Site icon Vistara News

Food Poisoning: ಫುಡ್‌ ಪಾಯ್ಸನ್‌ ಆದಾಗ ಏನು ಮಾಡಬೇಕು?

What is Food Poisoning?

ಬಾಲಿವುಡ್‌ ನಟಿ (Bollywood actress) ಜಾಹ್ನವಿ ಕಪೂರ್‌ (Janhvi Kapoor) ಫುಡ್‌ ಪಾಯ್ಸನ್‌ನಿಂದಾಗಿ (What is Food Poisoning?) ಆಸ್ಪತ್ರೆ ಸೇರಿದ ಸುದ್ದಿಯ ಬೆನ್ನಲ್ಲೇ ಈ ಸಮಸ್ಯೆಯ ಬಗ್ಗೆ ಒಂದಿಷ್ಟು ವಿವರಗಳನ್ನು ತಿಳಿಯುವ ಉದ್ದೇಶವಿದು. ಹೊಟ್ಟೆ ಹಾಳಾಗಿದೆ ಎಂದಾಕ್ಷಣ, ʻಫುಡ್‌ ಪಾಯ್ಸನ್‌ʼ ಆಗಿದೆ ಎಂಬ ಮಾತು ಕೇಳಿಬರುತ್ತದೆ.

ಕಲುಷಿತ ಆಹಾರದ ಸೇವನೆಯಿಂದ ಬರುವ ಸಮಸ್ಯೆಯಿದು ಎಂಬುದು ಎಲ್ಲರಿಗೂ ಗೊತ್ತು. ಹಾಗಾದರೆ ತಾರೆಯರಿಗೆ ಒಳ್ಳೆಯ ಆಹಾರ ಸೇವಿಸಬೇಕೆಂಬುದು ತಿಳಿದಿರುವುದಿಲ್ಲವೇ? ಎಲ್ಲೆಂದರಲ್ಲಿ ತಿಂದು ಹೀಗೆ ಹೊಟ್ಟೆ ಹಾಳು ಮಾಡಿಕೊಳ್ಳುತ್ತಾರೆಯೇ? ಏನು ಫುಡ್‌ ಪಾಯ್ಸನ್‌ ಎಂದರೆ? ಏನಿದರ ಲಕ್ಷಣಗಳು?

ಆಹಾರ ಕಲುಷಿತಗೊಳ್ಳುವುದಕ್ಕೆ ಹಲವು ಕಾರಣಗಳಿರಬಹುದು. ಬ್ಯಾಕ್ಟೀರಿಯ, ವೈರಸ್‌ ಅಥವಾ ಇತರ ಸೂಕ್ಷ್ಮಾಣುಗಳು ಅದರಲ್ಲಿ ಇರಬಹುದು. ಟಾಕ್ಸಿನ್‌ಗಳು ಸೇರಿರಬಹುದು. ಚಿಕಿತ್ಸೆಯ ನಂತರ ಈ ಸಮಸ್ಯೆ ಪೂರ್ಣ ಗುಣವಾಗುತ್ತದೆ. ಆದರೆ ಚಿಕ್ಕ ಮಕ್ಕಳು, ವೃದ್ಧರು, ಗರ್ಭಿಣಿಯರು ಅಥವಾ ರೋಗನಿರೋಧಕ ಶಕ್ತಿ ಕಡಿಮೆ ಇರುವವರಿಗೆ ಈ ಸಮಸ್ಯೆ ಹೆಚ್ಚಿನ ತೊಂದರೆಯನ್ನು ತರಬಹುದು.

ಆಹಾರದಲ್ಲಿ ಸಾಮಾನ್ಯವಾಗಿ ಬೆಳೆಯುವ ಸಾಲ್ಮೊನೆಲ್ಲ, ಇ. ಕೋಲಿ, ಲಿಸ್ಟೆರಿಯ ಮುಂತಾದ ಬ್ಯಾಕ್ಟೀರಿಯಗಳು, ನೊರೊವೈರಸ್‌, ಹೆಪಟೈಟಿಸ್‌ ಎ ಇನ್ನಿತರ ವೈರಸ್‌ಗಳು, ಟೊಕ್ಸೊಪ್ಲಾಸ್ಮದಂಥ ಸೂಕ್ಷ್ಮಾಣುಗಳು ಆರೋಗ್ಯ ಏರುಪೇರಾಗುವುದಕ್ಕೆ ಕಾರಣವಾಗುತ್ತವೆ.

ಲಕ್ಷಣಗಳೇನು?

ವಾಂತಿ, ಹೊಟ್ಟೆ ತೊಳೆಸುವುದು, ಅತಿಸಾರ, ಹೊಟ್ಟೆ ನೋವು, ಜ್ವರ, ತಲೆನೋವು, ಸುಸ್ತು, ನಿಶ್ಶಕ್ತಿ ಇತ್ಯಾದಿ. ಕಲುಷಿತ ಆಹಾರ ಸೇವಿಸಿದ ಒಂದೆರಡು ತಾಸುಗಳಲ್ಲೇ ಈ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಕೆಲವೊಮ್ಮೆ ಒಂದೆರಡು ದಿನವೂ ಆಗಬಹುದು. ಕೆಲವರು ಅಲ್ಪ ಕಾಲದ ಅನಾರೋಗ್ಯದ ನಂತರ ಚೇತರಿಸಿಕೊಳ್ಳುತ್ತಾರೆ. ಕೆಲವೊಮ್ಮೆ ಹಲವಾರು ದಿನಗಳೂ ಬೇಕಾಗಬಹುದು. ಒಂದೊಮ್ಮೆ ವಾಂತಿ-ಅತಿಸಾರದಂಥ ಲಕ್ಷಣಗಳು ಹೆಚ್ಚಾದರೆ ಆಸ್ಪತ್ರೆ ದರ್ಶನ ಮಾಡಲೇಬೇಕಾಗುತ್ತದೆ.

