ಹಬ್ಬಗಳೆಂದರೆ ಉಳಿದ ಪೂಜೆಗಳಷ್ಟೇ ಹೊಟ್ಟೆ ಪೂಜೆಗೂ ಆದ್ಯತೆ ನೀಡುವವರು ನಾವು. ದೇವರಿಗೆ ಇಡುವ ನೈವೇದ್ಯಕ್ಕಿಂತ ನಮ್ಮ ನೈವೇದ್ಯವೇ ಹೆಚ್ಚಾಗಿ ಬಿಡುತ್ತದೆ. ಅದರಲ್ಲೂ ದೀಪಾವಳಿಯೆಂದರೆ ಕೇಳಬೇಕೆ- ಬೆಳಕಿನ ಜೊತೆಗೆ ಸಿಹಿ ತಿನಿಸುಗಳದ್ದೂ ಹಬ್ಬ. ʻಹಬ್ಬದಾಚರಣೆಗೆ ಎರಡು ವರ್ಷಗಳ ದೀರ್ಘ ರಜೆ ಇತ್ತಲ್ಲ, ಹಾಗಾಗಿ ಈ ವರ್ಷ ಸ್ವಲ್ಪ ಜೋರುʼ ಎನ್ನುವವರೇ ಹೆಚ್ಚು. ಹೊರಗೆ ಹಬ್ಬದ ತೋರಣ, ಒಳಗೆ ಸಿಹಿ ಹೂರಣ ಎಂಬ ಗಾದೆಯಂತೆ ಹಬ್ಬದಡುಗೆಯೂ ಭರ್ಜರಿಯಾಗೇ ಇರಲಿದೆ. ನೆಂಟರು-ಇಷ್ಟರು, ಬಂಧು-ಬಾಂಧವರು ಎಲ್ಲರೂ ಸೇರಿದಾಗಂತೂ ಹೊಟ್ಟೆ ಅರಿಯದೆಯೇ ಓವರ್‌ಲೋಡ್ ಆಗುತ್ತದೆ. ಆದರೆ ಹಬ್ಬ ಮುಗಿದ ಮೇಲೆ ನಮ್ಮ ಆರೋಗ್ಯ ಕೈಕೊಡುವುದೋ ಅಥವಾ ತೂಕ ಹೆಚ್ಚುವುದೋ ಆಗದಂತೆ ಏನು ಮಾಡಬಹುದು? ಈ ವಿಷಯಗಳತ್ತ ಗಮನ ನೀಡಿ-
ಇಂಥವು ಬೇಡ: ಅತಿಯಾದ ಸಕ್ಕರೆ ಮತ್ತು ಮೈದಾ ಹಾಕಿದ ಸಿಹಿಗಳನ್ನು ಬದಿಗೊತ್ತಿ. ದೇಹದಲ್ಲಿ ಉರಿಯೂತ ಹೆಚ್ಚುವುದಕ್ಕೆ ಇವೆರಡೂ ಸಮಾನ ಕೊಡುಗೆಗಳನ್ನು ನೀಡುತ್ತವೆ. ದೇಹದಲ್ಲಿರುವ ಚಿಕ್ಕ-ಪುಟ್ಟ ಎಲ್ಲಾ ಕಾಯಿಲೆಗಳಿಗೂ ಪುಷ್ಟಿ ನೀಡುವಂಥ ಸಾಮರ್ಥ್ಯ ಉಳ್ಳವು ಇವು. ಇನ್ನು ಕರಿದ ತಿಂಡಿಗಳೂ ಸಹ ಅಸಿಡಿಟಿಯಿಂದ ಹಿಡಿದು ಹೃದ್ರೋಗಗಳವರೆಗೆ ನಾನಾ ರೀತಿಯ ಸಮಸ್ಯೆಗಳನ್ನು ತಂದೊಡ್ಡಬಲ್ಲವು. ಅದರಲ್ಲೂ ಅತಿಯಾದ ಸಕ್ಕರೆ ಮತ್ತು ಮೈದಾ ಹೊಂದಿದ ಕರಿದ ತಿಂಡಿಗಳಂತೂ- ರೋಗಗಳ ಧಮಾಕಾ ನೀಡಬಲ್ಲವು. ಜಾಗ್ರತೆ ಮಾಡಿ.
ಇಂಥವು ಇರಲಿ: ಕೃತಕ ಸಿಹಿಯ ಬದಲು ನೈಸರ್ಗಿಕ ಸಿಹಿ ಹೊಂದಿದ ತಿನಿಸುಗಳಿಗೆ ಆದ್ಯತೆ ನೀಡಿ. ಉದಾ, ಸಕ್ಕರೆ ಹೋಳಿಗೆಯ ಬದಲಿಗೆ ಖರ್ಜೂರದ ಹೋಳಿಗೆ ಅಥವಾ ಬರ್ಫಿಯ ಆಯ್ಕೆ ಸಾಧ್ಯವೇ? ಆಗದಿದ್ದರೆ, ಬೆಲ್ಲದ ತಿನಿಸುಗಳಿಗೆ ಮನಸ್ಸು ಮಾಡಬಹುದಲ್ಲ. ಹಲವಾರು ರೀತಿ ಖೀರು, ಪಾಯಸ, ಹೋಳಿಗೆ, ಪರಮಾನ್ನಗಳು ಸಕ್ಕರೆಗಿಂತ ಬೆಲ್ಲದಲ್ಲೇ ರುಚಿಯಾಗುತ್ತವೆ.
