Site icon Vistara News

Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

Food Tips Kannada

ಬೆಳಗಿನ ಹೊತ್ತು ನಮ್ಮ (Food Tips Kannada) ಶಕ್ತಿ ಕೊಂಚ ಹೆಚ್ಚಿರುವುದು, ಸಂಜೆಯಾಗುತ್ತಿದ್ದಂತೆ ಇದು ಕಡಿಮೆಯಾಗುತ್ತ ಬರುವುದು ಬಹಳ ಸಾಮಾನ್ಯ. ಮನುಷ್ಯನ ದೇಹ ಪ್ರಕೃತಿಯೇ ಹಾಗೆ. ಆದರೆ, ಇತ್ತೀಚಿನ ದಿನಗಳಲ್ಲಿ ನಾವು ಸೇವಿಸುವ ಆಹಾರ (food), ಜೀವನಶೈಲಿಯೂ (life style) ಕೂಡಾ ನಮ್ಮ ಶಕ್ತಿಯನ್ನು ಹೆಚ್ಚಿಸುವುದಕ್ಕಿಂತ ದಿಢೀರ್‌ ಕಡಿಮೆಗೊಳಿಸುವಲ್ಲಿ ಮುಖ್ಯ ಪಾತ್ರ ವಹಿಸುತ್ತಿದೆ.

ಶಕ್ತಿ ಬೇಕೆಂದು ನಾವು ಮೊರೆ ಹೋಗುವ ದಿಢೀರ್‌ ಆಹಾರಗಳಿಂದ ಮೇಲ್ನೋಟಕ್ಕೆ ಶಕ್ತಿ, ಉಲ್ಲಾಸ ಹೆಚ್ಚಿದಂತೆ ಅನಿಸಿದರೂ ಇವು ನಮ್ಮ ಶಕ್ತಿ ಸಾಮರ್ಥ್ಯವೆಲ್ಲವನ್ನೂ ಬಸಿದು ತೆಗೆಯುವ, ನಮ್ಮನ್ನು ಸೋಮಾರಿಗಳನ್ನಾಗಿ ಮಾಡುವ, ತೂಕ ಹೆಚ್ಚಿಸುವ, ಚುರುಕುತನವನ್ನು ಕಸಿದುಕೊಳ್ಳುವ ಆಹಾರಗಳಾಗಿ ಬದಲಾಗಬಹುದು. ಬನ್ನಿ, ನಿಜವಾಗಿಯೂ ಶಕ್ತಿವರ್ಧಕದಂತೆ ಅನಿಸಿದರೂ, ನಮ್ಮ ಶಕ್ತಿಯನ್ನೆಲ್ಲ ಹಿಂಡಿ ತೆಗೆಯುವ ಆಹಾರಗಳಾವುವು ಎಂಬುದನ್ನು ನೋಡೋಣ.

ಬ್ರೆಡ್‌, ಪಾಸ್ತಾ

ಬಿಳಿ ಬ್ರೆಡ್‌ ಹಾಗೂ ಮೈದಾವೇ ಹೆಚ್ಚಿರುವ ಪಾಸ್ತಾ ಮತ್ತಿತರ ಆಹಾರಗಳು ದೇಹಕ್ಕೆ ಶಕ್ತಿ ನೀಡಿದಂತೆ ಅನಿಸಿದರೂ ಇವೆಲ್ಲ ಖಾಲಿ ಕ್ಯಾಲರಿಗಳು. ಇವೆಲ್ಲವೂ ಸಂಸ್ಕರಿಸಿದ ಆಹಾರಗಳಾಗಿರುವುದರಿಂದ ನಿಜವಾದ ಧಾನ್ಯ, ಬೇಳೆ ಕಾಳುಗಳ ಮೂಲಕ ದೇಹಕ್ಕೆ ಸಿಗುವ ಶಕ್ತಿ ಇದರಿಂದ ದೊರೆಯಲಾರದು. ಆ ಕ್ಷಣಕ್ಕೆ ಇವು ಹೊಟ್ಟೆ ತುಂಬಿಸಿದರೂ, ದೇಹಕ್ಕೆ ಒಳ್ಳೆಯದನ್ನು ಮಾಡುವ ಉದ್ದೇಶ ಈ ಆಹಾರಗಳಲ್ಲಿಲ್ಲ ಎಂಬುದನ್ನು ನೆನಪಿಡಿ.


