. ವಿಪರೀತ ಸೆಖೆಯಿಂದ ಅನುಭವಿಸುತ್ತಿದ್ದ ಕಿರಿಕಿರಿಯಿಂದ ಮುಕ್ತಿ ದೊರೆತು ಖುಷಿ ಸಿಗುತ್ತದೆ. ಆದರೆ, ಕೂದಲ ವಿಷಯಕ್ಕೆ ಬಂದರೆ ಮಾತ್ರ, ಬಹಳಷ್ಟು ಮಂದಿಗೆ ಮಳೆಯೆಂದರೆ ಕಿರಿಕಿರಿಯೇ. ಒದ್ದೆಕೂದಲ ಸಮಸ್ಯೆಗಳು ನೂರಾರು. ಕೂದಲುದುರುವುದರಿಂದ ಹಿಡಿದು, ತನ್ನ ಹೊಳಪನ್ನು ಕಳೆದುಕೊಂಡು ನಿಸ್ತೇಜವಾಗುವುದರವರೆಗೆ ಹತ್ತು ಹಲವು ತೊಂದರೆಗಳು ಇನ್ನಿಲ್ಲದಂತೆ ಕಾಡುತ್ತದೆ. ದಿನನಿತ್ಯ ಕೆಲವು ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಕೂದಲ ಆರೋಗ್ಯವನ್ನು (Hair care in Monsoon) ಕಾಪಾಡಬಹುದು.
1. ಕೂದಲನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಮಳೆಗೆ ಸಿಕ್ಕಿ ಒದ್ದೆಯಾದ ಮೇಲೆ ಕೂದಲನ್ನು ತೊಳೆದು ಮೆದುವಾಗಿ ಒತ್ತಿ ಒರೆಸಿಕೊಳ್ಳಿ. ಕೂದಲ ಬುಡವನ್ನೂ ಚೆನ್ನಾಗಿ ತೊಳೆದುಕೊಳ್ಳಿ. ಹೆಚ್ಚಿನ ಜಿಡ್ಡಿನಂಶ ಕೂದಲೆಡೆಯಲ್ಲಿ ಸಂಗ್ರಹವಾಗದಂತೆ ನೋಡಿಕೊಳ್ಳಿ. ನಿಮ್ಮ ಕೂದಲಿಗೆ ಸೂಕ್ತವಾಗುವ ಶಾಂಪೂ ಹಾಗೂ ಕಂಡೀಷನರ್ ಬಳಸಿ.
2. ಮಳೆಗಾಲದಲ್ಲಿ ಕೂದಲನ್ನು ಆಗಾಗ ಕತ್ತರಿಸಿಕೊಳ್ಳಿ. ಟ್ರಿಮ್ ಮಾಡಿಕೊಳ್ಳುವುದರಿಂದ ಸ್ಟೈಲ್ ಕಾಯ್ದುಕೊಳ್ಳುವುದೂ ಸಹಕಾರಿಯಾಗುತ್ತದೆ. ಆ ಮೂಲಕ ಕೂದಲ ಸೀಳುವಿಕೆ ಹಾಗೂ ಒಣಗುವಿಕೆಯಂತಹ ತೊಂದರೆಗಳಿಂದ ಮುಕ್ತರಾಗಬಹುದು.
3. ಮಳೆಗಾಲದ ಸಂದರ್ಭ ಅತಿಯಾದ ಸೆಖೆಯೂ ಇದ್ದರೆ, ವಾತಾವರಣದಲ್ಲಿ ನೀರಿನಂಶ ಜಾಸ್ತಿಯಾಗಿದ್ದರೆ, ಕೂದಲು ಬಡಕಲಾಗಿ ಹಾರಾಡುತ್ತಿರುತ್ತದೆ. ಬೇಕಾದ ಹಾಗೆ ಕೂದಲನ್ನು ಪಳಗಿಸಿ ಸೆಟ್ ಮಾಡಲು ಕಷ್ಟವಾಗುತ್ತದೆ. ಅದಕ್ಕಾಗಿ ಸೀರಮ್ ಬಳಕೆ ಮಾಡಬಹುದು.
