ನಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ (Food for Concentration) ಗುಟ್ಟಿರುವುದು ನಾವೇನು ಆಹಾರ ಸೇವಿಸುತ್ತೇವೆ ಎಂಬುದರ ಮೇಲೆ. ಈಗಾಗಲೇ ಅನೇಕ ಸಂಶೋಧನೆಗಳು ನಾವು ತಿನ್ನುವ ಆಹಾರಕ್ಕೂ ನಮ್ಮ ಮಾನಸಿಕ ಆರೋಗ್ಯಕ್ಕೂ ಸಂಬಂಧವಿದೆ ಎಂಬುದನ್ನು ಸಾಬೀತುಪಡಿಸಿವೆ. ಕೆಲವು ಆಹಾರಗಳು ಸಾಕಷ್ಟು ಪೋಷಕಾಂಶಗಳನ್ನು ಒಳಗೊಂಡು ಮಿದುಳಿನ ಆರೋಗ್ಯದ ಕಾಳಜಿ ವಹಿಸುತ್ತವೆ. ಮೀನು, ಮೊಟ್ಟೆ, ಡಾರ್ಕ್ ಚಾಕೋಲೇಟ್, ಬೆರ್ರಿಗಳು, ಒಣ ಬೀಜಗಳು, ಧಾನ್ಯಗಳು, ಬೇಳೆ ಕಾಳುಗಳು ಮಿದುಳಿನ ಆರೋಗ್ಯಕ್ಕೆ ಅತ್ಯಂತ ಸೂಕ್ತ. ಇವನ್ನು ತಿನ್ನುವುದರಿಂದ ಮಿದುಳಿನ ಆರೋಗ್ಯ ಹೆಚ್ಚುತ್ತದೆ. ಆದರೆ, ಕೆಲವು ಆಹಾರ ಸೇವನೆಯಿಂದ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳೂ ಆಗುತ್ತವೆ. ಅವು ಏಕಾಗ್ರತೆಯನ್ನೂ ಕ್ಷೀಣಿಸುವಂತೆ ಮಾಡಬಲ್ಲವು. ಬನ್ನಿ, ಯಾವೆಲ್ಲ ಆಹಾರಗಳು ಏಕಾಗ್ರತಾ ಶಕ್ತಿಯನ್ನೇ ಮೊಡಕುಗೊಳಿಸುತ್ತವೆ ಎಂಬುದನ್ನು ನೋಡೋಣ.
ಇವು ಅತಿಯಾದರೆ ಒಳ್ಳೆಯದಲ್ಲ
ಪೇಸ್ಟ್ರಿ, ಕೇಕ್, ವೈಟ್ ಬ್ರೆಡ್: ಕೇಕ್, ಪೇಸ್ಟ್ರಿಗಳು ಹಾಗೂ ಬ್ರೆಡ್‌ನಿಂದ ಮಾಡಿದ ಸ್ಯಾಂಡ್‌ವಿಚ್, ಬರ್ಗರ್, ಡೋನಟ್ ಇತ್ಯಾದಿಗಳೆಲ್ಲವೂ ಬಾಯಲ್ಲಿ ನೀರೂರುಸಬಹುದು. ನಿಮ್ಮ ಸಂಭ್ರಮವನ್ನು ಹೆಚ್ಚಿಸಬಹುದು. ಮಕ್ಕಳು ಇವಿದ್ದರೆ ಊಟ ಬಿಡಬಹುದು. ಆದರೆ, ಇವು ಅತಿಯಾದರೆ ಒಳ್ಳೆಯದಲ್ಲ. ಇವು ರಕ್ತದಲ್ಲಿರುವ ಸಕ್ಕರೆಯ ಮಟ್ಟವನ್ನು ಏರುಪೇರುಗೊಳಿಸುವ ಜೊತೆಗೆ ಮಿದುಳಿನ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರಬಹುದು.
ಹೆಚ್ಚು ಉಪ್ಪಿರುವ ತಿನಿಸುಗಳು
ಹೆಚ್ಚು ಉಪು ಒಳ್ಳೆಯದಲ್ಲ. ಹೆಚ್ಚು ಉಪ್ಪಿನ ಸೇವನೆಯಿಂದ ಮಿದುಳಿನ ಕಾರ್ಯನಿರ್ವಹಣೆಗೆ ಅಡ್ಡಿಯಾಗುತ್ತದೆ. ಹೆಚ್ಚು ಉಪ್ಪಿನಿಂದ ಕೆಲವೊಮ್ಮೆ ಮಿದುಳಿನಲ್ಲಿ ಉರಿಯೂತವೂ ಆಗಬಹುದು. ಸ್ಮರಣಶಕ್ತಿ ಕುಂಠಿತಗೊಳ್ಳುವುದು, ಏಕಾಗ್ರತೆಗೆ ಧಕ್ಕೆಯುಂಟಾಗುವುದು ಇತ್ಯಾದಿಗಳೂ ಆಗುವ ಸಂಭವ ಹೆಚ್ಚು.