ಬ್ರೇಕ್‌ಫಾಸ್ಟ್‌ ಸಿರಿಯಲ್‌ಗಳು ಹಾಗೂ ಫ್ಲೇವರ್ಡ್‌ ಮೊಸರು

ರೆಡಿಮಾಡಿ ಫುಡ್ ಗಳು ಹೆಸರಿಗೆ ಮಾತ್ರ ಆರೋಗ್ಯಕರ ಆಹಾರ ಎಂದೆನಿಸಿದರೂ ಇವು ಆರೋಗ್ಯಕರವಲ್ಲ. ಇದರಲ್ಲಿ ಒಳ್ಳೆಯ ಅಂಶಗಳಿಗಿಂತಲೂ ದೇಹಕ್ಕೆ ಮಾರಕವಾದ ಅಂಶಗಳೇ ಹೆಚ್ಚಿವೆ. ಇವುಗಳು ಸಂಸ್ಕರಿಸಿದ ಆಹಾರಗಳಷ್ಟೇ ಅಲ್ಲ, ಇವುಗಳಲ್ಲಿ ಹೆಚ್ಚುವರಿ ಸಕ್ಕರೆಯೂ ಇರುವುದರಿಂದ ದೇಹಕ್ಕೆ ಒಳ್ಳೆಯದಕ್ಕಿಂತ ಕೆಟ್ಟ ಪರಿಣಾಮವೇ ಆಗುತ್ತದೆ.


ಆಲ್ಕೋಹಾಲ್‌

ಆಲ್ಕೋಹಾಲ್‌ ಸೇವನೆಯಿಂದ ದಿನದ ಇಡೀ ಸುಸ್ತು ಬಸಿದು ಹೋಗಿ ಜೀವ ಬಂದಂತಾಗಬಹುದು. ದೇಹವಿಡೀ ಉಲ್ಲಾಸದಿಂದ, ಕುಣಿಯಬಹುದು. ಚಿಂತೆಯೆಲ್ಲ ಮರೆತುಹೋಗಬಹುದು. ಆದರೆ, ಇದು ಕ್ಷಣಿಕ. ದೇಹಕ್ಕೆ ನಿಜವಾಗಿ ಬೇಕಾದ ಶಕ್ತಿ ಇದರಿಂದ ಎಳ್ಳಷ್ಟೂ ಸಿಗಲಾರದು.


ಕಾಫಿ, ಚಹಾ

ಕಾಫಿ ಹಾಗೂ ಚಹಾಗಳೆಂಬ ಎರಡು ಪೇಯಗಳು ಭಾರತೀಯರ ಪಾಲಿನ ಆರಾಧ್ಯ ದೈವ. ಬೆಳಗ್ಗೆದ್ದ ಕೂಡಲೇ ಬಹುಪಾಲು ಮಂದಿಗೆ ಚಹಾ ಕಾಫಿ ಬೇಕೇ ಬೇಕು. ಬೆಳಗಿನ ಕೆಲಸಗಳಲ್ಲಿ ಮತ್ತೆ ತೊಡಗಿಕೊಳ್ಳಲು ಚಹಾ ಕಾಫಿಗಳು ಚೈತನ್ಯದಂತೆ ಅನಿಸಬಹುದು. ಅಭ್ಯಾಸವೂ ಆಗಿರಬಹುದು.

