ಗ್ಯಾಸ್/ಅಪಾನವಾಯು ಬಹಳ ಮಂದಿಗೆ ಸಮಸ್ಯೆ. ಎಲ್ಲರ ಮಧ್ಯೆ ಸಶಬ್ದವಾಗಿ ಗ್ಯಾಸ್ ಹೊರಬಂದರೆ ಮುಜುಗರವಾಗುವುದು ಸಾಮಾನ್ಯ. ಕೆಟ್ಟ ವಾಸನೆಯೂ ಇದ್ದರೆ ಕತೆ ಮುಗಿದಂತೆಯೇ. ಆರೋಗ್ಯಕ್ಕೆ ಸಂಬಂಧಿಸಿದಂತೆ ಇದು ಹೇಳಿಕೊಳ್ಳುವಂತಹ ಸಮಸ್ಯೆ ಅಲ್ಲದಿದ್ದರೂ ಬಹಳ ಮಂದಿ ತೊಂದರೆ ಪಡುವ, ಮುಜುಗರಕ್ಕೆ ಸಿಲುಕುವ ಸಮಸ್ಯೆಯಂತೂ ನಿಜ.
ಅಧ್ಯಯನದ ಪ್ರಕಾರ, ಆರೋಗ್ಯವಂತ ಮಂದಿ ದಿನಕ್ಕೆ ೧೩ರಿಂದ ೨೧ ಬಾರಿ ಗ್ಯಾಸ್ ಪಾಸ್ ಮಾಡುತ್ತಾರಂತೆ. ಆದರೆ, ಬಹುತೇಕ ಇವೆಲ್ಲವೂ ವಾಸನೆರಹಿತ ನಿರುಪದ್ರವಿ. ಯಾರು ಯಾವಾಗ ಎಷ್ಟು ಹೊತ್ತಿನಲ್ಲಿ ಗ್ಯಾಸ್ ಬಿಟ್ಟರು ಎಂಬುದು ಪಕ್ಕದವರಿಗೂ ಗೊತ್ತೇ ಆಗುವುದಿಲ್ಲ. ಹಾಗಾಗಿ ಪ್ರತಿದಿನ ಬಿಡುವ ಅಪಾನವಾಯು ಆರೋಗ್ಯಕರವೇ. ನಾವು ಉಸಿರಾಡುವ ಮಾತನಾಡುವ ಸಂದರ್ಭ ಬಾಯಿಯಿಂದ ಕುಡಿದ ಗಾಳಿಯೇ ಸಂಗ್ರಹವಾಗಿ ಇಂತಹ ನಿರುಪದ್ರವಿ ಅಪಾನವಾಯುವಾಗಿ ಹೊರಗೆ ಹೋಗುತ್ತವೆ.
ಆದರೆ ಸಮಸ್ಯೆಯಿರುವುದು ಕೊಳೆತು ನಾರುವ ಅಪಾನವಾಯುವಿನದ್ದೇ. ಟೊಮೇಟೋ, ಹಸಿ ಮೊಟ್ಟೆ ಕೊಳೆತು ಹೋದಂತ ವಾಸನೆಯ ಅಪಾನವಾಯು ಇದ್ದಕ್ಕಿದ್ದಂತೆ ಸಾರ್ವಜನಿಕ ಸ್ಥಳದಲ್ಲಿ ಪಸರಿಸಿದರೆ ಎಲ್ಲರೂ ಮೂಗು ಮುಚ್ಚಲೋ ಬೇಡವೋ ಎಂಬ ಹಿಂಸೆಯಿಂದ ನರಳಾಡಿಬಿಡುತ್ತಾರೆ. ಬಿಟ್ಟವರಿಗೂ, ಪಕ್ಕದಲ್ಲಿದ್ದವರಿಗೂ ಹಿಂಸೆಯೇ. ಇಂಥ ವಾಯುವಿನ ಸಮಸ್ಯೆಯಿದ್ದರೆ ನಿಮ್ಮ ಜೀರ್ಣಕ್ರಿಯೆಯ ಬಗ್ಗೆ ನೀವು ಗಮನ ಕೊಡಬೇಕೆಂಬುದೇ ಅರ್ಥ. ಸರಿಯಾಗಿ ಪಚನವಾಗದ ಆಹಾರದಿಂದ ಉಂಟಾಗುವ ಗ್ಯಾಸ್ ಇದು. ಸಮಸ್ಯೆಯ ಮೂಲ ಇರುವುದೇ ಅಲ್ಲಿ!
