ಬಣ್ಣದಲ್ಲೇನಿದೆ ಎಂದು ನೀವು ಕೇಳಬಹುದು. ದೊಣ್ಣೆ ಮೆಣಸಿನಕಾಯಿ ಹಸಿರಾದರೇನು, ಕೆಂಪಾದರೇನು, ಹಳದಿಯಾದರೇನು, ಯಾವುದೇ ಬಣ್ಣದಲ್ಲಿರಲಿ ಬಣ್ಣ, ರುಚಿ ದೊಣ್ಣೆ ಮೆಣಸಿನಕಾಯಿಯೇ ಅಲ್ಲವೇ ಎಂದು ವಾದ ಮಾಡಬಹುದು. ಇನ್ನು ಕ್ಯಾಬೇಜು ತಿಳಿ ಹಸಿರು ಬಣ್ಣದ್ದಾದರೇನು, ನೇರಳೆ ಬಣ್ಣದ್ದಾದರೇನು ಎಂದೂ ಅನಿಸಬಹುದು. ಸಾಮಾನ್ಯ ಬಣ್ಣದ ಹಸಿರು ತರಕಾರಿಗಳು ಸಾಮಾನ್ಯರ ಕೈಗೆಟಕುವ ದರದಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಾದರೆ, ಈ ವಿಶೇಷ ಬಣ್ಣಗಳಲ್ಲಿ ಸಿಗುವ ತರಕಾರಿಗಳು ಮಾತ್ರ ದುಪ್ಪಟ್ಟು ಬೆಲೆ ತೆತ್ತು ಯಾಕೆ ಕೊಳ್ಳಬೇಕು ಎಂದೂ ಎನಿಸಬಹುದು. ಬಹಳ ಸಾರಿ, ಮಾಡಿದ ಅಡುಗೆಯನ್ನು ಅಲಂಕರಿಸಲು, ಬಣ್ಣಗಳಲ್ಲಿ ಚಂದ ಕಾಣಿಸುವಂತೆ ಮಾಡಲು ಇವನ್ನು ಕೊಂಡರೂ, ಇವುಗಳಿಂದ ಹೆಚ್ಚು ಉಪಯೋಗ ಇಲ್ಲ ಎಂದು ನಿಮಗನಿಸಿದರೆ ಅದು ತಪ್ಪು. ತರಕಾರಿಯ ಬಣ್ಣಗಳಿಗೂ ಅದರ ಬಣ್ಣವನ್ನವಲಂಬಿಸಿರುವ ವಿಶೇಷ ಮಹತ್ವವಿದೆ.
ನೇರಳೆ ಬಣ್ಣದ ತರಕಾರಿಗಳೂ (Violet vegetables) ಕೂಡಾ ಇತರ ತರಕಾರಿಗಳಿಗಿಂತ ಭಿನ್ನ. ಇವುಗಳಲ್ಲಿ ಇತರ ತರಕಾರಿಗಳಲ್ಲಿ ಕಾಣಸಿಗದ ಅಪರೂಪದ ಪೋಷಕಾಂಶವಿದೆ. ಅದರ ಹೆಸರು ಆಂಥೋಸಯನಿನ್(anthocyanins). ಇದರಿಂದ ಹಲವು ಬಗೆಯಲ್ಲಿ ಇದು ಆರೋಗ್ಯಕರವಾಗಿರಲು (Healthy food) ತನ್ನ ಕಾಣಿಕೆ ಸಲ್ಲಿಸುತ್ತದೆ. ನೇರಳೆ ಬಣ್ಣದ ಕ್ಯಾರೆಟ್, ಮೂಲಂಗಿ, ಸಿಹಿಗೆಣಸು, ಹೂಕೋಸು, ಕ್ಯಾಬೇಜು, ಬದನೆಕಾಯಿ, ಬ್ಲ್ಯಾಕ್‌ಬೆರಿ, ದ್ರಾಕ್ಷಿ ಹೀಗೆ ಯಾವುದೇ ಹಣ್ಣು ತರಕಾರಿಗಳನ್ನು ತೆಗೆದುಕೊಳ್ಳಿ ಅವುಗಳಲ್ಲಿ ಆಂಥೋಸಯನಿನ್ ಇರುತ್ತದೆ. ಬನ್ನಿ, ಇಂದು ನಾವಿಲ್ಲಿ ಮುಖ್ಯವಾಗಿ, ನೇರಳೆ ಬಣ್ಣದ ಕ್ಯಾಬೇಜು ಇತರ ಕ್ಯಾಬೇಜುಗಳಿಗಿಂತ ಹೇಗೆ ಭಿನ್ನ ಹಾಗೂ ಎಷ್ಟು ಪೋಷಕಾಂಶಗಳನ್ನು (nutrients) ಹೊಂದಿದೆ ಎಂಬುದನ್ನು ನೋಡೋಣ.
1. ನೇರಳೆ ಬಣ್ಣದ ಕ್ಯಾಬೇಜಿನಲ್ಲಿ ವಿಟಮಿನ್ ಸಿ ಹೇರಳವಾಗಿದೆ. ವಿಟಮಿನ್ ಕೆ ಹಾಗೂ ಬಿ೬ ಕೂಡಾ ಸಾಕಷ್ಟು ಪ್ರಮಾಣದಲ್ಲಿದೆ. ಜೊತೆಗೆ ಮ್ಯಾಂಗನೀಸ್, ನಾರಿನಂಶ, ಸಾಕಷ್ಟು ಆಂಟಿ ಆಕ್ಸಿಡೆಂಟ್‌ಗಳು ಇದರಲ್ಲಿವೆ.
