Site icon Vistara News

Hair Care Tips: ಕೂದಲು ಉದುರೋದಕ್ಕೆ ಕಾರಣ ಏನು ಅನ್ನೋದನ್ನ ಮೊದಲು ತಿಳಿದುಕೊಳ್ಳಿ!

Hair Care Tips

ಕೂದಲು ಉದುರುವುದು ಈಗ ಸಮಸ್ಯೆಯ ಬದಲಿಗೆ ಎಲ್ಲರ ಪಾಲಿನ ನಿತ್ಯಸತ್ಯವಾಗಿ ಪರಿಣಮಿಸಿದೆ. ಆದರೆ ಯಾವಾಗ ಹಣೆ ದೊಡ್ಡದಾಗುತ್ತಾ ಕೂದಲಿನ ಹಣೆಬರಹ ಸಣ್ಣದಾಗಲು ಪ್ರಾರಂಭಿಸುತ್ತದೊ ಆಗ ಆತಂಕವೂ ಶುರುವಾಗುತ್ತದೆ. ʻಛೇ! ಕೂದಲು ಉದುರುತ್ತಿದೆʼ ಎಂದು ಎದುರಿಗೆ ದೇಶಾವರಿ ಸಂತಾಪ ಸೂಚಿಸುವ ಜನ, ಬೆನ್ನ ಹಿಂದೆ ಬೊಕ್ಕ ತಲೆಯವರಿಗೆ ನಾನಾ ಹೆಸರಿಡುತ್ತಾರೆ ಎಂಬುದು ರಹಸ್ಯವೇನಲ್ಲ. ಹೇಳುವವರು ಏನೇ ಹೇಳಲಿ, ಆದರೆ ಕೂದಲು ಉದುರಿ ತಲೆ ಬೋಳಾಗುವುದು (Hair Care Tips ) ಸಂತೋಷದ ವಿಷಯವಂತೂ ಖಂಡಿತಾ ಅಲ್ಲ.

ವಯಸ್ಸಾದಂತೆ ಹಣೆ ಅಗಲವಾಗುತ್ತಾ ಹೋಗುವುದು ಸಾಮಾನ್ಯ ಸಂಗತಿ. ಇದು ವಂಶವಾಹಿಗಳಿಂದಲೂ ಬರುವುದಕ್ಕೆ ಸಾಧ್ಯ. ಮಹಿಳೆಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಬೊಕ್ಕತಲೆಯ ಸಮಸ್ಯೆ ಕಾಣುತ್ತದೆ. ಆದರೆ ಕಿರಿಯ ವಯಸ್ಸಿನಲ್ಲೇ ಹಣೆ ಅಗಲವಾಗಿ, ಕೂದಲ ಗಾತ್ರ ಕಿರಿದಾಗುವುದು ಇತ್ತೀಚಿನ ವರ್ಷಗಳಲ್ಲಿ ಹೆಚ್ಚುತ್ತಿದೆ. ಒಮ್ಮೆ ಕೂದಲ ಅಂಚುಗಳು ಹಿಂದೆ ಸರಿದು, ಹಣೆ ಅಗಲವಾಗುತ್ತಾ ಹೋದರೆ ಅದನ್ನು ನಿಲ್ಲಿಸುವುದು ಕಷ್ಟ. ಹೆಚ್ಚಿನ ಸಾರಿ ಇದಕ್ಕೆ ಪರಿಹಾರ ಹುಡುಕುವ ಭರದಲ್ಲಿ (haircare tips) ಇನ್ನಷ್ಟು ಹಾನಿಯನ್ನೇ ಮಾಡಿಕೊಳ್ಳುವ ಸಂದರ್ಭಗಳು ಹೆಚ್ಚು. ಆದರೆ ಹೀಗೇಕಾಗುತ್ತಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳುವುದಿಲ್ಲ

ಹಾನಿ ಹೆಚ್ಚುವುದು ಹೀಗೆ!

