Site icon Vistara News

Fatty Lever Disease: ಎಚ್ಚರ ವಹಿಸಿ, ಮಕ್ಕಳನ್ನು ಸದ್ದಿಲ್ಲದೆ ಕಾಡುತ್ತಿದೆ ಫ್ಯಾಟಿ ಲಿವರ್‌ ಕಾಯಿಲೆ!

Fatty Lever Disease

ಟಿ ಲಿವರ್‌ ಸಮಸ್ಯೆ ಕೇವಲ (Fatty lever disease) ವಯಸ್ಕರಿಗೆ ಎಂದು ಭಾವಿಸಬೇಡಿ, ಮಕ್ಕಳಲ್ಲೂ ವ್ಯಾಪಕವಾಗುತ್ತಿದೆ ಎಂದು ಅಧ್ಯಯನಗಳು ಎಚ್ಚರಿಸುತ್ತಿವೆ. ದೋಷಪೂರಿತ ಆಹಾರಶೈಲಿಯ ಜೊತೆಗೆ ಆಟ, ಓಟಗಳೂ ಮಕ್ಕಳಲ್ಲಿ ಕಾಣೆಯಾಗಿರುವುದು ಆತಂಕವನ್ನು ಹೆಚ್ಚಿಸುತ್ತಿದೆ. ಮಕ್ಕಳ ಆಟವೆಂದರೆ ಏನೂ ಆದೀತು. ಕುಂಟಾಬಿಲ್ಲೆಯಿಂದ ಹಿಡಿದು, ಕಣ್ಣಾಮುಚ್ಚಾಲೆ, ಗಾಳಿಪಟ, ಮರಕೋತಿ, ಜೂಟಾಟ, ಜೋಕಾಲಿ… ಪಟ್ಟಿ ಉದ್ದವಾಗುತ್ತದೆ. ಆದರೆ ಈ ಯಾವ ಆಟಗಳೂ ಈಗಿನ ಮಕ್ಕಳಿಗಲ್ಲ, ಹಳೆಯ ಕಾಲದ ಚಿಣ್ಣರಿಗೆ. ಈಗಿನ ಮಕ್ಕಳ ಆಟದ ಪಟ್ಟಿಯನ್ನು ಕೊಡುವುದಾದರೆ ಫ್ರೀಫಯರ್‌, ಪಬ್‌ಜೀ, ಸಬ್‌ವೇ ಸರ್ಫರ್‌, ಕ್ಯಾಂಡಿ ಕ್ರಷ್…‌ ಇಂಥವೇ ಇರುತ್ತವೆ ಅದರಲ್ಲಿ. ಸದಾ ಕಾಲ ಪರದೆಗೇ ಅಂಟಿಕೊಂಡಿರುವ ಈ ಮಕ್ಕಳಲ್ಲಿ ಹೊರಗಿನ ಆಟ ಲುಪ್ತವಾದ್ದರಿಂದ ಆಗುತ್ತಿರುವ ಸಮಸ್ಯೆಗಳು ಒಂದೆರಡೇ ಅಲ್ಲ. ಕೇವಲ ದೃಷ್ಟಿದೋಷವನ್ನು ಮಾತ್ರವೇ ಪರದೆಯ ವ್ಯಸನ ನೀಡುತ್ತಿಲ್ಲ, ಜೊತೆಗೆ ಫ್ಯಾಟಿ ಲಿವರ್‌ನಂಥ ಗಂಭೀರವಾದ ಯಕೃತ್ತಿನ ಸಮಸ್ಯೆಗಳನ್ನು ಸಹ ನೀಡುತ್ತವೆ. ಅದರಲ್ಲೂ ಭಾರತದಲ್ಲಿ ಪ್ರತಿ ಮೂರನೇ ಮಗುವಿಗೆ ಯಕೃತ್ತಿನ ಕೊಬ್ಬು ಕಾಡುತ್ತಿದೆ ಎನ್ನುವುದು ಇತ್ತೀಚಿನ ಅಧ್ಯಯನಗಳ ಸಾರ.

