Site icon Vistara News

Foods For Hormone Balance: ಮಹಿಳೆಯರೇ, ಹಾರ್ಮೋನಿನ ಸಮತೋಲನಕ್ಕಾಗಿ ಈ ಆಹಾರಗಳನ್ನು ಮರೆಯದೇ ಸೇವಿಸಿ

Foods For Hormone Balance

ಮಹಿಳೆಯರ ಆರೋಗ್ಯದಲ್ಲಿ ಹಾರ್ಮೋನಿನ (Foods for Hormone Balance) ಆರೋಗ್ಯಕ್ಕೆ ಬಹಳ ಮುಖ್ಯವಾದ ಸ್ಥಾನವಿದೆ. ಆಕೆಯ ಹಾರ್ಮೋನುಗಳು ಸಮತೋಲನದಲ್ಲಿದ್ದರೆ ಆಕೆ ಆರೋಗ್ಯವಾಗಿದ್ದಾಳೆ ಎಂದರ್ಥ. ಆಕೆಯ ಶಕ್ತಿ, ಲೈಂಗಿಕ ಆರೋಗ್ಯ, ಸಂತಾನೋತ್ಪತ್ತಿ ಕ್ರಿಯೆ, ಮೂಡು, ತೂಕ, ಮಾಸಿಕ ಚಕ್ರವೂ ಸೇರಿದಂತೆ ಪ್ರತಿಯೊಂದು ಆಕೆಯ ಹಾರ್ಮೋನಿನ ಆರೋಗ್ಯದ ಮೇಲೆ ನಿರ್ಧರಿತವಾಗುತ್ತದೆ. ವಯಸ್ಸಾಗುತ್ತಾ ಆಗುತ್ತಾ ಮಹಿಳೆಯನ್ನು ಬಾಧಿಸುವ ಸಮಸ್ಯೆಯೇ ಇದು. ಮನೆಯವರ ಕಷ್ಟಸುಖಗಳು, ಹೊರಗೆ ದುಡಿದು ಬಂದು ಮನೆಯನ್ನು ಸಂಭಾಳಿಸುವ ಆಧುನಿಕ ಮಹಿಳೆ ಬಹಳಷ್ಟು ಸಾರಿ ತನ್ನ ಆರೋಗ್ಯದ ನಿರ್ಲಕ್ಷ್ಯ ಮಾಡುತ್ತಾಳೆ. ಪರಿಣಾಮವಾಗಿ ಇಂತಹ ಸಮಸ್ಯೆಗಳು ಆಕೆಯನ್ನು ಬೆಂಬಿಡದೆ ಕಾಡುತ್ತವೆ. ಆಹಾರಕ್ರಮದಲ್ಲಿ ಕೊಂಚ ವ್ಯತ್ಯಾಸ, ಆರೋಗ್ಯಕರ ಜೀವನ ಪದ್ಧತಿ ಹಾಗೂ ಸ್ವಂತ ಕಾಳಜಿ, ಮಾಡಿದರೆ, ಈ ಸಮಸ್ಯೆಗಳು ಬರದಂತೆ ತಡೆಯಬಹುದು. ಮೆನೋಪಾಸ್‌ ಎಂಬ ಸಂದಿಗ್ಧದ ಹೊತ್ತಿನಲ್ಲಿ ಆಕೆ ಆರೋಗ್ಯಕರವಾಗಿ ಮತ್ತಷ್ಟು ಆತ್ಮವಿಶ್ವಾಸದಿಂದ ಮುನ್ನಡೆಯಬಹುದು. ಬನ್ನಿ, ಹಾರ್ಮೋನಿನ ಸಮಸ್ಯೆ ಎದುರಿಸುವ ಪ್ರತಿ ಮಹಿಳೆಯೂ ಯಾವೆಲ್ಲ ಸೂಪರ್‌ಫುಡ್‌ಗಳನ್ನು ತನ್ನ ನಿತ್ಯದ ಆಹಾರಕ್ರಮದಲ್ಲಿ ಸೇರಿಸಿಕೊಂಡು ಲಾಭ ಪಡೆಯಬಹುದು ಎಂಬುದನ್ನು ನೋಡೋಣ.