ನಿಮ್ಮ ಗ್ಯಾಸ್ ವಿಪರೀತ ವಾಸನೆಯಿಂದ ಕೂಡಿದ್ದರೆ ನೀವು ನಿಮ್ಮ ಆಹಾರದ ಮೇಲೆ ಗಮನ ಕೊಡಬೇಕು. ಮುಖ್ಯವಾಗಿ ಸಲ್ಫರ್‌ಯುಕ್ತ ಆಹಾರ ಸೇವನೆಯಿಂದ ವಾಸನೆಯುಕ್ತ ಗ್ಯಾಸ್ ಪಚನಕ್ರಿಯೆಯ ಸಂದರ್ಭ ಉತ್ಪಾದನೆಯಾಗುತ್ತದೆ. ಉದಾಹರಣೆಗೆ, ಕ್ಯಾಬೇಜ್, ಕಾಫಿ, ಡೈರಿ ಉತ್ಪನ್ನಗಳು, ಚಿಕನ್, ಆಲ್ಕೋಹಾಲ್ ಸೇವನೆ ಇತ್ಯಾದಿಗಳಿಂದ ಹೆಚ್ಚು ಗ್ಯಾಸ್ ದೇಹದಲ್ಲಿ ಉತ್ಪತ್ತಿಯಾಗುತ್ತದೆ. ಗ್ಯಾಸ್‌ಗೆ ಕಾರಣ ಇಷ್ಟೇ ಅಲ್ಲ. ಆಸ್ಪಿರಿನ್‌ನಂತಹ ಔಷಧಿಗಳಿಂದಲೂ ಗ್ಯಾಸ್ ಉಂಟಾಗುತ್ತದೆ. ಆಹಾರದ ಅಲರ್ಜಿಗಳೂ ಕೆಲವರಲ್ಲಿ ಗ್ಯಾಸ್ ಉಂಟು ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ಸಮಸ್ಯೆ ಇರುವ ಮಂದಿಯಲ್ಲೂ, ಮಲಬದ್ಧತೆ, ಅಜೀರ್ಣ ಕೂಡಾ ಈ ಕೆಟ್ಟ ವಾಸನೆಯ ವಾಯುವನ್ನು ತರಿಸುತ್ತದೆ.
