ಆರೋಗ್ಯ ಒಂದಿದ್ದರೆ ಎಲ್ಲವೂ ಇದ್ದಂತೆ. ಮನೆಯ ಸದಸ್ಯರೆಲ್ಲರ ಸ್ವಾಸ್ಥ್ಯ ಸರಿಯಾಗಿದ್ದರೆ ಮಾತ್ರ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸಿರುತ್ತದೆ. ಮನೆಯ ಸದಸ್ಯರ ಆರೋಗ್ಯ ಅಡುಗೆ ಮನೆಯಿಂದಲೇ ಎಂಬ ಮಾತಿದೆ. ಹೌದು. ಅಡುಗೆ ಮನೆಯಲ್ಲಿ ಎಲ್ಲವೂ ಸರಿಯಾಗಿದ್ದು, ವಾಸ್ತು ಪ್ರಕಾರ ಇದ್ದದ್ದೇ ಆದಲ್ಲಿ, ಮನೆಯವರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.
ವಾಸ್ತು ಶಾಸ್ತ್ರದಲ್ಲಿ ಅಡುಗೆ ಮನೆಯ ವಾಸ್ತುವಿಗೆ ವಿಶೇಷ ಪ್ರಾಮುಖ್ಯತೆಯನ್ನು ನೀಡಿದ್ದಾರೆ. ಅಡುಗೆ ಮನೆ ಮತ್ತು ಅಡುಗೆ ಕೋಣೆಯಲ್ಲಿಡುವ ವಸ್ತುಗಳು ಯಾವ ದಿಕ್ಕಿನಲ್ಲಿ ಇಟ್ಟರೆ ಶುಭ. ಒಂದೊಮ್ಮೆ ಅಡುಗೆ ಮನೆಯ ನಿರ್ಮಾಣ ವಾಸ್ತು ಪ್ರಕಾರ ಇಲ್ಲವಾದರೆ ಅದಕ್ಕೆ ಯಾವ ಉಪಾಯ ಮಾಡುವುದರಿಂದ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳೋಣ.
ಈ ದಿಕ್ಕಿಗೆ ಮುಖ ಮಾಡಿ ಅಡುಗೆ ತಯಾರಿಸಬೇಕು…
ಅಡುಗೆ ಮನೆಯು ವಾಸ್ತು ಪ್ರಕಾರ ಇರುವುದು ಅತ್ಯಂತ ಮುಖ್ಯವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಅಡುಗೆ ಮನೆಯಲ್ಲಿರುವ ಉಪಕರಣಗಳು ಸಹ ವಾಸ್ತು ಪ್ರಕಾರವೇ ಇರಬೇಕು. ಮುಖ್ಯವಾಗಿ ಅಡುಗೆ ಮಾಡಲು ಬಳಸುವ ಒಲೆ ಅಥವಾ ಸ್ಟೌ ಅಗ್ನಿ ಮೂಲೆ ಅಂದರೆ ಆಗ್ನೇಯ ದಿಕ್ಕಿನಲ್ಲಿರಬೇಕು. ಅಡುಗೆಯನ್ನು ತಯಾರಿಸುವವರು ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಸಹ ಅಷ್ಟೇ ಮುಖ್ಯವಾಗುತ್ತದೆ. ಇದರಿಂದ ಧನ ವೃದ್ಧಿಯಾಗುವುದಲ್ಲದೇ ಆರೋಗ್ಯ ಉತ್ತಮವಾಗಿರುತ್ತದೆ.
ಕುಡಿಯುವ ನೀರನ್ನು ಈ ದಿಕ್ಕಿನಲ್ಲಿಡಬೇಕು…
ಕುಡಿಯಲು ಬಳಸುವ ನೀರು ಮತ್ತು ಪಾತ್ರೆ ತೊಳೆಯಲು ಬಳಸುವ ನೀರಿನ ನಲ್ಲಿಯು ಈಶಾನ್ಯ ಮೂಲೆಯಲ್ಲಿದ್ದರೆ ಉತ್ತಮ. ಪಾತ್ರೆ ತೊಳೆಯಲು ಸಹ ಈಶಾನ್ಯ ದಿಕ್ಕು ಉತ್ತಮವೆಂದು ಹೇಳಲಾಗುತ್ತದೆ.
ಎಲೆಕ್ಟ್ರಾನಿಕ್ ಉಪಕರಣಗಳು ಈ ದಿಕ್ಕಿನಲ್ಲಿದ್ದರೆ ಶುಭ
ಟೋಸ್ಟರ್, ಗೀಜರ್ ಅಥವಾ ಮೈಕ್ರೋವೇವ್, ಓವನ್‌ಗಳನ್ನು ಆಗ್ನೇಯ ದಿಕ್ಕಿನಲ್ಲಿಟ್ಟರೆ ಲಾಭದಾಯಕವೆಂದು ಹೇಳಲಾಗುತ್ತದೆ. ಜೊತೆಗೆ ಮಿಕ್ಸರ್, ಒರಳು ಕಲ್ಲು, ಜ್ಯೂಸರ್ ಇತ್ಯಾದಿ ಉಪಕರಣಗಳನ್ನು ಆಗ್ನೇಯ ಮೂಲೆ ಮತ್ತು
ದಕ್ಷಿಣ ದಿಕ್ಕಿಗೆ ಹತ್ತಿರವಾಗುವಂತೆ ಇಡುವುದು ಶುಭ
ರೆಫ್ರಿಜಿರೇಟರ್ ಅನ್ನು ಅಡುಗೆ ಮನೆಯಲ್ಲೇ ಇಡುವುದಾದರೆ ಅದನ್ನು ದಕ್ಷಿಣ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಈಶಾನ್ಯ ಅಥವಾ ನೈಋತ್ಯ ಮೂಲೆಯಲ್ಲಿ ಇಡುವುದು ನಿಷಿದ್ಧವಾಗಿದೆ.