ವಿವರಗಳು ಇಂತಿವೆ

ದಿನಕ್ಕೆ ಆರು ತಾಸುಗಳ ದೈಹಿಕ ಚಟುವಟಿಕೆಯನ್ನು ಮಾಡದ ಮಕ್ಕಳು ಯಕೃತ್ತಿನ ಸಮಸ್ಯೆಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ದೈಹಿಕ ಚಟುವಟಿಕೆಯೆಂದರೆ ಯಾವುದೋ ಕ್ರಮಬದ್ಧವಾದ ಆಟವನ್ನೇ ಮಕ್ಕಳು ಆಡಬೇಕೆಂದಿಲ್ಲ. ಕಳೆಯ ಕಾಲದ ಕುಂಟಾಬಿಲ್ಲೆ, ಜೂಟಾಟಗಳಿಂದ ಹಿಡಿದು ಯಾವುದೇ ರೀತಿಯ ಆಡುವ, ಓಡುವ, ಕುಣಿದು ಕುಪ್ಪಳಿಸುವ ಚಟುವಟಿಕೆಯೂ ಮಕ್ಕಳನ್ನು ಆರೋಗ್ಯಪೂರ್ಣವಾಗಿ ಇರಿಸುತ್ತದೆ. ಇಂಥ ಯಾವುದೇ ಚಟುವಟಿಕೆಗಳು ಮಕ್ಕಳಲ್ಲಿ ಫ್ಯಾಟಿ ಲಿವರ್‌ ಬಾರದಂತೆ ತಡೆಯುವಲ್ಲಿ ಶೇ. 33ರಷ್ಟು ಯಶಸ್ವಿಯಾಗುತ್ತವೆ ಎನ್ನುತ್ತವೆ ಕ್ಲಿನಿಕಲ್‌ ಮತ್ತು ಪ್ರಾಯೋಗಿಕ ಹೆಪಟಾಲಜಿ ವಿಭಾಗದ ಅಧ್ಯಯನಗಳು.

ಮುಂಚೂಣಿಯಲ್ಲಿ ಭಾರತ

ಮಧುಮೇಹ ಮತ್ತು ಬೊಜ್ಜಿನ ಸಮಸ್ಯೆಯ ನಂತರದ ಸ್ಥಾನವನ್ನು ಫ್ಯಾಟಿ ಲಿವರ್‌ ಆಕ್ರಮಿಸಿದೆ. ಈ ನಿಟ್ಟಿನಲ್ಲಿ ಯಕೃತ್ತಿನ ಕೊಬ್ಬನ್ನು ಹೊತ್ತ ಅತಿಹೆಚ್ಚು ಜನರನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಲು ಸಿದ್ಧತೆ ನಡೆಸಿದೆ. ಅಂದರೆ, ಸುಮಾರು ೫೦ ಕೋಟಿ ಜನಕ್ಕೆ ಯಕೃತ್‌ನ ತೊಂದರೆ ಕಾಡುತ್ತಿದೆ. ಪ್ರತಿ ಮೂರನೇ ಮಗು ಯಕೃತ್ತಿನ ತೊಂದರೆಗೆ ತುತ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಗುಜರಿ ತಿನಿಸುಗಳು, ಜಿಡ್ಡುಭರಿತ ಆಹಾರದ ಸೇವನೆ ಮಿತಿಮೀರಿ ಹೆಚ್ಚಿದೆ. ಹಾಗೆ ತಿಂದ ಮೇಲೆ ಅದನ್ನು ಕರಗಿಸಲು ವ್ಯಾಯಾಮ ಮಾಡಿ ಶಕ್ತಿ ವ್ಯಯಿಸುವ ಬದಲು, ಜೀರ್ಣಾಂಗಗಳೇ ಚೂರ್ಣಿಸುವ ಕೆಲಸವನ್ನು ಮಾಡಬೇಕೆಂದು ಅಪೇಕ್ಷಿಸುತ್ತೇವೆ. ಇಂಥ ಸಂದರ್ಭಗಳಲ್ಲಿ ಯಕೃತ್ತಿನಲ್ಲಿ ಕೊಬ್ಬು ಶೇಖರವಾಗತೊಡಗುತ್ತದೆ. ಇದು ಮಕ್ಕಳು-ವಯಸ್ಕರೆನ್ನದೆ ಎಲ್ಲರನ್ನೂ ಕಾಡುತ್ತಿದೆ. ಇದರಿಂದಾಗಿ ಅಲ್ಕೋಹಾಲ್‌ನಿಂದಾಗುವ ಫ್ಯಾಟಿ ಲಿವರ್‌ಗಿಂತಲೂ ಹೆಚ್ಚು ಅಲ್ಕೋಹಾಲ್‌ ಜನ್ಯವಲ್ಲದ ಫ್ಯಾಟಿಲಿವರ್‌ ಸಮಸ್ಯೆ ಕಂಡುಬರುತ್ತಿದೆ. ಇದಕ್ಕೆ ಮುಖ್ಯ ಕಾರಣಗಳು ಹಲವಿವೆ. ದೈಹಿಕ ಚಟುವಟಿಕೆ ಕ್ಷೀಣವಾಗಿರುವುದು ಎಲ್ಲಕ್ಕಿಂತ ಮು‍ಖ್ಯವಾಗಿದ್ದು. ಜೊತೆಗೆ, ಕರಿದ ತಿಂಡಿಗಳು, ಮಸಾಲೆ ಭರಿತ ಜಿಡ್ಡಿನ ಆಹಾರಗಳು, ಗುಜರಿ ತಿನಿಸುಗಳು, ಸಂಸ್ಕರಿತ ಸಕ್ಕರೆಯ ಪದಾರ್ಥಗಳ ಸೇವನೆ ಎಲ್ಲ ವಯೋಮಾನದವರಲ್ಲೂ ಹೆಚ್ಚಿದೆ. ಇದರಿಂದ ಯಕೃತ್ತಿನ ಸಮಸ್ಯೆ ಮಾತ್ರವಲ್ಲದೆ, ಕೊಲೆಸ್ಟ್ರಾಲ್‌, ಬೊಜ್ಜು, ಮಧುಮೇಹ, ಥೈರಾಯ್ಡ್‌ ಏರುಪೇರು, ಅಜೀರ್ಣ, ನಿದ್ರಾಹೀನತೆಯಂಥ ತೊಂದರೆಗಳು ಗಂಟು ಬೀಳುತ್ತವೆ.