4. ಕೂದಲನ್ನು ಹಾಗೇ ಬಿಡುವ ಬದಲು ಮಳೆಗಾಲದಲ್ಲಿ ಕಟ್ಟಿಕೊಳ್ಳಿ. ಒಂದು ಪೋನೀಟೇಲ್, ಬನ್, ಅಥವಾ ಒಂದು ಜಡೆ ಹೆಣೆದುಕೊಳ್ಳುವ ಮೂಲಕ ಟ್ರೆಂಡ್‌ನಲ್ಲಿಯೂ ಇರಬಹುದು.
5. ವಾಹನಗಳಲ್ಲಿ ಪ್ರಯಾಣ ಮಾಡುವ ಸಂದರ್ಭ ಸ್ಕಾರ್ಫ್ ಅಥವಾ ಹುಡ್ ಬಳಸಿಕೊಳ್ಳಬಹುದು. ಗಾಳಿಗೆ ಕೂದಲು ಹಾರಾಡಿ ಗಂಟುಗಳಾಗದಂತೆ ನೋಡಿಕೊಳ್ಳಿ.
6. ಅತಿಯಾದ ಉಷ್ಣತೆಯ ಉಪಕರಣಗಳಿಂದ ಕೂದಲು ಒಣಗಿಸಿಕೊಳ್ಳುವುವು ಸ್ಟೈಲಿಂಗ್ ಮಾಡಿಕೊಳ್ಳುವುದು ಕಡಿಮೆ ಮಾಡಿ. ಒದ್ದೆ ಕೂದಲನ್ನು ಒಣಗಿಸಲು ಪದೇ ಪದೇ ಡ್ರೈಯರ್ ಬಳಸಬೇಡಿ. ಅತಿಯಾದ ಉಷ್ಣತೆಗೆ ಕೂದಲು ಮತ್ತಷ್ಟು ಒಣಗಿಕೊಂಡು ನಿಸ್ತೇಜವಾಗಬಹುದು. ಸ್ಟೈಲಿಂಗ್ ಕ್ರೀಂಗಳು, ಜೆಲ್‌ಗಳಿಂದ ದೂರವಿರಿ. ಮಳೆಗಾಲದಲ್ಲಿ ಅವು ಇನ್ನಷ್ಟು ಹಾನಿ ಮಾಡುತ್ತವೆ.
7. ಮಳೆಗಾಲದಲ್ಲಿ, ಚಳಿಯಿದೆ ಎಂದು ಅತಿಯಾದ ಬಿಸಿನೀರಿಂದ ತಲೆಗೆ ಸ್ನಾನ ಮಾಡಬೇಡಿ. ಮಳೆಯಿರಲಿ, ಚಳಿಯಿರಲಿ, ಸೆಖೆಯಿರಲಿ, ಉಗುರು ಬೆಚ್ಚಗಿನ ನೀರು ಉತ್ತಮ.
