Site icon Vistara News

Food Timing: ಸರ್ಕಾಡಿಯನ್‌ ಆಹಾರ ಕ್ರಮ: ಏನಿದರ ಮರ್ಮ?

Food Timing

Food Timing

ನಮ್ಮ ಊಟ-ನಿದ್ದೆಯ ಸ್ವರೂಪ ಹೇಗಿರಬೇಕು ಎಂಬ ಬಗ್ಗೆ ಬಹಳಷ್ಟು ಸಲಹೆಗಳನ್ನು ಕೇಳಿರುತ್ತೇವೆ. ದಿನ-ರಾತ್ರಿಯ ಅವಧಿಯನ್ನು ಆಧರಿಸಿ, ಅಂದರೆ ಸೂರ್ಯನ ಬೆಳಕಿನ ಲಭ್ಯತೆಯ ಆಧಾರದ ಮೇಲೆ ನಮ್ಮ ಊಟ-ನಿದ್ದೆಯನ್ನು ಹೊಂದಿಸಿಕೊಳ್ಳಬೇಕು ಎಂಬ ಮಾತಿನಲ್ಲಿ ಹುರುಳಿಲ್ಲದೆ ಇಲ್ಲ. ಇದೇ ತತ್ವವನ್ನು ಆಧರಿಸಿದ್ದು ಸರ್ಕಾಡಿಯನ್‌ ಡಯಟ್‌ ಎಂಬ ಕಲ್ಪನೆ. ಏನಿದು ಮತ್ತು ಏನಿದರ ಉಪಯೋಗ ಎಂಬ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಸೂರ್ಯೋದಯ ಮತ್ತು ಸೂರ್ಯಾಸ್ತದ ನಡುವೆ ಮಾತ್ರವೇ ಆಹಾರ ಸೇವಿಸುವುದು ಈ ಕ್ರಮದ ಮುಖ್ಯ ಅಂಶ. ವಿವರಗಳಿಗೆ ಬರುವುದಾದರೆ, ಸೂರ್ಯನ ಬೆಳಕು ಇರುವಷ್ಟೂ ಹೊತ್ತು ನಮ್ಮ ದೇಹದ ಚಯಾಪಚಯ ಕ್ರಿಯೆ ಚುರುಕಾಗಿರುತ್ತದೆ. ದೇಹದಲ್ಲಿ ಸಾಕಷ್ಟು ಪ್ರಮಾಣದ ಇನ್ಸುಲಿನ್‌ ಉತ್ಪತ್ತಿಯಾಗಿ ಮೆಲಟೋನಿನ್‌ ಪ್ರಮಾಣ ಕಡಿಮೆ ಇರುತ್ತದೆ. ಸೂರ್ಯಾಸ್ತವಾಗಿ ರಾತ್ರಿಯಾಗುತ್ತಿದ್ದಂತೆ, ಮೆಲಟೋನಿನ್‌ ಎಂಬ ರಾತ್ರಿಯ ಹಾರ್ಮೋನುಗಳ ಸ್ರವಿಸುವಿಕೆ ಹೆಚ್ಚಿ, ಇನ್ಸುಲಿನ್‌ ಕಡಿಮೆಯಾಗುತ್ತದೆ. ಮೆಲಟೋನಿನ್‌ ಹೆಚ್ಚಾದಂತೆ, ದೇಹ ವಿಶ್ರಾಂತಿಗೆ ಜಾರುತ್ತದೆ ಎಂಬ ಸುಳಿವು ನೀಡಿದಂತಾಗಿ, ಪಚನದ ಕೆಲಸವನ್ನು ಕೈಬಿಟ್ಟು, ರಿಪೇರಿ ಕೆಲಸಕ್ಕೆ ನಮ್ಮ ಕೋಶಗಳು ಅಣಿಯಾಗುತ್ತವೆ. ಹಾಗಾಗಿಯೇ ಬೆಳಗಿನ ತಿಂಡಿ ಮತ್ತು ಮಧ್ಯಾಹ್ನದ ಊಟವನ್ನು ಹೊಟ್ಟೆ ತುಂಬುವಷ್ಟು ಮಾಡಿ, ರಾತ್ರಿಯ ಊಟವನ್ನು ಕಡಿಮೆ ಮಾಡಬೇಕೆಂಬ ಕ್ರಮವನ್ನು ಈ ಡಯಟ್‌ ಪ್ರತಿಪಾದಿಸುತ್ತದೆ. ಅಷ್ಟೇ ಅಲ್ಲ, ರಾತ್ರಿಯೂಟ ಸೂರ್ಯಾಸ್ತದ ಮುನ್ನವೇ ಮಾಡುವುದು ಮುಖ್ಯ.

ನಿದ್ದೆಯೊಂದಿಗೇನು ನಂಟು?

