Site icon Vistara News

Food Tips: ಇಲ್ಲಿವೆ ಬಗೆಬಗೆಯ ಉಪ್ಪು: ಯಾರು ಹಿತವರು ನಿಮಗೆ ಈ ಉಪ್ಪಿನೊಳಗೆ!

salt vaieties

ಉಪ್ಪಿಗಿಂತ ರುಚಿಯಿಲ್ಲ ಎಂಬ ಗಾದೆ ಮಾತಿದೆ. ಉಪ್ಪಿಗಿಂತ ಶ್ರೇಷ್ಠವಾದ ರುಚಿ ಬೇರೆ ಇಲ್ಲ. ಯಾಕೆಂದರೆ, ಯಾವ ರುಚಿಯೂ ಇಲ್ಲದೆ ಅಡುಗೆ ಮಾಡಬಹುದೇನೋ, ಆದರೆ, ಉಪ್ಪಿಲ್ಲದ ಊಟ ಕಷ್ಟ. ಉಪ್ಪು ಹಾಕದ ಅಡುಗೆ ಸಪ್ಪೆಯೇ. ಖಾರ, ಹುಳಿ, ಸಿಹಿಯಿಲ್ಲದೆಯೂ ಊಟ ನಡೆದೀತು. ಆದರೆ ಉಪ್ಪಿಲ್ಲದೆ ಬಹಳ ಕಷ್ಟ. ಅದಕ್ಕಾಗಿಯೇ ಉಪ್ಪಿಗೆ ಅಂಥ ಸ್ಥಾನ. ಉಪ್ಪು ಅಂದ ತಕ್ಷಣ ನಾವು ಬೆಳ್ಳನೆಯ ಪುಡಿ ಎಂದೇ ನೆನೆಸಿಕೊಳ್ಳುತ್ತೇವೆ. ಆದರೆ, ಉಪ್ಪಿನಲ್ಲೂ ಸಾಕಷ್ಟು ವಿಧಗಳಿವೆ. ಬಗೆಬಗೆಯ ಖನಿಜಾಂಶಗಳಿಂದ (mineral rich) ಸಮೃದ್ಧವಾಗಿರುವ ಬೇರೆ ಬೇರೆ ಬಗೆಯ ಉಪ್ಪುಗಳು ದೊರೆಯುತ್ತವೆ. ಇವುಗಳ ಆರೋಗ್ಯ ಲಾಭಗಳೂ (health benefits) ವಿಭಿನ್ನ. ಇಂಥ ಉಪ್ಪಿನ ಬಗೆಗಳ ಬಗ್ಗೆ ತಿಳಿದುಕೊಳ್ಳುವುದರಿಂದ ಹಾಗೂ ಅವುಗಳನ್ನು ಬಳಸುವುದರಿಂದ ನಿಮ್ಮ ಅಡುಗೆಯಲ್ಲೂ ಸಾಕಷ್ಟು ವ್ಯತ್ಯಾಸ (Food Tips, kitchen tips) ಕಂಡುಕೊಳ್ಳಬಹುದು.  ಬನ್ನಿ, ಹಾಗಾದರೆ ಬಗೆಬಗೆಯ ಉಪ್ಪುಗಳ (Salt variety) ಬಗೆಗೆ ಸ್ವಲ್ಪ ತಿಳಿಯೋಣ.