ಇದನ್ನೂ ಓದಿ: Monsoon Driving: ಮಳೆಗಾಲದಲ್ಲಿ ಕಾರು ಪ್ರಯಾಣಕ್ಕೆ ಹೊರಡುವಾಗ ಈ ಟಿಪ್ಸ್ ಗಮನದಲ್ಲಿರಲಿ
8. ಸ್ನಾನ ಮಾಡುವ ಒಂದೆರಡು ಗಂಟೆ ಮೊದಲು ಕೂದಲ ಬುಡಕ್ಕೆ ಚೆನ್ನಾಗಿ ಎಣ್ಣೆ ಹಚ್ಚಿ ಮಸಾಜ್ ಮಾಡಿ ಆಮೇಲೆ ಸ್ನಾನ ಮಾಡಿ. ಕೂದಲಿಗೆ ಬೇಕಾದ ಆರೈಕೆಯ ಅರ್ಧ ಬಾಗ ಇಲ್ಲೇ ಸಿಗುತ್ತದೆ. ಆಗಾಗ, ಮೊಸರು, ಮೊಟ್ಟೆಯ ಬಿಳಿ ಲೋಳೆ, ಅಗಸೆ ಬೀಜಕ್ಕೆ ನೀರು ಸೇರಿಸಿ ಕುದಿಸಿ ಸೋಸಿದರೆ ಮನೆಯಲ್ಲೇ ಮಾಡಿದ ಜೆಲ್, ಅಥವಾ ಅಲೊವೆರಾ ಜೆಲ್ ಜೊತೆಗೆ ಹರಳೆಣ್ಣೆ ಅಥವಾ ಆಲಿವ್ ಎಣ್ಣೆ ಮಿಕ್ಸ್ ಮಾಡಿ ಮಾಡಿದ ಪ್ಯಾಕ್‌ಗಳನ್ನು ಆಗಾಗ ಹಚ್ಚಿ ಗಂಟೆ ಬಿಟ್ಟು ತಲೆ ತೊಳೆಯಿರಿ.
9. ಆಹಾರ ಕ್ರಮದ ಬಗ್ಗೆಯೂ ಗಮನವಿರಲಿ. ಅತಿಯಾದ ಜಿಡ್ಡಿನ ಪದಾರ್ಥಗಳು, ಎಣ್ಣೆ ತಿಂಡಿಗಳಿಂದ ದೂರವಿರಿ. ಪ್ರೊಟೀನ್‌ಯುಕ್ತ ಆಹಾರ, ಮೊಳಕೆ ಕಾಳುಗಳನ್ನು ಅಡುಗೆಯಲ್ಲಿ ಸೇರಿಸಿ. ಕೂದಲು ಆಂತರಿಕವಾಗಿಯೂ ಬಲಗೊಳ್ಳುತ್ತದೆ.
10. ಕೂದಲುದುರುವಿಕೆ ಹೆಚ್ಚಾಗಿದ್ದರೆ, ಈರುಳ್ಳಿಯೊಂದರ ಸಿಪ್ಪೆ ಸುಲಿದು, ಅದರ ರಸ ಹಿಂಡಿ, ತಲೆಯ ಬುಡಕ್ಕೆ ಹಚ್ಚಿಕೊಳ್ಳಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿಕೊಳ್ಳಬಹುದು. ವಾರಕ್ಕೆರಡು ಬಾರಿಯಂತೆ ಒಂದು ತಿಂಗಳು ನಿಯಮಿತವಾಗಿ ಮಾಡಿದಲ್ಲಿ, ಕೂದಲು ಸದೃಢವಾಗಿ ಉದುರುವುದು ಕಡಿಮೆಯಾಗಿ ಮತ್ತೆ ಹೊಳಪನ್ನು ಪಡೆದುಕೊಳ್ಳುತ್ತದೆ. ಇದು ಸಾಧ್ಯವಿಲ್ಲದಿದ್ದರೆ, ಈರುಳ್ಳಿಯನ್ನು ಹೊಂದಿದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡಿ ತೊಳೆದುಕೊಳ್ಳುವುದರಿಂದ ಸಮಸ್ಯೆಯಿಂದ ದೂರಾಗಬಹುದು.
ಇದನ್ನೂ ಓದಿ: Monsoon Home Care Tips : ಮಳೆಗಾಲದಲ್ಲಿ ಮನೆಯನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಹೇಗೆ?
ಆರೋಗ್ಯ
Vegan Life: ಈ ಬಾಲಿವುಡ್ ಹೀರೋಯಿನ್‌ಗಳು ವೇಗನ್ ಆಗಿಯೂ ಆರೋಗ್ಯವಾಗಿದ್ದಾರೆ!
