Site icon Vistara News

Foods For Glowing Skin: ಚರ್ಮದ ಕಾಂತಿ ಹೆಚ್ಚಿಸುವ ಕೊಲಾಜೆನ್ ಸಪ್ಲಿಮೆಂಟ್‌ಗಳೇಕೆ? ಈ ಆಹಾರಗಳ ಮೂಲಕವೇ ಕೊಲಾಜೆನ್‌ ಪಡೆಯಿರಿ!

Foods For Glowing Skin

ʻಕೊಲಾಜೆನ್‌ʼ ಎಂಬ ಹೆಸರನ್ನು ನೀವು ಇತ್ತೀಚೆಗೆ ಹೆಚ್ಚು ಕೇಳಿರಬಹುದು. ಕೊಲಾಜೆನ್‌ ಸಪ್ಲಿಮೆಂಟ್‌ಗಳನ್ನೂ ಮಾರು ಕಟ್ಟೆಯಲ್ಲಿ ನೋಡಿರಬಹುದು. ನಿಮ್ಮ ಓರಗೆಯವರು, ಗೆಳೆಯ ಗೆಳತಿಯರು ಕೊಲಾಜೆನ್‌ ಸಪ್ಲಿಮೆಂಟ್‌ಗಳನ್ನು ತಿನ್ನುವುದನ್ನೂ ಕಂಡಿರಬಹುದು. ಹಾಗಾದರೆ ಈ ಕೊಲಾಜೆನ್‌ ಎಂದರೆ ಏನು, ಯಾಕಿದು ಬೇಕು ಎಂಬ ಸಂಶಯ ನಿಮಗೆ ಬಂದಿರಲೂಬಹುದು, ಅಥವಾ ಗೊತ್ತಿರಲೂಬಹುದು. ಕೊಲಾಜೆನ್‌ ಎಂಬುದು ಚರ್ಮದ ರಚನೆ ಹಾಗೂ ಎಲಾಸ್ಟಿಸಿಟುಗೆ ಬೇಕಾಗಿರುವ ನಮ್ಮ ದೇಹದಲ್ಲಿರುವ ಒಂದು ಪ್ರೊಟೀನ್‌. ನಮ್ಮ ದೇಹದಲ್ಲಿ ಹಲವು ಬಗೆಯ ಕೊಲಾಜೆನ್‌ಗಳಿವೆ. ನಮಗೆ ವಯಸ್ಸಾಗುತ್ತಾ ಬಂದಂತೆ, ನಮ್ಮ ದೇಹ ಕೊಲಾಜೆನ್‌ ಉತ್ಪತ್ತಿಯನ್ನು ಕಡಿಮೆ ಮಾಡುತ್ತಾ ಬರುತ್ತದೆ. ಆಗ, ನಮ್ಮ ಚರ್ಮದಲ್ಲಿ ಸುಕ್ಕು, ನಿರಿಗೆಗಳು ಆರಂಭವಾಗುತ್ತವೆ. ಚರ್ಮದ ಪದರ ತೆಳುವಾಗಲು ಆರಂಭವಾಗುತ್ತದೆ. ಹೀಗಾಗಿ ಬಹುಮುಖ್ಯವಾಗಿ ಸುಂದರವಾಗಿ ಕಾಣಲು, ವಯಸ್ಸಾಗದಂತೆ ಚರ್ಮ ನುಣುಪಾಗಿ ಹೊಳೆಯಲು, ವಯಸ್ಸು 35-40 ದಾಟುತ್ತಿದ್ದಂತೆ ಕೊಲಾಜೆನ್‌ ಬೂಸ್ಟ್‌ ಸಪ್ಲಿಮೆಂಟ್‌ಗಳ ಸೇವನೆಯನ್ನು ಬಹುತೇಕರು ಆರಂಭಿಸುತ್ತಾರೆ. ಜಾಹಿರಾತುಗಳಲ್ಲಿ ಕಂಡ ಹಾಗೂ ಹೊರಗೆ ಸುಲಭವಾಗಿ ಸಿಗುವ ಸಪ್ಲಿಮೆಂಟ್‌ಗಳನ್ನು ತಂದು ನಿರಾಯಾಸವಾಗಿ ತಿಂದು ಚರ್ಮಕ್ಕೆ ಮತ್ತೆ ಹೊಳಪನ್ನು ಕೊಡುವ ಪ್ರಯತ್ನ, ಆಸೆ ಎಲ್ಲರದ್ದು. ಆದರೆ, ಕೊಲಾಜೆನ್‌ ಉತ್ಪತ್ತಿಯನ್ನು ಹೆಚ್ಚಿಸಲು ಇಂತಹ ಸಪ್ಲಿಮೆಂಟ್‌ಗಳ ಅಗತ್ಯವೇ ಇದೆಯೇ? ಕೊಲಾಜೆನ್‌ ಪ್ರೊಟೀನ್‌ ಉತ್ಪತ್ತಿಯನ್ನು ನಮ್ಮ ದೇಹದಲ್ಲಿ ನೈಸರ್ಗಿಕವಾಗಿ ಹೇಗೆ ಹೆಚ್ಚಿಸಿಕೊಳ್ಳಬಹುದು. ಯಾವೆಲ್ಲ ಆಹಾರ ಸೇವನೆಯ ಮೂಲಕ ನಾವು ನಮ್ಮ ದೇಹದಲ್ಲಿ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸಬಹುದು ಎಂಬುದನ್ನು ನೋಡೋಣ. ಇತ್ತೀಚೆಗೆ ನಡೆದ ಸಂಶೋಧನೆಗಳ ಪ್ರಕಾರ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸಲು ಅತ್ಯಂತ ಸಹಜವಾದ, ನೈಸರ್ಗಿಕವಾದ ಹಾಗೂ ಯಾವುದೇ ಬಾಧಕಗಳಿಲ್ಲದ ಆಹಾರ ಸೇವನೆಯಿಂದಲೂ ಮಾಡಬಹುದು. ಯಾವೆಲ್ಲ ಆಹಾರಗಳಲ್ಲಿ ಕೊಲಾಜೆನ್‌ ಪ್ರಮಾಣ ಹೆಚ್ಚಿದೆ ಎಂಬುದನ್ನು ತಿಳಿದರೆ, ಅಂತಹ ಆಹಾರ ಸೇವನೆಯಿಂದಲೂ ಕೊಲಾಜೆನ್‌ ವೃದ್ಧಿ ಮಾಡಿಕೊಂಡು ಆರೋಗ್ಯಯುತ ಚರ್ಮವನ್ನು (Foods For Glowing Skin) ಪಡೆಯಬಹುದು.

