Site icon Vistara News

Fasting Tips: ನೀವು ಆಗಾಗ ಉಪವಾಸ ಮಾಡುತ್ತೀರಾ? ಹಾಗಾದರೆ ಇದನ್ನು ಓದಿ!

Fasting Tips

ಯುಗಾದಿಯ ನಂತರ ಈಗ ಚೈತ್ರ ನವರಾತ್ರಿತ ಸಂಭ್ರಮ. ಶರನ್ನವರಾತ್ರಿಯಲ್ಲಿ ಉಪವಾಸ ಮಾಡುವಂತೆಯೇ, ಈಗಲೂ ಉಪವಾಸದ ವ್ರತ ಇರಿಸಿಕೊಳ್ಳುವವರು ಬಹಳಷ್ಟು ಮಂದಿ ಇದ್ದಾರೆ. ಕೆಲವರು ಒಂಬತ್ತೂ ದಿನಗಳ ಕಾಲ ವ್ರತವನ್ನಿರಿಸಿಕೊಂಡರೆ, ಇನ್ನು ಕೆಲವರು ಆಯ್ದ ಒಂದೆರಡು ದಿನಗಳು ವ್ರತವನ್ನು ಇರಿಸಿಕೊಳ್ಳುತ್ತಾರೆ. ಆದರೆ ಅದಷ್ಟೂ ದಿನಗಳ ಕಾಲ ಸಾತ್ವಿಕ ಆಹಾರ, ಆಲ್ಕೋಹಾಲ್‌ ದೂರವಾದಂಥ ಜೀವನಶೈಲಿಯನ್ನು ಅಳವಡಿಸಿಕೊಂಡಿರುವುದು ಕಾಣುತ್ತದೆ. ಇವೆಲ್ಲವೂ ದೇಹದ ಚಯಾಪಚಯವನ್ನು ಸುಧಾರಿಸುವುದಕ್ಕೆ, ಡಿಟಾಕ್ಸ್‌ ಮಾಡುವುದಕ್ಕೆ ಅತ್ತ್ಯುತ್ತಮವಾದ ವಿಧಾನಗಳು ಎಂಬುದನ್ನು ಆಹಾರತಜ್ಞರು ಒಪ್ಪಿಕೊಂಡಿದ್ದಾರೆ. ಆದರೆ ಒಂಬತ್ತಕ್ಕೆ ಒಂಬತ್ತೂ ದಿನಗಳು ಉಪವಾಸ ಮಾಡುವುದು ಸರಿಯೇ? ರಂಜಾನ್‌ನಲ್ಲಿ ಒಂದು ತಿಂಗಳು ಉಪವಾಸ ಮಾಡುವುದಿಲ್ಲವೇ? ಹೀಗೆ ದೀರ್ಘ ಉಪವಾಸದಿಂದ (Fasting Tips) ಏನಾಗುತ್ತದೆ?
ಮೊದಲಿನಿಂದಲೂ ಚಾಲ್ತಿಯಲ್ಲಿರುವ ವಾರಕ್ಕೊಮ್ಮೆ ಒಪ್ಪತ್ತು, ಏಕಾದಶಿಗೆ ವ್ರತ, ಸಂಕಷ್ಟಿಗೆ ಉಪವಾಸದಂಥ ಕ್ರಮಗಳು ಆರೋಗ್ಯಕ್ಕೆ ಬೇಕಾದಂಥವು. ಇದರಿಂದ ಜೀರ್ಣಾಂಗಗಳಿಗೆ ಬೇಕಾದ ವಿರಾಮವೂ ದೊರೆತು, ಚಯಾಪಚಯ ಸುಧಾರಿಸುತ್ತದೆ. ಬೇಡದ್ದನ್ನು ದೇಹದಿಂದ ಹೊರಹಾಕಲು ಸಾಧ್ಯವಾಗುತ್ತದೆ. ಜೊತೆಗೆ ಉಳಿದಂತೆ ಆ ದಿನಗಳಲ್ಲಿ ತೆಗೆದುಕೊಳ್ಳುವ ಸಾತ್ವಿಕ ಆಹಾರದಿಂದ ಅನಗತ್ಯ ಕ್ಯಾಲರಿಗಳು ದೇಹ ಸೇರುವುದು ತಪ್ಪುತ್ತದೆ. ಇದರಿಂದ ತೂಕ ನಿಯಂತ್ರಣಕ್ಕೆ ಅನುಕೂಲ ಆಗಬಹುದು. ಆದರೆ ವಾರವಿಡೀ ಏಕಾದಶಿ, ತಿಂಗಳಿಡೀ ಸಂಕಷ್ಟಿ ಮಾಡುವುದು ಸರಿಯಲ್ಲ ಎನ್ನುತ್ತಾರೆ ಆಹಾರ ತಜ್ಞರು. ಇದಕ್ಕೆ ಕಾರಣಗಳು ಹಲವು.