ಅಗಸೆ ಬೀಜ

ಅಗಸೆ ಬೀಜ ಅಥವಾ ಫ್ಲ್ಯಾಕ್‌ಸೀಡ್‌ನಲ್ಲಿ ಲಿಗ್ನನ್‌ ಹೇರಳವಾಗಿದ್ದು, ಇವು ಫೈಟೀ ಎಸ್ಟ್ರೋಜೆನ್‌ಗಳಾಗಿದ್ದು ಇವು ಇಸ್ಟ್ರೋಜೆನ್‌ ಮಟ್ಟದ ಸಮತೋಲನ ಕಾಯ್ದುಕೊಳ್ಳಲು ನೆರವಾಗುತ್ತದೆ. ಇದರಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ಗಳೂ ಹೇರಳವಾಗಿದ್ದು, ಹಾರ್ಮೋನಿನ ಆರೋಗ್ಖಕ್ಕೆ ಅತ್ಯಂತ ಅಗತ್ಯವಾಗಿ ಬೇಕಾದ ಪೋಷಕಾಂಶವಾಗಿದೆ. ಹಾಗಾಗಿ ಅಗಸೆ ಬೀಜವನ್ನು ಪುಡಿ ಮಾಡಿ ಅಥವಾ ಕ್ರಶ್‌ ಮಾಡಿ, ಬಳಕೆ ಮಾಡುವ ಮೂಲಕ ಲಾಭ ಪಡೆಯಬಹುದು.

ಸಾಲ್ಮನ್‌

ಸಾಲ್ಮನ್‌ನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್‌ ಹೇರಳವಾಗಿದ್ದು, ದೇಹದ ಉರಿಯೂತವನ್ನು ಕಡಿಮೆ ಮಾಡುವ ಅತ್ಯಂತ ಅಗತ್ಯವಾದ ಹಾರ್ಮೋನಿನ ಉತ್ಪಾದನೆಗೆ ಪ್ರಚೋದಿಸುತ್ತದೆ. ದೇಹದ ಜೀವಕೋಶಗಳ ಪದರಗಳ ಆರೋಗ್ಯಕ್ಕೂ ಈ ಪೋಷಕಾಂಶ ಬೇಕು. ಯಾಕೆಂದರೆ, ತಿಂದ ಆಹಾರದ ಪೋಷಕಾಂಶಗಳು ಜೀವಕೋಶಗಳಿಗೆ ತಲುಪಬೇಕಿದ್ದರೆ ಅವುಗಳ ಪದರದ ಮೂಲಕ ಪ್ರವೇಶ ಸಲಭವಾಗಬೇಕು. ಈ ಎಲ್ಲ ಕಾರಣಗಳಿಗೆ ಒಮೆಗಾ 3 ಫ್ಯಾಟಿ ಆಸಿಡ್‌ ಬಹಳ ಮುಖ್ಯ. ಅದು ಸಾಲ್ಮನ್‌ನಲ್ಲಿದೆ.

ಬೆಣ್ಣೆಹಣ್ಣು

ಅವಕಾಡೋ ಅಥವಾ ಬೆಣ್ಣೆಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆರೋಗ್ಯಕರ ಕೊಬ್ಬಿದೆ. ಪೊಟಾಶಿಯಂ, ನಾರಿನಂಶ, ಮೆಗ್ನೀಶಿಯಂ ಸೇರಿದಂತೆ ಎಲ್ಲ ಪೋಷಕಾಂಶಗಳೂ ಇದರಲ್ಲಿ ಇರುವುದರಿಂದ ಹಾರ್ಮೋನಿನ ಆರೋಗ್ಯಕ್ಕೆ ಇದು ಒಳ್ಳೆಯದು.

ಹಸಿರು ಸೊಪ್ಪು ತರಕಾರಿ

ಮಹಿಳೆಯರು ಹಸಿರು ಸೊಪ್ಪು ತರಕಾರಿಗಳ ಸೇವನೆ ಹೆಚ್ಚು ಮಾಡಬೇಕು. ಇದರಲ್ಲಿ ಮೆಗ್ನೀಶಿಯಂ ಅಧಿಕವಾಗಿರುತ್ತವೆ. ಮೆಗ್ನೀಶಿಯಂ ಕಾರ್ಟಿಸಾಲ್‌ ಮಟ್ಟವನ್ನು ಸಮತೋಲಗೊಳಿಸಲು ನೆರವಾಗುತ್ತದೆ. ಹಾಗೆಯೇ ಇವುಗಳಲ್ಲಿರುವ ವಿಟಮಿನ್‌ ಬಿ6, ಪ್ರೊಜೆಸ್ಟೆರಾನ್‌ ಉತ್ಪಾದನೆಯನ್ನೂ ಪ್ರೋತ್ಸಾಹಿಸುತ್ತದೆ. ಒತ್ತಡವನ್ನು ಕಡಿಮೆ ಮಾಡಿ, ಹಾರ್ಮೋನಿನ ಮಟ್ಟವನ್ನು ಸಮತೋಲನಗೊಳಿಸಲು ಇಂತಹ ಆಹಾರ ಮಹಿಳೆಗೆ ಮುಖ್ಯ.

