Site icon Vistara News

Food tips: ಅಣಬೆಗಳನ್ನು ಕೆಡದಂತೆ ಸಂರಕ್ಷಿಸಿಕೊಳ್ಳುವುದು ಹೇಗೆ?

How to Preserve Mushrooms

ಇದ್ದಕ್ಕಿದ್ದಂತೆ ತಲೆ ಎತ್ತುವ ಹೊಸ ಕಟ್ಟಡ, ಉದ್ದಿಮೆ ಇತ್ಯಾದಿಗಳಿಗೆಲ್ಲಾ ʻನಾಯಿ ಕೊಡೆಗಳಂತೆ ತಲೆ ಎತ್ತಿವೆʼ ಎಂಬ ಮೂದಲಿಕೆ ಮಾತು ಹೇಳುವುದಿದೆ. ರಾತ್ರಿ ಬೆಳಗಾಗುವುದರೊಳಗೆ ಎಲ್ಲೆಲ್ಲೋ ಸಂದುಗೊಂದುಗಳಲ್ಲಿ ತಲೆ ಎತ್ತುತ್ತವೆ ಈ ಅಣಬೆಗಳು. ಮಳೆಗಾಲದಲ್ಲಿ ಕಾಡು ತಿರುಗುವ ಅಭ್ಯಾಸವಿದ್ದವರಿಗೆ ಅಣಬೆಗಳ ಖಜಾನೆಯೇ ದೊರೆಯಬಹುದು. ಇವುಗಳಲ್ಲಿ ವಿಷ ಅಣಬೆಗಳನ್ನು ಜಾಗ್ರತೆಯಿಂದ ಬೇರೆ ಮಾಡಿ, ಖಾದ್ಯ ಅಣಬೆಗಳನ್ನು ಮಾತ್ರವೇ ಸಂಗ್ರಹಿಸಬೇಕಾಗುತ್ತದೆ. ಹೀಗೆ ಸಂಗ್ರಹಿಸಿದ ಅಥವಾ ಪೇಟೆಯಲ್ಲಿ ಖರೀದಿಸಿದ ಅಣಬೆಗಳು ಹಾಳಾಗದಂತೆ ದೀರ್ಘಕಾಲದವರೆಗೆ ಕಾಪಾಡಿಕೊಳ್ಳುವುದು ಸವಾಲಿನ ಸಂಗತಿ.

ತಾಜಾ ಅಣಬೆಗಳ ಮುಖ್ಯ ಲಕ್ಷಣವೆಂದರೆ ಅವುಗಳಲ್ಲಿರುವ ನೀರಿನ ಅಂಶ. ಅವು ರಸಭರಿತವಾಗಿದ್ದರೆ ಮಾತ್ರವೇ ತಿನ್ನುವುದಕ್ಕೆ ರುಚಿ ಮತ್ತು ದೇಹಕ್ಕೆ ಸತ್ವ. ಬಹಳಷ್ಟು ರೀತಿಯ ಅಡುಗೆಗಳಿಗೆ ಇದು ಒಳ್ಳೆಯ ಸಾಥ್‌ ನೀಡುತ್ತದೆ. ಅವುಗಳ ಬಣ್ಣ, ವಾಸನೆ ಮತ್ತು ಆಕಾರದಲ್ಲಿಯೇ ಅಣಬೆ ತಾಜಾ ಇವೆಯೇ ಅಥವಾ ಬಿಸಾಡಬೇಕೆ ಎಂಬುದನ್ನು ನಿರ್ಧರಿಸಬಹುದು. ಮೂಲತಃ, ಅಣಬೆಗಳು ಅಲ್ಪಾಯುಷಿಗಳೇ. ಹಾಗಾದರೆ ಹೆಚ್ಚು ಕಾಲ ಕೆಡದಂತೆ ಅವುಗಳನ್ನು ಸಂರಕ್ಷಿಸಿಕೊಳ್ಳುವುದು ಹೇಗೆ?

ಒಣಗಲು ಬಿಡಬೇಡಿ

ಅಣಬೆಗಳಲ್ಲಿ ನೀರಿನಂಶ ಇದ್ದರಷ್ಟೇ ಅವು ತಾಜಾ ಇರುತ್ತವೆ. ಅವುಗಳನ್ನು ಕಿತ್ತ ಕೆಲವೇ ತಾಸುಗಳಲ್ಲಿ ಬಾಡಲಾರಭಿಸುತ್ತವೆ. ಹಾಗಾಗಿ ಅಗ್ದಿ ತಾಜಾ ಇರುವಾಗಲೇ ಅವುಗಳನ್ನು ಸಂರಕ್ಷಿಸಬೇಕಾಗುತ್ತದೆ. ಒಮ್ಮೆ ನೀರು ಒಣಗಿ ಸುಕ್ಕಾಗಲು ಅಥವಾ ಕಪ್ಪಾಗಲು ಪ್ರಾರಂಭಿಸಿದರೆ ಮತ್ತೆ ಕಾಪಾಡಿಕೊಳ್ಳುವುದು ಕಷ್ಟ.