ಹಾಗಾದರೆ, ಈ ತೊಂದರೆಗೆ ಆಗಾಗ ಸಿಲುಕುವ ಮಂದಿ ಕೆಲವು ಬಗೆಯ ಆಹಾರವನ್ನು ಸೇವಿಸುವುದನ್ನು ಕಡಿಮೆ ಮಾಡುವುದು ಉಚಿತ. ಕಾರ್ಬೋಹೈಡ್ರೇಟ್ ಹೇರಳವಾಗಿರುವ ಆಹಾರ ಇಂತಹ ಮಂದಿಗೆ ಒಳ್ಳೆಯದಲ್ಲ. ಲ್ಯಾಕ್ಟೋಸ್, ಫ್ರಕ್ಟೋಸ್, ಸ್ಟಾರ್ಚ್ ಹೆಚ್ಚಿರುವ ಆಹಾರಗಳನ್ನೂ ಕಡಿಮೆ ಮಾಡುವುದು ಒಳ್ಳೆಯದು. ಬೀನ್ಸ್, ಕ್ಯಾಬೇಜ್, ಮೊಳಕೆ ಕಾಳುಗಳು, ಬ್ರೋಕೋಲಿ, ಈರುಳ್ಳಿ, ಬೆಳ್ಳುಳ್ಳಿ, ಪೀಯರ್‌ನಂಯ ಹಣ್ಣುಗಳು, ಕಾರ್ಬೋನೇಟೆಡ್ ಡ್ರಿಂಕ್‌ಗಳು, ಡೈರಿ ಉತ್ಪನ್ನಗಳು, ಗೋಧಿ, ಜೋಳ, ಆಲೂಗಡ್ಡೆ ಹಾಗೂ ಇತರ ಸ್ಟಾರ್ಚ್ ಇರುವ ವಸ್ತುಗಳು ಹೆಚ್ಚು ಗ್ಯಾಸ್‌ಗೆ ಕಾರಣವಾಗುತ್ತದೆ. ಗ್ಯಾಸ್‌ಗೆ ಕಾರಣವಾಗುವ ಈ ಹಣ್ಣು ತರಕಾರಿಗಳು ತಮಗೆ ಹೊಂದುವುದಿಲ್ಲ ಎಂದು ಬಳಸದೇ ಇರುವುದಲ್ಲ. ಯಾಕೆಂದರೆ ಇವುಗಳು ಆರೋಗ್ಯಕ್ಕೆ ಅಗತ್ಯವಾಗಿ ಬೇಕಾದವುಗಳೇ ಆಗಿರುವುದರಿಂದ ಇವುಗಳನ್ನು ಸಮಸ್ಯೆ ಇರುವ ಮಂದಿ ಮಿತವಾಗಿ ಬಳಸಬಹುದು.
ಹಾಗಾದರೆ ಗ್ಯಾಸ್ ತೊಂದರೆ ನಿವಾರಣೆಗೆ ಏನು ಮಾಡಬಹುದು? ಕೆಲವು ಸುಲಭೋಪಾಯಗಳು ಹೀಗಿವೆ.
೧. ನಿಧಾನವಾಗಿ ತಿನ್ನಿ. ಗಬಗಬನೆ ತಿನ್ನುವ ಮಂದಿ ಆಹಾರದ ಜೊತೆಗೆ ಸಾಕಷ್ಟು ಗಾಳಿಯನ್ನೂ ತಿನ್ನುವ ಸಾಧ್ಯತೆ ಹೆಚ್ಚಿರುವುದರಿಂದ ಆಹಾರದ ಜೊತೆಗೆ ಸಾಕಷ್ಟು ಗಾಳಿಯೂ ಹೊಟ್ಟೆ ಸೇರುತ್ತದೆ. ಇದು ಗ್ಯಾಸ್‌ಗೆ ಕಾರಣವಾಗುತ್ತದೆ. ಹಾಗಾಗಿ ನಿಧಾನವಾಗಿ ತಿನ್ನುವುದು ಒಳ್ಳೆಯದು.
೨. ಧೂಮಪಾನ ಬಿಡಿ. ಪ್ರತಿ ಸಲ ಸಿಗರೇಟು ಸೇದುವಾಗಲೂ ಸಾಕಷ್ಟು ಗಾಳಿಯನ್ನೂ ಹೊಟ್ಟೆಯೊಳಗೂ ತೆಗೆದುಕೊಳ್ಳುವುದರಿಂದ ಗ್ಯಾಸ್ ಸಮಸ್ಯೆ ಹೆಚ್ಚಾಗುತ್ತದೆ. ಅದಕ್ಕಾಗಿ ಧೂಮಪಾನ ಬಿಡಿ.
೩. ವ್ಯಾಯಾಮ ಮಾಡಿ. ಸುಮ್ಮನೆ ಕೂತಿರುವುದೂ ಕೂಡಾ ಗ್ಯಾಸ್ ಹೆಚ್ಚಾಗುವಂತೆ ಮಾಡುತ್ತದೆ. ಹಾಗಾಗಿ ಪ್ರತಿದಿನವೂ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಗ್ಯಾಸ್ ಸಮಸ್ಯೆಗೆ ಕೊಂಚ ಪರಿಹಾರ ಕಾಣಬಹುದು.