ಕೂದಲು ಉದುರುತ್ತಿರುವ ಕಾರಣವನ್ನು ಅರ್ಥ ಮಾಡಿಕೊಳ್ಳದೇ ನಮ್ಮಿಷ್ಟದಂತೆ ಮನೆಮದ್ದು ಮಾಡಿಕೊಳ್ಳುವುದರಿಂದ ಸಮಸ್ಯೆ ಬಿಗಡಾಯಿಸಬಹುದು. ಕೂದಲು ಉದುರುವುದಕ್ಕೆ ಕಾರಣಗಳು ನಾನಾ ರೀತಿಯಲ್ಲಿ ಇರುತ್ತವೆ. ಅತಿಯಾದ ಒತ್ತಡ, ನಿದ್ದೆಗೆಡುವುದು ಕಾರಣವಾಗಿದ್ದರೆ ಅದಕ್ಕೆ ಪರಿಹಾರ ಕಂಡುಕೊಳ್ಳಿ. ಸಮತೋಲನವಿಲ್ಲದ ಆಹಾರ ಪದ್ಧತಿ ನಿಮ್ಮದಾಗಿದ್ದರೆ, ಪೌಷ್ಟಿಕಾಂಶ ಕೂದಲಿಗೆ ಮಾತ್ರವಲ್ಲ, ಇಡೀ ದೇಹಕ್ಕೇ ಬೇಕಾಗುತ್ತದೆ. ಹಾರ್ಮೋನುಗಳ ತೊಂದರೆಯಿಂದಲೂ ಈ ಸಮಸ್ಯೆ ಕಾಣಬಹುದು. ಸೂಕ್ಷ್ಮ ಪೋಷಕಾಂಶಗಳ ಕೊರತೆ ಇದ್ದರೆ ಅದರ ಅಡ್ಡ ಪರಿಣಾಮ ಕೂದಲಿನ ಮೇಲಾಗುವ ಸಾಧ್ಯತೆಯಿದೆ. ಇಂಥ ಸಮಸ್ಯೆಗಳ ಪರಿಹಾರಕ್ಕೆ ವೈದ್ಯರನ್ನೇ ಸಂಪರ್ಕಿಸಬೇಕಾಗುತ್ತದೆ. ಇನ್ನು ವಂಶವಾಹಿಗಳು ಕಾರಣವಾಗಿದ್ದಲ್ಲಿ ಏನು ಮಾಡಿದರೂ ಪರಿಣಾಮ ಕಾಣುವುದು ಅನುಮಾನ.

ರಾಸಾಯನಿಕಗಳು

ಕೂದಲನ್ನು ಸೊಂಪಾಗಿಸುವ, ಉದುರುವುದನ್ನು ನಿಲ್ಲಿಸುವಂಥ ಜಾಹೀರಾತುಗಳನ್ನು ನೋಡಿ ಮರುಳಾದವರ ಸಂಖ್ಯೆ ಲೆಕ್ಕವಿಲ್ಲ. ಈ ಜಾಹೀರಾತುಗಳ ಸತ್ಯಾಸತ್ಯತೆಯನ್ನು ಪರಿಶೀಲಿಸಿದವರಾರು? ಕಠೋರವಾದ ಶಾಂಪೂಗಳು, ಅತಿಯಾದ ಕಂಡೀಶನರ್‌ ಬಳಕೆ, ಹೊಟ್ಟು ನಿವಾರಣೆಗೆ ಯದ್ವಾತದ್ವಾ ಚಿಕಿತ್ಸೆಗಳು, ಪ್ರತಿದಿನ ತಲೆಸ್ನಾನ ಮಾಡುವುದು, ಸಿಕ್ಕಾಪಟ್ಟೆ ಬಿಸಿನೀರು ಸ್ನಾನ ಮಾಡುವುದು ಇಂಥವೆಲ್ಲಾ ಕೂದಲಿಗೆ ನಿಶ್ಚಿತವಾಗಿ ಹಾನಿಯನ್ನು ಉಂಟುಮಾಡುತ್ತವೆ.

