ದೇಹದ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದಷ್ಟು ಹಲ್ಲುಗಳ ಆರೋಗ್ಯದ ಬಗ್ಗೆ ವಹಿಸುವುದಿಲ್ಲ. ಸಣ್ಣಗೆ ನೋಯುವ ಹಲ್ಲು, ಪುಟಾಣಿ ತೂತು, ಐಸ್‌ಕ್ರೀಂ ತಿನ್ನುವಾಗ ಝಲ್ಲೆಂದ ಹಲ್ಲು ಯಾವುದನ್ನೂ ಸಮಸ್ಯೆಯೆಂದು ಬಹುತೇಕ ಜನರು ಪರಿಗಣಿಸುವುದೇ ಇಲ್ಲ. ಬೇಕಾಬಿಟ್ಟಿ, ಐಸ್‌ಕ್ರೀಂ, ಚಾಕೋಲೇಟ್, ಸಿಹಿತಿಂಡಿಗಳನ್ನು ತಿಂದು, ಜ್ಯೂಸ್, ಕೋಕ್ ಪೆಪ್ಸಿಗಳನ್ನು ಹೀರಿ, ಸುಸ್ತಾಗಿ ಬಂದು ಮಲಗಿಯೂ ಬಿಡುತ್ತೇವೆ. ಅಯ್ಯೋ ಹಲ್ಲುಜ್ಜಲು ಯಾರಿಗೆ ಟೈಮಿದೆ ಎಂಬ ಒಂದೇ ನಿಮಿಷದ ಕೆಲಸಕ್ಕೆ ಉದಾಸೀನ ಮಾಡುತ್ತೇವೆ. ಪರಿಣಾಮ ನಮ್ಮ ಹಲ್ಲುಗಳಲ್ಲಿ ಕಾಣುತ್ತದೆ!
ಹಾಗಾದರೆ, ನಮ್ಮ ಹಲ್ಲುಗಳನ್ನು ಆರೋಗ್ಯವಾಗಿಟ್ಟುಕೊಳ್ಳಬೇಕಾದರೆ, ನಾವು ಎಂಥ ಆಹಾರ ಸೇವನೆಯತ್ತ ಗಮನ ಹರಿಸಬೇಕು ಎಂಬುದನ್ನು ನೋಡೋಣ.
೧. ಚೀಸ್: ಚೀಸ್ ಎಂದರೆ ಪ್ರಾಣ ಬಿಡುತ್ತೀರಾ? ಆಗಾಗ ಚೀಸ್ ಹೊಟ್ಟೆಗೆ ಹೋದ ಮೇಲೆ ಅಯ್ಯೋ ಯಾಕಿಷ್ಟು ತಿಂದೆ ಅನಿಸುತ್ತದೆಯೋ? ಹಾಗಿದ್ದರೆ ಚಿಂತೆ ಬಿಟ್ಟುಬಿಡಿ. ಕೊನೇಪಕ್ಷ ಹಲ್ಲಿಗಾಗಿ ನಾನು ಒಳ್ಳೆಯ ಕೆಲಸ ಮಾಡುತ್ತಿದ್ದೇನೆಂದು ಬಿಂದಾಸ್ ಆಗಿರಿ. ಯಾಕೆಂದರೆ ಹಲ್ಲಿನ ಆರೋಗ್ಯಕ್ಕೆ ಚೀಸ್ ಒಳ್ಳೆಯದು. ಅಧ್ಯಯನಗಳ ಪ್ರಕಾರ ಚೀಸ್‌ನಲ್ಲಿರುವ ಪಿಎಚ್ ಮಟ್ಟವನ್ನು ಕಾಯ್ದುಕೊಂಡು ಹಲ್ಲು ಹುಳುಕಾಗುವುದನ್ನು ತಡೆಯುತ್ತದೆ. ಇದರಲ್ಲಿ ಹೇರಳವಾಇರುವ ಕ್ಯಾಲ್ಶಿಯಂ ಹಾಗೂ ಪ್ರೊಟೀನ್ ಹಲ್ಲನ್ನು ಗಟ್ಟಿಗೊಳಿಸಲು ನೆರವಾಗುತ್ತದೆ.
೨. ಹಸಿರು ತರಕಾರಿ: ಹಸಿರು ಸೊಪ್ಪು ಹಾಗೂ ತರಕಾರಿಗಳು ಕಡಿಮೆ ಕ್ಯಾಲೊರಿಯಿರುವ ಆದರೆ, ದೇಹಕ್ಕೆ, ಮೂಳೆ ಹಾಗೂ ಹಲ್ಲಿಗೆ ಬೇಕಾದ ಎಲ್ಲ ಪೋಷಕಾಂಶಗಳನ್ನೂ ಒಳಗೊಂಡಿದೆ. ಬಸಳೆ, ಪಾಲಕ್‌ನಂತಹ ಸೊಪ್ಪಿನಲ್ಲಿ ಕ್ಯಾಲ್ಶಿಯಂ ಹಾಗೂ ಇತರ ಖನಿಜಾಂಶಗಳು ಹಲ್ಲಿನಬಲವರ್ಧನೆಗೆ ಉಪಯುಕ್ತವಾಗಿದ್ದು ದಂತಕ್ಷಯವಾಗುವುದನ್ನು ತಪ್ಪಿಸುತ್ತದೆ.