ಮಾಂಸಾಹಾರದಿಂದ, ಸಸ್ಯಾಹಾರದಿಂದ ವೇಗನ್ ಆಗಿ ಬದಲಾಗಿರುವ ಬಾಲಿವುಡ್ ಸೆಲೆಬ್ರಿಟಿಗಳು ತಮ್ಮ ದೇಹಕ್ಕೆ ಪೋಷಕಾಂಶಗಳನ್ನು ಎಲ್ಲಿಂದ ಪಡೆಯುತ್ತಾರೆ?
ಬಾಲಿವುಡ್ ಸೆಲೆಬ್ರಿಟಿಗಳಲ್ಲಿ ಅನೇಕರು ಪ್ರಾಣಿಗಳ ಹಕ್ಕುಗಳಿಗಾಗಿ ಹೋರಾಡುತ್ತಾರೆ. ಅವುಗಳನ್ನು ಮಾಂಸಕ್ಕಾಗಿ ಕೊಲ್ಲುವುದನ್ನು ಇಷ್ಟಪಡುವುದಿಲ್ಲ. ಇಂಥವರ ಸಂಘಟನೆಗಳೇ ಇವೆ. ಸಸ್ಯಾಹಾರಿಗಳು ಎನಿಸಿಕೊಂಡವರು ಹಾಲು- ತುಪ್ಪ ಸೇವಿಸುತ್ತಾರೆ. ಆದರೆ ವೇಗನ್ ಎನಿಸಿಕೊಂಡವರು ಹಾಲು- ತುಪ್ಪ- ಬೆಣ್ಣೆ ಕೂಡ ಸೇವಿಸುವುದಿಲ್ಲ. ಯಾಕೆಂದರೆ ಇವು ಡೈರಿ ಉತ್ಪನ್ನಗಳು. ಇವರು ಸಸ್ಯಮೂಲದಿಂದ ಬಾರದ ಎಲ್ಲ ಆಹಾರವನ್ನೂ ನಿರಾಕರಿಸುತ್ತಾರೆ. ಡೈರಿ ಪ್ರಾಡಕ್ಟ್ ಸೇವಿಸುವುದಿಲ್ಲ. ಆದರೆ ಮನುಷ್ಯನ ಬಾಡಿಗೆ ಪ್ರಾಣಿಜನ್ಯವಾದ ಪೋಷಕಾಂಶಗಳೂ ಬೇಕಲ್ಲವೇ? ಅದಿಲ್ಲದೆ ಇರುವುದು ಹೇಗೆ ಸಾಧ್ಯ ಎಂದಿರಾ? ಸಾಧ್ಯವಿದೆ. ಹೀಗೆ ವೇಗನ್‌ಗಳಾಗಿ ಬದಲಾಗಿರುವ (vegan diet) ಅನೇಕ ಬಾಲಿವುಡ್ ಹೀರೋಯಿನ್‌ಗಳು ತಮ್ಮ ಆರೋಗ್ಯವನ್ನು ಚೆನ್ನಾಗಿಯೇ ಕಾಪಾಡಿಕೊಂಡಿದ್ದಾರೆ. ಅದು ಹೇಗೆ ಅಂತ ನೋಡೋಣ.
ಕಂಗನಾ ರಣಾವತ್
ಕೆಲವು ವರ್ಷಗಳ ಹಿಂದೆ ಕಂಗನಾ ರಣಾವತ್ (kangana ranaut) ಸಸ್ಯಾಹಾರಿಯಾಗಿ ಬದಲಾದಳು. ಡೈರಿ ಉತ್ಪನ್ನಗಳನ್ನು ಸೇವಿಸುವುದು ಆರೋಗ್ಯಕರವಲ್ಲ ಮತ್ತು ದೇಹದಲ್ಲಿ ಆಮ್ಲೀಯತೆಯನ್ನು ಹೆಚ್ಚಿಸುತ್ತದೆ ಎಂದು ಅರ್ಥ ಮಾಡಿಕೊಂಡಳು. ನಂತರ ವೇಗನ್ ಆಗಿ ಬದಲಾದಳು. ಇದು ಆಕೆಯ ಆಹಾರ ಪದ್ಧತಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿತು. ಈಗ ಆಕೆ ಪ್ರೊಟೀನ್‌ಗಳನ್ನು ಒಣಹಣ್ಣುಗಳು, ಬೀನ್ಸ್, ಸೋಯಾ ಮುಂತಾದವುಗಳಿಂದ ಪಡೆಯುತ್ತಾಳಂತೆ.