೪. ಮಲಬದ್ಧತೆ ಸಮಸ್ಯೆಯಿದ್ದರೆ, ಮೊದಲು ಅದನ್ನು ಸರಿಪಡಿಸಿಕೊಳ್ಳಿ. ಮಲಬದ್ಧತೆಯಲ್ಲಿಯೇ ನಿಮ್ಮ ಗ್ಯಾಸ್ ಸಮಸ್ಯೆಯ ಗುಟ್ಟಿದೆ.
ಇದನ್ನೂ ಓದಿ | Diabetes Diet | ಮಧುಮೇಹ ನಿಯಂತ್ರಣಕ್ಕೆ ಇದೊಂದು ಸೂತ್ರ ನೆನಪಿಟ್ಟುಕೊಳ್ಳಿ
೫. ಚ್ಯೂಯಿಂಗ್ ಗಮ್ ಜಗಿಯುವುದನ್ನು ಬಿಡಿ. ಶುಗರ್ ಫ್ರೀ ಚ್ಯೂಯಿಂಗ್‌ಗಂಗಳಲ್ಲಿರುವ ಪ್ರಮುಖ ಪದಾರ್ಥ ಎಂದರೆ ಅದು ಹೆಕ್ಸಿಟಾಲ್. ಈ ಪದಾರ್ಥ ಜೀರ್ಣವಾಗದಿದ್ದರೂ ಗ್ಯಾಸ್ ಉಂಟಾಗುತ್ತದೆ. ಪದೇ ಪದೇ ಗಂ ಜಗಿಯುವ ಅಭ್ಯಾಸ ಇದ್ದರೆ ಕಡಿಮೆ ಮಾಡಿ, ಇಲ್ಲವೇ ಬಿಡಿ.
೬. ನಿಮಗೆ ಯಾವ ಆಹಾರದಿಂದ ಅಲರ್ಜಿ ಇದೆಯೆಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಇದು ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸವಿದೆ. ಅಂಥ ಆಹಾರವನ್ನು ಕಡಿಮೆ ಮಾಡಿ.
೭. ಮಜ್ಜಿಗೆಯಂಥ ಪ್ರೊಬಯಾಟಿಕ್ ಆಹಾರವನ್ನು ದಿನನಿತ್ಯ ಬಳಸಿ. ಎನ್‌ಜೈಮ್ ಸಪ್ಲಿಮೆಂಟ್ ಸೇವಿಸಬಹುದು.
೮. ಮನೆಮದ್ದುಗಳನ್ನು ಮಾಡಬಹುದು. ಉದಾಹರಣೆಗೆ ಜೀರಿಗೆ ನೀರು ಕುಡಿಯುವುದು, ಇಂಗನ್ನು ಬಿಸಿನೀರಿನಲ್ಲಿ ಅಥವಾ ಮಜ್ಜಿಗೆಯಲ್ಲಿ ಬೆರೆಸಿ ಕುಡಿಯುವುದು, ತುರಿದ ಶುಂಠಿಯನ್ನುನಿಂಬೆಹಣ್ಣಿನ ಜ್ಯೂಸ್ ಜೊತೆಗೆ ಹಾಕಿ ಊಟವಾದ ನಂತರ ಕುಡಿಯುವುದು, ಒಂದು ಕಪ್ ನೀರಿಗೆ ತ್ರಿಫಲ ಚೂರ್ಣ ಹಾಕಿ ಕುಡಿಯುವುದು ಇತ್ಯಾದಿಗಳನ್ನೂ ಮಾಡಬಹುದು.
ಇದನ್ನೂ ಓದಿ | World Heart day | ವಾಲ್ನಟ್ ತಿನ್ನಿ, ಹೃದಯದ ಆರೋಗ್ಯ ಕಾಪಾಡಿಕೊಳ್ಳಿ!