1. ಟೇಬಲ್‌ ಸಾಲ್ಟ್‌: ಟೇಬಲ್‌ ಸಾಲ್ಟ್‌ ಎಂಬುದು ಬಹು ಸಾಮಾನ್ಯವಾಗಿ ಎಲ್ಲರೂ ನಿತ್ಯವೂ ಬಳಸುವ ಉಪ್ಪು. ಸಾಮಾನ್ಯ ಉಪ್ಪು ಎಂದೇ ಜನಜನಿತವಾಗೊರುವ ಇದು ಪುಡಿಯಾದ ರೂಪದಲ್ಲಿ ಬೆಳ್ಳಗೆ ಇರುತ್ತದೆ. ನೀರಿನಲ್ಲಿ ಬಹುಬೇಗನೆ ಕರಗುವ ಇದು ಅಡುಗೆಗೆ ಬಹುತೇಕರು ನಿತ್ಯವೂ ಬಳಸುವ ಉಪ್ಪು. ಅತಿಯಾದ ಸಂಸ್ಕರಣಕ್ಕೆ ಒಳಪಟ್ಟು ತಯಾರಾಗಿ ಬಂದಿರುವುದರಿಂದ ಇದರಲ್ಲಿ ಸಾಕಷ್ಟು ಖನಿಜಾಂಶಗಳು ಇರುವುದಿಲ್ಲ. ಬಹುತೇಕವು ಸಂಸ್ಕರಣದ ಸಂದರ್ಭ ನಷ್ಟವಾಗಿರುತ್ತದೆ. ಸಂಸ್ಕರಿಸುವ ಸಂದರ್ಭ ಅಯೋಡಿನ್‌ ಸೇರಿಸಿರುವ ಉಪ್ಪಿದು.

2. ಕೋಶರ್‌ ಸಾಲ್ಟ್‌: ಇದು ಟೇಬಲ್‌ ಸಾಲ್ಟ್‌ನಷ್ಟು ಪುಡಿಯಾದ ರೂಪದಲ್ಲಿ ಇರುವುದಿಲ್ಲ. ಕೊಂಚ ಹರಳಿನ ಗಾತ್ರದಲ್ಲಿ ದೊರೆಯುತ್ತದೆ. ಇದೂ ಕೂಡಾ ಅಡುಗೆಗೆ ಸಾಮಾನ್ಯವಾಗಿ ಬಳಸಲ್ಪಡುತ್ತದೆ. ಇದನ್ನು ಸೋಡಿಯಂ ಕ್ಲೋರೈಡ್‌ನಿಂದ ನೇರವಾಗಿ ತಯಾರಿಸಿರುತ್ತಾರೆ. ಜೊತೆಗೆ ಇದು ಟೇಬಲ್‌ ಸಾಲ್ಟ್‌ ಮಾದರಿಯಲ್ಲಿ ಅಯೋಡಿನ್‌ ಹಾಗೂ ಕ್ಯಾಲ್ಶಿಯ ಸಿಲಿಕೇಟ್‌ ಸೇರಿಸಲ್ಪಟ್ಟಿರುವುದಿಲ್ಲ. ಹಾಗಾಗಿ ಟೇಬಲ್‌ ಸಾಲ್ಟ್‌ನಂತೆ ಇದು ಗಾಢತೆ ಪಡೆದಿರುವುದಿಲ್ಲ. ಅದಕ್ಕಾಗಿಯೇ ಟೇಬಲ್‌ ಸಾಲ್ಟ್‌ ಕೋಶರ್‌ ಸಾಲ್ಟ್‌ಗಿಂತ ಹೆಚ್ಚು ಉಪ್ಪಾಗಿರುತ್ತದೆ.

3. ಸೀ ಸಾಲ್ಟ್‌ (ಸಮುದ್ರ ಉಪ್ಪು): ಹೆಸರೇ ಹೇಳುವಂತೆ ಈ ಉಪ್ಪನ್ನು ಸಮುದ್ರದ ನೀರಿನಿಂತ ಮಾಡಲಾಗುತ್ತದೆ. ಸಮುದ್ರದ ನೀರನ್ನು ಗದ್ದೆಗಳಂಥ ರಚನೆಯಲ್ಲಿ ಹಾಯುವಂತೆ ಮಾಡಿ, ಅಲ್ಲಿ ಉಪ್ಪು ತಯಾರಿಸಲಾಗುತ್ತದೆ. ಈ ಉಪ್ಪು ಅತ್ಯಂತ ಕಡಿಮೆ ಸಂಸ್ಕರಣಕ್ಕೆ ಒಳಪಡುವುದರಿಂದ ಇದರಲ್ಲಿ ಖನಿಜಾಂಶಗಳು ನಷ್ಟವಾಗಿರುವುದಿಲ್ಲ. ಇದು ನೈಸರ್ಗಿಕವಾಗಿ ತಯಾರು ಮಾಡುವುದರಿಂದ ಬಹಳ ಹಿಂದಿನಿಂದಲೂ ಮನೆಗಳಲ್ಲಿ ಅಡುಗೆಯಲ್ಲಿ ಬಳಸಲ್ಪಡುತ್ತಿದೆ. ಕಲ್ಲುಪ್ಪು ಹೆಸರಿನಲ್ಲಿ ಬಳಕೆಯಾಗುವ ಇದಕ್ಕೆ ನಿರ್ಧಿಷ್ಟ ಪುಡಿಯ ಆಕಾರವಿರುವುದಿಲ್ಲ.