ಇದನ್ನೂ ಓದಿ: Constipation Problem: ಮಲಬದ್ಧತೆಯ ಸಮಸ್ಯೆಯೇ? ಸರಳ ಪರಿಹಾರಗಳು ಇಲ್ಲಿವೆ!

ಬದಲಾವಣೆ ಅಗತ್ಯ

ನಿಯಮಿತವಾದ ವ್ಯಾಯಾಮ, ಸಂತುಲಿತ ಆಹಾರ, ಅಲ್ಕೋಹಾಲ್‌ ಮತ್ತು ಸಂಸ್ಕರಿತ ಆಹಾರಗಳ ಸೇವನೆಯಿಂದ ದೂರ ಇರುವುದು ಮುಂತಾದ ಕೆಲವು ಸರಳ ಬದಲಾವಣೆಗಳಿಂದ ನಮ್ಮ ಯಕೃತ್ತನ್ನು ಕ್ಷೇಮವಾಗಿ ಕಾಪಾಡಿಕೊಂಡು, ರೋಗಮುಕ್ತರಾಗಿ ಬದುಕುವುದಕ್ಕೆ ಸಾಧ್ಯವಿದೆ. ಆಹಾರದಲ್ಲಿ ಕೆಲವು ಮಾರ್ಪಾಡುಗಳನ್ನು ಮಾಡಿಕೊಳ್ಳುವುದರಿಂದ ಯಕೃತ್ತಿನ ಆರೋಗ್ಯ ಗಣನೀಯ ಪ್ರಮಾಣದಲ್ಲಿ ಸುಧಾರಿಸಬಲ್ಲದು. ಇವುಗಳ ಜೊತೆಗೆ ದಿನಕ್ಕೆ 30 ನಿಮಿಷಗಳ ದೈಹಿಕ ಚಟುವಟಿಕೆ ಕಡ್ಡಾಯವಾಗಿಬೇಕು.

ಗ್ರೀನ್‌ ಟೀ

ಹಲವು ರೀತಿಯ ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿರುವ ಈ ಪೇಯ, ದೇಹದಲ್ಲಿ ಉರಿಯೂತ ಶಮನ ಮಾಡಬಲ್ಲದು. ಇದರಿಂದ ಯಕೃತ್ತಿನ ಆರೋಗ್ಯವೂ ಸುಧಾರಿಸುತ್ತದೆ.

ಹಸಿರು ತರಕಾರಿಗಳು

ಎಲೆಕೋಸು, ಹೂಕೋಸು, ಬ್ರೊಕೊಲಿಯಂಥ ತರಕಾರಿಗಳು ಸಹ ಪಿತ್ತಜನಕಾಂಗದ ಆರೋಗ್ಯ ರಕ್ಷಣೆಗೆ ನೆರವಾಗಬಲ್ಲವು.

ಬೀಜಗಳು

ಆರೋಗ್ಯಕರ ಕೊಬ್ಬು ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುವ ಬಾದಾಮಿ, ವಾಲ್‌ನಟ್‌ ಮುಂತಾದ ಬೀಜಗಳು ಲಿವರ್‌ನ ಕ್ಷಮತೆಯನ್ನು ಹೆಚ್ಚಿಸಬಲ್ಲವು

ಬೆಳ್ಳುಳ್ಳಿ

ಪಿತ್ತಜನಕಾಂಗದ ಉರಿಯೂತವನ್ನು ಕಡಿಮೆ ಮಾಡಿ, ಉತ್ಕರ್ಷಣ ನಿರೋಧಕವಾಗಿಯೂ ಬೆಳ್ಳುಳ್ಳಿ ಕೆಲಸ ಮಾಡಬಲ್ಲದು.

ಬೆರ್ರಿಗಳು

ಬ್ಲೂಬೆರ್ರಿ, ಸ್ಟ್ರಾಬೆರ್ರಿಯಂಥವು ದೇಹಕ್ಕೆ ಹೆಚ್ಚಿನ ನಾರಿನಂಶದೊಂದಿಗೆ ಪಿತ್ತಜನಕಾಂಗದ ರಕ್ಷಣೆಗೆ ಅಗತ್ಯ ಸತ್ವಗಳನ್ನು ನೀಡಬಲ್ಲವು.

Exit mobile version