ಸಿಲಿಂಡರ್ ಈ ದಿಕ್ಕಿನಲ್ಲಿರಲಿ…
ಮಸಾಲೆ ಪದಾರ್ಥಗಳು, ಪಾತ್ರೆಗಳು, ಅಕ್ಕಿ, ಗೋಧಿ, ಹಿಟ್ಟು ಇತ್ಯಾದಿಗಳನ್ನು ದಕ್ಷಿಣ ದಿಕ್ಕಿನಲ್ಲಿ ಇಡಬಹುದು ಅಥವಾ ನೈಋತ್ಯ ಮೂಲೆಯಲ್ಲೂ ಇಡುವುದು ಒಳ್ಳೆಯದೇ ಆಗಿದೆ. ಖಾಲಿಯಾಗಿರುವ ಸಿಲಿಂಡರ್ ಅನ್ನು ನೈರುತ್ಯ ಮೂಲೆಯಲ್ಲಿ ಇಡುವುದು ಉತ್ತಮ. ಬಳಸುವ ಸಿಲಿಂಡರ್ ಅನ್ನು ದಕ್ಷಿಣ ದಿಕ್ಕಿಗೆ ಇಟ್ಟುಕೊಳ್ಳುವುದು ಉತ್ತಮ.
ವಾಸ್ತು ಪ್ರಕಾರ ಈ ಬಣ್ಣ ಒಳ್ಳೆಯದು…
ಅಡುಗೆ ಮನೆಯ ಗೋಡೆಗಳಿಗೆ ತಿಳಿ ಕೇಸರಿ ಬಣ್ಣ ಉತ್ತಮ. ಜೊತೆಗೆ ಕ್ರೀಮ್ ಅಥವಾ ತಿಳಿ ಹಳದಿ ಬಣ್ಣ ಬಳಿಯುವುದು ಸಹ ಉತ್ತಮವೇ ಆಗಿದೆ. ಕಪ್ಪು ಅಥವಾ ನೀಲಿಯಂಥ ಬಣ್ಣಗಳನ್ನು ಅಡುಗೆ ಮನೆಯ ಗೋಡೆಗಳಿಗೆ ಬಳಸದಿರುವುದೇ ಒಳ್ಳೆಯದು. ಕಪ್ಪು ಬಣ್ಣದಿಂದ ನಕಾರಾತ್ಮಕ ಶಕ್ತಿಯ ಅಂಶಗಳು ಹೆಚ್ಚುವುದರಿಂದ ಆರ್ಥಿಕ ತೊಂದರೆ ಉಂಟಾಗುವ ಸಾಧ್ಯತೆ ಇರುತ್ತದೆ.
ವಾಸ್ತು ಪ್ರಕಾರ ಇಲ್ಲದಿದ್ದರೆ ಏನು ಮಾಡಬೇಕು?
ಅಡುಗೆ ಮನೆಯು ವಾಸ್ತು ಪ್ರಕಾರ ಇಲ್ಲವಾದರೆ ಅದಕ್ಕೂ ವಾಸ್ತು ಶಾಸ್ತ್ರದಲ್ಲಿ ಪರಿಹಾರವಿದೆ. ವಾಸ್ತು ಪ್ರಕಾರ ಇಲ್ಲದೇ ಇರುವಾಗ ವಾಸ್ತು ದೋಷ ಉಂಟಾಗುತ್ತದೆ. ಈ ದೋಷ ನಿವಾರಣೆಗೆ ಅಡುಗೆ ಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಸ್ವಸ್ತಿಕ್ ಚಿಹ್ನೆಯನ್ನು ಬರೆದಿಡುವುದು ಉತ್ತಮ. ಇದರಿಂದ ಸಕಾರಾತ್ಮಕ ಅಂಶಗಳು ನೆಲೆಸುತ್ತವೆ.
ಅಷ್ಟೇ ಅಲ್ಲದೇ ಅಡುಗೆ ಮನೆಯ ವಾಸ್ತು ಸರಿಯಿಲ್ಲದಿದ್ದರೆ ನೈಋತ್ಯ ದಿಕ್ಕಿನಲ್ಲಿ ಕೆಂಪು ಬಣ್ಣದ ಬಲ್ಬ್ ಹಾಕಿಡುವುದು ಉತ್ತಮ. ಇದು ಸದಾ ಉರಿಯುತ್ತಿರುವಂತೆ ನೋಡಿಕೊಳ್ಳಬೇಕು.
ಅಡುಗೆ ಕೋಣೆಯು ಮನೆಯ ಮುಖ್ಯ ಬಾಗಿಲಿಗೆ ನೇರವಾಗಿ ಇದ್ದರೆ ವಾಸ್ತು ದೋಷ ಉಂಟಾಗುತ್ತದೆ. ಇದರ ಪರಿಹಾರಕ್ಕಾಗಿ ಮುಖ್ಯ ದ್ವಾರ ಮತ್ತು ಅಡುಗೆ ಮನೆಯ ನಡುವೆ ಪರದೆಯನ್ನು ಹಾಕಿಕೊಳ್ಳುವುದು ಉತ್ತಮ.
ಇದನ್ನೂ ಓದಿ: Backbone Health : ಬೆನ್ನು ಮೂಳೆಯ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?