೩. ಸೇಬು: ದಿನಕ್ಕೊಂದು ಸೇಬು ತಿಂದರೆ ವೈದ್ಯರಿಂದ ದೂರವಿರಬಹುದೆಂಬುದು ಹಳೇ ಗಾದೆ. ಸೇಬನ್ನು ಕಚ್ಚಿ ನೋಡಿ ಹಲ್ಲಿನಿಂದ ರಕ್ತ ಸೋರುವ ಕಾರಣ ಇಂಥ ಟೂತ್‌ಪೇಸ್ಟ್ ಬಳಸಿ ಎಂದು ಹೇಳುವ ಜಾಹಿರಾತುಗಳನ್ನೂ ಬಹಳಷ್ಟು ನೋಡಿದ್ದೇವೆ. ಆದರೆ, ಸೇಬುಹಣ್ಣು ತಿನ್ನುವುದೇ ಈ ಎಲ್ಲ ತೊಂದರೆಗಳಿಗೆ ಮದ್ದು. ಯಾಕೆಂದರೆ ಸೇಬು ತಿನ್ನುವಾಗ ನಮ್ಮ ಬಾಯಿಯಲ್ಲಿ ಇನ್ನಷ್ಟು ಲಾಲಾರಸ ಉತ್ಪತ್ತಿಯಾಗಿ ಬಾಯಿಯಲ್ಲಿರುವ ಬ್ಯಾಕ್ಟೀರಿಯಾ ಹಾಗೂ ಅಳಿದುಳಿದ ಊಟದ ಕಣಗಳನ್ನು ಬಾಯಿಯಿಂದ ಹೊಡೆದೋಡಿಸಿ ಬಾಯಿಯನ್ನು ಸ್ವಚ್ಛವಾಗಿಸುವ ಗುಣವನ್ನೂ ಹೊಂದಿದೆ. ಹಾಗಂತ, ಬ್ರಷ್ ಮಾಡುವ ಬದಲು ಸೇಬು ತಿಂದುಬಿಡುತ್ತೇನೆ ಎಂದು ಪರ್ಯಾಯ ಹುಡುಕಬೇಡಿ. ಹಲ್ಲುಜ್ಜುವ ಸಮಯದಲ್ಲಿ ಹಲ್ಲುಜ್ಜಲೇಬೇಕು ಎಂಬುದು ನೆನಪಿಡಿ.
ಇದನ್ನೂ ಓದಿ | Eye Care | ಕಣ್ಣುಗಳ ಆರೋಗ್ಯದ ಕುರಿತು ವಿಶೇಷ ಕಾಳಜಿ ಹೀಗಿರಲಿ
೪. ಮೊಸರು: ಚೀಸ್‌ನಂತೆಯೇ ಮೊಸರಿನಲ್ಲಿ ಕೂಡಾ ಕ್ಯಾಲ್ಶಿಯಂ ಅಧಿಕವಾಗಿರುವುದರಿಂದ ಇದು ಹಲ್ಲಿನ ಆರೋಗ್ಯಕ್ಕೆ ಒಳ್ಳೆಯದು. ಮೊಸರಿನಲ್ಲಿರುವ ಒಳ್ಳೆಯ ಬ್ಯಾಕ್ಟೀರಿಯಾ ಹಲ್ಲಿಗೂ ಒಳ್ಳೆಯದನ್ನೇ ಮಾಡುತ್ತದೆ. ಜೊತೆಗೆ ಹಲ್ಲನ್ನು ನಾಶಪಡಿಸುವ ಬ್ಯಾಕ್ಟೀರಿಯಾವನ್ನು ಇವು ಹೊಡೆದೋಡಿಸುತ್ತವೆ. ಆದರೆ, ಇವೆಲ್ಲ ಪ್ರಯೋಜನ ಮೊಸರಿನಿಂದ ಸಿಗಬೇಕೆಂದರೆ ಸಕ್ಕರೆ ರಹಿತ ಮೊಸರನ್ನೇ ಸೇವಿಸಿ.
೫. ಕ್ಯಾರೆಟ್: ಸೇಬಿನಂತೆಯೇ ಕ್ಯಾರೆಟ್ ಕೂಡಾ ಹಲ್ಲಿಗೆ ಒಳ್ಳೆಯದನ್ನೇ ಮಾಡುತ್ತದೆ. ಗಟ್ಟಿಯಾಗಿರುವ ಇದನ್ನು ಬಾಯಿ ಪಚನಕ್ಕೆ ಯೋಗ್ಯವಾಗುವಂತೆ ಮಾಡಲು ಹೆಚ್ಚು ಲಾಲಾರಸ ಉತ್ಪತ್ತಿ ಮಾಡುತ್ತದೆ. ಜೊತೆಗೆ ಇದರಲ್ಲಿ ಅತ್ಯಧಿಕ ಪ್ರಮಾಣದಲ್ಲಿರುವ ವಿಟಮಿನ್ ಎ, ಹಾಗೂ ನಾರಿನಂಶ ಆರೋಗ್ಯಕ್ಕೆ ಒಳ್ಳೆಯದನ್ನೇ ಬಯಸುತ್ತದೆ.
೬. ಬಾದಾಮಿ: ಬಾದಾಮಿಯೂ ಕ್ಯಾಲ್ಶಿಯಂ ಉತ್ತಮ ಪ್ರಮಾಣದಲ್ಲಿರುವ ಹಾಗೆಯೇ ಹೇರಳವಾಗಿ ಪ್ರೊಟೀನ್ ಇರುವ ಆಹಾರ. ಹಾಗಾಗಿ ನಾಲ್ಕಾರು ಬಾದಾಮಿಯನ್ನು ನಿತ್ಯ ತಿನ್ನುವುದು ಒಳ್ಳೆಯದು.
ಇದನ್ನೂ ಓದಿ | Hair Care | ಕೂದಲು ಉದುರುತ್ತಿದೆಯೇ? ಹೀಗೆ ಮಾಡಿ