ಬೋನ್‌ ಬ್ರೋತ್

ಪ್ರಾಣಿಗಳ ಎಲುಬಿನ ಬ್ರೋತ್‌ ಅಂದರೆ ನೀರು ತಯಾರಿಸಿ ಕುಡಿಯುವುದು ಕೂಡಾ ಅತ್ಯಂತ ಪ್ರಸಿದ್ಧಿ ಪಡೆದಿರುವ ಕೊಲಾಜೆನ್‌ ಪ್ರಚೋದನಕಾರಿ ಪೇಯ.

ಚಿಕನ್

ಚಿಕನ್‌ನಿಂದ ತಯಾರಿಸಲ್ಪಟ್ಟ ಕೊಲಾಜೆನ್‌ ಸಪ್ಲಿಮೆಂಟ್‌ಗಳೂ ಇಂದು ಮಾರುಕಟ್ಟೆಯಲ್ಲಿ ಲಭ್ಯವಿವೆ. ಹಾಗಾಗಿ ಚಿಕನ್‌ ಸೇವನೆಯಿಂದಲೂ ಕೊಲಾಜೆನ್‌ ಪಡೆಯಬಹುದು.

ಮೀನು

ಬೇರೆ ಪ್ರಾಣಿಗಳಂತೆ ಮೀನಿನಲ್ಲಿಯೂ ಕೊಲಾಜೆನ್‌ ಅಧಿಕವಾಗಿದೆ. ಮೀನಿನ ಮೂಳೆಯ ಲಿಗಮೆಂಟ್‌ಗಳಲ್ಲಿ ಕೊಲಾಜೆನ್‌ ಸಾಕಷ್ಟು ಪ್ರಮಾಣದಲ್ಲಿದ್ದು, ಸಮುದ್ರ ಜೀವಿಗಳ ಮೂಲಕ ಬಂದ ಕೊಲಾಜೆನ್‌ ಅನ್ನು ನಮ್ಮ ದೇಹ ಬಹುಬೇಗನೆ ಹೀರಿಕೊಳ್ಳುತ್ತದೆ ಕೂಡಾ.

ಮೊಟ್ಟೆ

ಮೊಟ್ಟೆಯ ಬಿಳಿ ಲೋಳೆಯಲ್ಲಿ ಪ್ರೊಲೈನ್‌ ಎಂಬ ಒಂದು ಬಗೆಯ ಅಮೈನೋ ಆಸಿಡ್‌ ಇದ್ದು ಇದು ಕೊಲಾಜೆನ್‌ ಉತ್ಪತ್ತಿಗೆ ಸಹಾಯ ಮಾಡುತ್ತದೆ.