ಜಾಕ್ವೆಲಿನ್ ಫೆರ್ನಾಂಡಿಸ್
“ಮೂಕಪ್ರಾಣಿಗಳನ್ನು ರಕ್ಷಿಸಲು ಮತ್ತು ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ವೇಗನ್ ಆಗುವುದು ನೀವು ಮಾಡಬಹುದಾದ ಅತ್ಯುತ್ತಮ ಕೆಲಸʼʼ ಎಂಬುದು ಜಾಕ್ವೆಲಿನ್ ಫೆರ್ನಾಂಡಿಸ್ (jacqueline fernandez) ಮಾತು. ನಾನು ವೇಗನ್ ಆಗಿರುವುದರಿಂದ ನಂಗೆ ಒಳ್ಳೇದಾಗಿದೆ. ನಾನು ಎಲ್ಲರೊಂದಿಗೆ ಆ ಅದ್ಭುತ ವಿಚಾರ ಹಂಚಿಕೊಳ್ಳಲು ಇಷ್ಟಪಡುತ್ತೇನೆ ಎನ್ನುತ್ತಾಳೆ ಆಕೆ. 2014ರಲ್ಲಿ ಈಕೆಗೆ ಪೆಟಾದಿಂದ ʼವರ್ಷದ ಮಹಿಳೆ’ ಪ್ರಶಸ್ತಿಯೂ ಬಂದಿತ್ತು. ಸಾರ್ವಜನಿಕವಾಗಿ ಪ್ರಾಣಿಗಳ ಮೇಲಿನ ಪ್ರೀತಿ ವ್ಯಕ್ತಪಡಿಸಿದ ಸೆಲೆಬ್ರಿಟಿಗಳಲ್ಲಿ ಇವಳೂ ಒಬ್ಬಳು. ಈಕೆ ಚರ್ಮದ ಬೆಲ್ಟ್, ಚಪ್ಪಲಿ ಇತ್ಯಾದಿಗಳನ್ನೂ ಧರಿಸುವುದಿಲ್ಲವಂತೆ. ಈಕೆ ಬೇಳೆಕಾಳು, ಬೆರ್ರಿಗಳನ್ನು ಹೆಚ್ಚಾಗಿ ಸೇವಿಸುತ್ತಾಳೆ.
ಶ್ರದ್ಧಾ ಕಪೂರ್
2019ರಲ್ಲಿ ಶ್ರದ್ಧಾ ಕಪೂರ್ (Shraddha kapoor) ಸಸ್ಯಾಹಾರಿಯಾದಳು. ಸ್ವಲ್ಪ ಸಮಯದವರೆಗೆ ಸಸ್ಯಾಹಾರಿಯಾಗಿದ್ದಳು, ನಂತರ ವೇಗನ್ ಆಹಾರಕ್ಕೆ ಬದಲಾಯಿಸಿಕೊಂಡಳು. ಹಸುವಿನ ಹಾಲು ಸೇವಿಸುತ್ತಿದ್ದಳು; ನಂತರ ಅದನ್ನು ಬಾದಾಮಿ ಹಾಲಿಗೆ ಬದಲಾಯಿಸಿದಳು. ಈಕೆ ಕೆಲವು ಪರಿಸರ, ವನ್ಯ ಸಂರಕ್ಷಣಾ ಎನ್‌ಜಿಒಗಳಲ್ಲಿ ಭಾಗಿಯಾಗಿದ್ದಾಳೆ. ಬೇಳೆಕಾಳುಗಳು, ಓಟ್ಸ್, ಹಣ್ಣು- ತರಕಾರಿಗಳು ಈಕೆಯ ಪ್ರಿಯ ಆಹಾರ. ಸಪ್ಲಿಮೆಂಟ್ಸ್ ತೆಗೆದುಕೊಳ್ಳುವುದಿಲ್ಲ. ಬೆಳಗಿನ ಆಹಾರವಾಗಿ ಸೆರಿಯಲ್ ಬಳಸುತ್ತಾಳೆ. ಹಾಲು ಹಾಕಿದ ಕಾಫಿ- ಟೀ ಕುಡಿಯುವುದಿಲ್ಲ.