ಇಂಥವರು ಜಾಗ್ರತೆ!

ಒಂದೆರಡು ದಿನಗಳ ಉಪವಾಸ ಒಳ್ಳೆಯದೆ. ಆದರೆ ದೀರ್ಘಕಾಲದ ಉಪವಾಸದಿಂದ ದೇಹ ಬಳಲಬಹುದು. ಅದರಲ್ಲೂ ಮಧುಮೇಹ ಮತ್ತು ರಕ್ತದೊತ್ತಡದಂಥ ಸಮಸ್ಯೆಗಳಿದ್ದರೆ ಇಂಥವೆಲ್ಲ ಸರಿಯಲ್ಲ. ಹಾಗೂ ಉಪವಾಸ ಮಾಡಬೇಕೆಂದಿದ್ದರೆ ಈ ಬಗ್ಗೆ ವೈದ್ಯರಲ್ಲಿ ಅಥವಾ ನೋಂದಾಯಿತ ಆಹಾರ ತಜ್ಞರಲ್ಲಿ ಸಮಾಲೋಚನೆ ಮಾಡುವುದು ಉತ್ತಮ. ಹೃದಯ ಸಮಸ್ಯೆಗಳು ಅಥವಾ ಕೋಮಾರ್ಬಿಟಿಸ್‌ ಇದ್ದವರಲ್ಲಿ ರಕ್ತದೊತ್ತಡ ಇಲ್ಲವೇ ಸಕ್ರೆಯಂಶಗಳು ಉಪವಾಸದಿಂದ ದಿಢೀರ್‌ ಏರಿಳಿತವಾಗುವ ಸಂಭವವಿದೆ. ಇದರಿಂದ ಜೀವಕ್ಕೂ ಅಪಾಯ ಸಂಭವಿಸಬಹುದು.

ಕೊರತೆ

ದೀರ್ಘ ಕಾಲದ ಉಪವಾಸದಿಂದ ದೇಹಕ್ಕೆ ಅಗತ್ಯವಾದ ನೀರು, ವಿಟಮಿನ್‌ಗಳು, ಖನಿಜಗಳು ಮತ್ತು ಎಲೆಕ್ಟ್ರೋಲೈಟ್‌ಗಳ ಕೊರತೆ ಎದುರಾಗಬಹುದು. ಅದರಲ್ಲೂ ನೀರೂ ಕುಡಿಯದಂಥ ನಿಟ್ಟುಪವಾಸದಿಂದ ಅಂಗಾಂಗ ವೈಫಲ್ಯಕ್ಕೆ ಒಳಗಾದವರೂ ಇದ್ದಾರೆ. ಹಾಗಾಗಿ ನಿಮ್ಮ ದೇಹದ ಸ್ಥಿತಿ-ಗತಿಯ ಬಗ್ಗೆ ಮೊದಲಿಗೆ ವೈದ್ಯರಲ್ಲಿ ಸಮಾಲೋಚಿಸಿ. ಅವರ ಸಲಹೆಯಂತೆ ವ್ರತವನ್ನು ಕೈಗೆತ್ತಿಕೊಳ್ಳಿ. ಅದರಲ್ಲೂ ವಾರಗಳ ದೀರ್ಘ ಉಪವಾಸದ ಉದ್ದೇಶವಿದ್ದರಂತೂ ಸಾಕಷ್ಟು ಎಚ್ಚರ ವಹಿಸಿ.