4. ಬ್ಲ್ಯಾಕ್‌ ಸಾಲ್ಟ್‌: ಕಾಲಾ ನಮಕ್‌ ಎಂಬ ಹೆಸರಿನಲ್ಲಿ ಜನಪ್ರಿಯವಾಗಿರುವ ಈ ಉಪ್ಪು ಇನ್ನೊಂದು ಸಾಮಾನ್ಯ ಬಗೆಯ ಉಪ್ಪು. ಇದನ್ನು ಹಿಮಾಲಯದ ಅಗ್ನಿಪರ್ವತಗಳ ಬಂಡೆಗಳಿಂದ ತಯಾರಿಸಲಾಗುತ್ತದೆ. ಇದರಲ್ಲಿ ಹೆಚ್ಚು ಪ್ರಮಾಣದಲ್ಲಿ ಕ್ಯಾಲ್ಶಿಯಂ, ಕಬ್ಬಿಣಾಂಶ, ಮೆಗ್ನೀಶಿಯಂ ಮೊದಲಾದ ಖನಿಜಾಂಶಗಳಿವೆ. ಸ್ವಲ್ಪ ಬೆರೆಯದೇ ಪರಿಮಳವಿರುವ ಈ ಉಪ್ಪನ್ನು ಕಡಿಮೆ ಪ್ರಮಾಣದಲ್ಲಿ ಕೆಲವು ಅಡುಗೆಗೆ ಬಳಸಬಹುದು.

5. ಹಿಮಾಲಯನ್‌ ಪಿಂಕ್‌ ಸಾಲ್ಟ್:‌ ಹಿಮಾಲಯನ್‌ ಸಾಲ್ಟ್‌ ಕೂಡಾ ಹೆಚ್ಚು ಪುಡಿಯಾದ ಆಕಾರದಲ್ಲಿರುವುದಿಲ್ಲ. ಕಲ್ಲುಪ್ಪಿನ ಹಾಗೆ ಹರಳಿನ ರೂಪದಲ್ಲಿರುತ್ತದೆ. ಪಾಕಿಸ್ತಾನ ಹಾಗೂ ಪಂಜಾಬ್‌ ಪ್ರಾಂತ್ಯದಿಂದ ಗಣಿಗಾರಿಕೆ ಮಾಡಿ ಈ ಉಪ್ಪನ್ನು ಸಂಗ್ರಹಿಸಲಾಗುತ್ತದೆ. ಇದು ಪ್ರಕೃತಿ ಸಹಜವಾಗಿಯೇ ಪಿಂಕ್‌ ಬಣ್ಣದಲ್ಲಿದ್ದು, ಇದರಲ್ಲಿ ಸಾಕಷ್ಟು ಖನಿಜ ಲವಣಗಳಿವೆ. ಹಾಗಾಗಿ ಬಹುತೇಕರು ಇತ್ತೀಚೆಗೆ ಟೇಬಲ್‌ ಸಾಲ್ಟ್‌ ಬದಲಾಗಿ ಪಿಂಕ್‌ ಸಾಲ್ಟ್‌ ಬಳಸುತ್ತಿದ್ದಾರೆ. ಇದರ ಬಣ್ಣದಿಂದಾಗಿ ಈ ಉಪ್ಪು ಆಕರ್ಷಕ.

ಇದನ್ನೂ ಓದಿ: Food Tips: ಈ ಆಹಾರಗಳನ್ನು ಬೇಯಿಸಿದರೇ ಪೋಷಕಾಂಶಗಳಿಂದ ಸಮೃದ್ಧ, ಮರೆಯಬೇಡಿ

Exit mobile version