ಕಚೇರಿಯ ಒತ್ತಡದ ಕೆಲಸದ ನಡುವೆ ಆಹಾ ಎಂದು ಉಸಿರೆಳೆದುಕೊಂಡು ಕೊಂಚ ಬ್ರೇಕ್‌ ಬೇಕಾದರೆ ಚಹಾ ಕಾಫಿಗಳು ಮತ್ತೆ ಕೆಲಸಕ್ಕೆ ಪ್ರೇರಣೆ ನೀಡಬಹುದು. ಆದರೆ, ಇವೆಲ್ಲವೂ ನೀಡುವ ಉದ್ದೀಪನ ಕ್ಷಣಿಕ. ಇದರಿಂದ ದೇಹಕ್ಕೆ ಲಾಭಕ್ಕಿಂತಲೂ ನಷ್ಟ ಹೆಚ್ಚು. ಅತಿಯಾದ ಇವುಗಳ ಅಭ್ಯಾಸದಿಂದ ದೇಹದ ಶಕ್ತಿ ಹೆಚ್ಚದು. ಬದಲಾಗಿ ನಮ್ಮ ಶಕ್ತಿಯನ್ನೇ ಹಿಂಡಿಬಿಡುತ್ತವೆ. ಈ ಚಟದ ದಾಸನನ್ನಾಗಿಸುತ್ತವೆ.


ಶಕ್ತಿವರ್ಧಕ ಪೇಯಗಳು

ಮಾರುಕಟ್ಟೆಯಲ್ಲಿ ಜಾಹೀರಾತುಗಳ ಮೂಲಕ ಯುವಜನರನ್ನೂ ಸೇರಿದಂತೆ ಬಹುಜನರನ್ನು ಆಕರ್ಷಿಸುವ ಶಕ್ತಿವರ್ಧಕ ಪೇಯಗಳು ಹೆಸರಿಗೆ ಮಾತ್ರ ಶಕ್ತಿವರ್ಧಕ. ಆ ಕೆಲವು ಕ್ಷಣಕ್ಕೆ ಇದರಿಂದ ಶಕ್ತಿ ಹೆಚ್ಚಿದಂತಾಗಿ ಚೈತನ್ಯ ಸಿಗುವುದು ನಿಜವಾದರೂ ದೇಹಕ್ಕೆ ಒಳ್ಳೆಯದನ್ನು ಮಾಡಲಾರವು.

ಇದನ್ನೂ ಓದಿ: MDH, Everest Spices: ಸಿಂಗಾಪುರ, ಹಾಂಕಾಂಗ್‌ ಬಳಿಕ ಇದೀಗ ನೇಪಾಳದಲ್ಲಿಯೂ ಎವರೆಸ್ಟ್​, ಎಂಡಿಎಚ್​ ಮಸಾಲೆಗಳ ಮಾರಾಟ ನಿಷೇಧ

ಬದಲಾಗಿ ಇದರಲ್ಲಿ ಅತ್ಯಂತ ಹೆಚ್ಚು ಪ್ರಮಾಣದಲ್ಲಿರುವ ಸಕ್ಕರೆ ಹಾಗೂ ರಾಸಾಯನಿಕಗಳು ದೇಹಕ್ಕೆ ಮಾರಕ. ಇವುಗಳನ್ನು ಆಗಾಗ ಕುಡಿಯುವುದರಿಂದ ತೂಕದಲ್ಲಿ ಹೆಚ್ಚಳವೂ ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು. ಹಾಗಾಗಿ ಇಂತಹ ಶಕ್ತಿವರ್ಧಕ ಪೇಯಗಳಿಂದ ನಾವು ದೂರವಿರುವುದು ಒಳ್ಳೆಯದು. ಕ್ಷಣಿಕ ಮಾತ್ರದ ಶಕ್ತಿವರ್ಧಕಗಳಿಗಿಂತ ಉತ್ತಮ ಪೋಷಕಾಂಶಯುಕ್ತ ಆರೋಗ್ಯಕರ ಆಹಾರಗಳ ಸೇವನೆಯಿಂದ ಆರೋಗ್ಯವನ್ನು ಹೆಚ್ಚಿಸಬಹುದು.

Exit mobile version