ಮಧ್ಯಂತರ ಉಪವಾಸ

ಸಾಮಾನ್ಯ ಉಪವಾಸಕ್ಕಿಂತ 16/8ರ ಮಧ್ಯಂತರ ಉಪವಾಸ ಮಾಡುವುದು ಹೆಚ್ಚು ಸುರಕ್ಷಿತ ಎನಿಸುತ್ತದೆ. ಅಂದರೆ 16 ತಾಸುಗಳ ಸತತ ಉಪವಾಸ, 8 ತಾಸುಗಳ ಆಹಾರ ಸೇವನೆಯ ಸಮಯ- ಈ ಸಮಯದಲ್ಲೇ ದೇಹಕ್ಕೆ ಅಗತ್ಯವಾದ ಸತ್ವಗಳನ್ನು ಹೊಂದಿದ ಸಮತೋಲಿತ ಆಹಾರದ ಸೇವನೆ- ಇದು ಮಧ್ಯಂತರ ಉಪವಾಸದ ಕ್ರಮ. ಉಪವಾಸ ಮುರಿದ ಎಂಟು ತಾಸುಗಳಲ್ಲಿ ಎರಡು ಅಥವಾ ಮೂರು ಬಾರಿ ಆಹಾರ ಸೇವಿಸಬಹುದು. ಈ ಕ್ರಮ ಹೆಚ್ಚಿನವರಲ್ಲಿ ಹೇಳುವಂಥ ಅಡ್ಡ ಪರಿಣಾಮಗಳನ್ನು ತೋರಿಸಿಲ್ಲ.

ಉಪಯೋಗವೇನು?

ಉಪವಾಸವನ್ನು ಸರಿಯಾದ ಕ್ರಮದಲ್ಲಿ ಮಾಡಿದಾಗ ಹಲವು ಧನಾತ್ಮಕ ಪರಿಣಾಮಗಳನ್ನು ದೇಹ ಬಿಂಬಿಸುತ್ತದೆ. ಚಯಾಪಚಯ ಚುರುಕಾಗುತ್ತದೆ; ತೂಕ ಇಳಿಕೆಗೆ ನೆರವಾಗುತ್ತದೆ; ಚರ್ಮದ ಆರೋಗ್ಯ ಸುಧಾರಿಸುತ್ತದೆ; ಮೆದುಳಿನ ಕ್ಷಮತೆ ಹೆಚ್ಚುತ್ತದೆ. ಆದರೆ ಅದನ್ನೇ ತಪ್ಪಾಗಿ ಮಾಡಿದರೆ ಸುಸ್ತು, ಆಯಾಸ, ತಲೆ ಸುತ್ತುವುದು, ರಕ್ತದೊತ್ತಡ ಏರಿಳಿಯುವುದು, ಸಕ್ಕರೆಯಂಶ ಹದ ತಪ್ಪುವುದು, ನಿರ್ಜಲೀಕರಣ ಮುಂತಾದ ಅಡ್ಡ ಪರಿಣಾಮಗಳು ತಲೆದೋರುತ್ತವೆ.

ಎಲ್ಲರೂ ಮಾಡಬಹುದೇ

ಒಂದೊಂದು ದಿನದ ಉಪವಾಸವನ್ನು ಹೆಚ್ಚಿನವರು ಮಾಡಬಹುದು. ಆದರೆ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು ಈ ಬಗ್ಗೆ ವೈದ್ಯರಲ್ಲಿ ಸಮಾಲೋಚಿಸಬೇಕು. ಉಪವಾಸದ ವಿಷಯದಲ್ಲಿ ಎಲ್ಲರಿಗೂ ಒಂದೇ ಸೂತ್ರವನ್ನು ಹೇಳಲಾಗದು. ಅವರವರ ದೇಹಸ್ಥಿತಿಯನ್ನು ಗಮನಿಸಿದ ನಂತರವೇ ಯಾರು, ಎಷ್ಟು ದಿನಗಳ ಕಾಲ ಉಪವಾಸ ಮಾಡಬಹುದು ಎಂಬುದನ್ನು ನಿರ್ಧರಿಸುವುದು ಸರಿಯಾದ ಕ್ರಮ.

ಇದನ್ನೂ ಓದಿ: Health Benefits of Walnuts: ವಾಲ್‌ನಟ್‌ ತಿಂದರೆ ಆಗುವ ಪ್ರಯೋಜನಗಳು ಹಲವು!

Exit mobile version