ಕೂದಲನ್ನು ಬಿಸಿ ಮಾಡಿ, ನೇರವೊ ಸುರುಳಿಯೊ ಮಾಡುವಂಥ ಉಪಕರಣಗಳನ್ನು ಅತಿಯಾಗಿ ಬಳಸುವುದು ಹಾನಿ ಮಾಡಬಹುದು. ಕೂದಲ ವಿನ್ಯಾಸಗಳಿಗಾಗಿ ಉಪಯೋಗಿಸುವ ಯಾವುದೇ ರಾಸಾಯನಿಕಗಳು ಮತ್ತು ಉಪಕರಣಗಳು ಒಂದಿಲ್ಲೊಂದು ಪರಿಣಾಮವನ್ನು ತಲೆಯ ಚರ್ಮ ಮತ್ತು ನೆತ್ತಿಯ ಮೇಲೆ ಉಂಟುಮಾಡುತ್ತವೆ. ಕೂದಲನ್ನು ಅತಿಯಾಗಿ ಬಾಚುವುದು ಮತ್ತು ತೀರಾ ಬಾಚದಿರುವುದು- ಈ ಎರಡೂ ಸಮಸ್ಯೆಗಳನ್ನು ತರಬಲ್ಲವು. ಕೂದಲನ್ನು ಸದಾಕಾಲ ಬಿಗಿಯಾಗಿ ಕಟ್ಟುವುದು, ಹಿಮ್ಮುಖವಾಗಿ ಎಳೆದು ಬಾಚುವುದರಿಂದಲೂ ಹಣೆ ಕ್ರಮೇಣ ಅಗಲವಾಗತೊಡಗುತ್ತದೆ. ನೆತ್ತಿಯ ಮೇಲೆ ಬಿಗಿಯಾಗಿ ಹೇರ್‌ಬ್ಯಾಂಡ್‌ ಧರಿಸುವುದು, ಸದಾ ಕ್ಯಾಪ್‌ ಹಾಕಿಕೊಳ್ಳುವುದು ಸಹ ಸಮಸ್ಯೆಗೆ ಕಾರಣವಾಗಬಲ್ಲವು.

ಕಾಳಜಿ ಹೀಗಿರಲಿ

ಮೊದಲಿಗೆ ಸೇವಿಸುವ ಆಹಾರದ ಬಗ್ಗೆ ನಿಗಾ ವಹಿಸಿ. ಕಬ್ಬಿಣ, ಜಿಂಕ್‌, ಬಯೋಟಿನ್‌, ವಿಟಮಿನ್‌ ಎ, ಇ ಮತ್ತು ಡಿ ಆಹಾರಗಳು ಹಾಗೂ ಸಾಕಷ್ಟು ಪ್ರೊಟೀನ್‌ ನಿಮ್ಮ ಆಹಾರದಲ್ಲಿರಲಿ. ಇದಕ್ಕಾಗಿ ಹಣ್ಣು, ತರಕಾರಿ, ಮೀನು, ಮೊಟ್ಟೆ, ಬೀಜಗಳು, ಸೊಪ್ಪು ಮತ್ತು ಮೊಳಕೆ ಕಾಳುಗಳನ್ನು ಆಹಾರದಲ್ಲಿ ಸೇರಿಸಿಕೊಳ್ಳಿ. ಚೆನ್ನಾಗಿ ನೀರು ಕುಡಿಯಿರಿ.

ದಿನಕ್ಕೆ ಎಂಟು ತಾಸುಗಳ ನಿದ್ದೆ ಅಗತ್ಯವಾಗಿ ಬೇಕು. ಇದರಿಂದ ದೇಹದ ರಿಪೇರಿ ಮಾತ್ರವಲ್ಲ, ಮನಸ್ಸಿನ ಒತ್ತಡ ನಿವಾರಣೆಗೂ ಅನುಕೂಲವಾಗುತ್ತದೆ. ವ್ಯಾಯಾಮ, ಆಸಕ್ತಿಯ ಹವ್ಯಾಸಗಳು, ಧ್ಯಾನ, ಪ್ರಾಣಾಯಾಮಗಳು ಕೂದಲು ಸೇರಿದಂತೆ ದೇಹದ ಎಲ್ಲಾ ಅಂಗಗಳ ಮೇಲೂ ಧನಾತ್ಮಕ ಪರಿಣಾಮ ಬೀರುತ್ತವೆ.