ಸೋನಮ್ ಕಪೂರ್
ವೇಗನ್ ಆಗುವ ಮೊದಲು ಈಕೆ ಸುದೀರ್ಘಕಾಲದವರೆಗೆ ಸಸ್ಯಾಹಾರಿಯಾಗಿದ್ದಳು. 2018ರಲ್ಲಿ ಈ ನಟಿ ಪೆಟಾದಿಂದ ʼವರ್ಷದ ವ್ಯಕ್ತಿ’ ಪ್ರಶಸ್ತಿ ಪಡೆದಳು. “ಪ್ರಾಣಿ ಸಹಾನುಭೂತಿಯೇ ನನ್ನ ಜೀವನದ ಸೂತ್ರ. ನಾನು ಈಗ ಸೋಯಾ ಹಾಲಿನ ಕಾಫಿ ಕುಡಿಯುತ್ತಿದ್ದೇನೆ. ನಾನು ಡೈರಿ ಉತ್ಪನ್ನ ಬಳಸುವುದಿಲ್ಲʼʼ ಎಂದಿದ್ದಾಳೆ.
ಇದನ್ನೂ ಓದಿ: World Vegan Day | ಇಂದು ವಿಶ್ವ ವೇಗನ್ ದಿನ, ಏನಿದು ವೇಗನ್, ಯಾಕೆ ಆಚರಣೆ?
ಸೋನಾಕ್ಷಿ ಸಿನ್ಹಾ
ಪ್ರಾಣಿ ಹಿಂಸೆ ಅಂದರೆ ಸೋನಾಕ್ಷಿ ಸಿನ್ಹಾಗೂ ಆಗುವುದಿಲ್ಲ. ಈಕೆ ಕೂಡ ಪೆಟಾ ಸಂಘಟನೆಯ ಪ್ರಿಯೆ. ಸಸ್ಯಾಹಾರಿಯಾಗಿ, ಬಳಿಕ ವೇಗನ್ ಆದಳು. ಸಸ್ಯಾಹಾರಿಯಾದ ನಂತರ ತನ್ನ ದೇಹ ಹೆಚ್ಚು ಹಗುರವಾಗಿದೆ, ಜೀರ್ಣಶಕ್ತಿ ಉತ್ತಮವಾಗಿದೆ. ನಾರಿನಂಶ ಜಾಸ್ತಿ ಇರುವ ತರಕಾರಿ ಮತ್ತು ಹಣ್ಣು ಹೆಚ್ಚಾಗಿ ಸೇವಿಸುತ್ತೇನೆ ಎನ್ನುತ್ತಾಳೆ.