ಸೋಡಾ ಹಾಗೂ ಸಕ್ಕರೆಯುಕ್ತ ಆಹಾರ
ಹೆಚ್ಚಿನ ಮಂದಿಗೆ ತಂಪಾದ ಸೋಢಾ, ಹಾಗೂ ಕಾರ್ಬೋನೇಟೆಡ್ ಡ್ರಿಂಕ್‌ಗಳನ್ನು ಸೇವಿಸುವುದರಿಂದ ಖುಷಿ, ಉಲ್ಲಾಸ ಸಿಗುತ್ತದೆ. ಆದರೆ, ಇವುಗಳ ಸೇವನೆಯಿಂದ ದಿಢೀರ್ ಸಕ್ಕರೆಯ ಅಂಶ ದೇಹದಲ್ಲಿ ಹೆಚ್ಚುತ್ತದೆ. ಸಿಹಿತಿನಿಸು, ಹಾಗೂ ಸಿಹಿಯಾದ ಡ್ರಿಂಕ್‌ಗಳನ್ನು ಕುಡಿಯುವುದರಿಂದಲೂ ಇದೇ ಆಗಬಹುದು. ಇಂತಹ ಸಿಹಿಯಿಂದ ಸಿಗುವ ಖುಷಿಗೆ ಒಗ್ಗಿಕೊಂಡ ಮನಸ್ಸು ದೇಹ ಹಲವು ಅಡ್ಡ ಪರಿಣಾಮಗಳನ್ನೂ ಕಾಣುತ್ತದೆ. ಮಾನಸಿಕವಾಗಿ ಒತ್ತಡ, ಖಿನ್ನತೆ, ಪಾರ್ಶ್ವವಾಯು, ಏಕಾಗ್ರತೆಯಲ್ಲಿ ಸಮಸ್ಯೆ ಇತ್ಯಾದಿಗಳಿಗೂ ಕಾರಣವಾಗಬಹುದು.
ಕಾಫಿ
ಕಾಫಿ ಕುಡಿಯುವುದರಿಂದ ಅದರಲ್ಲಿರುವ ಕೆಫಿನ್‌ನಿಂದಾಗಿ ನಿಮಗೆ ಶಕ್ತಿ ಇಮ್ಮಡಿಯಾಗಿ ಕೆಲಸದಲ್ಲಿ ಚುರುಕುತನ ಕಾಣಬಹುದು. ಆದರೆ, ಇದು ತಾತ್ಕಾಲಿಕ. ಆದರೆ ಇವು ಉದ್ವೇಗವನ್ನೂ ಹೆಚ್ಚು ಮಾಡುತ್ತದೆ. ಕೆಲವು ಮಂದಿಗೆ ಇದು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಪರಿಣಾಮ ಬೀರುತ್ತದೆ. ನಿದ್ದೆಯ ಸಮಸ್ಯೆ, ಒಂದೆಡೆ ಕೂರಲು ಸಾಧ್ಯವಾಗದಿರುವಂಥ ಏಕಾಗ್ರತೆಯ ಕೊರತೆ ಇತ್ಯಾದಿಗಳೂ ಕಾಣಿಸಿಕೊಳ್ಳಬಹುದು.
ಇದನ್ನೂ ಓದಿ: Mint Leaf Water: ಪುದಿನ ಎಲೆಗಳ ನೀರನ್ನು ನಿತ್ಯವೂ ಕುಡಿಯಿರಿ, ಈ ಲಾಭಗಳನ್ನು ಪಡೆಯಿರಿ!
ಶಕ್ತಿವರ್ಧಕ ಪೇಯಗಳು
ಬಹಳ ಮಂದಿ ನಿದ್ದೆಯನ್ನು ಮುಂದೂಡಲು ಕೆಲವು ಕೆಫಿನ್ ಇರುವ ಪೇಯಗಳು, ಶಕ್ತಿವರ್ಧಕ ಪೇಯಗಳನ್ನು ಕುಡಿಯುತ್ತಾರೆ. ಅದು ಆ ಕ್ಷಣಕ್ಕೆ ನಿದ್ದೆಯನ್ನು ಮುಂದೂಡಬಹುದು ನಿಜವಾದರೂ, ಭವಿಷ್ಯದಲ್ಲಿ ಒಳ್ಳೆಯದನ್ನು ಮಾಡಲಾರದು. ನಿರ್ಜಲೀಕರಣ, ಮೂತ್ರಶಂಕೆ ಅತಿಯಾಗುವುದು, ಮೂಡ್ ಏರುಪೇರು, ಉದ್ವೇಗ, ಏಕಾಗ್ರತೆಯ ಸಮಸ್ಯೆ ಇತ್ಯಾದಿ ಸಮಸ್ಯೆಗಳನ್ನು ತಂದೊಡ್ಡಬಹುದು.