2. ಕ್ಯಾಬೇಜಿಗೆ ನೇರಳೆ ಬಣ್ಣವನ್ನು ಕೊಡುವ ಆಂಥೋಸಯನಿನ್ ಇದರಲ್ಲಿ ಹೇರಳವಾಗಿರುವುದರಿಂದ ಇದು ಸಾಕಷ್ಟು ಹೆಚ್ಚಿನ ಪ್ರಮಾಣದಲ್ಲಿ ಆಂಟಿ ಆಕ್ಸಿಡೆಂಟನ್ನು ನೀಡುತ್ತದೆ. ಜೊತೆಗೆ ಆಕ್ಸಿಡೇಟಿವ್ ಸ್ಟ್ರೆಸ್ ಅನ್ನು ದೇಹದಿಂದ ಕಡಿಮೆಗೊಳಿಸುತ್ತದೆ.
3. ಹೃದಯದ ಆರೋಗ್ಯಕ್ಕೆ ಈ ನೇರಳೆ ಕ್ಯಾಬೇಜು ಬಹಳ ಒಳ್ಳೆಯದು. ಇದರಲ್ಲಿ ಹೇರಳವಾಗಿರುವ ಆಂಥೋಸಯನಿನ್‌ಗಳು ಹಾಗೂ ಪಾಲಿಫೀನಾಲ್‌ಗಳು ಹೃದಯವನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತವೆ. ರಕ್ತದೊತ್ತಡವನ್ನು ಸಮತೋಲನಗೊಳಿಸಿ, ಕೊಲೆಸ್ಟೆರಾಲ್ ಕಡಿಮೆಗೊಳಿಸಿ ಪರೋಕ್ಷವಾಗಿ ಹೃದಯದ ಆರೋಗ್ಯಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ.
4. ಇದರಲ್ಲಿ ಹೇರಳವಾಗಿ ನಾರಿನಂಶವೂ ಇರುವುದರಿಂದ ಜೀರ್ಣಕ್ರಿಯೆಯನ್ನು ಪ್ರಚೋದಿಸುತ್ತದೆ. ಇದು ಜೀರ್ಣಾಂಗವ್ಯೂಹವನ್ನು ಆರೋಗ್ಯವಾಗಿರಿಸಿ ಮಲಬದ್ಧತೆಯನ್ನೂ ನಿವಾರಿಸುತ್ತದೆ.
5. ನೇರಳೆ ಕ್ಯಾಬೇಜಿನಲ್ಲಿ ಅಧಿಕಾವಹಿರುವ ಫೈಟೀ ನ್ಯೂಟ್ರಿಯೆಂಟ್‌ಗಳು ಹಾಗೂ ಆಂಟಿ ಆಕ್ಸಿಡೆಂಟ್‌ಗಳು ಕೆಲವು ಬಗೆಯ ಕ್ಯಾನ್ಸರ್‌ನನ್ನೂ ಬರದಂತೆ ತಡೆಗಟ್ಟುತ್ತದೆ.
6. ನೇರಳೆ ಕ್ಯಾಬೇಜಿನಲ್ಲಿ ವಿಟಮಿನ್ ಎ ಕೂಡಾ ಹೆಚ್ಚಿದ್ದು, ಇದು ಕಣ್ಣಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಉತ್ತಮ ದೃಷ್ಟಿಗೆ ಹಾಗೂ ಕಣ್ಣಿನ ಇತರ ಸಮಸ್ಯೆಗಳಿಗೂ ಇದು ಅತ್ಯುತ್ತಮ.
ಇದನ್ನೂ ಓದಿ: Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ
7. ಇದರಲ್ಲಿರುವ ವಿಟಮಿನ್ ಕೆ, ಎಲುಬಿನ ಆರೋಗ್ಯ ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ. ಎಲುಬು ಕ್ಯಾಲ್ಶಿಯಂ ಅನ್ನು ಸರಿಯಾಗಿ ಹೀರಿಕೊಳ್ಳಲು ಇದು ನೆರವಾಗುತ್ತದೆ. ಜೊತೆಗೆ ಎಲುಬು ನಷ್ಟವಾಗದಂತೆ ನೋಡಿಕೊಳ್ಳುತ್ತದೆ.
8. ತೂಕ ಇಳಿಸಿಕೊಳ್ಳುವ ಮಂದಿಗೂ ಇದು ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶ ಹೆಚ್ಚಿರುವುದರಿಂದ, ನೇರಳೆ ಕ್ಯಾಬೇಜು ತೂಕ ಇಳಿಸಲು ಸಹಾಯ ಮಾಡುತ್ತದೆ.
9. ನೇರಳೆ ಕ್ಯಾಬೇಜಿನಲ್ಲಿ ಆಂಟಿ ಇನ್‌ಫ್ಲಮೇಟರಿ ಗುಣಗಳೂ ಹೆಚ್ಚಿವೆ. ಹೀಗಾಗಿ ಇದು ಯಾವುದೇ ಬಗೆಯ ಉರಿಯೂತ ಇತ್ಯಾದಿ ಸಮಸ್ಯೆಗಳನ್ನು ತಡೆಯುತ್ತದೆ. ಸಂಧಿವಾತದಂತಹ ಸಮಸ್ಯೆಗಳಲ್ಲಿ ಮುಖ್ಯವಾಗಿ ಕಾಣಿಸಿಕೊಳ್ಳುವ ಉರಿಯೂತಕ್ಕೂ ಹೀಗಾಗಿ ಇದು ಬಹಳ ಒಳ್ಳೆಯದು.
ಇದನ್ನೂ ಓದಿ: Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!