ಸಿಟ್ರಸ್‌ ಹಣ್ಣುಗಳು

ವಿಟಮಿನ್‌ ಸಿ ಹೇರಳವಾಗಿರುವ ಹಣ್ಣುಗಳೆಲ್ಲವೂ ಕೂಡಾ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತವೆ. ಕಿತ್ತಳೆ, ಮುಸಂಬಿ, ನಿಂಬೆ ಮತ್ತಿತರ ಹಣ್ಣುಗಳಲ್ಲಿ ವಿಟಮಿನ್‌ ಸಿ ಹೇರಳವಾಗಿದ್ದು, ನಿತ್ಯ ಜೀವನದಲ್ಲಿ ಈ ಹಣ್ಣುಗಳನ್ನು ನಿಯಮಿತವಾಗಿ ಬಳಸುವುದರಿಂದ ಉತ್ತಮ ಪರಿಣಾಮ ಕಾಣಬಹುದು.

ಬೆರ್ರಿಗಳು

ಸಿಟ್ರಸ್‌ ಹಣ್ಣುಗಳಂತೆಯೇ, ಬೆರ್ರಿ ಜಾತಿಗೆ ಸೇರಿದ ಹಣ್ಣುಗಳಲ್ಲೂ ವಿಟಮಿನ್‌ ಸಿ ಹೇರಳವಾಗಿದೆ. ಉದಾಹರಣೆಗೆ ರಸಬೆರ್ರಿ, ಸ್ಟ್ರಾಬೆರಿ, ಬ್ಲೂಬೆರ್ರಿ ಇತ್ಯಾದಿ.

ಇದನ್ನೂ ಓದಿ: Health Tips Kannada: ಕುಂಬಳಕಾಯಿ ಬೀಜದಲ್ಲಿದೆ ನಮ್ಮ ಆರೋಗ್ಯದ ಗುಟ್ಟು!

ಸೀಸನಲ್‌ ಹಣ್ಣುಗಳು

ಆಯಾ ಋತುಮಾನಗಳಲ್ಲಿ ಸಿಗುವ ಹಣ್ಣುಗಳನ್ನು ಕಾಲಕಾಲಕ್ಕೆ ತಿನ್ನಿ. ಮಾವಿನಹಣ್ಣು, ಪೇರಳೆ, ಕಿವಿ, ಅನನಾಸು ಇತ್ಯಾದಿಗಳ ಸೇವನೆ ಒಳ್ಳೆಯದು. ಪೇರಳೆಯಲ್ಲಿ ಝಿಂಕ್‌ ಇದ್ದು, ಇದೂ ಕೂಡಾ ಕೊಲಾಜೆನ್‌ ಉತ್ಪಾದನೆಗೆ ಪ್ರಚೋದಿಸುತ್ತದೆ.

ಬೆಳ್ಳುಳ್ಳಿ

ಬೆಳ್ಳುಳ್ಳಿಯಲ್ಲಿ ಸಲ್ಫರ್‌ ಹೇರಳವಾಗಿದ್ದು, ಇದು ಕೊಲಾಜೆನ್‌ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ತರಕಾರಿ

ವಿಟಮಿನ್‌ ಸಿ ಯುಕ್ತ ತರಕಾರಿಗಳಾದ, ಕ್ಯಾಪ್ಸಿಕಂ, ಟೊಮೇಟೋ ಇತ್ಯಾದಿಗಳೂ ಕೂಡಾ ಕೊಲಾಜೆನ್‌ ಉತ್ಪತ್ತಿಯನ್ನು ಪ್ರಚೋದಿಸುತ್ತದೆ.

ಗೋಡಂಬಿ

ಗೋಡಂಬಿಯಲ್ಲಿ ಝಿಂಕ್‌ ಹಾಗೂ ತಾಮ್ರವಿದ್ದು ಇದು ಕೊಲಾಜೆನ್‌ ಹೆಚ್ಚಳಕ್ಕೆ ಸಹಾಯ ಮಾಡುತ್ತದೆ. ಇವಿಷ್ಟೇ ಅಲ್ಲದೆ, ಸೊಪ್ಪು ತರಕಾರಿಗಳು, ಹಸಿರು ಬಣ್ಣದ ಸೊಪ್ಪುಗಳು ಹಾಗೂ ಕಾಳುಗಳು ಕೂಡಾ, ಈ ನಿಟ್ಟಿನಲ್ಲಿ ಸಹಾಯ ಮಾಡುತ್ತವೆ.

Exit mobile version