ಏನು ಮಾಡಬಹುದು?

ಲಕ್ಷಣಗಳು ಸೌಮ್ಯವಾಗಿದ್ದರೆ, ವೈದ್ಯರ ಸಲಹೆಯ ಮೇರೆಗೆ ಮನೆಯಲ್ಲೇ ಚಿಕಿತ್ಸೆ ಸಾಧ್ಯವಿದೆ. ವಾಂತಿ- ಅತಿಸಾರದಿಂದ ದೇಹ ಬಳಲಿದ್ದರೆ ಸಾಕಷ್ಟ ದ್ರವಾಹಾರವನ್ನು ಸೇವಿಸಿ. ಹಾಗಿಲ್ಲದಿದ್ದರೆ ನಿರ್ಜಲೀಕರಣದ ಅಪಾಯ ಎದುರಾಗಬಹುದು. ದೇಹಕ್ಕೆ ಏನೇ ಸಮಸ್ಯೆಯಾದರೂ, ಅದು ಗುಣವಾಗುವುದಕ್ಕೆ ವಿಶಾಂತಿ ಬೇಕು. ಚೆನ್ನಾಗಿ ನಿದ್ರೆ ಮಾಡಿ. ಇದಕ್ಕೆ ಏನು ಮದ್ದು ಮಾಡಬಹುದು ಎಂಬುದನ್ನು ಗೂಗಲ್‌ ಮಾಡುತ್ತಾ ಸಮಯ ಹಾಳು ಮಾಡಬೇಡಿ.

What is Food Poisoning?


ಆಹಾರ

ಬಾಳೆಹಣ್ಣು, ಅನ್ನ, ಸೇಬುಹಣ್ಣು ಮುಂತಾದ ಮೆತ್ತನೆಯ ಆಹಾರಗಳು ಈ ಹೊತ್ತಿಗೆ ಸೂಕ್ತ. ದಾಳಿಂಬೆ ಹಣ್ಣು ಅಥವಾ ರಸ ಹೊಟ್ಟೆಯ ತೊಂದರೆಗೆ ಆರಾಮ ನೀಡುತ್ತದೆ. ಹೊಟ್ಟೆಯ ಲಕ್ಷಣಗಳಿಂದ ಆಸಿಡಿಟಿ ಆಗಿದ್ದರೆ, ಎಳನೀರು ಮತ್ತು ಬೂದು ಕುಂಬಳಕಾಯಿಯ ರಸಗಳು ಆರಾಮ ನೀಡಬಲ್ಲವು.

ಶುಂಠಿಯ ಕಷಾಯ ಅಥವಾ ಚಹಾ ಸಹ ಉಪಶಮನ ನೀಡುತ್ತದೆ. ಮೊಸರು, ಮಜ್ಜಿಗೆ ಮುಂತಾದ ಪ್ರೊಬಯಾಟಿಕ್‌ ಆಹಾರಗಳು, ಪ್ರೊಬಯಾಟಿಕ್‌ ಎನ್‌ಜೈಮ್‌ಗಳು ಈ ಸಮಸ್ಯೆ ಬೇಗ ಗುಣವಾಗುವಲ್ಲಿ ಸಹಾಯ ಮಾಡುತ್ತವೆ.

ಇದನ್ನೂ ಓದಿ: Health Tips Kannada: ಚಹಾದಿಂದ ಅಸಿಡಿಟಿಯೇ? ಹಾಗಾದರೆ ನೀವು ಈ 5 ತಪ್ಪುಗಳನ್ನು ಮಾಡುತ್ತಿದ್ದೀರಿ ಎಂದರ್ಥ!


ತಡೆಯಲಾಗದೇ?

ಯಾಕಾಗದು? ಖಂಡಿತ! ಪ್ರತಿ ಬಾರಿ ಊಟ-ತಿಂಡಿಯ ಸಮಯಗಳಲ್ಲಿ ಕೈಗಳಲ್ಲಿ ಸರಿಯಾಗಿ ತೊಳೆದುಕೊಳ್ಳಿ. ಉಪಯೋಗಿಸುವ ತಟ್ಟೆ, ಚಮಚಗಳು ಸಹ ಸ್ವಚ್ಛವಾಗಿರುವುದು ಮುಖ್ಯ. ಮನೆಯಲ್ಲಿ ಉಳಿಕೆ ಆಹಾರವನ್ನು ಸಮರ್ಪಕವಾಗಿ ದಾಸ್ತಾನು ಮಾಡಿ. ಫ್ರಿಜ್‌ನಲ್ಲಿರುವ ಆಹಾರವನ್ನು ತಿನ್ನುವಾಗ, ಅವುಗಳನ್ನು ಉಗಿ ಹಾಯುವಂತೆ ಬಿಸಿ ಮಾಡಿ.

ಮೊಟ್ಟೆ, ಮೀನು ಅಥವಾ ಇನ್ನಾವುದೇ ಮಾಂಸವನ್ನು ಹಸಿಯಾಗಿ ಎಂದಿಗೂ ತಿನ್ನಬೇಡಿ. ಕುಡಿಯುವ ನೀರು ಶುದ್ಧವಾಗಿರುವಂತೆ ನೋಡಿಕೊಳ್ಳಿ. ಅನುಮಾನವಿದ್ದರೆ ಕುದಿಸಿಯೇ ಕುಡಿಯಿರಿ. ಹೊರಗೆ ಎಲ್ಲಿಯೇ ಆಹಾರ ಸೇವಿಸಿದರೂ, ಬಿಸಿಯಾಗಿದ್ದನ್ನೇ ತಿನ್ನಿ.

Exit mobile version