ರಿಚಾ ಚಡ್ಡಾ
ರಿಚಾ ಚಡ್ಡಾ ಸಸ್ಯಾಹಾರಿಯಾಗಿದ್ದವಳು. ಮಾರುಕಟ್ಟೆಯಲ್ಲಿ ಬೃಹತ್ ಡೈರಿ ಉತ್ಪನ್ನಗಳಿಗಾಗಿ ಪ್ರಾಣಿಗಳಿಗೆ ಹಿಂಸೆಯಾಗುತ್ತದೆ ಎಂಬುದು ಅರಿವಾದಾಗ ವೇಗನ್ ಆಗಿ ಮಾರ್ಪಟ್ಟಳು. ಡೈರಿ ಆಹಾರ ಪದಾರ್ಥಗಳನ್ನು ತ್ಯಜಿಸಲು ನಿರ್ಧರಿಸಿದಳು. ಪಾಲಕ್, ಆಲೂಗಡ್ಡೆ, ತೋಫು ಇತ್ಯಾದಿಗಳಿಂದ ನನ್ನ ಪ್ರೋಟೀನ್ ಅಗತ್ಯಗಳನ್ನು ಪೂರೈಸಿಕೊಳ್ಳುತ್ತೇನೆ ಎಂದು ಹೇಳುತ್ತಾಳೆ. ಈಕೆ ಒಣ ಹಣ್ಣುಗಳನ್ನು ಹೆಚ್ಚಾಗಿ ತಿನ್ನುತ್ತಾಳೆ. ಗಿಡಮೂಲಿಕೆಗಳು, ಬೇವು, ಅಜ್ವೈನ್, ಪೇರಲ, ಪುದೀನಾ ಇತ್ಯಾದಿ ಸವಿಯುತ್ತಾಳೆ.
ಇದನ್ನೂ ಓದಿ: ಯುವಪೀಳಿಗೆಯಲ್ಲಿ ಟ್ರೆಂಡ್ ಆದ Vegan Diet | ತಪ್ಪು ಕಲ್ಪನೆ ನಿವಾರಿಸಿಕೊಳ್ಳಿ
-
ಸುವಚನ16 hours ago
ಸುವಚನ, ಶುಭನುಡಿ, ಪಂಚಾಂಗ, ಓಂಕಾರದ ಸಂಗಮ
-
ಪ್ರಮುಖ ಸುದ್ದಿ11 hours ago
EPF e-passbook : UMANG ಆ್ಯಪ್ನಲ್ಲಿ ನಿಮ್ಮ ಪಿಎಫ್ ಪಾಸ್ಬುಕ್ ಸುಲಭವಾಗಿ ಪರಿಶೀಲಿಸಿ
-
ಪ್ರಮುಖ ಸುದ್ದಿ13 hours ago
Apply for ration card : ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುವುದು ಹೇಗೆ?
-
ಅಂಕಣ24 hours ago
ವಿಧಾನಸೌಧ ರೌಂಡ್ಸ್: ರೌಂಡ್ ಟೇಬಲ್ ಸ್ನೇಹಿತರು ಮತ್ತು ವಿಧಾನಸೌಧದಲ್ಲಿ ಬದಲಾಗದ 40 % ಬ್ರಾಂಡ್!
-
ಉತ್ತರ ಕನ್ನಡ21 hours ago
Karwar News: ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಇಬ್ಬರು ಅಧಿಕಾರಿಗಳಿಗೆ 2 ವರ್ಷ ಜೈಲು
-
ಪ್ರಮುಖ ಸುದ್ದಿ16 hours ago
Horoscope Today : ಈ ರಾಶಿಯವರಿಗೆ ಇಂದು ಪ್ರೀತಿ ಅಂಕುರವಾಗಲಿದೆಯಂತೆ!
-
ಉತ್ತರ ಕನ್ನಡ22 hours ago
Karwar Accident: ಬೈಕ್ಗೆ ಅಪರಿಚಿತ ವಾಹನ ಡಿಕ್ಕಿಯಾಗಿ ಇಬ್ಬರು ಸವಾರರ ಸಾವು
-
ಪ್ರಮುಖ ಸುದ್ದಿ22 hours ago
ವಿಸ್ತಾರ ಸಂಪಾದಕೀಯ: ಶಾಲಾ ಬಾಲಕಿಯರಿಗೆ ವಿಷ: ಅಫಘಾನಿಸ್ತಾನದಲ್ಲಿ ಮನುಷ್ಯತ್ವ ಮರುಕಳಿಸುವುದು ಯಾವಾಗ?