ಇವು ಕ್ಷೇಮ: ಸಿಹಿ ತಿನಿಸನ್ನು ಆಯ್ದುಕೊಳ್ಳುವಾಗ ಪ್ರೊಟೀನ್ ಮತ್ತು ನಾರು ಹೆಚ್ಚಿರುವ ತಿಂಡಿಗಳಿಗೆ ಆದ್ಯತೆ ನೀಡಿ. ಉದಾ, ಬೂಂದಿ ಲಾಡಿನ ಬದಲು, ಬೇಸನ್ ಲಾಡು, ರವೆ ಲಾಡುಗಳು ಕ್ಷೇಮ. ಸಿರಿಧಾನ್ಯಗಳ ಲಾಡು ಮಾಡಿದರಂತೂ ಇನ್ನೂ ಒಳ್ಳೆಯದು. ತಂಬಿಟ್ಟಿನ ಉಂಡೆಯೂ ಆರೋಗ್ಯಕರ. ಇಂಥ ಕೆಲವು ಸಿಹಿಗಳಿಗೆ ಸಕ್ಕರೆಯ ಬದಲು ಬೆಲ್ಲವನ್ನೂ ಬಳಸಬಹುದು.
ಇದನ್ನೂ ಓದಿ | ಪ್ರಾಚೀನ ಭಾರತದ ಈ 5 ಆಹಾರಗಳನ್ನು ಜನರು ಈಗಲೂ ಸೇವಿಸುತ್ತಾರೆ
ಇದೂ ಆದೀತು: ಹಾಲಿನ ಸಿಹಿಗಳು ಸಹ ಆರೋಗ್ಯಕರವೇ. ಆದರೆ ಹಾಲಿನೊಂದಿಗೆ ಬಳಸಲಾಗುವ ಇತರ ವಸ್ತುಗಳ ಬಗ್ಗೆ ಗಮನ ನೀಡಿ. ಬಾದಾಮಿ ಹಾಲು ಸುರಿದುಕೊಂಡು ಮೈದಾ ಮತ್ತು ಸಕ್ಕರೆಭರಿತ ಚಿರೋಟಿ ಮೆಲ್ಲುವುದು ಸರಿಯಾದ ಆಯ್ಕೆಯಲ್ಲ. ನಿಮಗೆ ನೀವೇ ಕಣ್ಣುಕಟ್ಟಿದರೆ ಆರೋಗ್ಯ ಹಾಳಾಗುವುದು ಯಾರದ್ದು?
ಮಿತಿ ಇರಲಿ: ಹಬ್ಬ ಪ್ರತಿ ವರ್ಷವೂ ಬರುವಂಥದ್ದೇ, ಇದೇನು ಕಡೆಯ ಬಾರಿಯಲ್ಲ. ಹಾಗಾಗಿ ನಮ್ಮ ದೇಹಕ್ಕೆ ಯಾವುದು ಬೇಕು ಎನ್ನುವುದರ ಜೊತೆಗೆ ಎಷ್ಟು ಬೇಕು ಅಥವಾ ಸಾಕು ಎಂಬುದೂ ನಮಗೆ ತಿಳಿದಿರಬೇಕು. ಒಂದೊಮ್ಮೆ ಸಿಹಿ ತಿಂದಿದ್ದು ಹೆಚ್ಚಾಯಿತು ಎನ್ನಿಸಿದರೆ ಊಟ ಕಡಿಮೆ ಮಾಡಿ. ಬರೀ ಸಾಲಡ್-ಕೋಸಂಬರಿಗಳೇ ಸಾಕು ಎನಿಸಿದರೆ ಅದೂ ಸರಿಯೇ. ಅಂತೂ ಹೊಟ್ಟೆ ಭಾರ ಆಗದಿದ್ದರಾಯಿತು.
ತಿನ್ನುವ ಆಹಾರದಲ್ಲಿ ಸಾಕಷ್ಟು ಪ್ರೊಟೀನ್ ಮತ್ತು ನಾರು ಇರುವಂತೆ ನೋಡಿಕೊಂಡರೆ, ಸಿಕ್ಕಾಪಟ್ಟೆ ಸಿಹಿ ತಿನ್ನುವ ಬಯಕೆಯೂ ಅಡಗುತ್ತದೆ. ಮುಖ್ಯವಾಗಿ, ಹಿತ-ಮಿತವಾಗಿ ತಿಂದರೆ ದೇಹ ಜೀರ್ಣಿಸಿಕೊಳ್ಳುತ್ತದೆ. ಆರೋಗ್ಯವೂ ಸುರಕ್ಷಿತವಾಗಿರುತ್ತದೆ. ಅತಿಯಾದರೆ ಅಮೃತವೂ ವಿಷ ಎನ್ನುವುದನ್ನು ಮರೆಯದಿರಿ.
ಇದನ್ನೂ ಓದಿ | smart kitchen: ಜಾಣ ಅಡುಗೆಗೆ ಒಂದಿಷ್ಟು ಕಿವಿಮಾತುಗಳು