ಮೃದುವಾದ ಶಾಂಪೂಗಳನ್ನು ಬಳಸಿ. ಉಗುರು ಬಿಸಿ ನೀರೇ ಸಾಕಾಗುತ್ತದೆ ತಲೆಸ್ನಾನಕ್ಕೆ. ಕೂದಲ ಬುಡವನ್ನು ಶಕ್ತಿ ಹಾಕಿ ಉಜ್ಜುವಂಥದ್ದು ಏನೂ ಇರುವುದಿಲ್ಲ. ವಾರಕ್ಕೆರಡು ಬಾರಿ ನಿಯಮಿತವಾಗಿ ತಲೆಸ್ನಾನ ಮಾಡಿದರೆ, ಕೂದಲ ಕೊಳೆ ತೆಗೆಯುವುದಕ್ಕೆ ಸಾಕಾಗುತ್ತದೆ. ತಲೆಸ್ನಾನಕ್ಕೆ ಬಳಸುವ ನೀರು ತುಂಬಾ ಗಡುಸಾಗಿದ್ದರೂ ಸಮಸ್ಯೆಗೆ ನಾಂದಿಯಾಗಬಹುದು.

ಇವು ಬೇಡ

ಕೂದಲು ಉದುರುವುದಕ್ಕೆ ಪ್ರಾರಂಭವಾದ ಮೇಲೆ, ಅತಿಯಾದ ರಾಸಾಯನಿಕಗಳ ಬಳಕೆಯು ಸಮಸ್ಯೆಯ ತೀಕ್ಷ್ಣತೆಯನ್ನು ಹೆಚ್ಚಿಸುತ್ತದೆ. ಜೆಲ್‌, ವ್ಯಾಕ್ಸ್‌ ಅಥವಾ ಸ್ಪ್ರೇಗಳು ಈ ಸಾಲಿಗೆ ಸೇರುತ್ತವೆ. ಬದಲಿಗೆ, ಆಗಾಗ ಶುದ್ಧ ತೆಂಗಿನ ಎಣ್ಣೆಯಿಂದ ಕೂದಲ ಬುಡವನ್ನು ಲಘುವಾಗಿ ಮಸಾಜ್‌ ಮಾಡಿ. ಇದರಿಂದ ತಲೆಗೆ ರಕ್ತ ಸಂಚಾರ ಹೆಚ್ಚಿ, ಹೊಸ ಕೂದಲುಗಳ ಬೆಳವಣಿಗೆಗೆ ಸಹಾಯವಾಗುತ್ತದೆ.

ಕೂದಲುಗಳನ್ನು ಎಳೆದು ಬಿಗಿಯಾಗಿ ಹಿಮ್ಮುಖವಾಗಿ ಬಾಚಬೇಡಿ. ಅತಿ ಒರಟಾಗಿ ಬಾಚುವುದು ಸಹ ಸಲ್ಲದು. ಕೂದಲಿನ ಮೇಲೆ ಯಾವುದೇ ರೀತಿಯ ಬಲಪ್ರಯೋಗದಿಂದಲೂ ಬುಡ ಸಡಿಲವಾಗಿ, ಕೂದಲು ಬಲಹೀನವಾಗುತ್ತದೆ. ಆಮೇಲೆ ಉದುರುವುದೇ, ಇನ್ನೇನು!

ಡ್ರೈಯರ್‌ಗಳು, ಸುರುಳಿ ಅಥವಾ ನೇರ ಮಾಡುವಂಥ ಹೀಟಿಂಗ್‌ ಉಪಕರಣಗಳು ಬೇಡ. ತೀರಾ ಅಗತ್ಯ ಸಂದರ್ಭಗಳನ್ನು ಬಿಟ್ಟರೆ, ಉಳಿದಂತೆ ಪರ್ಮಿಂಗ್‌, ಬಣ್ಣ ಹಾಕುವಂಥ ಪ್ರಯೋಗಗಳು ಕೂದಲಿನ ಮೇಲೆ ಬೇಡ. ಒದ್ದೆ ಕೂದಲನ್ನು ಬಾಚುವ ಸಾಹಸ ಬೇಡ. ಇದರಿಂದ ಉದುರುವುದು ಇನ್ನಷ್ಟು ಹೆಚ್ಚುತ್ತದೆ.

ಇದನ್ನೂ ಓದಿ: Health Tips: ಅತಿಯಾಗಿ ಕೈತೊಳೆಯುತ್ತೀರಾ? ಹಾಗಾದರೆ ಎಚ್ಚರ, ಎಕ್ಸಿಮಾ ಕೂಡಾ ಬರಬಹುದು!

Exit mobile version