ಇದೀಗ ಕುತೂಹಲದ ವಿಷಯ. ನಮ್ಮ ಹಸಿವನ್ನು ನಿಯಂತ್ರಿಸುವ ಹಾರ್ಮೋನುಗಳಿಗೂ ನಿದ್ದೆಗೂ ಅವಿನಾಭಾವ ನಂಟು. ಗ್ರೆಲಿನ್‌ ಎಂಬ ಚೋದಕ ನಮ್ಮ ಹಸಿವನ್ನು ಹೆಚ್ಚಿಸಿದರೆ ಲೆಪ್ಟಿನ್‌ ಚೋದಕವು ಅದನ್ನು ನಿಯಂತ್ರಿಸುತ್ತದೆ. ಈ ಹಾರ್ಮೋನುಗಳು ಕೆಲಸ ಮಾಡುವುದು ಸಹ ಸೂರ್ಯನ ಬೆಳಕಿನ ಆಧಾರದ ಮೇಲೆ. ನಮ್ಮ ನಿದ್ದೆಯು ಸಹ ನಮ್ಮ ದೇಹದ ಜೈವಿಕ ಗಡಿಯಾರವನ್ನೇ (ಸರ್ಕಾಡಿಯನ್‌ ರಿದಂ) ಅವಲಂಬಿಸಿದೆ. ಬೆಳಗಿನ ಹೊತ್ತು ನಾವು ನಿದ್ದೆ ಮಾಡುತ್ತಿದ್ದರೆ, ಹಸಿವು ಹೆಚ್ಚಿಸುವ ಗ್ರೆಲಿನ್‌ ಚೋದಕ ಸಹಜವಾಗಿ ಸ್ರವಿಸುವ ಸಮಯವದು. ಇನ್ನು ರಾತ್ರಿ ಎಚ್ಚರವಾಗಿದ್ದರೆ, ಅದು ಹಸಿವು ತಗ್ಗಿಸುವ ಲೆಪ್ಟಿನ್‌ ಹಾರ್ಮೋನಿನ ಹೊತ್ತು. ಆರೋಗ್ಯ ಏರುಪೇರಾಗಿ ಹಾಳು ಬೀಳಲು ಇದಕ್ಕಿಂತ ಇನ್ನೇನು ಬೇಕು?

ಹಾಗಾಗಿ, ಸರ್ಕಾಡಿಯನ್‌ ಆಹಾರ ಪದ್ಧತಿಯ ಉಪಕ್ರಮಗಳು ಸ್ಪಷ್ಟವಾಗಿವೆ. ನಿಸರ್ಗದ ನಿಯಮಕ್ಕೆ ನಮ್ಮ ಜೀವನ ಬದ್ಧವಾಗಿರಬೇಕು. ಹಗಲಿನಲ್ಲಿ ಉಣ್ಣು, ಚಟುವಟಿಕೆಯಿಂದಿರು; ರಾತ್ರಿ ನಿದ್ದೆ, ವಿಶ್ರಾಂತಿಯ ಸಮಯ. ಹೊತ್ತಲ್ಲದ ಹೊತ್ತಿನಲ್ಲಿ ತಿನ್ನುವುದು, ಯಾವ್ಯಾಗಲೋ ನಿದ್ದೆ ಮಾಡುವುದು- ಇಂಥವುಗಳಿಂದ ಜೈವಿಕ ಚಕ್ರವೇ ಏರುಪೇರಾಗುತ್ತದೆ. ಇನ್ನು ತೂಕ ಇಳಿಸುವ, ಆರೋಗ್ಯ ಸುಧಾರಿಸುವ ಮಾತೆಲ್ಲಿ? ಸರ್ಕಾಡಿಯನ್‌ ಆಹಾರ ಕ್ರಮವನ್ನು ಕೆಲವು ದಿನಗಳ ಮಟ್ಟಿಗೆ ಪಾಲಿಸಿದರೆ ಆಗುವ ಪ್ರಯೋಜನ ಅಷ್ಟಕ್ಕಷ್ಟೆ. ಅದನ್ನು ಜೀವನಕ್ರಮದಲ್ಲಿ ನಿಯಮಿತವಾಗಿ ಅಳವಡಿಸಿಕೊಂಡರೆ ಪರಿಣಾಮ ಸ್ಪಷ್ಟವಾಗಿ ಗೋಚರಿಸುತ್ತದೆ, ಆರೋಗ್ಯ ನಳನಳಿಸುತ್ತದೆ.

ಇದನ್ನೂ ಓದಿ: Health Benefits of Cereals: ಸಿರಿ ಧಾನ್ಯಗಳನ್ನೇಕೆ ತಿನ್ನಬೇಕು ಗೊತ್ತೇ?

Exit mobile version