ಶೀತಲೀಕರಿಸಿ

ಕಡಿಮೆ ತಾಪಮಾನದಲ್ಲಿ ಅಣಬೆಯನ್ನು ಸಂರಕ್ಷಿಸುವುದು ಸುಲಭ. ವಾತಾವರಣದ ತಾಪಮಾನದಲ್ಲಿ ಅದನ್ನು ಹೆಚ್ಚು ಕಾಲ ರಕ್ಷಿಸಿಕೊಳ್ಳಲಾಗದು. ಮೊದಲಿಗೆ ತಾಜಾ ಇದ್ದಾಗಲೇ ಚೆನ್ನಾಗಿ ತೊಳೆದು, ಕತ್ತರಿಸಿ ಫ್ರೀಜ್‌ ಮಾಡಿ. ಬೇಕಾದಾಗ ತೆಗೆದು ಉಪಯೋಗಿಸಿಕೊಳ್ಳಬಹುದು. ಹೀಗೆ ಮಾಡುವುದರಿಂದ ವಾರಗಟ್ಟಲೆ ಇರಿಸಿಕೊಳ್ಳಬಹುದು. ಆದರೆ ಒಮ್ಮೆ ಫ್ರೀಜರ್‌ನಿಂದ ತೆಗೆದ ಮೇಲೆ ಹೆಚ್ಚು ಕಾಲ ಅಣಬೆ ಉಳಿಯುವುದಿಲ್ಲ. ಕೆಲವರು ಕತ್ತರಿಸಿದ ಅಣಬೆಯನ್ನು ಖಾದ್ಯ ಮಾಡಿಯೇ ಫ್ರೀಜರ್‌ನಲ್ಲಿ ಶೇಖರಿಸಿಡುತ್ತಾರೆ.

ಇನ್ನೊಂದು ದಾರಿ

ಇದೂ ಸಹ ಶೀತಲೀಕರಣದ ಮಾರ್ಗವೇ. ಆದರೆ ಫ್ರೀಜರ್‌ನಲ್ಲಿ ಅಲ್ಲದೆ ಫ್ರಿಜ್‌ನಲ್ಲಿಟ್ಟರೆ ಸಾಕು. ಗಾಳಿಯಾಡದ ಡಬ್ಬಿಯ ತಳದಲ್ಲಿ ಸರಿಯಾಗಿ ಟಿಷ್ಯೂ ಹರಡಿಕೊಳ್ಳಿ. ಇದರಲ್ಲಿ ಅಣಬೆಗಳನ್ನಿಟ್ಟರೆ ವಾರದವರೆಗೂ ಕಾಪಾಡಿಕೊಳ್ಳಬಹುದು.

ದೂರ ಇಡಿ

ಇತರ ಖಾದ್ಯಗಳ ಕಟು ವಾಸನೆಯನ್ನು ಅಣಬೆ ಹೀರಿಕೊಳ್ಳುತ್ತದೆ. ಇದರಿಂದಲೂ ಅಣಬೆಯ ಆಯಸ್ಸು ಕ್ಷೀಣಿಸಬಹುದು. ಹಾಗಾಗಿ ಕಟುವಾಸನೆ ಅಥವಾ ತೀಕ್ಷ್ಣ ಪರಿಮಳ ಹೊಂದಿರುವ ವಸ್ತುಗಳಿಂದ ಅಣಬೆಯನ್ನು ದೂರ ಇಡಿ. ಮೂಲತಃ ಸ್ವಲ್ಪ ಸೂಕ್ಷ್ಮ ಎನ್ನಬಹುದಾದ ತರಕಾರಿಯಿದು. ಉತ್ತಮ ಪೌಷ್ಟಿಕಾಂಶಗಳನ್ನು ಹೊಂದಿರುವುದರಿಂದ, ಕಷ್ಟಪಟ್ಟಾದರೂ ಇದನ್ನು ರಕ್ಷಿಸಿಕೊಂಡರೆ ರುಚಿಗೆ ಮೋಸವಿಲ್ಲ, ಆರೋಗ್ಯಕ್ಕೆ ನಷ್ಟವಿಲ್ಲ.

ಇದನ್ನೂ ಓದಿ: Health Tips: ನಮ್ಮ ಶಕ್ತಿಗುಂದಿಸುವ ಈ ವಿಷಯಗಳ ಬಗ್ಗೆ ಎಚ್ಚರ ವಹಿಸಿ!

Exit mobile version