ಸಿಹಿಗೆಣಸು

ಸಿಹಿ ಗೆಣಸಿನಲ್ಲಿ ಹೆಚ್ಚು ಬೀಟಾ ಕೆರಟಿನ್‌ ಇದ್ದು ಇದು ಹಾರ್ಮೋನಿನ ಉತ್ಪಾದನೆಗೆ ಬಹಳ ಒಳ್ಳೆಯದು. ಇದರಲ್ಲಿ ನಾರಿನಂಶವೂ ಹೇರಳವಾಗಿದೆ. ದೇಹದ ರಕ್ತದ ಮಟ್ಟವನ್ನು ಸಮತೋಲನಗೊಳಿಸಲೂ ಇದು ನೆರವಾಗುತ್ತದೆ.

ಅರಿಶಿನ

ಕರ್ಕ್ಯುಮಿನ್‌ ಎಂಬ ಆಂಟಿ ಇನ್‌ಫ್ಲಮೇಟರಿ ಅಂಶಗಳನ್ನು ಹೊಂದಿರುವ ಅರಿಶಿನ ಮಹಿಳೆಯ ಹಾರ್ಮೋನಿನ ಸಮತೋಲನಕ್ಕೂ ಬಹಳ ಮುಖ್ಯ. ಪಿತ್ತಕೋಶದ ಆರೋಗ್ಯಕ್ಕೆ, ಹಾರ್ಮೋನ್‌ ಡಿಟಾಕ್ಸಿಫಿಕೇಶನ್‌ಗೆ ಇದು ಒಳ್ಳೆಯದು.

ಒಣಬೀಜಗಳು

ಬಾದಾಮಿ, ವಾಲ್ನಟ್‌, ಚಿಯಾ ಬೀಜಗಳು, ಕುಂಬಳಕಾಯಿ ಬೀಜಗಳು ಸೇರಿದಂತೆ ಒಣ ಬೀಜಗಳಲ್ಲಿ ಫ್ಯಾಟಿ ಆಸಿಡ್‌ಗಳು, ವಿಟಮಿನ್‌ಗಳು, ಪ್ರೊಟೀನ್‌ ಹಾಗೂ ಖನಿಜಾಂಶಗಳು ಹೇರಳವಾಗಿರುತ್ತವೆ. ಇವು ಮಹಿಳೆಯ ಸಂಪೂರ್ಣ ಆರೋಗ್ಯಕ್ಕೆ ಅತ್ಯಂತ ಮುಖ್ಯ.

ಮೊಸರು

ಪ್ರೊಬಯಾಟಿಕ್‌ ಗುಣಗಳಿರುವ ಆಹಾರಗಳೂ ಮಹಿಳೆಗೆ ಮುಖ್ಯ. ಮೊಸರಿನಲ್ಲಿ ಈ ಗುಣವಿದ್ದು ಇದು ಹಾರ್ಮೋನಿನ ಆರೋಗ್ಯಕ್ಕೆ ಬಹಳ ಮುಖ್ಯ. ಮಹಿಳೆಗೆ ವಯಸ್ಸಾದಂತೆ ಕ್ಯಾಲ್ಶಿಯಂ ಅಗತ್ಯ ಹೆಚ್ಚು. ಈ ಕ್ಯಾಲ್ಶಿಯಂ ಇದರಲ್ಲಿ ದೊರೆಯುವ ಕಾರಣ, ಮೊಸರು ಸೇರಿದಂತೆ ಕ್ಯಾಲ್ಶಿಯಂ ಹೆಚ್ಚಿರುವ ಆಹಾರಗಳನ್ನು ಆಕೆ ನಿತ್ಯಾಹಾರದಲ್ಲಿ ಬಳಸಬೇಕು.

ಇದನ್ನೂ ಓದಿ: Saffron For Baby: ಗರ್ಭಿಣಿ ಕೇಸರಿ ಹಾಲು ಕುಡಿಯುವುದರಿಂದ ಮಗು ಬೆಳ್ಳಗಾಗುತ್ತದೆಯೇ?

Exit mobile version